ಬಿಜೆಪಿಯ ಪುದುಚೇರಿ ಘಟಕವು ಆಧಾರ್ ಮಾಹಿತಿಯನ್ನು ಪ್ರಚಾರಕ್ಕಾಗಿ ಬಳಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಗುರುವಾರ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮತ್ತು ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಈ ಮಧ್ಯಂತರ ಆದೇಶ ನೀಡಿದ್ದಾರೆ. ಆದರೆ ಬಿಜೆಪಿಯ ಸ್ಥಳೀಯ ಘಟಕವು, ‘ಈ ಮಾಹಿತಿಯನ್ನು ತಾವು ಮನೆ ಬಾಗಿಲಿಗೆ ತೆರಳಿ ಅಭಿಯಾನದ ಮೂಲಕ ಪಡೆದುಕೊಂಡಿದ್ದೇವೆ’ ಎಂದು ಹೇಳಿಕೊಂಡಿತ್ತಾದರೂ ಹೈಕೋರ್ಟ್ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿತು.
ಇದನ್ನೂ ಓದಿ: ಪುದುಚೇರಿ: ಬಿಜೆಪಿಯಿಂದ ಆಧಾರ್ ಮಾಹಿತಿ ಸೋರಿಕೆ-ಗಂಭೀರ ಪ್ರಕರಣ ಎಂದ ಹೈಕೋರ್ಟ್
ಈ ವಿಷಯದ ಬಗ್ಗೆ ಚುನಾವಣಾ ಆಯೋಗವು ನೀತಿ ಸಂಹಿತೆಯ ಉಲ್ಲಂಘನೆ ಎಂದೇ ವ್ಯವಹರಿಸಬೇಕು ಮತ್ತು ಪಕ್ಷದ ವಿರುದ್ಧ ಪ್ರತ್ಯೇಕ ತನಿಖೆ ಪ್ರಾರಂಭಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣವನ್ನು ನ್ಯಾಯಾಲಯವು, “ನಾಗರಿಕರ ಗೌಪ್ಯತೆಯ ಉಲ್ಲಂಘನೆಯ ಗಂಭೀರ ವಿಷಯ” ಎಂದು ಉಲ್ಲೇಖಿಸಿದೆ.
ನಾಗರಿಕರು ವಿಶ್ವಾಸದಿಂದ ಒದಗಿಸಿದ ವಿವರಗಳನ್ನು ರಕ್ಷಿಸುವಲ್ಲಿ ಪ್ರಾಧಿಕಾರ ಹೇಗೆ ವಿಫಲವಾಯಿತು ಎಂದು ಉತ್ತರಿಸಲು ನ್ಯಾಯಾಲಯವು UIDAI ಗೆ ನಿರ್ದೇಶನ ನೀಡಿದೆ. UIDAI ಅಧಿಕಾರಿಗಳು ಪ್ರತಿಕ್ರಿಯಿಸಲು ಆರು ವಾರಗಳ ಸಮಯವನ್ನು ನ್ಯಾಯಾಲಯವು ನೀಡಿದೆ.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಟ್ವೀಟ್ ಅನ್ನು ‘ಲೈಕ್’ ಮಾಡಿದ ಪುದುಚೇರಿ ಮುಖ್ಯ ಚುನಾವಣಾಧಿಕಾರಿ!


