ಕಾಂಗ್ರೆಸ್ ಸರ್ಕಾರ ಉರುಳಿಸಲು, ಶಾಸಕರಿಗೆ ತಲಾ 50 ಕೋಟಿ ರೂಪಾಯಿಯ ಆಫರ್ ಅನ್ನು ಬಿಜೆಪಿ ನೀಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ (ನ.13) ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣೆ ಮಾಡಿ ಮಾತನಾಡಿದ ಅವರು “ಬಿಜೆಪಿ ಎಂದೂ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ಸಾಕಷ್ಟು ಭ್ರಷ್ಟಾಚಾರ ಮಾಡಿ ಲಂಚದಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ. ಆ ಹಣದಿಂದ ನಮ್ಮ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಲು ಯತ್ನಿಸಿದ್ದರು. ಆದರೆ, ನಮ್ಮ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗಿಲ್ಲ. ಹಾಗಾಗಿ ನನ್ನ ಮೇಲೆ ಮುಡಾ ಪ್ರಕರಣ ಎಂದು ಸುಳ್ಳು ಆರೋಪ ಮಾಡಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರೂ.ಹಣ ಕೊಟ್ಟು ಖರೀದಿಸಲು ಯಡಿಯೂರಪ್ಪ ಏನು ಪ್ರಿಂಟ್ ಮಾಡಿದ್ದಾರಾ? ಬೊಮ್ಮಾಯಿ, ಅಶೋಕ್, ವಿಜಯೇಂದ್ರ ಹಣ ಪ್ರಿಂಟ್ ಮಾಡಿದ್ದಾರಾ? ಎಲ್ಲವೂ ಭ್ರಷ್ಟಾಚಾರ ಲಂಚದಿಂದ ಸಂಪಾದನೆ ಮಾಡಿರುವ ಹಣ” ಎಂದಿದ್ದಾರೆ.
ಬಿಜೆಪಿ ಇವತ್ತಿನವರೆಗೂ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ಸಿನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದಾರೆ. ಎಲ್ಲಿಂದ ಬರತ್ತೆ ಈ ಹಣ? ಯಡಿಯೂರಪ್ಪ, ಬೊಮ್ಮಾಯಿ, ಆರ್.ಅಶೋಕ್ ಪ್ರಿಂಟ್ ಹಾಕಿದ್ದಾ ಈ ಹಣ?… pic.twitter.com/1KNnilkaly
— Siddaramaiah (@siddaramaiah) November 13, 2024
“ಕೇಂದ್ರ ಸರ್ಕಾರ ಬಿಜೆಪಿ ಆಧಿಕಾರದಲ್ಲಿ ಇಲ್ಲದ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ಇಡಿ, ಐಟಿ, ಸಿಬಿಐ ಬಳಸಿಕೊಂಡು ತೊಂದರೆ ಕೊಡುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೂ ಸುಳ್ಳು ಪ್ರಕರಣ ಹಾಕಿ ತೊಂದರೆ ಕೊಟ್ಟರು. ಈಗ ನನ್ನ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿ ಆದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಂಕರ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿ ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1.20 ಲಕ್ಷ ಕೋಟಿ ರೂ. ನೀಡಿದೆ. ಇಂದು ನರಸೀಪುರದಲ್ಲಿ 470 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ” ಎಂದಿದ್ದಾರೆ.
ಇದನ್ನೂ ಓದಿ : ಒಳ ಮೀಸಲಾತಿಗೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದ ರಾಜ್ಯ ಸರ್ಕಾರ


