Homeಕರ್ನಾಟಕಯಡಿಯೂರಪ್ಪ ರಾಜೀನಾಮೆ; ಮುಂದಿನ ಮುಖ್ಯಮಂತ್ರಿ ಹೆಸರಿನ ಊಹೆಗಿಂತ ಕರ್ನಾಟಕದ ಸ್ಥಿತಿ ಚರ್ಚೆಯಾಗಬೇಕಿದೆ!

ಯಡಿಯೂರಪ್ಪ ರಾಜೀನಾಮೆ; ಮುಂದಿನ ಮುಖ್ಯಮಂತ್ರಿ ಹೆಸರಿನ ಊಹೆಗಿಂತ ಕರ್ನಾಟಕದ ಸ್ಥಿತಿ ಚರ್ಚೆಯಾಗಬೇಕಿದೆ!

- Advertisement -
- Advertisement -

’ಅಧಿಕಾರ ಬಿಟ್ಟುಕೊಡುವ ಸಂದರ್ಭ ಬಂದರೆ ನರೇಂದ್ರ ಮೋದಿ ಮತ್ತು ಅಮಿತ್‌ಶಾ ಸುಮ್ಮನಿರುತ್ತಾರೆ ಎಂದುಕೊಂಡಿದ್ದೀರೇನು? ಅವರು ತಮ್ಮ ಕೈಯ್ಯಲ್ಲಾಗುವ ಎಂತಹ ಘಾತುಕ ಕ್ರಮಕ್ಕಾದರೂ ಮುಂದಾಗಿ ಅದನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಆ ಕ್ರಮವು ದೇಶಕ್ಕೆ ದೊಡ್ಡ ಹೊಡೆತವನ್ನೂ ಕೊಡಬಹುದು’. ಇದನ್ನು ಹೇಳಿದವರು ದೇಶದ ಬಹಳ ದೊಡ್ಡ ರಾಜಕೀಯ ವಿಶ್ಲೇಷಕರು ಮತ್ತು ಸ್ವತಃ ರಾಜಕೀಯ ಆಂದೋಲನದಲ್ಲಿ ತೊಡಗಿರುವವರು.

ಅದೇ ರೀತಿಯ ಮಾತನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರಿತು ಹಲವರು ಹೇಳುತ್ತಾರೆ. ಇವೆರಡೂ ಉದಾಹರಣೆಗಳ ನಡುವೆ ಒಂದು ವೈರುಧ್ಯಪೂರ್ಣ ಸಂಬಂಧವೂ ಇದೆ. ಅದೇನೆಂದರೆ, ತಮ್ಮ ಅಧಿಕಾರವನ್ನು ಸುಲಭವಾಗಿ ಬಿಟ್ಟುಕೊಡದಿದ್ದರೂ ಇನ್ನೊಬ್ಬರ ಕುರ್ಚಿಯನ್ನು ಕಸಿಯುವಲ್ಲಿ ಮೋದಿ ಅಮಿತ್‌ಶಾರಿಗೆ ಒಂದು ಪರಿಣಿತಿ ಇತ್ತು. ಅದರಲ್ಲೂ ಬಿಜೆಪಿಯ ಯಾವುದೇ ರಾಜ್ಯದ ಯಾವುದೇ ಮುಖ್ಯಮಂತ್ರಿಯನ್ನು ಬದಲಿಸಬೇಕು ಎಂದು ಅವರಿಬ್ಬರು ತೀರ್ಮಾನಿಸಿದರೆ ಅದನ್ನು ಆಗಗೊಡದ ಶಕ್ತಿ ಅಂತ ಯಾವುದಾದರೂ ಇದ್ದರೆ ಅದು ಆರೆಸ್ಸೆಸ್ ಮಾತ್ರ. ಬಿಜೆಪಿಯಲ್ಲಿ ಅವರಿಬ್ಬರ ನಂತರದ ಸ್ಥಾನದಲ್ಲಿ (ಬಹುಶಃ ಜೆ.ಪಿ.ನಡ್ಡಾಗಿಂತಲೂ ಮಿಗಿಲಾಗಿ) ಇರುವ ಬಿ.ಎಲ್.ಸಂತೋಷ್ ಆರೆಸ್ಸೆಸ್ ಮತ್ತು ಬಿಜೆಪಿಯ ನಡುವಿನ ಸೇತುವೆಯೂ ಹೌದು. ಆ ಜಾಗದಲ್ಲಿ ಹಿಂದೆ ಯಾರಿದ್ದರು ಎಂಬುದನ್ನು ನೋಡಿದರೆ ಅದು ಅರ್ಥವಾಗುತ್ತದೆ. ಯಡಿಯೂರಪ್ಪ ಹೋಗಬೇಕು ಎಂದು ಬಯಸಿದ್ದ ಬಲಾಢ್ಯರಲ್ಲಿ ಅವರೇ ಅಗ್ರಗಣ್ಯರು ಎಂಬುದು ಸರ್ವವಿಧಿತ. ಹೀಗಿದ್ದೂ ಯಾವ ಶಕ್ತಿ ಇದುವರೆಗೆ ಯಡಿಯೂರಪ್ಪನವರ ಕುರ್ಚಿಯನ್ನು ಉಳಿಸಿತ್ತು?

