Homeಅಂತರಾಷ್ಟ್ರೀಯBlack Lives Matter V/s ಕ್ಯಾಪಿಟಲ್ ಮುತ್ತಿಗೆ: ಇವೆರಡಕ್ಕೆ ಪೊಲೀಸರ ಪ್ರತಿಕ್ರಿಯೆಗಳು ಹೇಗಿದ್ದವು?

Black Lives Matter V/s ಕ್ಯಾಪಿಟಲ್ ಮುತ್ತಿಗೆ: ಇವೆರಡಕ್ಕೆ ಪೊಲೀಸರ ಪ್ರತಿಕ್ರಿಯೆಗಳು ಹೇಗಿದ್ದವು?

ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅಮೆರಿಕದ ಚುನಾಯಿತ-ಅಧ್ಯಕ್ಷ ಜೊ ಬೈಡೆನ್, ಕ್ಯಾಪಿಟಲ್ ಮುತ್ತಿಗೆಯನ್ನು ಖಂಡಿಸಿದ್ದು, ಕಾನೂನು ಜಾರಿ ಮಾಡುವ ಅಧಿಕಾರಿಗಳ ಪಕ್ಷಪಾತ ಧೋರಣೆಯನ್ನು ಒಪ್ಪಿಕೊಂಡಿದ್ದಾರೆ.

- Advertisement -
- Advertisement -

ಬುಧವಾರ ಶಸ್ತ್ರಸಜ್ಜಿತ ಮತ್ತು ಉದ್ರಿಕ್ತ ಟ್ರಂಪ್ ಬೆಂಬಲಿಗರು (ಬಹುತೇಕರು ಬಿಳಿಯರೇ) ಯು.ಎಸ್ ಕ್ಯಾಪಿಟಲ್ ಮೇಲೆ ಮುತ್ತಿಗೆ ಹಾಕಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಿಸಲು ಹವಣಿಸಿದರು. ಈ ಕುರಿತು ಮಾತಾಡಿರುವ ಹಲವು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು, ಈ ಸಂದರ್ಭದಲ್ಲಿನ ಪೊಲೀಸರ ಮೃದು ವರ್ತನೆ ಮತ್ತು ಕಳೆದ ವರ್ಷ ನಡೆದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ತೋರಿದ ದೌರ್ಜನ್ಯವನ್ನು ಉಲ್ಲೇಖಿಸಿ, ಪೊಲೀಸರ ಪಕ್ಷಪಾತಿ ಕ್ರಮವನ್ನು ಖಂಡಿಸಿದ್ದಾರೆ.

ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅಮೆರಿಕದ ಚುನಾಯಿತ-ಅಧ್ಯಕ್ಷ ಜೊ ಬೈಡೆನ್, ಕ್ಯಾಪಿಟಲ್ ಮುತ್ತಿಗೆಯನ್ನು ಖಂಡಿಸಿದ್ದು, ಕಾನೂನು ಜಾರಿ ಮಾಡುವ ಅಧಿಕಾರಿಗಳ ಪಕ್ಷಪಾತ ಧೋರಣೆಯನ್ನು ಒಪ್ಪಿಕೊಂಡಿದ್ದಾರೆ.

‘ನನಗೆ ಇದನ್ನು ಯಾರೂ ಹೇಳಬೇಕಿಲ್ಲ. ನಿನ್ನೆ ಪ್ರತಿಭಟಿಸಿದವರು ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿದ ಕೊಲೆಗಡುಕರ ಗುಂಪಿನ ಬದಲು, ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನಾಕಾರರಾಗಿದ್ದರೆ ಅವರನ್ನು ಬೇರೆ ರೀತಿಯಲ್ಲೇ ಟ್ರೀಟ್ ಮಾಡಲಾಗುತ್ತಿತ್ತು. ಇದು ಸತ್ಯ ಎಂಬುದು ನಮ್ಮೆಲ್ಲರಿಗೂ ಗೊತ್ತು. ಇದು ಒಪ್ಪಿತವಲ್ಲ, ಸಂಪೂರ್ಣ ಒಪ್ಪಿತವಲ್ಲ…’ ಎಂದು ಬೈಡನ್ ಟ್ವೀಟ್ ಮಾಡಿದ್ದಾರೆ.

‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನಾಕಾರರನ್ನು ಕೊಲೆಗಡುಕರು ಎಂದೇ ಕರೆಯುತ್ತಿದ್ದ ಟ್ರಂಪ್, ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿದವರ ಪರ ಮಾತನಾಡುತ್ತ, ‘ದೀರ್ಘ ಸಮಯದಿಂದ ಕೆಟ್ಟದಾಗಿ ಟ್ರೀಟ್ ಮಾಡಲ್ಪಟ್ಟ ಇವರೆಲ್ಲ ಮಹಾನ್ ದೇಶಭಕ್ತರು ಎಂದು ಶ್ಲಾಘಿಸಿದ್ದಾರೆ.

ಮುತ್ತಿಗೆಯ ವಿಡಿಯೋ ಮತ್ತು ಫೋಟೊಗಳು ಹೊರ ಬರುತ್ತಿದ್ದಂತೆ, ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ನಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು, ಬುಧವಾರ ಪೊಲೀಸರು ತೋರಿದ ಮೃದು ಧೋರಣೆಯನ್ನು ಉಲ್ಲೇಖಿಸಿ, ‘ಇದು ಅಮೆರಿಕದ ಅಸಮಾನ ನ್ಯಾಯ ವ್ಯವಸ್ಥೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಟೀಕಿಸಿದರು.

ಕಳೆದ ವರ್ಷ ಮಿನ್ನಿಪೊಲಿಸ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕಪ್ಪು ವರ್ಣದ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನು ಮೊಣಕಾಲಿನಿಂದ ಕತ್ತು ಹಿಸುಕಿ ಕೊಂದ ನಂತರ ಅಮೆರಿಕದಲ್ಲಿ ಜನಾಂಗೀಯ ನ್ಯಾಯಕ್ಕಾಗಿ ವ್ಯಾಪಕ ಪ್ರತಿಭಟನೆ ನಡೆದವು. ಆ ಪ್ರತಿಭಟನೆಗಳಿಗೆ ಕಠಿಣವಾಗಿ ಸ್ಪಂದಿಸಿದ ಅಧ್ಯಕ್ಷ ಟ್ರಂಪ್, ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ‘ನ್ಯಾಷನಲ್ ಗಾರ್ಡ್ ಟ್ರೂಪ್’ಗಳನ್ನು ನಿಯೋಜಿಸಿದ್ದರು.

ಮೊನ್ನೆ ಜನವರಿ 6ರಂದು ಟ್ರಂಪ್‌ನ ಸಾವಿರಾರು ಬೆಂಬಲಿಗರು, ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಐತಿಹಾಸಿಕ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಕಾನೂನು ಜಾರಿ ಅಧಿಕಾರಿಗಳಿದ್ದರೂ, ಅವರು ಕಟ್ಟಡದ ಮೆಟ್ಟಿಲುಗಳನ್ನು ಏರಿದರು, ಪೊಲೀಸ್ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿದರು ಮತ್ತು ಕಟ್ಟಡದ ಹೊರಭಾಗದ ಗೋಡೆಯನ್ನು ಏರಿದರು.

ಕಳೆದ ವರ್ಷದ ಜೂನ್‌ನಲ್ಲಿ ವಾಷಿಂಗ್ಟನ್ ಡಿಸಿಯ ಲೆಫಾಯತ್ತೆ ಪಾರ್ಕ್ ಬಳಿ ವರ್ಣಭೇದ ನೀತಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಮತ್ತು ನ್ಯಾಷನಲ್ ಗಾರ್ಡ್ ಟ್ರೂಪ್‌ನವರು ಕ್ರೂರವಾಗಿ ದಾಳಿ ನಡೆಸಿದ್ದರು. ಒಂದು ಫೋಟೊ ಕಾರ್ಯಕ್ರಮಕ್ಕಾಗಿ ಅಂದು ಟ್ರಂಪ್ ವೈಟ್‌ಹೌಸ್‌ನಿಂದ ಈ ಪಾರ್ಕ್ ಮಾರ್ಗವಾಗಿ ಚರ್ಚ್ ಒಂದಕ್ಕೆ ಹೋಗುತ್ತಿದ್ದ ಕಾರಣಕ್ಕಾಗಿ, ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ್ದರು.

