Homeಕರ್ನಾಟಕವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲ: ಸ್ವಪಕ್ಷದ ವಿರುದ್ದವೇ ಅಸಮಾಧಾನ ಹೊರ ಹಾಕಿದ ಅರವಿಂದ ಲಿಂಬಾವಳಿ

ವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲ: ಸ್ವಪಕ್ಷದ ವಿರುದ್ದವೇ ಅಸಮಾಧಾನ ಹೊರ ಹಾಕಿದ ಅರವಿಂದ ಲಿಂಬಾವಳಿ

- Advertisement -
- Advertisement -

ವಿಧಾನಸಭೆಯಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಆಡಳಿತ ಪಕ್ಷವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಕಿಡಿಕಾರಿದ್ದಾರೆ.

ವಿಧಾನನ ಮಂಡಲದ ಮುಂಗಾರು ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸ್‌ನಲ್ಲಿ ಸುದೀರ್ಘ ಬರಹ ಬರೆದು ಅಸಮಾಧ ಹೊರಹಾಕಿರುವ ಲಿಂಬಾವಳಿ ಆಡಳಿತ ಪಕ್ಷದ ಜೊತೆ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಮುಕ್ತಾಯವಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಜನರ ಧ್ವನಿಯಾಗಬೇಕಿದ್ದ ಬಿಜೆಪಿ ವಿರೋಧ ಪಕ್ಷವಾಗಿ ಅದನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸದನದಲ್ಲಿ ಸರ್ಕಾರದ ಅವ್ಯವಹಾರ, ದುರಾಡಳಿತ, ವೈಫಲ್ಯಗಳನ್ನು ಎತ್ತಿ ಹಿಡಿಯಲು ಅವಕಾಶವಿದ್ದರೂ ನಮ್ಮ ನಾಯಕರು ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಲಿಂಬಾವಳಿ ಹೇಳಿದ್ದಾರೆ.

“ಐಟಿ-ಬಿಟಿ ರಾಜಧಾನಿ ಎಂದೇ ಕರೆಸಿಕೊಳ್ಳುವ, ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನರು ಮನೆ ಕಳೆದುಕೊಂಡಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಈ ಬಗ್ಗೆ ಬೆಳಕು ಚೆಲ್ಲಬೇಕು ಮತ್ತು ರಾಜ್ಯದ ಜನರ ಸಂಕಷ್ಟಗಳನ್ನು ಪ್ರತಿನಿಧಿಸಬೇಕು ಎಂದು ಅನಿಸದಿರುವುದು ವಿಷಾದನೀಯ! ಹಿಂದಿನ ವರ್ಷದ ಬರ ಪರಿಹಾರ ಕೂಡ ಬರದ ಮುನ್ನ ಎಷ್ಟೋ ರೈತರಿಗೆ ತಲುಪಿಲ್ಲ. ಆದರೆ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಮಾತನಾಡಿಲ್ಲ” ಎಂದಿದ್ದಾರೆ.

“ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸಾಮರಸ್ಯ, ತಿಳುವಳಿಕೆ ಇಲ್ಲದಿರುವುದು ವಿಷಾದನೀಯ. ಇದು ಆಡಳಿತ ಪಕ್ಷಕ್ಕೆ ಸಂಪೂರ್ಣ ಲಾಭ ಪಡೆಯಲು ಸಹಕಾರಿಯಾಯಿತು. ಸದನದಲ್ಲಿ ಸಿಕ್ಕ ಅವಕಾಶ ಮತ್ತು ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ, ಇಡೀ ಅಧಿವೇಶನವನ್ನು ವ್ಯರ್ಥವಾಗಿ ಕಳೆದು, ಇನ್ನೂ ಒಂದು ದಿನ ಬಾಕಿ ಇರುವಾಗ ಸದನದ ಕಲಾಪ ಮೊಟಕುಗೊಳಿಸಿ ಆಡಳಿತ ಪಕ್ಷದ ಜೊತೆ ಕೈಜೋಡಿಸಿರುವ ನಮ್ಮ ಪಕ್ಷದ ನಾಯಕರ ಕ್ರಮ ಪ್ರಶ್ನಾರ್ಹವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ… ಯಾವುದೇ ವಿಚಾರವನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯಲು ನಮ್ಮ ಪಕ್ಷಕ್ಕೆ ಸಾಧ್ಯವಾಗಿಲ್ಲ. ವಿರೋಧ ಪಕ್ಷದ ನಾಯಕರೂ ಈ ವಿಷಯಗಳನ್ನು ಸಮರ್ಥವಾಗಿ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಆಡಳಿತ ಪಕ್ಷದ ಜೊತೆ ವಿರೋಧ ಪಕ್ಷ ಶಾಮೀಲಾಗಿತ್ತೇನೋ ಎಂಬ ಕುತೂಹಲ ಜನರಲ್ಲಿ ಮೂಡಿದೆ! ಮೈಸೂರಿನಲ್ಲಿ ಮುಡಾ ವಿರುದ್ಧದ ಹೋರಾಟ ಕಣ್ಣೊರೆಸುವ ತಂತ್ರವಾಗಿ ಕಂಡುಬಂದಿದೆ” ಎಂದಿದ್ದಾರೆ.

“ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ವರ್ತನೆಯನ್ನು ಗಮನಿಸಿದರೆ, ಈ ನಾಯಕರ ನೇತೃತ್ವದ ಬಿಜೆಪಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದು ಎಲ್ಲಾ ಪ್ರಾಮಾಣಿಕ ಮತ್ತು ಶ್ರಮಿಸುವ ಕಾರ್ಯಕರ್ತರಿಗೆ ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.

“ಒಂದು ಕಾಲದಲ್ಲಿ ಅಧಿವೇಶನಗಳಲ್ಲಿ ಘರ್ಜನೆ ಮಾಡುತ್ತಿದ್ದು, ಅತ್ಯಂತ ಕಡಿಮೆ ಸ್ಥಾನಗಳಿದ್ದರೂ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದ ನಮ್ಮ ಪಕ್ಷದ ಈ ಸ್ಥಿತಿಯನ್ನು ಕಂಡು ನನಗೆ ತುಂಬಾ ಆತಂಕ ಮತ್ತು ನಿರಾಶೆಯಾಗಿದೆ” ಎಂದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಬಿಜೆಪಿ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಅರವಿಂದ್ ಲಿಂಬಾವಳಿ ಬದಲಾಗಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಮಂಜುಳಾ ಅವರು 44,501 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ : ಪುನೀತ್ ಕೆರೆಹಳ್ಳಿ ಬಂಧನ, ಠಾಣೆಯಲ್ಲಿ ಅಸ್ವಸ್ಥ-ಆಸ್ಪತ್ರೆಗೆ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...