PC : Oneindia Kannada

ಆ ಶಕ್ತಿ ಯಾವುದು ಎಂಬುದನ್ನು ವಿಶ್ಲೇಷಿಸುವ ಮುಂಚೆ ಇದನ್ನು ಭಿನ್ನವಾಗಿ ನೋಡುತ್ತಿರುವ ’ಥಿಯರಿ’ಗಳೇನಿವೆ ಎಂಬುದನ್ನು ನೋಡೋಣ. ಅದರಲ್ಲಿ ಒಂದು – ಮೋದಿ ಮತ್ತು ಅಮಿತ್‌ಶಾರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಅಮಿತ್‌ಶಾ ಮತ್ತು ಸಂತೋಷ್ ಯಡಿಯೂರಪ್ಪನವರು ಹೋಗಬೇಕೆಂದಿದ್ದರೂ, ಮೋದಿ ಅದಕ್ಕೆ ವಿರುದ್ಧ ಇದ್ದಾರೆ ಎಂಬ ನಂಬಲರ್ಹವಲ್ಲದ ಥಿಯರಿ. ಹಾಗೆಯೇ ಆರೆಸ್ಸೆಸ್‌ನಲ್ಲಿರುವ ಒಂದು ಗುಂಪು ಯಡಿಯೂರಪ್ಪನವರ ಪರವಾಗಿ ಇದ್ದಿದ್ದರಿಂದ ರಾಜೀನಾಮೆ ಪಡೆಯುವುದು ಇಷ್ಟು ವಿಳಂಬವಾಯಿತೂ ಎಂಬ ಇನ್ನೊಂದು ಥಿಯರಿಯೂ ಇದೆ. ಇವುಗಳಿಗೆ ಹೆಚ್ಚೇನೂ ಆಧಾರಗಳು ಕಾಣುತ್ತಿಲ್ಲ. ಹಾಗಾಗಿ ದೇಶದ ಯಾವುದೇ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಿಂತ ಭಿನ್ನವಾಗಿ ಯಡಿಯೂರಪ್ಪ ಇರುವುದೇ ಅದಕ್ಕೆ ಕಾರಣ.

ಇನ್ನೇನು ಯಡಿಯೂರಪ್ಪನವರ ಕೈಲಿ ರಾಜೀನಾಮೆ ಕೊಡಿಸಿಯೇಬಿಟ್ಟರು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಅವರೊಂದು ದಾಳ ಉದುರಿಸಿರುತ್ತಿದ್ದರು. ಆ ದಾಳ ಲಿಂಗಾಯಿತ ಜಾತಿ ಬಲವಲ್ಲದೇ ಬೇರೇನೂ ಅಲ್ಲ. ಹೀಗಿದ್ದೂ ಬಿಜೆಪಿ ವಿರೋಧಿಗಳು ಹಲವರು (ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿರುವ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ಮಾತ್ರವಲ್ಲ) ಅವರೇ ಮುಂದುವರೆಯಲಿ ಎಂದು ಏಕೆ ಬಯಸುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಎಂ.ಬಿ. ಪಾಟೀಲರು ಈ ಮೂಲಕ ಲಿಂಗಾಯಿತರು ರಾಜಕೀಯವಾಗಿ ಕಡೆಗಣಿಸಲಾಗದ ಸಮುದಾಯವೆಂದೂ, ಕಾಂಗ್ರೆಸ್ಸಿನಲ್ಲಿ ಸಿಎಂ ಆಗುವ ಅವಕಾಶ ಬಂದಾಗ ತನ್ನನ್ನೂ ಕಡೆಗಣಿಸಲಾಗದೆಂದೂ ಸಂದೇಶ ಕೊಡಹೊರಟಿದ್ದಾರೆ. ಒಟ್ಟಿನಲ್ಲಿ ಈಗ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದಾಗಿದೆ.

ನಿಸ್ಸಂದೇಹವಾಗಿ ಈ ಸರ್ಕಾರವು ಕರ್ನಾಟಕವು ಕಂಡ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಪ್ರತೀ ಸರ್ಕಾರವೂ ಹಿಂದಿನದ್ದಕ್ಕಿಂತ ಹೆಚ್ಚು ಭ್ರಷ್ಟವಾಗುತ್ತಾ ಹೋಗುತ್ತಿರುವುದು ಕರ್ನಾಟಕದ ಹಣೆಬರಹವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭ್ರಷ್ಟಾಚಾರವು ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡಿದೆ. ಆದರೆ
ಯಡಿಯೂರಪ್ಪನವರ ಕಾಲದಲ್ಲಿ ಅದು ಎಲ್ಲಾ ಎಲ್ಲೆಗಳನ್ನು ದಾಟಿದೆ. ಅಷ್ಟೇ ಅಲ್ಲದೇ ಯಾವುದೇ ಸಾಂವಿಧಾನಿಕ ಅಧಿಕಾರ ಹೊಂದಿಲ್ಲದ, ಕನಿಷ್ಠ ಶಾಸಕನೂ ಅಲ್ಲದ ವ್ಯಕ್ತಿಯೊಬ್ಬ ಸರ್ಕಾರದ ಯೋಜನಾ ವೆಚ್ಚದ ಕನಿಷ್ಠ ಅರ್ಧದಷ್ಟು ಭಾಗದ ಮೇಲೆ ಬಹುತೇಕ ನೇರ ಹಿಡಿತ ಹೊಂದಿರುವುದು ಹಿಂದೆಂದೂ ನಡೆದಿರಲಿಲ್ಲ. ಅದು ಈ ಸರ್ಕಾರದ ಸಂದರ್ಭದಲ್ಲಿ ನಡೆಯಿತು.

ಕರ್ನಾಟಕವು ಉತ್ತರ ಪ್ರದೇಶದ ಹಾದಿ ಹಿಡಿದಿರುವುದು ಈ ಸಂದರ್ಭದಲ್ಲಿ ಮಾತ್ರವೇ. ಉತ್ತರ ಪ್ರದೇಶದಲ್ಲಿ ಕೊರೊನಾ ಸಾವುಗಳ ನಿಜ ಸಂಖ್ಯೆಯು ಸರ್ಕಾರ ತೋರಿಸಿದ್ದಕ್ಕಿಂತ 20 ರಿಂದ 40 ಪಟ್ಟು ಹೆಚ್ಚು ಇದೆ ಎನ್ನುತ್ತಿರುವಾಗ, ಕರ್ನಾಟಕದಲ್ಲಿ ಅದು ಎರಡು ಪಟ್ಟು ಮಾತ್ರ ಹೆಚ್ಚು ಎಂಬ ಲೆಕ್ಕಾಚಾರ 2ನೇ ಅಲೆಯ ಸಂದರ್ಭದಲ್ಲಿ ಓಡಾಡುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯ ಸಾವುಗಳ ಸಂಖ್ಯೆಯು ಹಲವು ಪಟ್ಟುಗಳು ಇವೆ ಎಂಬುದು ಬೆಳಕಿಗೆ ಬಂದಿತು. ಯಡಿಯೂರಪ್ಪನವರ ವೈಫಲ್ಯವು ಕೊರೊನಾ ಸಾವುಗಳನ್ನು ತಡೆಯುವುದರಲ್ಲಿ ಮಾತ್ರ ಇಲ್ಲ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಅವರನ್ನು ಬೈದುಕೊಳ್ಳುತ್ತಿದ್ದ ಹಲವಾರು ಐಎಎಸ್ ಅಧಿಕಾರಿಗಳು ಈ ಸರ್ಕಾರ ಬಂದನಂತರ ಸಿದ್ದರಾಮಯ್ಯನವರಂತಹ ಆಡಳಿತಗಾರ ಇನ್ನೊಬ್ಬರಿಲ್ಲ ಎಂಬಂತೆ ಮಾತಾಡುತ್ತಿದ್ದಾರೆ. ಸಹಜವಾಗಿಯೇ ನಡೆಯುವ ಆಡಳಿತ ಮತ್ತು ಸಹಜವಾಗಿಯೇ ಆಗುವ ಅಭಿವೃದ್ಧಿಗೂ ಒಂದಷ್ಟು ಮಟ್ಟಿಗೆ ಕಲ್ಲು ಹಾಕುವ ಕೆಲಸವಷ್ಟೇ ಈ ಸರ್ಕಾರದಲ್ಲಿ ನಡೆದಿದೆ.

ಹೀಗಿದ್ದೂ, ಬಿಜೆಪಿ ವಿರೋಧಿಗಳೂ ಯಡಿಯೂರಪ್ಪನವರು ಇದ್ದಿರಬೇಕಿತ್ತು ಎಂದುಕೊಳ್ಳುತ್ತಿರುವುದಕ್ಕೆ ಅವರು ಕಟು ಆರೆಸ್ಸೆಸ್ ಅಲ್ಲ, ಅವರಿದ್ದಷ್ಟು ಕಾಲ ಇದ್ದುದರಲ್ಲಿ ಪರವಾಗಿಲ್ಲ ಎಂಬ ಸ್ಥಿತಿ ಇರುತ್ತದೆ ಎಂಬ ಕಾರಣವಿದೆ. ಹಾಗೆಯೇ ಕರ್ನಾಟಕದಲ್ಲಿ ಈಗ ಸಕ್ರಿಯವಾಗಿರುವ ಭಿನ್ನ ಪಕ್ಷಗಳ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಯಡಿಯೂರಪ್ಪನವರ ಜೊತೆಗೆ ಲವ್ & ಹೇಟ್ ಸಂಬಂಧವನ್ನು ಹೊಂದಿದ್ದಾರೆ. ಇದನ್ನು ದುರಂತವೆನ್ನಬೇಕೋ, ಸೋಜಿಗವೆನ್ನಬೇಕೋ ಗೊತ್ತಿಲ್ಲ. ಹೊಂದಾಣಿಕೆಗೆ ಕಾರಣವೇನಿರಬಹುದು? ಸ್ವಂತ ಸಾಮ್ರಾಜ್ಯ ವಿಸ್ತರಣೆಯ ಕಾರಣ ಕೆಲವು ಸಾರಿ, ಹಳೆಯ ಡೀಲ್‌ಗಳ ಮುಂದುವರಿಕೆ ಅಥವಾ ಹೊಸಾ ಡೀಲ್‌ಗಳ ನಿರ್ವಹಣೆ ಕೆಲವು ಸಾರಿ ಪಾತ್ರ ವಹಿಸುತ್ತವೆ. ಕಾಂಗ್ರೆಸ್ಸಿನ ನಾಯಕರುಗಳಿಗೆ ಇನ್ನೊಂದು ಕಾರಣವೂ ಇದೆ. ಯಡಿಯೂರಪ್ಪನವರು ಇದ್ದಷ್ಟು ಕಾಲ ಪರಿಸ್ಥಿತಿ ಹದಗೆಡುತ್ತಲೇ ಹೋಗುತ್ತದೆ; ಅವರು ಬದಲಾದರೆ ಬದಲಾದ ದಿನದಿಂದಲೂ ಪರಿಸ್ಥಿತಿ ಕೆಡುತ್ತದೆ. ನಂತರ ಚುನಾವಣೆಯವರೆಗೆ ಅದು ಸೆಟ್ಲ್ ಆಗಬಾರದು. ಹಾಗಾದರೆ ತಮ್ಮ ಹಾದಿ ಸಲೀಸು ಎಂಬುದು ಅವರ ಲೆಕ್ಕಾಚಾರ. ಹೇಗಾದರೂ ಮಾಡಿ ಯಡಿಯೂರಪ್ಪ ಮತ್ತು ಹೈಕಮ್ಯಾಂಡ್ ಒಂದಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಿದರೆ ’ತನ್ನಂತೆ ತಾನೇ ಗೆಲ್ಲುವ’ ತಮ್ಮ ಆಸೆ ಫಲಿಸದು ಎಂಬುದು ಕೈ ನಾಯಕರ ಗುಪ್ತ ಬಯಕೆಯಾಗಿತ್ತು. ಕರ್ನಾಟಕ ಕಂಡ ಅತ್ಯಂತ ಕೆಟ್ಟ ಸರ್ಕಾರದ ವಿರೋಧಿಗಳ ಪರಿಸ್ಥಿತಿ ಹೀಗಿದೆ.

PC : Prajavani

ವಾಸ್ತವದಲ್ಲಿ ಯಡಿಯೂರಪ್ಪನವರು ನಡೆಸುತ್ತಿರುವ ಜಾತಿ ರಾಜಕಾರಣವು ಅತ್ಯಂತ ಅಪಾಯಕಾರಿಯಾದುದಾಗಿದೆ. ಅದೂ ಸಹಾ ಆರೆಸ್ಸೆಸ್ ಬಯಸುವ ಸಾಮಾಜಿಕ ಸಮೀಕರಣಕ್ಕೆ ನೀರೆರೆದು ಪೋಷಿಸುತ್ತದೆ. ಕರ್ನಾಟಕದಲ್ಲಿ ಲಿಂಗಾಯಿತರು ದೊಡ್ಡ ಸಂಖ್ಯೆಯಲ್ಲಿದ್ದಾರಾದರೂ, ಆ ಸಂಖ್ಯೆಯೇ ಈ ಶಕ್ತಿ ತಂದುಕೊಟ್ಟಿದೆ ಎಂಬುದೊಂದು ಮಿಥ್. ಏಕೆಂದರೆ ಅವರೇನೂ ಜನಸಂಖ್ಯೆಯ ಕಾಲುಭಾಗವಿಲ್ಲ. ಅವರಿಗಿಂತ ದಲಿತ ಸಮುದಾಯದ ಎರಡು ಪಂಗಡಗಳ ಒಟ್ಟು ಜನಸಂಖ್ಯೆ ಹೆಚ್ಚಿದೆ. ಹೀಗಿದ್ದೂ ಇಂತಹ ರಾಜಕಾರಣ ಮಾಡಲಾಗದ್ದಕ್ಕೆ ಕಾರಣ ಸ್ಪಷ್ಟವಿದೆ. ಲಿಂಗಾಯಿತ ಸಮುದಾಯವು ಬಲಾಢ್ಯವಾದುದಾಗಿದೆ. ಇನ್ನೂ ಒಂದು ಮಿಥ್ ಏನೆಂದರೆ, ಇಂತಹ ನಾಯಕರುಗಳು ಸಮುದಾಯಗಳ ಹಿತ ಕಾಪಾಡುತ್ತಾರೆಂಬುದು. ರಾಜ್ಯವನ್ನು ಬಹುಕಾಲ ಆಳಿದ ಮುಖ್ಯಮಂತ್ರಿಗಳಿಂದ ಒಕ್ಕಲಿಗರಿಗೆ ಅಥವಾ ಲಿಂಗಾಯಿತರಿಗೆ ಸಿಕ್ಕಿದ್ದೇನು? ಹೆಚ್ಚೆಂದರೆ ಆಯಾ ಜಾತಿಗಳ ಖೂಳರಿಗೆ ಆದ್ಯತೆ ಸಿಕ್ಕಿರಬಹುದು ಅಷ್ಟೇ.

ಹೀಗಿದ್ದೂ ಜಾತಿಯನ್ನು ಅಸ್ತ್ರವಾಗಿ ಬಳಸುವುದು ನಾಯಕನಾಗುವುದಕ್ಕೆ (ನಾಯಕಿಗೆ ಈ ಸಾಧ್ಯತೆ ಕಾಣುತ್ತಿಲ್ಲವಾದ್ದರಿಂದ) ಇರುವ ಮಾನದಂಡದಂತೆ ಬಳಕೆಯಾಗುತ್ತಿದೆ. ಇದೇ ಒಂದು ದೊಡ್ಡ ದುರಂತ. ಇದನ್ನೇ ಮಾನದಂಡವಾಗಿ ತೆಗೆದುಕೊಂಡು ವಾಲ್ಮೀಕಿ ಸಮುದಾಯ ಹಾಗೂ ದಲಿತ ಸಮುದಾಯಗಳು ಪ್ರತ್ಯೇಕವಾಗಿ ತಮ್ಮ ಹಕ್ಕಿನ ಪ್ರತಿಪಾದನೆ ಮಾಡುತ್ತಿವೆಯಾದರೂ, ಅದು ಅಸಾಧ್ಯವೆಂದು ಅವರಿಗೆ ತೋರುತ್ತಿಲ್ಲ. ಶೋಷಿತ ಸಮುದಾಯಗಳು ಒಂದು ವೇಳೆ ಅಂತಹ ಪ್ರಾತಿನಿಧ್ಯ ಪಡೆದುಕೊಳ್ಳಬೇಕೆಂದರೂ ಮಾಡಬೇಕಾದ್ದ ’ಶೋಷಿತ ಸಮುದಾಯಗಳ ಐಕ್ಯತೆಯ ರಾಜಕಾರಣ’ವೇ ಹೊರತು ಪ್ರತ್ಯೇಕ ಬಿಡಿ ಘಟಕಗಳಾಗಿಯಲ್ಲ. ಆ ಸಮುದಾಯಗಳನ್ನು ಬಿಡಿ ಘಟಕಗಳನ್ನಾಗಿಸಿ ತಮ್ಮ ವೋಟ್‌ಬ್ಯಾಂಕ್ ಆಗಿ ಶೋಷಕ ಐಡಿಯಾಲಜಿಯ ಬಿಜೆಪಿಯು ಪರಿವರ್ತಿಸಿರುವುದಕ್ಕಿಂತ ಬೇರೆ ನಿದರ್ಶನ ಬೇಕೇ?

ಯಡಿಯೂರಪ್ಪನವರಿಗೆ ಲಿಂಗಾಯಿತ ಸಮುದಾಯದ ಬೆಂಬಲ ಇದೆ, ಹಾಗಾಗಿ ಅವರನ್ನು ಅಲ್ಲಾಡಿಸಲಾಗದು ಎಂಬಂತೆ ವಿರೋಧ ಪಕ್ಷಗಳ ನೇತಾರರು, ಮಾಧ್ಯಮಗಳು ಹಾಗೂ ಸಮಾಜದ ಪ್ರಜ್ಞಾವಂತರೆಲ್ಲರೂ ಯೋಚಿಸುತ್ತಿದ್ದುದು, ಚರ್ಚಿಸುತ್ತಿದ್ದುದು ಒಂದು ದುರಂತ. ಇದು ಹೀಗೇ ನಡೆದರೆ ದಮನಿತ ಸಮುದಾಯಗಳ ಕಥೆ ಏನು? ಅದರಲ್ಲೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಥವಾ ಸಾಮಾಜಿಕವಾಗಿ ಬಲಾಢ್ಯರಾಗಿರದ ಸಮುದಾಯಗಳ ಕಥೆ ಏನು? ಒಂದು ವೇಳೆ ಅಂತಹ ಸಮುದಾಯದ ಪ್ರತಿನಿಧಿಯೊಬ್ಬರು ಈಗಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆದರೆ, ಅಲ್ಲಿಯೂ ಆಯಾ ಜಾತಿಗಳ ಒಂದು ಸಣ್ಣ ಪಟ್ಟಭದ್ರರ ಗುಂಪು ಅಧಿಕಾರಕ್ಕೆ ಹತ್ತಿರವಾಗುತ್ತದೆ ಅಷ್ಟೇ ಎಂಬುದೇನೋ ನಿಜ. ಹಾಗಿದ್ದರೂ ಪ್ರಾತಿನಿಧ್ಯದ ದೃಷ್ಟಿಯಿಂದ ಅದು ಸಾಧ್ಯವಾದರೆ ಒಳ್ಳೆಯದೇ. ಆದರೆ ನಿರ್ದಿಷ್ಟ ವ್ಯಕ್ತಿಯೊಬ್ಬರು ನಿರ್ದಿಷ್ಟ ಜಾತಿಗೆ ಸೇರಿರುವುದರಿಂದ, ಅವರನ್ನು ಬದಲಿಸುವುದೆಂದರೆ ಆ ಸಮುದಾಯದ ವಿರೋಧ ಕಟ್ಟಿಕೊಳ್ಳುವುದು ಎಂಬಂತೆ ಬಿಂಬಿಸುತ್ತಾ ಹೋದರೆ, ಸಹಜವಾಗಿ ದೊಡ್ಡ ಸಂಖ್ಯೆಯಲ್ಲಿದ್ದೂ ಬಲಾಢ್ಯರಾಗಿರುವ ಸಮುದಾಯಗಳೇ ಶಾಶ್ವತವಾಗಿ ರಾಜ್ಯವನ್ನಾಳುತ್ತವೆ.

ಹೀಗಿದ್ದೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಬ್ಬರನ್ನು ಸಿಎಂ ಸ್ಥಾನಕ್ಕೆ ತಂದುಕೂರಿಸುವ ಪ್ರಯತ್ನ ಹೇಗೆ ನಡೆಯುತ್ತಿದೆ? ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಮೂಲಭೂತವಾಗಿ ಆ ಜಾತಿಯ ಹಿತವನ್ನು ಪ್ರಧಾನವಾಗಿ ಎತ್ತಿ ಹಿಡಿಯುತ್ತವಾದ್ದರಿಂದ ಅದು ಸಾಧ್ಯ. ಆಗಿನಿಂದ ಈಗಿನವರೆಗೆ ಸತತವಾಗಿ ಕೇಳಿಬರುತ್ತಿರುವ ಹೆಸರು ಒಂದೇ, ಪ್ರಹ್ಲಾದ್ ಜೋಷಿ. ಇದರ ಮಧ್ಯೆ ಹಲವಾರು ಹೆಸರುಗಳು ಒಮ್ಮೊಮ್ಮೆ ಬಂದು ಹೋಗಿವೆ. ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ಕ್ಯಾಂಪಿನಿಂದ; ಮುರುಗೇಶ್ ನಿರಾಣಿ, ಯತ್ನಾಳ್, ಲಕ್ಷ್ಮಣ ಸವದಿ ಯಡ್ಡಿ ವಿರೋಧಿ ಕ್ಯಾಂಪಿನಿಂದ. ಯಡಿಯೂರಪ್ಪನವರ ಜಾಗದಲ್ಲಿ ಪ್ರಹ್ಲಾದ್ ಜೋಷಿ ಬರುತ್ತಾರೆ ಎಂದು ಮೂಲಗಳನ್ನು ಹೊಂದಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರು 2020ರ ಜನವರಿಯಲ್ಲೇ ತಮ್ಮ ಖಾಸಗಿ ಮಾತುಕತೆಯೊಂದರಲ್ಲಿ ಹೇಳಿದ್ದರು. ದೆಹಲಿಯ ಸಿಂಹಾಸನದಲ್ಲಿ ಕೂತಿರುವವರು ಮತ್ತು ನಾಗಪುರದಿಂದ ಅಧಿಕಾರ ನಡೆಸುವವರು ಇಂದು ಸರ್ವಶಕ್ತರಾಗಿಯೂ ವಿವಿಧ ರಾಜ್ಯಗಳಲ್ಲಿ ಸಿಎಂಗಳನ್ನಾಗಿ ಯಾರನ್ನು ಕೂರಿಸಿದ್ದಾರೋ ಅವರಲ್ಲಿ ಬಹುತೇಕರು (ಮಧ್ಯಪ್ರದೇಶದಲ್ಲಿ ಅನಿವಾರ್ಯತೆ ತಲೆದೋರಿದ್ದನ್ನು ಬಿಟ್ಟರೆ) ಜನನಾಯಕರಲ್ಲ. ಜೊತೆಗೆ ಮೇಲ್ಜಾತಿ ಅಥವಾ ಬಲಾಢ್ಯ ಜಾತಿಗಳಿಗೆ ಸೇರಿದವರಾಗಿದ್ದಾರೆ.

ಹೀಗಾಗಿ ಜಾತಿಯೇ ಪ್ರಧಾನ ಮಾನದಂಡವೆಂದು ಪದೇ ಪದೇ ಚರ್ಚೆಯಾಗುವಂತೆ ನೋಡಿಕೊಂಡಿರುವುದರ ಹಿಂದೆ ಯಡಿಯೂರಪ್ಪನವರ ಚಾಣಾಕ್ಷತೆಯಿದೆ. ಲಿಂಗಾಯಿತ ನಾಯಕರಾಗಿ ಯಡಿಯೂರಪ್ಪನವರು ತನ್ನಂತೆ ತಾನೇ ಆದದ್ದಲ್ಲ. ಅದನ್ನು ಅವರು ನಿರಂತರವಾಗಿ ಪೋಷಿಸಿಕೊಳ್ಳುತ್ತಾ, ಬಿಂಬಿಸಿಕೊಳ್ಳುತ್ತಾ ಮತ್ತು ಅಗತ್ಯಬಂದಾಗಲೆಲ್ಲಾ ಪ್ರಜ್ಞಾಪೂರ್ವಕವಾಗಿ ಬಳಸುತ್ತಾ ಬಂದಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕದ ಜನರಿಗಾಗಲೀ, ಇಡೀ ಲಿಂಗಾಯಿತ ಸಮುದಾಯಕ್ಕಾಗಲೀ ಅನಿಸದೇ ಇದ್ದರೆ ಅದು ನಾಚಿಕೆಗೇಡು. ಜೀವನದುದ್ದಕ್ಕೂ ಸಂತನ ರೀತಿಯಲ್ಲಿ ಬಾಳಿದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳೇ ಜೈಲಿಗೆ ಹೋದ ಯಡಿಯೂರಪ್ಪನವರನ್ನು ಹೋಗಿ ಭೇಟಿಯಾಗಿ ಬಂದರು. ಅಲ್ಲಿಗೆ ಅವರ ಸಂತತನ ಮುಕ್ಕಾಗಿ ಹೋಯಿತು. ಇನ್ನುಳಿದ ಮಠಾಧೀಶರು ಸಂಕುಚಿತರೇ ಹೊರತು ಸಂತರಲ್ಲ. ಇದು ಇತ್ತೀಚೆಗೆ ನಡೆದ ಯಡಿಯೂರಪ್ಪ ಬೆಂಬಲ ಸಭೆಗಳಿಂದ ಮತ್ತಷ್ಟು ಸ್ಪಷ್ಟರೀತಿಯಲ್ಲಿ ಸಾಬೀತಾಗಿದೆ. ಪ್ರಪಂಚದಲ್ಲಿ ಸಂತರು ಎಂದು ಕರೆಸಿಕೊಳ್ಳುವ ಎಲ್ಲರ ಸುತ್ತಲೂ ಇದ್ದ ಕತೆಗಳು ಅವರು ಜಾತಿ ಧರ್ಮಗಳಾಚೆ ಜನರನ್ನು ಪೊರೆದ ಕುರಿತಾಗಿದ್ದವು. ಈಗ ನಿರ್ದಿಷ್ಟ ಧರ್ಮವೊಂದರ, ನಿರ್ದಿಷ್ಟ ಜಾತಿಯ, ನಿರ್ದಿಷ್ಟ ಉಪಪಂಗಡದ ಸ್ವಾಮೀಜಿಗಳು ಕೆಲವು ಗ್ಯಾಂಗ್‌ಗಳ ಹಿತಾಸಕ್ತಿಗಳನ್ನು ಕಾಯುವವರಾಗಿ ಬದಲಾಗಿದ್ದಾರೆ. ಯಡಿಯೂರಪ್ಪನವರು ಹೆಚ್ಚೆಂದರೆ ಲಿಂಗಾಯಿತ ಜಾತಿಯ ವಿವಿಧ ಉಪಪಂಗಡಗಳ ಮಠಾಧೀಶರನ್ನು ಒಂದೆಡೆಗೆ ತಂದಿದ್ದಾರೆ ಅಷ್ಟೇ. ಅದೂ ಪರಮ ಭ್ರಷ್ಟ ಸರ್ಕಾರದ ಸಮರ್ಥನೆಗೆ.

ಇವೆಲ್ಲಾ ಆಗುವ ಹೊತ್ತಿಗೆ ಪೆಗಾಸಸ್‌ನ ಭೂತ ಹೊರಗೆ ಬಂದಿದೆ. ಸಮ್ಮಿಶ್ರ ಸರ್ಕಾರ ಉರುಳುವ ಹೊತ್ತಿನಲ್ಲಿ ಬೆಂಗಳೂರಿನ ಪೊಲೀಸ್ ಕಮೀಷನರ್ ಆಗಿದ್ದ ಅಲೋಕ್ ಕುಮಾರ್, ಕದ್ದಾಲಿಕೆ ನಡೆಸಿ ಅವರ ಜಾಗದಲ್ಲಿ ಬಂದು ಕೂರಲು ಬಯಸಿದ್ದ ಭಾಸ್ಕರ್ ರಾವ್ ಅವರ ಆಡಿಯೋ ಲೀಕ್ ಮಾಡಿದ್ದರು. ನಂತರ ಯಡಿಯೂರಪ್ಪನವರು ಅದನ್ನು ಸಿಬಿಐಗೆ ಕೊಟ್ಟರು. ಆ ತನಿಖೆ ಎಲ್ಲಿಗೆ ಬಂದು ಕೂತಿತೋ ಗೊತ್ತಿಲ್ಲ. ಆಗ ಅಬ್ಬರ ನಡೆಸಿದ್ದ ಬಿಜೆಪಿಯವರೇ ಇಡೀ ದೇಶಾದ್ಯಂತ ವಿಪರೀತದ ಕದ್ದಾಲಿಕೆ ನಡೆಸಿರುವ ಆರೋಪ ಹೊರಗೆ ಬಂದಿದೆ. ಅದರಲ್ಲಿ ಸಮ್ಮಿಶ್ರ ಸರ್ಕಾರ ಬೀಳುವ ಹೊತ್ತಿನ ಕದ್ದಾಲಿಕೆಗಳೂ ಸೇರಿಕೊಂಡಿದ್ದವೆಂಬುದು ಗೊತ್ತಾಗಿದೆ. ಇನ್ನು ಹೊರಬರಬೇಕಿರುವುದು ಯಡಿಯೂರಪ್ಪನವರು ಮತ್ತು ಅವರಿಗೆ ಸಂಬಂಧಿಸಿದವರ ಫೋನ್ ನಂಬರ್‌ಗಳೂ ಆ ಪಟ್ಟಿಯಲ್ಲಿದ್ದವೋ ಇಲ್ಲವೋ ಎಂಬುದಷ್ಟೇ.