ಆದರೆ ಮೊನ್ನೆ ಬುಧವಾರ ಟ್ರಂಪ್ ಬೆಂಬಲಿಗರಿಂದ ಅವ್ಯವಸ್ಥೆ ಉಂಟಾದ ಕೂಡಲೇ, ಚುನಾವಣಾ ಫಲಿತಾಂಶಗಳನ್ನು ಪ್ರಮಾಣೀಕರಿಸಲು ಸಭೆ ಸೇರಿದ್ದ ಶಾಸಕರನ್ನು (ಲಾ ಮೇಕರ್ಸ್) ಆವರಣದಿಂದ ಸ್ಥಳಾಂತರಿಸಲಾಯಿತು. ಉದ್ರಿಕ್ತ ಗಲಭೆಕೋರರು ಅವರ ಕಚೇರಿಗಳನ್ನು ಧ್ವಂಸಗೊಳಿಸಿದರು.

ಕಳೆದ ವರ್ಷ ಜೂನ್‌ನಲ್ಲಿ ಕಪ್ಪು ವರ್ಣೀಯರು ಪೊಲೀಸ್ ದೌರ್ಜನ್ಯ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ, ನ್ಯಾಷನಲ್ ಗಾರ್ಡ್ ಸದಸ್ಯರು ಲಿಂಕನ್ ಸ್ಮಾರಕದ ಸುತ್ತ ಸಾಲಾಗಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು.

ಕಳೆದ ವರ್ಷ ಕಾನೂನು ಜಾರಿ ಮಾಡುವ ಅಧಿಕಾರಿಗಳು, ವರ್ಣಭೇದ ನೀತಿ ವಿರೋದಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಟಿಯರ್ ಗ್ಯಾಸ್ ಮತ್ತು ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿದ್ದರು. ಅವರ ಆ ಕ್ರೌರ್ಯತೆಗೆ ಜಗತ್ತಿನಾದ್ಯಂತ ಮಾನವ ಹಕ್ಕು ಹೋರಾಟಗಾರರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಮೊನ್ನೆ ಮುತ್ತಿಗೆ ಹಾಕಿದ ದಂಗೆಕೋರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದರಾದರೂ, ಕಾನೂನು ಜಾರಿ ಅಧಿಕಾರಿಗಳು ದಂಗೆಕೋರರೊಂದಿಗೆ ಶಾಂತವಾಗಿ, ಮೃದುವಾಗಿ ಮಾತನಾಡಿದರು. ಕಾನೂನು ಜಾರಿ ಅಧಿಕಾರಿಗಳು ಗಾಯಗೊಂಡ ಟ್ರಂಪ್ ಬೆಂಬಲಿಗರ ಆರೈಕೆ ಮಾಡುವ ಫೋಟೊ, ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಯ ಸದಸ್ಯರನ್ನು ಕೆರಳಿಸಿದೆ. ಕಳೆದ ವರ್ಷ ಗಾಯಗೊಂಡ ತಮ್ಮ ಸದಸ್ಯರಿಗೆ ಇಂತಹ ಆರೈಕೆ ಸಿಗದೇ ಇದ್ದುದನ್ನು ಅವರು ಈಗ ಪ್ರಶ್ನಿಸುತ್ತಿದ್ದಾರೆ.

ಕಳೆದ ವರ್ಷ ಜನಾಂಗೀಯ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಯ ಸದಸ್ಯರನ್ನು ಬಂಧಿಲಾಗಿತ್ತು. ಪೊಲೀಸ್ ಅಂಕಿಸಂಖ್ಯೆ ಪ್ರಕಾರ, 2020 ಮೇ 30 ಮತ್ತು ಜೂನ್ 2ರ ನಡುವೆ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಯ 427 ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.

ಆದರೆ ಬುಧವಾರ ಗಲಭೆಕೋರರು ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಕೇವಲ 53 ಜನರನ್ನು ಬಂಧಿಲಾಗಿದೆ.

ಕೃಪೆ: –ರಹೇಲ್ ಫಿಲಿಪೋಸ್ (ಇಂಡಿಯನ್ ಎಕ್ಸ್ ಪ್ರೆಸ್)

ಅನುವಾದ: ಪಿ.ಕೆ ಮಲ್ಲನಗೌಡರ್


ಇದನ್ನೂ ಓದಿ: ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ v/s ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...