ನಾಲ್ವರು ನಾಮನಿರ್ದೇಶಿತ ಸದಸ್ಯರಾದ ರಾಕೇಶ್ ಸಿನ್ಹಾ, ರಾಮ್ ಶಕಲ್, ಸೋನಾಲ್ ಮಾನ್ಸಿಂಗ್ ಮತ್ತು ಮಹೇಶ್ ಜೇಠ್ಮಲಾನಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿರುವ ಹಿನ್ನೆಲೆ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯ ಬಲ ಕುಸಿದಿದೆ.
ಬಿಜೆಪಿ ಸದಸ್ಯ ಬಲ 86ಕ್ಕೆ ಹಾಗೂ ಎನ್‌ಡಿಎ ಸದಸ್ಯಬಲ 101ಕ್ಕೆ ಕುಸಿದಿದೆ. 19 ಸ್ಥಾನಗಳು ಖಾಲಿ ಇರುವುದರಿಂದ ರಾಜ್ಯಸಭೆಯ ಸದ್ಯದ ಸದಸ್ಯಬಲ 226ಕ್ಕೆ ತಲುಪಿದೆ.
ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇಲ್ಲದಿದ್ದರೂ, ಇತರ ಮಿತ್ರ ಪಕ್ಷಗಳ ಏಳು ಮಂದಿ ಸದಸ್ಯರ ಬೆಂಬಲದೊಂದಿಗೆ ಪ್ರಮುಖ ಮಸೂದೆಗಳಿಗೆ ಅನುಮೋದನೆ ಪಡೆಯುತ್ತಾ ಬಂದಿದೆ. ಇದರಲ್ಲಿ ಇಬ್ಬರು ಪಕ್ಷೇತರರು ಮತ್ತು ಮಿತ್ರಪಕ್ಷಗಳಾದ ಎಐಎಡಿಎಂಕೆ ಹಾಗೂ ವೈಎಸ್ಆರ್ ಸಿಪಿಯ ಸದಸ್ಯರು ಸೇರಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಮಿತ್ರಪಕ್ಷಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಖಾಲಿ ಇರುವ ನಾಲ್ಕು ನಾಮನಿರ್ದೇಶನ ಸದಸ್ಯ ಸ್ಥಾನಗಳಿಗೆ ತಕ್ಷಣ ಭರ್ತಿ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ನಿವೃತ್ತರಾದ ನಾಲ್ವರು ಸದಸ್ಯರು ರಾಜ್ಯಸಭೆಗೆ ನಾಮಕರಣಗೊಂಡ ಬಳಿಕ ಅಧಿಕೃತವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ನಾಮನಿರ್ದೇಶಿತ ಸದಸ್ಯರಾಗಿ ಬಿಜೆಪಿ ಸೇರಿರುವ ಮತ್ತೊಬ್ಬ ಸದಸ್ಯರೆಂದರೆ ಗುಲಾಮ್ ಅಲಿ. ಅವರು 2028ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.
ರಾಷ್ಟ್ರಪತಿಗಳು 12 ಸದಸ್ಯರನ್ನು ಕೇಂದ್ರದ ಶಿಫಾರಸ್ಸಿನಂತೆ ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ. ಈ ಪೈಕಿ ಏಳು ಮಂದಿ ಅಧಿಕೃತವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲವಾದರೂ, ಪ್ರಮುಖ ಮಸೂದೆಗಳ ವಿಚಾರದಲ್ಲಿ ಅವರು ಆಡಳಿತ ಪಕ್ಷದ ಪರ ನಿಲುವು ತಾಳುತ್ತಾರೆ.
ಪ್ರಸ್ತುತ ಮೇಲ್ಮನೆಯಲ್ಲಿ 19 ಸ್ಥಾನಗಳು ಖಾಲಿ ಇದ್ದು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಿಂದ ತಲಾ ಎರಡು, ಹರಿಯಾಣ, ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಿಂದ ತಲಾ ಒಂದು ಸ್ಥಾನಗಳು ಖಾಲಿ ಇವೆ.
ಇದನ್ನೂ ಓದಿ : ಗವರ್ನರ್ ಬೋಸ್ ಮಾನನಷ್ಟ ಮೊಕದ್ದಮೆ ಪ್ರಕರಣ: ‘ನನ್ನ ಹೇಳಿಕೆಯಲ್ಲಿ ಮಾನಹಾನಿಕರ ಏನೂ ಇಲ್ಲ’ ಎಂದ ಮಮತಾ ಬ್ಯಾನರ್ಜಿ