PC : Prajavani

ಸರ್ಕಾರದ ಈ ಅನಿಶ್ಚಿತತೆ ಮತ್ತು ಮುಂದಿನ ಬದಲಾವಣೆಗಳು ಆಡಳಿತದ ಮೇಲೆ ಮಾಡುವ ಬದಲಾವಣೆಗಳೇನು ಎಂಬುದನ್ನೂ ನೋಡಬೇಕು. ಇನ್ನೆರಡು ವರ್ಷಗಳಲ್ಲಿ ಚುನಾವಣೆ ಬರುವುದರಿಂದ ಶಾಸಕರಲ್ಲಿ ಧಾವಂತವಿದೆ. ಈಗ ಮಾಡಿರುವ ಹಣ ಸಾಕಾಗುವುದಿಲ್ಲ; ಮುಂದಿನ ಚುನಾವಣೆ ಖರ್ಚಿಗೂ ದುಡಿದುಕೊಳ್ಳಬೇಕು ಎಂಬ ಧಾವಂತವದು. ತಾವು ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿ ಮುಗಿದಿಲ್ಲವೆಂದೋ, ಯಾವುದೋ ಜನಪರ ನೀತಿ ಇನ್ನೂ ಜಾರಿಗೆ ಬಂದಿಲ್ಲ ಎಂಬ ಧಾವಂತವೋ ಯಾರಲ್ಲೂ ಇಲ್ಲ. ಹೀಗಾಗಿ ಹಣ ಸಂಪಾದನೆಯ ಮಾರ್ಗಗಳನ್ನು ಹುಡುಕುತ್ತಾ ಸಿಗದ ಮಂತ್ರಿಗಿರಿ, ನಿಗಮಗಳ ಕಡೆಗೆ ಅವರ ಕಣ್ಣಿರುತ್ತದೆ. ಹಾಗೆಯೇ ಅಧಿಕಾರ ಹಿಡಿದವರಲ್ಲೂ ಧಾವಂತವಿರುತ್ತದೆ ಎಂಬುದಕ್ಕೆ ಯಡಿಯೂರಪ್ಪನವರು ಈಗ ಮಾಡಿರುವ ಅವರ ನೆಚ್ಚಿನ ಬಂಟ ಕಾ.ಪು.ಸಿದ್ದಲಿಂಗಸ್ವಾಮಿ ನೇಮಕಾತಿ ತೋರುತ್ತದೆ. ಹಾಗೆಯೇ ಭ್ರಷ್ಟರು, ಗುತ್ತಿಗೆದಾರರೂ ತಮ್ಮ ಡೀಲ್‌ಗಳ ಕುರಿತು ಚಿಂತಿತರಾಗಿರುತ್ತಾರೆ. ಹಿಂದಿನ ಸರ್ಕಾರದ ಉನ್ನತ ಶಿಕ್ಷಣ ಸಚಿವರು ತಮ್ಮ ಮಗನ ಮೂಲಕ ಡೀಲ್ ನಡೆಸಿ ಹಣ ಹೊಡೆದಿದ್ದರು. ಆದರೆ ಸಂಬಂಧಿಸಿದವರಿಗೆ ಸರ್ಕಾರೀ ಆದೇಶ ನೀಡಿರಲಿಲ್ಲ. ಅಷ್ಟರಲ್ಲಿ ಸರ್ಕಾರ ಬದಲಾಗಿ, ಹೊಸ ಜಾಗಕ್ಕೆ ಬಂದವರು ಹೊಸದಾಗಿ ಹಣ ಕೇಳಿದ್ದರು!

ಇವೆಲ್ಲಾ ಕಾರಣಗಳಿಂದ ಯಡಿಯೂರಪ್ಪನವರ ವಾರಸುದಾರರಾಗಿ ಯಾರು ಬಂದರೂ ತೊಂದರೆ ಇರುವುದು ಕರ್ನಾಟಕಕ್ಕೆ. ಲಿಂಗಾಯಿತರೂ ಸೇರಿದಂತೆ ಎಲ್ಲಾ ಸಮುದಾಯಗಳಿಗೆ; ಆಡಳಿತಕ್ಕೆ. ಈ ಕುರಿತು ನಮ್ಮ ಕಾಳಜಿ ಹೆಚ್ಚಿರಬೇಕು. ಆದರೆ ಮುಂದೆ ಯಾರಿಗೆ ಅಧಿಕಾರ ಸಿಗುತ್ತದೆ, ಯಡಿಯೂರಪ್ಪನವರ ಆಪ್ತರೇ ಗದ್ದುಗೆ ಏರುತ್ತಾರಾ ಇತ್ಯಾದಿಗಳ ಕುರಿತೇ ಹೆಚ್ಚಿನ ಚರ್ಚೆ ನಡೆಯುತ್ತಿರುವ ವಿಪರ್ಯಾಸದ ವಿದ್ಯಮಾನಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ.


ಇದನ್ನೂ ಓದಿ: ವರಿಷ್ಠರ ಸೂಚನೆಯಂತೆ ನಡೆಯುವೆ: ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...