ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಮೂಲಕ ಎರಡು ಹಂತದ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಎನ್‌ಡಿಎ ಬಣದ ಮೊದಲ ಪಕ್ಷ ಎನಿಸಿಕೊಂಡಿದೆ. ಮೊದಲ ಪಟ್ಟಿಯಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ.
ಚೌಧರಿ ಮುಂಗೇರ್‌ನ ತಾರಾಪುರದಿಂದ ಸ್ಪರ್ಧಿಸಿದರೆ, ಸಿನ್ಹಾ ಲಖಿಸರಾಯ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಜೆಡಿಯುನ ರಾಜೀವ್ ಕುಮಾರ್ ಸಿಂಗ್ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ತಾರಾಪುರ ಸ್ಥಾನವನ್ನು ಗೆದ್ದಿದ್ದರು.
71 ಅಭ್ಯರ್ಥಿಗಳ ಪೈಕಿ ಒಂಬತ್ತು ಮಂದಿ ಮಹಿಳೆಯರಿದ್ದಾರೆ. ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರ ಹೆಸರು ಪಟ್ಟಿಯಲ್ಲಿಲ್ಲ. ಯಾದವ್ ಅವರ ಬದಲಿಗೆ ಪಾಟ್ನಾ ಸಾಹೇಬ್‌ನಿಂದ ಹೊಸ ಅಭ್ಯರ್ಥಿ ರತ್ನೇಶ್ ಕುಶ್ವಾಹ ಅವರನ್ನು ಕಣಕ್ಕಿಳಿಸಲಾಗಿದೆ.
भारतीय जनता पार्टी की केंद्रीय चुनाव समिति द्वारा बिहार विधानसभा चुनाव-2025 के लिए चयनित सभी प्रत्याशियों को हार्दिक बधाई एवं विजयश्री की अग्रिम शुभकामनाएं।#आएगी_NDA pic.twitter.com/vENiqKpx1w
— BJP Bihar (@BJP4Bihar) October 14, 2025
ವಿಧಾನ ಪರಿಷತ್ ಸದಸ್ಯರಾಗಿರುವ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರಿಗೂ ಟಿಕೆಟ್ ನೀಡಲಾಗಿದೆ. ಅವರು ತಮ್ಮ ತವರು ಜಿಲ್ಲೆಯ ಸಿವಾನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಪಾಟಲಿಪುತ್ರದ ಮಾಜಿ ಸಂಸದ ರಾಮ್ ಕೃಪಾಲ್ ಯಾದವ್ ಅವರು ದಾನಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಕೇಂದ್ರ ಸಚಿವರೂ ಆಗಿರುವ ರಾಮ್ ಕೃಪಾಲ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮಿಸಾ ಭಾರತಿ ವಿರುದ್ಧ ಸೋತಿದ್ದರು.
ಪ್ರಮುಖ ಕ್ಷೇತ್ರಗಳಾದ ಬೆಟ್ಟಿಯಾದಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ರೇಣು ದೇವಿ, ಪರಿಹಾರ್‌ನಿಂದ ಗಾಯತ್ರಿ ದೇವಿ, ಛಾತಾಪುರದಿಂದ ನೀರಜ್ ಕುಮಾರ್ ಸಿಂಗ್ ಬಬ್ಲು ಮತ್ತು ಗಯಾದಿಂದ ಪ್ರೇಮ್ ಕುಮಾರ್ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಹಿಸುವಾ ಸ್ಥಾನವನ್ನು ಉಳಿಸಿಕೊಂಡಿದ್ದು, ಅನಿಲ್ ಕುಮಾರ್ ಅವರನ್ನು ಮತ್ತೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಮಾಜಿ ಉಪಮುಖ್ಯಮಂತ್ರಿ ತರ್ಕಿಶೋರ್ ಪ್ರಸಾದ್ ಕತಿಹಾರ್‌ನಿಂದ ಸ್ಪರ್ಧಿಸಲಿದ್ದಾರೆ ಮತ್ತು ಅಲೋಕ್ ರಂಜನ್ ಝಾ ಸಹರ್ಸಾದಿಂದ ಸ್ಪರ್ಧೆ ಮಾಡಲಿದ್ದಾರೆ.
ಮಂಗಳವಾರ (ಇಂದು) ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಬೆಳಿಗ್ಗೆ ಹೇಳಿದ್ದರು. ಅದರಂತೆ ಪಟ್ಟಿ ಪ್ರಕಟಿಸಲಾಗಿದೆ.
ಆದಾಗ್ಯೂ, ಬಿಜೆಪಿ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಗೆ ಹಂಚಿಕೆ ಮಾಡಲಾದ ಕೆಲವು ಸ್ಥಾನಗಳ ಬಗ್ಗೆ ಜೆಡಿಯು ಅಸಮಾಧಾನ ವ್ಯಕ್ತಪಡಿಸಿದೆ.
ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್‌ವಿ) ಪಕ್ಷಕ್ಕೆ 29 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದ್ದು, ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂ ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಹರಿಯಾಣ| ಮೃತ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಗಾಂಧಿ