Homeಕರ್ನಾಟಕಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

ಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

- Advertisement -
- Advertisement -

ಹಿಜಾಬ್‌ಗಾಗಿ ಹೋರಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ಖಾಸಗಿ ವಿವರಗಳನ್ನು ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ ನಾಯಕರು, ಈಗಾಗಲೇ ಆತಂಕದಲ್ಲಿರುವ ವಿದ್ಯಾರ್ಥಿನಿಯರನ್ನು ಮತ್ತಷ್ಟು ಭಯ ಬೀಳಿಸಿ ವಿಕೃತಿ ಮೆರೆದಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ, ವಿದ್ಯಾರ್ಥಿನಿಯರ ವಿಳಾಸ, ವಯಸ್ಸು, ತಂದೆತಾಯಿಯ ಹೆಸರು ಇತ್ಯಾದಿ ವಿವರಗಳನ್ನು ಪೋಸ್ಟ್‌ ಮಾಡಿ ವಿಕೃತಿ ಮೆರೆಯಲಾಗಿದೆ.

“ಅಪ್ರಾಪ್ತ ಹೆಣ್ಣುಮಕ್ಕಳ ವಿವರಗಳನ್ನು ಹಂಚಿಕೊಳ್ಳುವುದು ಟ್ವಿಟರ್‌ ಪಾಲಿಸಿಗೆ ವಿರುದ್ಧವೇ?” ಎಂದು ಆಲ್ಟ್‌ ನ್ಯೂಸ್‌‌ನ ಸಹಸಂಸ್ಥಾಪಕರಾದ, ಖ್ಯಾತ ಪತ್ರಕರ್ತ ಮೊಹಮ್ಮದ್‌ ಜುಬೈರ್‌ ಪ್ರಶ್ನಿಸಿದ್ದಾರೆ.

ಉಡುಪಿ ಬಾಲಕಿರು ವಿದ್ಯಾರ್ಥಿನಿಯರ ದಾಖಲಾತಿ ವಿವರಗಳನ್ನು ಕಾಲೇಜು ಸೋರಿಕೆ ಮಾಡಿದೆ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿತ್ತು. ಈ ಕುರಿತು ಕಾಲೇಜು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿದ್ಯಾರ್ಥಿನಿಯರು ತಾವು ಸ್ವೀಕರಿಸುತ್ತಿರುವ ಥ್ರೆಟ್‌ ಕಾಲ್‌ಗಳಿಂದ ಭಯಗೊಂಡಿರುವುದಾಗಿ ಹೇಳಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಗೆ ಸ್ಥಳೀಯ ಶಾಸಕ ರಘುಪತಿ ಭಟ್ ಅಧ್ಯಕ್ಷರಾಗಿದ್ದಾರೆ. ಆದರೆ ಖಾಸಗಿ ವಿವರಗಳು ಹೇಗೆ ಸೋರಿಕೆಯಾದವು ಎಂಬ ಮಾಹಿತಿ ಇರಲಿಲ್ಲ. ಆದರೀಗ ಬಿಜೆಪಿ ನಾಯಕರು, ಬಿಜೆಪಿಯ ಟ್ವಿಟರ್‌ ಖಾತೆಯ ಮೂಲಕ ಖಾಸಗಿ ವಿವರಗಳನ್ನು ಹಂಚಿಕೊಳ್ಳಲಾಗಿದೆ.

“ವಿಚಾರಣೆ ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಅಪ್ರಾಪ್ತರು. ಈ ಅಪ್ರಾಪ್ತ ವಿದ್ಯಾರ್ಥಿನಿಯರು ಹಿಜಾಬ್ ವಿವಾದವನ್ನು ಪಂಚರಾಜ್ಯಗಳ ಚುನಾವಣೆಗೆ ಥಳುಕು ಹಾಕುತ್ತಿದ್ದಾರೆ ಎಂದರೆ ಅರ್ಥವೇನು? ಈ ವಿದ್ಯಾರ್ಥಿನಿಯರು ಬೇರೆಯವರ ತಾಳಕ್ಕೆ ಕುಣಿಯುವ ಗೊಂಬೆಗಳು ಎಂದು ಅರ್ಥವಲ್ಲವೇ?” ಎಂದು ಪೋಸ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ವಿದ್ಯಾರ್ಥಿನಿಯರ ವಿಳಾಸಗಳನ್ನು ಒಳಗೊಂಡ ಕೋರ್ಟ್ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯಲ್ಲಿಯೇ ‘ಬಿಜೆಪಿ ಕರ್ನಾಟಕ’ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ‘ಹಿಜಾಬ್ ಹಿಜಾಬ್ ಹಿಜಾಬ್!’: ವಿದ್ಯಾರ್ಥಿನಿಯರ ಮೂಲಭೂತ ಹಕ್ಕಿನ ಹೋರಾಟವೇ ಈ ವಾರದ ಟಾಪ್‌‌ 10 ಸುದ್ದಿ

