Photo Courtesy: The New Indian Express

ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ ಗದ್ಗದಿತವಾಗಿ ದುಃಖಿತನಾಗಿ ತನ್ನ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ.

ರಾಜ್ಯದ ಒಂದು ದೊಡ್ಡ ಸಮುದಾಯ ಹಾಗೂ ನೂರಾರು ಮಠಾಧೀಶರ ಬೆಂಬಲವೂ ದೆಹೆಲಿ ದೊರೆಗಳ ಮುಂದೆ ನಡೆಯಲಿಲ್ಲ. ಕರ್ನಾಟಕದ ಇಷ್ಟು ಮಠಾಧೀಶರಿಂದ ತಮ್ಮದೇ ರಾಜ್ಯದ ಒಬ್ಬ ಮುಖ್ಯಮಂತ್ರಿಯನ್ನು ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲವೆಂಬುದು ವಿಪರ್ಯಾಸ. ಈ ಬೆಳವಣಿಗೆ ಹಿಂದುತ್ವ ರಾಜಕಾರಣ ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನಗಳ ಪರಂಪರೆಯನ್ನು ಮುನ್ನಡೆಸಿದಂತಿದೆ.

ಜನರು ಚುನಾಯಿಸಿದ ಶಾಸಕರುಗಳು ಮುಖ್ಯಮಂತ್ರಿಯನ್ನು ಆರಿಸಬೇಕು. ಆದರೆ ದುರಾದೃಷ್ಟವಶಾತ್ ದೆಹಲಿಯಿಂದ ಬರುವ ಲಕೋಟೆಗಳು ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುತ್ತಿವೆ. ಒಂದು ಕಾಲದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಲಕೋಟೆ ಸರ್ಕಾರ ಎಂದು ಬಿಂಬಿಸಲಾಗುತ್ತಿತ್ತು. ಇದೀಗ ಕಾಂಗ್ರೆಸ್ ಅನ್ನು ಟೀಕಿಸಿ ಅಧಿಕಾರಕ್ಕೆ ಬಂದ ಬಿಜೆಪಿಯು ಸಹ ಅದಕ್ಕಿಂತ ಘೋರವಾಗಿ ಲಕೋಟೆ ಸಂಸ್ಕೃತಿಯನ್ನು ಮುನ್ನಡೆಸುತ್ತಿದೆ.

ಯಾವುದೇ ರಾಜ್ಯಗಳಲ್ಲಿ ಜನರಿಂದ ಆರಿಸಿ ಬಂದ ಜನನಾಯಕರುಗಳು ಮೋದಿ-ಶಾರವರಿಗೆ ಬೇಕಾಗಿಲ್ಲ. ಮೋದಿ ಸರ್ಕಾರಕ್ಕೆ ಬೇಕಾಗಿರುವುದು ತಾವು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿ ಕೇಳಿಕೊಂಡು ಹೋಗುವ ಮನಸ್ಥಿತಿಯ ಕೈಗೊಂಬೆಗಳು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಇರಬಹುದು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಇರಬಹುದು ಅಥವಾ ಉತ್ತರಖಂಡ ಇನ್ಯಾವುದೇ ರಾಜ್ಯವಾದರೂ ಅಲ್ಲಿನ ಮುಖ್ಯಮಂತ್ರಿಗಳು ಬೃಹತ್ ಜನಬೆಂಬಲ ಇರುವವರಲ್ಲ. ಹಾಗಾಗಿಯೇ ಅವರನ್ನು ಮುಖ್ಯಮಂತ್ರಿಗಳಾಗಿ ಮಾಡಲಾಗಿದೆ. ಆದರೆ ಯಡಿಯೂರಪ್ಪ ಹಾಗಲ್ಲ. ಅವರು ಜಾತಿಬಲ, ಜನಬಲ ಹೊಂದಿರುವ ಮಾಸ್ ಲೀಡರ್. 75 ವರ್ಷ ತುಂಬಿದ ನಂತರವೂ ಪಕ್ಷದ ನಿಯಮ ಮೀರಿ ಕರ್ನಾಟಕದ ಮುಖ್ಯಮಂತ್ರಿಯಾದ ಛಾತಿವುಳ್ಳವರು. ಹಾಗಾಗಿಯೇ ಅವರನ್ನು ಮೋದಿ – ಶಾ ಕೆಳಗಿಳಿಸಿದ್ದಾರೆ.

ಯಡಿಯೂರಪ್ಪನವರ ಮಗ ಬಿ.ವೈ ವಿಜಯೇಂದ್ರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಸತ್ಯ ಕೂಡ. ಆದರೆ ಅದೇ ಯಡಿಯೂರಪ್ಪನವರ ತಲೆದಂಡಕ್ಕೆ ಪ್ರಮುಖ ಕಾರಣ ಎನ್ನಲಾಗದು. ಯಡಿಯೂರಪ್ಪನವರು ಆಪರೇಷನ್ ಕಮಲ ನಡೆಸಿಯೇ ಎರಡು ಭಾರಿ ಮುಖ್ಯಮಂತ್ರಿಯಾಗಿದ್ದಾರೆ. ಅದಕ್ಕೆಲ್ಲ ಮೋದಿಯವರ ಒಪ್ಪಿಗೆ ಇತ್ತು. ಅಮಿತ್ ಶಾರವರ ಮಗ ಜಯ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಭ್ರಷ್ಟಾಚಾರದ ಮೂಲಕ ಹಣ ಮಾಡುತ್ತಿರುವುದು ಮೋದಿಗೆ ತಿಳಿದಿಲ್ಲವೇ? ಇತರ ಪಕ್ಷಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದವರನ್ನು ಬಿಜೆಪಿ ಏಕೆ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ?

ಇದರರ್ಥ ಸ್ಪಷ್ಟವಾಗಿದೆ. ಅದೆಂದರೆ ಮೋದಿ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನತ್ತ ಕೇಂದ್ರೀಕರಿಸಿಕೊಳ್ಳಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಜಾತಿಬಲ ಹೊಂದಿರುವ, ಸ್ವಂತಂತ್ರವಾಗಿ ಗೆದ್ದುಬರುವ ಸಾಮರ್ಥ್ಯವುಳ್ಳ ಯಡಿಯೂರಪ್ಪನವರು ಮೋದಿ ಮುಂದೆ ಕೈಕಟ್ಟಿ ಕುಳಿತುಕೊಳ್ಳುವವರಲ್ಲ. ಹಾಗಾಗಿಯೇ ಯಡಿಯೂರಪ್ಪನವರಂತಹ ಹಠಮಾರಿ ರಾಜಕಾರಣಿ ಮೋದಿ ಸರಕಾರಕ್ಕೆ ಬೇಕಾಗಿಲ್ಲ.

ವೋಟ್ ಕೇಳುವುದರಿಂದ ಹಿಡಿದು ಸರ್ಕಾರ ನಡೆಸಲು ಎಲ್ಲದಕ್ಕೂ ಮೋದಿ ಜಪ ಮಾಡುವವರು, ಕೇಂದ್ರದ ಆದೇಶಗಳಿಗೆ ತಲೆಬಾಗುವವರು ಬಿಜೆಪಿಗೆ ಬೇಕು. ಸರ್ವಾಧಿಕಾರ ಅಂದರೆ ಇದೇ ಅಲ್ಲವೆ? ಸ್ವಾಭಿಮಾನದಿಂದ ಬದುಕುವವರಿಗೆ ಬಿಜೆಪಿಯಲ್ಲಿ ಜಾಗವಿಲ್ಲ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತುಪಡಿಸಿದೆ. ಕರ್ನಾಟಕದ 25 ಲೋಕಸಭಾ ಸದಸ್ಯರ ಹಾಗೆ ಕೈ ಕಟ್ಟಿ ನಿಲ್ಲುವ ನಾಯಕರಿಗೆ ಬಿಜೆಪಿಯಲ್ಲಿ ಬೆಲೆ ಇದ್ದಂತಿದೆ. ಯಾಕೆಂದರೆ ಇವರು ಆರಿಸಿ ಬಂದಿರುವುದೇ ಮೋದಿ ಹೆಸರನ್ನು ಹೇಳಿಕೊಂಡು, ಮೋದಿಯ ಅಸ್ತಿತ್ವದಿಂದಲೇ ಇವರ ಅಸ್ತಿತ್ವ.

ಭಾರತ ಇರುವುದೇ ರಾಜ್ಯಗಳಿಂದ ಎಂಬ ಕನಿಷ್ಠ ಜ್ಞಾನ ಬಿಜೆಪಿಯ ಕೇಂದ್ರ ನಾಯಕರಿಗೆ ಇದ್ದಂತಿಲ್ಲ. ಒಕ್ಕೂಟ ಸರಕಾರವನ್ನು ತಾವೇ ಅಳಬೇಕು, ರಾಜ್ಯವನ್ನು ತಾವೇ ಆಳಬೇಕೆಂಬ ದುರಾಸೆ ಇವರನ್ನು ಈ ಸ್ಥಿತಿಗೆ ತಂದಿದೆ. ರಾಜ್ಯದ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಳ್ಳುವ ಮತ್ತು ರಾಜ್ಯಗಳನ್ನು ಅಘೋಷಿತ ಕೇಂದ್ರಾಡಳಿತ ಪ್ರದೇಶಗಳಾನ್ನಾಗಿ ಮಾಡುವ ಹುನ್ನಾರ ಭಾಗ ಯಡಿಯೂರಪ್ಪನವರ ರಾಜೀನಾಮೆ. ಇದು ಕೇವಲ ಮುಖ್ಯಮಂತ್ರಿಯ ಬದಲಾವಣೆ ಮಾತ್ರವಲ್ಲ ಸಮಸ್ತ ಆಡಳಿತದ ಬದಲಾವಣೆ. ಇದಕ್ಕಿಂತ ದೊಡ್ಡ ಆಘಾತ ಒಕ್ಕೂಟ ವ್ಯವಸ್ಥೆಗೆ ಮತ್ತೊಂದಿಲ್ಲ.

  • ಝೀಶಾನ್ ಆಖೀಲ್ ಸಿದ್ದಿಕಿ

(ರಾಯಚೂರು ಜಿಲ್ಲೆಯ ಮಾನ್ವಿಯವರಾದ ಝೀಶಾನ್, ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್‌ನಲ್ಲಿ ಕೆಲಸ ಮಾಡಿದ ಯುವ ಹೋರಾಟಗಾರನಾಗಿದ್ದು, ರಾಜಕೀಯ ಆಗುಹೋಗುಗಳಿಗೆ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಾರೆ. ಲೇಖನದಲ್ಲಿ ಅಭಿಪ್ರಾಯಗಳು ವೈಯಕ್ತಿಕವಾದವು)


ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆ; ಮುಂದಿನ ಮುಖ್ಯಮಂತ್ರಿ ಹೆಸರಿನ ಊಹೆಗಿಂತ ಕರ್ನಾಟಕದ ಸ್ಥಿತಿ ಚರ್ಚೆಯಾಗಬೇಕಿದೆ!

LEAVE A REPLY

Please enter your comment!
Please enter your name here