ದಲಿತ ಇಂಜಿನಿಯರ್‌ಗೆ ಕಚೇರಿಯೊಳಗೆ ಶೂನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಲಿಯಾದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಭಾನುವಾರ (ಆ.24) ಬಂಧಿಸಿದ್ದಾರೆ.
ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಿದ್ಯುತ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಲಾಲ್ ಸಿಂಗ್ ಅವರಿಗೆ ಥಳಿಸಿರುವುದನ್ನು ನೋಡಬಹುದು.
सत्ता का अर्थ सताना नहीं होता। pic.twitter.com/gbagKPIn6H
— Akhilesh Yadav (@yadavakhilesh) August 23, 2025
ಪೊಲೀಸ್ ದೂರಿನ ಪ್ರಕಾರ, ಈ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
“ಲಾಲ್ ಸಿಂಗ್ ತಮ್ಮ ದೂರಿನಲ್ಲಿ, ಮುನ್ನಾ ಬಹದ್ದೂರ್ ಎಂಬ ವ್ಯಕ್ತಿ ಕೆಲವು ಅಪರಿಚಿತ ವ್ಯಕ್ತಿಗಳೊಂದಿಗೆ ತಮ್ಮ ಕಚೇರಿಗೆ ಅನುಮತಿಯಿಲ್ಲದೆ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಶೂನಿಂದ ಥಳಿಸಿದ್ದಾರೆ” ಎಂದು ಹೇಳಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅಧಿಕಾರಿ ಮೇಲೆ ಹಲ್ಲೆ ನಡೆಸಿದವರು ಕೆಲವು ಪ್ರಮುಖ ಕಡತಗಳನ್ನು ಹರಿದು ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಲಾಲ್ ಸಿಂಗ್ ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು “ಅಧಿಕಾರದ ಅರ್ಥ ಹಿಂಸೆ ನೀಡುವುದಲ್ಲ” ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಬಂಧನಕ್ಕೊಳಗಾಗುವ ಮೊದಲು ಮುನ್ನಾ ಬಹದ್ದೂರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ತನ್ನ ಪ್ರದೇಶದಲ್ಲಿನ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲು ಲಾಲ್ ಸಿಂಗ್ ಅವರ ಕಚೇರಿಗೆ ಹೋಗಿದ್ದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಮುನ್ನಾ ಬಹದ್ದೂರ್ ಮತ್ತು ಆತನ ಜೊತೆಗಿನ ಇತರರ ವಿರುದ್ಧ ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳು ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಓಂವೀರ್ ಸಿಂಗ್ ತಿಳಿಸಿದ್ದಾರೆ.
“ನಾವು ಮುನ್ನಾ ಬಹದ್ದೂರ್ ಅವರನ್ನು ಬಂಧಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.
ಮುನ್ನಾ ಬಹದ್ದೂರ್ ಪಕ್ಷದ ಕಾರ್ಯಕರ್ತ ಮತ್ತು ಪಕ್ಷದ ಮಾಜಿ ಪದಾಧಿಕಾರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ದೃಢಪಡಿಸಿದ್ದು, ಹಲ್ಲೆ ಘಟನೆ ಸಂಬಂಧ ಮುನ್ನಾ ವಿರುದ್ದ ಪಕ್ಷದಿಂದ ಕ್ರಮ ಕೈಗೊಳ್ಳುವ ಬಗ್ಗೆ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಇತರ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.
36 ಲಕ್ಷ ರೂ. ವರದಕ್ಷಿಣೆ ತರುವಂತೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು!


