ಇತ್ತೀಚೆಗೆ ಗುಂಪು ಹತ್ಯೆ ನಡೆದ ವಲಯಾರ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಕೇರಳದ ಪಾಲಕ್ಕಾಡ್‌ನ ಪುದುಶ್ಶೇರಿಯಲ್ಲಿ ಮಕ್ಕಳನ್ನೊಳಗೊಂಡ ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪುದುಶ್ಶೇರಿಯ ಕಲಾದಿತ್ತರ ನಿವಾಸಿ ಅಶ್ವಿನ್ ರಾಜ್ ಬಂಧಿತ ಆರೋಪಿ. ಈತ ಬಿಜೆಪಿ-ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. ಕಸಬಾ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದು, ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.
ಪುದುಶ್ಶೇರಿಯ ಸುರಭಿ ನಗರದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅಶ್ವಿನ್ ರಾಜ್ ಮತ್ತು ಇತರ ಇಬ್ಬರು ಸುಮಾರು 10 ಜನರಿದ್ದ ಕ್ಯಾರೋಲ್ ಗುಂಪಿನ ಮೇಲೆ ಹಲ್ಲೆ ನಡೆಸಿ, ಆ ಪ್ರದೇಶದಲ್ಲಿ ಇಂತಹ ಪ್ರದರ್ಶನಗಳನ್ನು ಅನುಮತಿಸುವುದಿಲ್ಲ ಎಂದು ಕೂಗಿದ್ದಾರೆ.
ಕ್ಯಾರೋಲ್ ಗುಂಪು ಬಳಿ ಇದ್ದ ಡ್ರಮ್‌ನಲ್ಲಿ ‘ಸಿಪಿಐ(ಎಂ)’ ಎಂದು ಬರೆದಿದ್ದಕ್ಕೆ ವಾಗ್ವಾದ ನಡೆದು, ನಂತರ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ಬ್ಯಾಂಡ್ ಸೆಟ್ ಮತ್ತು ಇತರ ಸಂಗೀತ ಉಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಘಟನೆ ಸಂಬಂಧ ಕ್ಯಾರೋಲ್ ಗುಂಪು ಕಸಬಾ ಪೊಲೀಸರಿಗೆ ದೂರು ನೀಡಿತ್ತು. ಈ ದಾಳಿಯನ್ನು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ನಡೆಸಿದ್ದಾರೆ ಎಂದು ಆರೋಪಿಸಿತ್ತು.
ಘಟನಾ ಸ್ಥಳಕ್ಕೆ ರಾತ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಹೆಚ್ಚಿನ ತಪ್ಪಿಸಿಕೊಳ್ಳುವಲ್ಲಿ ತಾವು0 ಯಶಸ್ವಿಯಾಗಿದ್ದೇವೆ ಎಂದು ಕ್ಯಾರೋಲ್ ಗುಂಪು ಹೇಳಿಕೊಂಡಿದ್ದು, ದಾಳಿಕೋರರು ಕೋಲುಗಳನ್ನು ಹಿಡಿದು ಸಿದ್ದರಾಗಿದ್ದರು. ನಮ್ಮ ಪ್ರದರ್ಶನ ತಡೆಯಲು ಪ್ರಯತ್ನಿಸಿದರು ಎಂದು ತಿಳಿಸಿದೆ.
ಕಸಬಾ ಇನ್ಸ್‌ಪೆಕ್ಟರ್ ಎಂ. ಸುಜಿತ್ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ.
ದಾಳಿಗೊಳಗಾದವರು 10 ರಿಂದ 15 ವರ್ಷ ವಯಸ್ಸಿನ ಮಕ್ಕಳು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪುದುಶ್ಶೇರಿ ಪ್ರದೇಶ ಸಮಿತಿಯ ನಾಯಕರು ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಮಕ್ಕಳ ಕೋರಿಕೆಯ ಮೇರೆಗೆ ಬ್ಯಾಂಡ್ ಏರ್ಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ಕೋಮು ಸಾಮರಸ್ಯವನ್ನು ಕದಡಲು ಮತ್ತು ಪ್ರದೇಶದ ಶಾಂತಿಯುತ ವಾತಾವರಣವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷವೂ ಪಾಲಕ್ಕಾಡ್‌ನ ಸರ್ಕಾರಿ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್‌ನ ಇಬ್ಬರು ನಾಯಕರು ಮತ್ತು ಬಜರಂಗದಳದ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಮೂವರು ಆರೋಪಿಗಳು ನಲ್ಲೇಪಿಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕರನ್ನು ನಿಂದಿಸಿ, ಕ್ರಿಸ್‌ಮಸ್ ಮಾತ್ರ ಏಕೆ ಆಚರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದರು ಮತ್ತು ಶ್ರೀ ಕೃಷ್ಣ ಜಯಂತಿಯನ್ನು ಕೂಡ ಆಚರಿಸಬೇಕೆಂದು ಒತ್ತಾಯಿಸಿದ್ದರು.