“ನಾನು ಇನ್ನು ಮುಂದೆ ನನ್ನ ಮುಖವನ್ನು ತೋರಿಸಲು ಸೂಕ್ತವೆನಿಸುವುದಿಲ್ಲ. ನಾನು ಹೇಗೆ ಕಾಣುತ್ತೇನೆ ಮತ್ತು ನನ್ನ ಮನೆ ಎಲ್ಲಿದೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಯಾರಾದರೂ ನನ್ನನ್ನು ಗುರಿಯಾಗಿಸಿಕೊಂಡರೆ ಏನು ಮಾಡುವುದು?” ಎಂದು ಆ ಹೆಣ್ಣುಮಗಳೊಬ್ಬಳು ದಿ ಕ್ವಿಂಟ್‌ಗೆ ಪ್ರತಿಕ್ರಿಯಿಸಿದ್ದಳು.

ಮತ್ತೊಬ್ಬ ವಿದ್ಯಾರ್ಥಿನಿ, “ನನ್ನ ಹೆತ್ತವರಿಗೂ ಅಪರಿಚಿತ ನಂಬರ್‌‌ಗಳಿಂದ ಕರೆಗಳು ಬರುತ್ತಿವೆ. ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದ್ದೇನೆ. ಗೌಪ್ಯ ವಿವರಗಳು ಸಾರ್ವಜನಿಕರಿಗೆ ಹೇಗೆ ತಲುಪಿದವು ಎಂಬುದನ್ನು ವಿವರಿಸಬೇಕೆಂದು ಕಾಲೇಜು ಆಡಳಿತವನ್ನು ಒತ್ತಾಯಿಸಿದ್ದೇವೆ” ಎಂದಿದ್ದರು.

ವಿದ್ಯಾರ್ಥಿನಿ ಆಲಿಯಾ ಮಾತನಾಡಿ, “ಅವರು ಕೇಸರಿ ಶಾಲು ಧರಿಸುವುದನ್ನು ಬೆಂಬಲಿಸುವ ಮೂಲಕ ಹಿಜಾಬ್‌ಗಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಕೋಮುವಾದಿಕರಿಸಿದ್ದಾರೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವಂತೆ ಅವರು ಪ್ರೇರೇಪಿಸಿದರು. ಈಗ ಅವರು ಕಾಲೇಜು ಮಾತ್ರವಲ್ಲದೆ ನಮ್ಮ ಮನೆಗಳನ್ನೂ ಆತಂಕಕ್ಕೆ ತಳ್ಳಿದ್ದಾರೆ” ಎಂದು ಆರೋಪಿಸಿದ್ದರು.

“ನಾವು ಹತ್ತನೇ ತರಗತಿಯಲ್ಲಿ ಕಳಪೆ ಸಾಧನೆ ಮಾಡಿದ್ದೇವೆ ಎಂಬ ನಕಲಿ ಮೌಲ್ಯಮಾಪನವನ್ನು ಅವರು ಪ್ರಸಾರ ಮಾಡುತ್ತಿದ್ದಾರೆ. ನಾವು ಈಗ ತರಗತಿಯ ಕಲಿಕೆಯನ್ನು ಕಳೆದುಕೊಳ್ಳುವ ಬಗ್ಗೆ ಅವರು ಏಕೆ ಚಿಂತಿಸುತ್ತಿಲ್ಲ?” ಎಂದು ಬಹಳ ನೊಂದು ಕೇಳಿದ್ದರು ಆಲಿಯಾ.

“ನನ್ನ ತಂದೆ ಆಟೋ ಚಾಲಕ. ಮೊದಲು ಅವರು ನನ್ನನ್ನು ಶ್ರೀಮಂತರು ಎಂದು ದೂಷಿಸಿದರು. ನಾವು ಬಡವರಾಗಿದ್ದೇವೆ. ಇವರು ತೊಂದರೆ ಕೊಡುವವರು ಎಂದು ಹೇಳುತ್ತಿದ್ದಾರೆ” ಎಂದು ಆಲಿಯಾ ನೋವು ತೋಡಿಕೊಂಡಿದ್ದರು.

“ದುಡ್ಡು ತೆಗೆದುಕೊಂಡು ಹಿಜಾಬ್ ಧರಿಸಿ ಬರುವ ಹುಡುಗಿಯರೆಂದು ನಮ್ಮನ್ನು ಅವರು ದೂಷಿಸಿದ್ದಾರೆ. ನಾವು ನಮ್ಮ ಧಾರ್ಮಿಕ ನಂಬಿಕೆಗಾಗಿ ಹಿಜಾಬ್‌ ಧರಿಸುತ್ತೇವೆ ಹೊರತು, ಹಣಕ್ಕಾಗಿ ಅಲ್ಲ” ಎಂದಿದ್ದರು ಶಿಫಾ.

“ಈ ದ್ವೇಷ ಅಭಿಯಾನದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದ್ದರು. ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವಾಗ ಈ ವಿದ್ಯಾರ್ಥಿಗಳು ಕೆಲವು ದಿನಗಳಿಂದ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ.

“ನಾನು ಕಳೆದುಕೊಂಡ ಮೊದಲ ಸಂಗತಿಯೆಂದರೆ ನನ್ನ ಮಾನಸಿಕ ಶಾಂತಿ. ನಾವು ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದೇವೆ. ನಾನು ಸಮಯವನ್ನು ಕಳೆದುಕೊಂಡೆ, ಬಹಳಷ್ಟು ಮಾಧ್ಯಮಗಳಿಗೆ ಬೈಟ್‌ಗಳನ್ನು ನೀಡಿದೆ. ನನಗೂ ನರ್ವಸ್ ಆಗಿದೆ. ಇದು ನಿಜವಾಗಿಯೂ ಕಷ್ಟಕರವಾಗಿದೆ” ಎನ್ನುತ್ತಾರೆ ಆಲಿಯಾ. ಪ್ರತಿ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ, “ಹೆಚ್ಚಿನ ವಿವಾದವನ್ನು ತಪ್ಪಿಸಲು ತನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ” ಎನ್ನುತ್ತಾರೆ ವಿದ್ಯಾರ್ಥಿನಿ. ಆದರೆ ಕಾಲೇಜಿನ ಡೇಟಾ ಸೋರಿಕೆಯಿಂದ ಈ ವಿದ್ಯಾರ್ಥಿನಿಯರ ಜೀವನ ಇನ್ನಷ್ಟು ಕಠಿಣವಾಗಿದೆ.

“ನನ್ನ ಮುಸ್ಲಿಮೇತರ ಸ್ನೇಹಿತರು ನಮ್ಮನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ” ಎಂದು ಶಿಫಾ ಹೇಳಿದ್ದರು. ಓದಲು ಕುಳಿತಾಗಲೆಲ್ಲ ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎಂದಿದ್ದರು ಶಿಫಾ. ಈಗ ಬಿಜೆಪಿ ನಾಯಕರ ವಿಕೃತಿಯಿಂದ ವಿದ್ಯಾರ್ಥಿನಿಯರು ಮತ್ತಷ್ಟು ಆತಂಕಪಡುವಂತಾಗಿದೆ.


ಇದನ್ನೂ ಓದಿರಿ: ಹಿಜಾಬ್‌‌ಗಾಗಿ ದನಿಯೆತ್ತಿದ ವಿದ್ಯಾರ್ಥಿನಿಯರ ಫೋನ್‌‌ ನಂಬರ್‌, ವಿಳಾಸ ಲೀಕ್‌ ಮಾಡಿದ ಉಡುಪಿ ಕಾಲೇಜು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...