ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರು ತಮ್ಮ ಪಕ್ಷದ ಮುಖಂಡರಿಗೆ ನೀಡಿದ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಹುದ್ದೆಯಿಂದ ಕೆಳಗಿಳಿಯಲು ಅವರು ನೀಡಿರುವ ಕಾರಣಗಳು ಸಾಕಷ್ಟು ಗಮನ ಸೆಳೆದಿದ್ದು, ಭಾರಿ ಚರ್ಚೆಯಾಗುತ್ತಿದೆ.
ಆಗಸ್ಟ್ 25 ರಂದು ಶಿವಮೊಗ್ಗದ ಅಶೋಕನಗರದ ವಾರ್ಡ್ ಅಧ್ಯಕ್ಷರಾಗಿರುವ ಎಲ್. ಶೇಖರ್ ಅವರ ಮನೆಗೆ ತೆರಳಿದ್ದ ಬಿಜೆಪಿ ಮುಖಂಡರು ಅವರಿಗೆ ನಾಮಫಲಕವನ್ನು ವಿತರಿಸುವುದಿದ್ದರು. ಆದರೆ ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದಲ್ಲದೆ, ನಾಮಫಲಕ ನೀಡಲು ಬಂದವರಿಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಲೈಂಗಿಕ ಹಗರಣದಲ್ಲಿ ಬಿಜೆಪಿ ಮುಖಂಡ, ವಿಡಿಯೊ ಪ್ರಸಾರದ ಮಾಡಿದ ಸ್ವಪಕ್ಷದ ಸದಸ್ಯ
ಪತ್ರದಲ್ಲಿ ಅವರು, “ಬಿಜೆಪಿ ಜನಪರವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದೆ. ಜನರೇ ಹೇಳುವಂತೆ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದವಸಧಾನ್ಯ, ವಿದ್ಯುತ್ ದರಗಳು ದುಪ್ಪಟ್ಟಾಗಿದ್ದು, ಜನರು ಜೀವನ ನಡೆಸುವುದೇ ದುಸ್ತರವಾಗಿದೆ” ಎಂದು ಹೇಳಿದ್ದಾರೆ.

“ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಪರವಾಗಿ ಮಾತನಾಡಲು ಆಗದೆ ಮೌನವಾಗಿರುವೆ. ಪ್ರಸ್ತುತ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಪಾಲಿಕೆಯಲ್ಲೂ ಬಿಜೆಪಿ ಪಕ್ಷವೆ ಅಧಿಕಾರ ಹಿಡಿದಿದೆ. ಆದರೆ ಬಿಜೆಪಿ ಪರವಾಗಿ ಮಾತನಾಡಲು ಹೋದರೆ ಜನರು ಉಗಿಯೊವುದೊಂದೆ ಬಾಕಿ. ಆದ್ದರಿಂದ ಮನನೊಂದು ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಶೇಖರ್ ಪತ್ರದಲ್ಲಿ ಬರೆದಿದ್ದಾರೆ.
ಶಿವಮೊಗ್ಗ ಬಿಜೆಪಿ ತನ್ನ ಪ್ರತಿ ಬೂತ್ ಅಧ್ಯಕ್ಷರಿಗೆ ಪಕ್ಷದ ಚಿಹ್ನೆಯೊಂದಿಗೆ ನಾಮ ಫಲಕಗಳನ್ನು ವಿತರಿಸುತ್ತಿದೆ. ಈ ಸಮಯದಲ್ಲೆ ರಾಜೀನಾಮೆ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರಧಾನಿ ಸಮ್ಮುಖದಲ್ಲೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬಿಜೆಪಿ


