ಜಾತಿಗಣತಿ ಕುರಿತು ಹೇಳಿಕೆ ನೀಡಿರುವ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ವಿರುದ್ದ ಹರಿಹಾಯ್ದಿರುವ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, “ಪೇಜಾವರ ಶ್ರೀಗಳು ಜಾತ್ಯಾತೀತತೆ ಬಗ್ಗೆ ಮಾತಾಡುವುದು ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತಿದೆ”ಎಂದಿದ್ದಾರೆ.
ಬುಧವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬಗ್ಗೆ ನಾವು ಯಾರೂ ಹೇಳಿಕೆ ಕೊಡುತ್ತಿರಲಿಲ್ಲ. ಅವರು ಹಿರಿಯರು. ಆದರೆ, ಈಗಿನ ಸ್ವಾಮೀಜಿ ಅಯೋಧ್ಯೆಯಿಂದ ಹಿಡಿದು ಎಲ್ಲಾ ವಿಷಯಗಳಲ್ಲಿ ಒಬ್ಬ ಪುಡಿ ರಾಜಕಾರಣಿ ರೀತಿ ಮಾತನಾಡುತ್ತಿದ್ದಾರೆ. ಅವರು ಕಾವಿ ಬಟ್ಟೆ ಬಿಟ್ಟು ಬೇರೆ ಬಟ್ಟೆ ಹಾಕಿಕೊಂಡು ಮಾತನಾಡಿದ್ರೆ ಅವರಿಗೆ ಸರಿಯಾದ ಉತ್ತರ ಕೊಡಬಹುದು” ಎಂದು ಕಿಡಿಕಾರಿದ್ದಾರೆ.
ಪೇಜಾವರ ಶ್ರೀಗಳು ಜಾತ್ಯಾತೀತತೆ ಬಗ್ಗೆ ಮಾತಾಡುವುದು "ಭೂತದ ಬಾಯಲ್ಲಿ ಭಗವದ್ಗೀತೆ" ಕೇಳಿದಂತಿದೆ.
ಜಾತಿ ಗಣತಿಯನ್ನು ವಿರೋಧಿಸುವ ಪೇಜಾವರ ಶ್ರಿಗಳು, ತಮ್ಮ ಮಠದಲ್ಲಿನ ಶ್ರೇಣೀಕೃತ ಜಾತಿ ಆಚರಣೆಯ ಬಗ್ಗೆ ಮೊದಲು ಮಾತಾಡಲಿ.
ಅನಿಷ್ಠ ಪಂಕ್ತಿ ಭೇದ, ಮಡೆಸ್ನಾನವನ್ನು ಪೋಷಿಸಿ,ಕಾವಿ ಬಟ್ಟೆ ಹಾಕಿಕೊಂಡು ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಬಿಡಲಿ. pic.twitter.com/dcdxu1G7st
— Hariprasad.B.K. (@HariprasadBK2) October 23, 2024
ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗಣತಿ ಬೇಡ ಎಂದು ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ, ಮೊದಲು ಅವರ ಮಠದಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ನೋಡಲಿ. ತಮ್ಮ ಮಠದಲ್ಲಿನ ಶ್ರೇಣೀಕೃತ ಜಾತಿ ಆಚರಣೆಯ ಬಗ್ಗೆ ಮೊದಲು ಮಾತಾಡಲಿ. ಅನಿಷ್ಠ ಪಂಕ್ತಿ ಭೇದ, ಮಡೆಸ್ನಾನವನ್ನು ಪೋಷಿಸಿ,ಕಾವಿ ಬಟ್ಟೆ ಹಾಕಿಕೊಂಡು ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಬಿಡಲಿ ಎಂದು ಹೇಳಿದ್ದಾರೆ.
ಸೋಮವಾರ (ಅ.22) ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ “ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಏಕೆ ಬೇಕು? ಎಂದು ಅಷ್ಟೊಂದು ಖರ್ಚು ಮಾಡಿ ತಯಾರಿಸಲಾದ ಜಾತಿ ಗಣತಿ ವರದಿಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ದು ಏಕೆ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ : ಉಪಚುನಾವಣೆ | ಚನ್ನಪಟ್ಟಣ, ಸಂಡೂರಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ : ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ


