ನಾಲ್ಕು ವರ್ಷಗಳಿಂದ ಬಿಬಿಎಂಪಿ ಮೇಯರ್ ಹುದ್ದೆ ಮೇಲೆ ಆಸೆಗಣ್ಣಿನಿಂದ ಕಾಯುತ್ತಿದ್ದ ಬಿಜೆಪಿಗೆ ಕೊನೆಗೂ ಗೆಲುವು ಸಿಕ್ಕಿದ್ದು ಇಂದು ನಡೆದ ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ ಪ್ರಚಂಡ ಜಯ ಸಾಧಿಸಿದೆ.
೮೨ನೇ ವಾರ್ಡ್‌ನ ಆರ್.ಎಸ್.ಎಸ್ ನಿಷ್ಠ ಎಂದೇ ಹೆಸರುವಾಸಿಯಾದ ಗೌತಮ್ ಕುಮಾರ್ ಜೈನ್ ರವರು ಬಿಬಿಎಂಪಿಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸತ್ಯನಾರಾಯಣ್ ರವರ ವಿರುದ್ಧ ೧೭ ಮತಗಳ ಅಂತರದಿಂದ ಗೆದ್ದು ಮೇಯರ್ ಪಟ್ಟಕ್ಕೇರಿದ್ದಾರೆ.
ಬಿಜೆಪಿಯ ಗೌತಮ್ ಕುಮಾರ್ ಜೈನ್ ಪರವಾಗಿ ೧೨೯ ಮತಗಳು ಬಿದ್ದರೆ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಪರವಾಗಿ ೧೧೨ ಮತಗಳು ಮಾತ್ರ ಬಿದ್ದಿವೆ. ಆ ಮೂಲಕ ಜೋಗು ಪಾಳ್ಯದ ಗೌತಮ್ ಕುಮಾರ್ ಮೇಯರ್ ಆಗಿ ಆಯ್ಕೆಯಾದರು. ಇನ್ನು ಉಪಮೇಯರ್ ಆಗಿ ಹೊಸಹಳ್ಳಿ ವಾರ್ಡ್‌ನ ಮಹಾಲಕ್ಷ್ಮಿ ಆಯ್ಕೆಯಾಗಿದ್ದಾರೆ. ಇವರು ವಿ ಸೋಮಣ್ಣರವರ ಆಪ್ತ ರವೀಂದ್ರರವರ ಮಗಳಾಗಿದ್ದಾರೆ.
ಆರಂಭದಲ್ಲಿ ಗೌತಮ್ ಕುಮಾರ್ ಒತ್ತಡಕ್ಕೆ ಸಿಲುಕಿದ್ದರು ಏಕೆಂದರೆ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಪದ್ಮನಾಭರೆಡ್ಡಿಯವರು ಸಹ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಜೆಪಿ ನಾಯಕರು ಅವರ ಮನವೊಲಿಸಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.
ಮೇಯರ್ ವಿರುದ್ಧ ಭಾರೀ ಅಪಸ್ವರ
ನೂತನ್ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ರವರು ಆಯ್ಕೆಯಾಗುತ್ತಿದ್ದಂತೆಯೇ ಅಪಸ್ವರ ಜೋರಾಗಿ ಕೇಳಿಬಂದಿದೆ. ಬಿಜೆಪಿಯು ಈ ಬಾರಿ ಒಕ್ಕಲಿಗ ಸಮುದಾಯದ ವ್ಯಕ್ತಿಯನ್ನು ಮೇಯರ್ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಕೊನೆ ಕ್ಷಣದಲ್ಲಿ ಜೈನ ಸಮುದಾಯದವರನ್ನು ಮೇಯರ್ ಮಾಡಿರುವುದು ಸರಿಯಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಎಲ್.ಶ್ರೀನಿವಾಸ್ ಮತ್ತು ಮುನೀಂದ್ರಕುಮಾರ್‌ರವರು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು.
ಪರಭಾಷೆಯ ವ್ಯಕ್ತಿ ಬೆಂಗಳೂರಿನ ಮೇಯರ್ ಆಗುವುದು ಬೇಡ: ಕನ್ನಡಿಗರ ಆಗ್ರಹ

ಇದೇ ಸಮಯದಲ್ಲಿ ಕನ್ನಡ ಹೋರಾಟಗಾರರು ಸಹ ಗೌತಮ್ ಕುಮಾರ್ ಜೈನ್‌ರವರ ಆಯ್ಕೆಯನ್ನು ವಿರೋಧಿಸಿದ್ದಾರೆ. ಕನ್ನಡ ಹೋರಾಟಗಾರರನ್ನು ಜೈಲಿಗೆ ಕಳಿಸಿದ ಮಾರ್ವಾಡಿ ಸಮುದಾಯದ ವ್ಯಕ್ತಿಯನ್ನು ಮೇಯರ್ ಮಾಡಿದ ಬಿಜೆಪಿ ಕನ್ನಡ ವಿರೋಧಿ ಕ್ರಮ ಖಂಡಿಸಿ ಇಂದು ಸಂಜೆ ೬ ಗಂಟಗೆ ಟ್ವಿಟ್ಟರ್ ಅಭಿಯಾನವನ್ನು ಸಹ ಹಮ್ಮಿಕೊಂಡಿದ್ದಾರೆ.


