Homeಮುಖಪುಟ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ v/s ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’

‘ಮೇಕ್ ಅಮೆರಿಕ ಗ್ರೇಟ್ ಅಗೈನ್’ v/s ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’

‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬ ಘೋಷಣೆಯನ್ನು ವಿಶ್ಲೇಷಿಸುವುದಾದರೆ ಇದೊಂದು ಚುನಾವಣಾ ಗೆಲುವಿಗಾಗಿ ಸೃಸ್ಟಿಸಿದ ಭ್ರಮಾತ್ಮಕ ಕನಸು ಮಾತ್ರವಲ್ಲ, ಜನಾಂಗೀಯ ಭೇದವನ್ನು ಪ್ರತಿಪಾದಿಸುವ, ಬಿಳಿಯ ಸಾರ್ವಭೌಮತೆಯನ್ನು ಸ್ಥಾಪಿಸುವ ಘೋಷಣೆಯೂ ಆಗಿದೆ.

- Advertisement -
- Advertisement -

“ನಿಮಗಿಷ್ಟ ಬಂದ ಕಡೆ ನನ್ನ ಗೋರಿಯ ತೋಡಿ

ಎತ್ತರ ಪರ್ವತವೊ ತಗ್ಗು ನೆಲವೊ

ದಾಸ್ಯದ ನಾಡೊಂದುಳಿದು

ಯಾವ ಮೂಲೆಯಾದರು ಸರಿ ಹೂಳಿಬಿಡಿ’’

-ವ್ಯಾಟ್ ಕಿನ್ಸ್ ಹಾರ್ಪರ್ ಎಂಬ ಗುಲಾಮಿ ಮಹಿಳೆಯ ನಿವೇದನೆ.

ಈಗ ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’ ಎಂಬ ಘೋಷಣೆ ಅಮೆರಿಕದ ಉದ್ದಕ್ಕೂ ಪ್ರಬಲವಾಗಿ ಕೇಳಿ ಬರುತ್ತಿರುವುದನ್ನು ಇಡೀ ಜಗತ್ತು ಗಮನಿಸುತ್ತಿದೆ. ಇದಕ್ಕೆ ಕಾರಣವೇನು? ಎಂಬುದನ್ನು ಗಮನಿಸಿದರೆ, ಸದ್ಯಕ್ಕೆ ನಮಗೆ ಸಿಗುವ ಉತ್ತರ ಮಿನಿಪೋಲಿಸ್‍ನಲ್ಲಿ ಬಹಳ ಅಮಾನುಷವಾಗಿ ಕೊಲೆಯಾದ ಜಾರ್ಜ್ ಪ್ಲಾಯ್ಡ್‌ನ ಘಟನೆ ನಮ್ಮ ಕಣ್ಮುಂದೆ ಬರುತ್ತದೆ. ಮತ್ತು ಈ ಘಟನೆ ಇಡೀ ಪ್ರಜ್ಞಾವಂತ ಅಮೆರಿಕನ್ನರನ್ನು ವ್ಯವಸ್ಥೆಯ, ಅದರಲ್ಲೂ ಅಧ್ಯಕ್ಷ ಟ್ರಂಪ್‍ನ ಆಡಳಿತ ವೈಖರಿಯ ವಿರುದ್ಧ ಎದ್ದು ನಿಲ್ಲುವಂತೆ ಮಾಡಿದೆ.

ಆದರೆ ಇದೇ ಟ್ರಂಪ್ ಅಮೆರಿಕದ ಅಧ್ಯಕ್ಷ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧೆ ಮಾಡಿದಾಗ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬ ಘೋಷಣೆಯನ್ನು ಮುನ್ನೆಲೆಗೆ ತಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದ. ಆದರೆ ಅಮೆರಿಕದಲ್ಲಿ ಇಂದು ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಎರಡು ಘೋಷಣೆಗಳು ಬಹಳ ಮುಖ್ಯವಾದವು. ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎನ್ನುವುದಕ್ಕೂ ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’ಗು ಆಳದಲ್ಲಿ ಏನಾದರೂ ಸಂಬಂಧವಿದೆಯಾ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಮತ್ತೆ ಅಮೆರಿಕದ ಚರಿತ್ರೆಯ ಪುಟಗಳನ್ನೇ ತಿರುವಿಹಾಕಬೇಕಾಗುತ್ತದೆ.

ಮೂಲತಃ ಅಮೆರಿಕ ರೆಡ್‍ಇಂಡಿಯನ್ನರ ದೇಶವಾಗಿತ್ತು. ಈಗ ಅದೊಂದು ವಲಸಿಗರ ದೇಶ. ಆದರೆ ಯೂರೋಪ್‍ನ ಬೇರೆ ಬೇರೆ ಭಾಗಗಳಿಂದ ಬಂದ ಬಿಳಿಯರು ಲಕ್ಷಾಂತರ ರೆಡ್ ಇಂಡಿಯನ್ನರನ್ನು ಕೊಂದು ಇಲ್ಲಿನ ಭೂಪ್ರದೇಶಗಳನ್ನು ದೋಚಿ, ಆಫ್ರಿಕಾದಿಂದ ಲಕ್ಷಾಂತರ ಕಪ್ಪು ಜನಾಂಗದ ಜನಗಳನ್ನು ಎಳೆತಂದು ಗುಲಾಮರನ್ನಾಗಿಸಿಕೊಂಡು ಅವರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆಗಳನ್ನು ನಡೆಸಿ ಈ ದೇಶವನ್ನು ಒಂದು ಬಿಳಿಯರ ದೇಶವನ್ನಾಗಿ ಮಾಡಿದ ಕತೆಗಳನ್ನು ಅಮೆರಿಕ ತನ್ನ ಇತಿಹಾಸದಲ್ಲಿ ಬಚ್ಚಿಟ್ಟುಕೊಂಡಿದೆ.

ಸುಮಾರು 1619 ರಲ್ಲಿ ಅಮೆರಿಕದ ವರ್ಜಿನಿಯಾಗೆ ಕಪ್ಪು ಜನರನ್ನು ಮೊದಲಬಾರಿಗೆ ಗುಲಾಮರನ್ನಾಗಿ ಕರೆತರಲಾಯಿತು. ಆನಂತರ ಭತ್ತ, ಹತ್ತಿ ಬೆಳೆಯಲು, ಪ್ಲಾಂಟೇಷನ್‍ಗಳಲ್ಲಿನ ಕೆಲಸಗಳಾಗಿ ಬಲವಂತವಾಗಿ ಆಫ್ರಿಕಾಖಂಡದ ಬೇರೆ ಬೇರೆ ಪ್ರದೇಶಗಳಿಂದ ಕಪ್ಪು ಜನರನ್ನು ಪ್ರಾಣಿಗಳಂತೆ ಹಡಗುಗಳಲ್ಲಿ ತುಂಬಿ ತರಲಾಗುತ್ತಿತ್ತು. ಈ ಸಮಯದಲ್ಲಿ ಕಪ್ಪು ಜನರು ಹೆದರಿ, ಆತಂಕಗೊಂಡು ಹಡುಗಳಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದದ್ದು ಸರ್ವೇಸಾಮಾನ್ಯವಾಗಿರುತ್ತಿತ್ತು. ಜೊತೆಗೆ ಈ ಆತ್ಮಹತ್ಯೆಗಳ ಬಗೆಗೆ ಬಂಧಿತ ಕಪ್ಪು ಜನರಿಗೆ ಒಂದು ನಂಬಿಕೆ ಇತ್ತು. ಅದೇನೆಂದರೆ, ತಾವು ಆತ್ಮಹತ್ಯೆ ಮಾಡಿಕೊಂಡರೆ ಈ ಗುಲಾಮಗಿರಿಯ ಬಂಧನದಿಂದ ಮುಕ್ತಿ ಪಡೆದು ತಮ್ಮ ಜನ್ಮ ಭೂಮಿಗೆ ವಾಪಸ್ಸು ಮರಳಿ ಸಂಬಂಧಿಗಳನ್ನು, ಸ್ನೇಹಿತರನ್ನು ಸೇರಿಕೊಳ್ಳಬಹುದು ಎಂಬುದು.

ಹೀಗೆ ಗುಲಾಮರು ಆತ್ಮಹತ್ಯೆಗೆ ಶರಣಾಗುವುದರಿಂದ ಬಿಳಿಯರು ತಮಗೆ ಆಗುವ ನಷ್ಟವನ್ನು ತಪ್ಪಿಸಲು, ಆತ್ಮಹತ್ಯೆಗೆ ಶರಣಾದ ಕರಿಯರ ತಲೆಗಳನ್ನು ತುಂಡರಿಸಿ, ಹಡಗುಗಳಿಗೆ ನೇತುಹಾಕಿ – ನೋಡಿ ಇವರು ತಮ್ಮ ಮೂಲಪ್ರದೇಶಗಳಿಗೆ ಮರಳುವಾಗ ಅವರಿಗೆ ತಲೆಗಳೆ ಇರುವುದಿಲ್ಲ ಎಂದು ಹೆದರಿಸಿ, ಉಳಿದವರನ್ನು ಜೀವಂತವಾಗಿ ಕರೆದೊಯ್ದು ಮಾರಾಟಮಾಡುವ ಅಮಾನವೀಯ ಘಟನೆಗಳು ನಡೆಯುತ್ತಿದ್ದವು. ಆ ಕಾರಣಕ್ಕೆ ಕಪ್ಪು ಜನರು ಆರಂಭದಿಂದ ಇವೊತ್ತಿನವರೆಗೂ ನಿರಂತರವಾದ ಒಂದಲ್ಲಾ ಒಂದು ಭಯ ಮತ್ತು ಹೆದರಿಕೆಯಲ್ಲೇ ಬಾಳುವಂತಾಗಿರುವುದು ಚಾರಿತ್ರಿಕ ದುರಂತ. ಆದರೆ ಅಂತರ್ ಯುದ್ಧದ (Civil war) ನಂತರ, ಅಮೆರಿಕ 1863ರಲ್ಲಿ ಗುಲಾಮಗಿರಿಯನ್ನು ಕಾನೂನಾತ್ಮಕವಾಗಿ ನಿಷೇದಿಸಿದ ನಂತರವೂ ಕರಿಯರ ಮೇಲಿನ ತಾರತಮ್ಯ, ದಬ್ಬಾಳಿಕೆ, ದೌರ್ಜನ್ಯಗಳು ಕೊನೆಯಾಗಿವೆಯೇ ಎಂಬುದು ಮಾತ್ರ ಇವೊತ್ತಿಗೂ ಕಾಡುವ ಪ್ರಶ್ನೆ. ಯಾವಾಗಲು ಅಮೆರಿಕ ತಾನೊಂದು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಹೇಳಿಕೊಳ್ಳುತ್ತದೆ. ಆದರೆ ಅಮೆರಿಕದ ಬಿಳಿಯ ಹೆಂಗಸರಿಗೂ ಸಹ 1919 ತನಕ ಮತಚಲಾಯಿಸುವ ಹಕ್ಕು ಇರಲಿಲ್ಲ ಅನ್ನುವುದಾದರೆ, ಇನ್ನು ಕರಿಯರ ಪರಿಸ್ಥಿತಿ ಎಷ್ಟು ಶೋಷಿತವಾಗಿದ್ದಿರಬಹುದು ಎಂಬುದು ಊಹಿಸಿಕೊಳ್ಳುವುದಕ್ಕಿಂತಲೂ ಕರಾಳ.

ಕಪ್ಪು ಜನಾಂಗಗಳ ಶ್ರಮದಿಂದಲೇ ಸಕಲಸಂಪತ್ತನ್ನು ಪಡೆದುಕೊಂಡ ಈ ದೇಶ ಯಾವೊತ್ತು ಅವರನ್ನು ತಮ್ಮಂತೆ ಮನುಷ್ಯರು ಎಂಬ ಸಮಭಾವನೆಯಿಂದ ಕಾಣಲೇ ಇಲ್ಲ. ಬದಲಿಗೆ ಅತೀ ನಿಕೃಷ್ಟವಾಗಿ ಕನಿಷ್ಟ ದರ್ಜೆಯ ಪ್ರಜೆಗಳಾಗಿಯೇ ಕಾಣುತ್ತ, ಕಪ್ಪು ಜನಾಂಗಗಳ ವ್ಯಕ್ತಿಗಳು ಮನುಷ್ಯರೇ ಅಲ್ಲ ಎಂಬುದಾಗಿ ಪ್ರಾಣಿಗಳಂತೆ ನಡೆಸಿಕೊಂಡಿದೆ. ಜೊತೆಗೆ ಕಪ್ಪು ಜನರ ವಿವಾಹಗಳನ್ನು ಬಿಳಿಯರ ಕಾನೂನು ಎಂದೂ ಸಮ್ಮತಿಸುತ್ತರಲಿಲ್ಲ. ಒಬ್ಬ ಕಪ್ಪು ಪುರುಷನಿಗೆ ತನ್ನ ಹೆಂಡತಿ ಮಕ್ಕಳ ಮೇಲೆ ಯಾವುದೇ ರೀತಿಯ ಹಕ್ಕು ಪ್ರತಿಪಾದಿಸುವ ಅಧಿಕಾರವೆ ಇರಲಿಲ್ಲ. 20ನೇ ಶತಮಾದಲ್ಲಿ ಬಿಳಿಯರ ಶ್ರೇಷ್ಟತೆಯ ವ್ಯಸನ ಯಾವ ಮಟ್ಟಿಗೆ ಇತ್ತು ಎಂದರೆ ‘ಒನ್ ಡ್ರಾಪ್ ರೂಲ್’ (one drop rule) ಅಥವಾ ಒನ್ ಡ್ರಾಪ್ ಆಫ್ ಬ್ಲ್ಯಾಕ್ ಬ್ಲಡ್ (one drop of black blood) ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಈ ನಿಯಮದ ಪ್ರಕಾರ ಯಾವರೀತಿಯಲ್ಲೇ ಆಗಲಿ ಕಪ್ಪು ಹಾಗು ಬಿಳಿಯರ ಸೇರುವಿಕೆಯಿಂದ ಹುಟ್ಟುವ ಆಥವಾ ಕಪ್ಪು ಹೆಣ್ಣುಮಕ್ಕಳ ಮೇಲೆ ಬಿಳಿಯ ವ್ಯಕ್ತಿ ಅಥವಾ ಮಾಲೀಕ ನಡೆಸುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಕಾರಣಗಳಿಗೆ ಹುಟ್ಟುವ ಯಾವುದೆ ಮಗುವು ಅಂತಿಮವಾಗಿ ಅದು ಕಪ್ಪು ಜನಾಂಗಕ್ಕೆ ಸೇರಬೇಕು. ಹಾಗು ಎಲ್ಲಾ ಕರಿಯರಂತೆ ಗುಲಾಮನೇ ಆಗಬೇಕು. ಅಂದರೆ ಕಪ್ಪು ಜನರ ರಕ್ತ ಒಂದು ತೊಟ್ಟು ಬೆರೆತರು ಅದು ಅಶುದ್ಧ ಅಥವಾ ಮಲಿನಗೊಂಡಿದ್ದು ಎಂಬುದು ಜನಾಂಗೀಯವಾದಿ ಬಿಳಿಯರ ಭಾವನೆ.

ಈ ಮನಸ್ಥಿತಿ ಅಮೆರಿಕದ ಪೋಲಿಸ್ ವ್ಯವಸ್ಥೆಯಲ್ಲಿ ಇವೊತ್ತಿಗೂ ಎದ್ದುಕಾಣುತ್ತದೆ. ಈ ದೇಶದಲ್ಲಿ ಪೋಲಿಸ್ ಇಲಾಖೆ ಶುರುವಾಗಿದ್ದೆ ಬಿಳಿಯರನ್ನು ಹಾಗು ಅವರ ಸಂಪತ್ತನ್ನು ರಕ್ಷಿಸಲು ಮತ್ತು ಕಪ್ಪು ಜನರನ್ನು ನಿಯಂತ್ರಿಸಲು. ಆಕಾರಣಕ್ಕೆ ಅಮೆರಿಕದಲ್ಲಿ ಒಬ್ಬ ಬಿಳಿಯ ಹುಡುಗನಿಗೆ ತೊಂದರೆಯಾದರೆ ಧೈರ್ಯವಾಗಿ ಪೋಲಿಸ್ ಬಳಿ ಹೋಗುತ್ತಾನೆ. ಅದೇ ಕಪ್ಪು ಹುಡುಗನಿಗೆ ತೊಂದರೆಯಾದರೆ ಪೊಲೀಸರ ಬಳಿ ಹೋಗುವುದಿರಲಿ, ಅವರನ್ನು ಕಂಡರೆ ಸಾಕು ಹೆದರಿ ಓಡಿಹೋಗುತ್ತಾನೆ. ಕಾನೂನಾತ್ಮಕವಾಗಿ ಕಪ್ಪು ಜನರಿಗೆ ಗುಲಾಮಗಿರಿಯಿಂದ ಸ್ವಾತಂತ್ರ್ಯ ಇದ್ದರು ಸಹ ಕರಿಯರ ಬಗೆಗೆ ಇರುವ ಅಲಿಖಿತವಾದ ತಾರತಮ್ಯ ನಿರಂತರವಾಗಿ ಇವೊತ್ತಿಗೂ ವಿವಿದ ರೀತಿಗಳಲ್ಲಿ ನಡೆಯುತ್ತಲೇ ಇದೆ.

ಅಮೆರಿಕದ ಪೊಲೀಸ್ ವ್ಯವಸ್ಥೆ ಕರಿಯರ ಬಗ್ಗೆ ಹೇಗೆಲ್ಲಾ ನಡೆದುಕೊಳ್ಳುತ್ತದೆ ಎಂಬುದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ನೋಡಬಹುದು. 20 ಜುಲೈ 2012ರಲ್ಲಿ ಜೇಮ್ಸ್ ಈಗನ್ ಹೋಮ್ಸ್ ಎಂಬ ಬಿಳಿಯ ವ್ಯಕ್ತಿ ಕ್ಯಾಲಿಫೋರ್ನಿಯಾದ ಒಂದು ಸಿನಿಮಾ ಮಂದಿರದಲ್ಲಿ ಮಷಿನ್‍ಗನ್‍ನಿಂದ ಮನಸೊಇಚ್ಚೆ ಗುಂಡುಹಾರಿಸಿದ ಕಾರಣ 12 ಜನರು ಸತ್ತು ಸುಮಾರು 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ಆ ಸಮಯದಲ್ಲಿ ಈ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ನಂತರ ಅವನು ಮಾನಸಿಕ ಅಸ್ವಸ್ಥ ಎಂಬ ಕಥೆಗಳನ್ನು ಸೃಷ್ಟಿಸಲಾಯಿತು. ಇದೇ ಪ್ರದೇಶದಲ್ಲಿ 30 ಆಗಸ್ಟ್ 2019ರಲ್ಲಿ ಮತ್ತೊಂದು ಘಟನೆ ನಡೆಯುತ್ತದೆ. ಎಲಿಜಾ ಮೆಕ್ಲಿನ್ ಎಂಬ 23 ವರ್ಷದ ಕಪ್ಪು ಯುವಕ ತನ್ನ ಕಿವಿಗೆ ಹೆಡ್‍ಫೋನ್ ಸಿಕ್ಕಿಸಿಕೊಂಡು ಸಂಗೀತಕ್ಕೆ ನೃತ್ಯ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ಅದು ಬಿಳಿಯರು ವಾಸ ಮಾಡುವ ಪ್ರದೇಶ. ಈ ಸಂದರ್ಭದಲ್ಲಿ ಪೊಲೀಸರಿಗೆ ನಮ್ಮ ರಸ್ತೆಯಲ್ಲಿ ಒಬ್ಬ ಅನುಮಾನಾಸ್ಪದ ಕಪ್ಪು ವ್ಯಕ್ತಿ ಓಡಾಡುತ್ತಿದ್ದಾನೆ ಎಂಬುದಾಗಿ ಕರೆ ಬರುತ್ತದೆ. ತಕ್ಷಣ ಅಲ್ಲಿಗೆ ಬಂದ ಪೋಲಿಸರು ಯಾವುದೇ ಪೂರ್ವಪರಗಳನ್ನು ಪರಿಶೀಲಿಸದೆ ನೇರವಾಗಿ ಅವನ ಮೇಲೆ ಗುಂಡು ಹಾರಿಸಿಬಿಡುತ್ತಾರೆ. ತೀವ್ರವಾಗಿ ಗಾಯಗೊಂಡ ಮೆಕ್ಲಿನ್ ನಂತರ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪುತ್ತಾನೆ. ಈ ಎರಡು ಘಟನೆಗಳನ್ನು ಗಮನಿಸಿದಾಗ ನಮಗೆ ತಿಳಿಯುವ ಸಂಗತಿ ಏನೆಂದರೆ, ಕಪ್ಪುಜನರು ಎಂದರೆ, ಅವರು ಕ್ರಿಮಿನಲ್‍ಗಳು ಎಂಬುದಾಗಿ ಬಿಳಿಯರಲ್ಲಿ ಹಾಗೂ ಬಿಳಿಯ ಪೊಲೀಸರ ಮನಸ್ಸಿನಲ್ಲಿ ಇರುವ ಕಲ್ಪಿತ ಪೂರ್ವಗ್ರಹ. ಬಿಳಿಯವನು ಕೊಲೆಗಾರನಾದರೂ ಕಾನೂನು ಗೌರವಗಳಿಗೆ ಪಾತ್ರನಾಗುತ್ತಾನೆ. ಆದರೆ ಕಪ್ಪುವ್ಯಕ್ತಿ ಕೇವಲ ಅವನ ದೇಹದ ಬಣ್ಣದ ಕಾರಣಕ್ಕೆ ಅಪರಾಧಿಯಾಗಿ ಪೊಲೀಸರಿಂದ ಕೊಲೆಯಾಗುತ್ತಾನೆ. ಇನ್ನು ‘ಅಪಾರ್ಥೀಡ್’ ಎಂಬ ವರ್ಣಭೇದ ನೀತಿಯನ್ನು ಸೃಷ್ಟಿಸಿ ದಕ್ಷಿಣ ಆಫ್ರಿಕಾಗು ಸೇರಿದಂತೆ ಇಡೀ ಜಗತ್ತಿಗೆ ಹಬ್ಬಿಸಿದವರೇ ಅಮೆರಿಕದ ಬಿಳಿಯರು.

ಚರಿತ್ರೆಯಲ್ಲಿ ಅಮೆರಿಕ ಕಪ್ಪು ಜನರನ್ನು ಹೇಗೆಲ್ಲ ನಡೆಸಿಕೊಂಡಿದೆ ಎಂದರೆ: ಮೊದಲನೆ ಮಹಾಯುದ್ಧದಲ್ಲಿ ಪಾಲ್ಗೊಂಡ ಮಾಜಿ ಕಪ್ಪು ಸೈನಿಕರು ಸಾರ್ವಜನಿಕವಾಗಿ ಸಮವಸ್ತ್ರಗಳನ್ನು ತೊಟ್ಟು ಹೋರಾಡಿದರೆ ಬಿಳಿಯರು ಹೊಡೆದು ಸಾಯಿಸಿರುವ ಉದಾಹರಣೆಗಳು ಎಷ್ಟೊ ಉಂಟು. ಹಾಗೆಯೇ ಅಂತರ್ ಯುದ್ಧ (Civil war)ದಲ್ಲಿ ಪಾಲ್ಗೊಂಡ ಪ್ರತಿ ಕಪ್ಪು ಸೈನಿಕನಿಗೆ, 40 ಎಕರೆ ಭೂಮಿಯ ಜೊತೆಗೆ ಒಂದು ಹೇಸರಗತ್ತೆಯನ್ನು ಉಚಿತವಾಗಿ ಕೊಡಬೇಕು ಎಂಬ ಒಪ್ಪಂದ ಇತ್ತು. ಆದರೆ ಅಮೆರಿಕದ ಬಿಳಿಯ ಸರ್ಕಾರ ಇದ್ಯಾವುದನ್ನೂ ಪೂರೈಸಲಿಲ್ಲ. ಬದಲಿಗೆ ಕಪ್ಪು ಜನಸಮುದಾಯಗಳು ವಾಸಮಾಡುವ ಪ್ರದೇಶಗಳನ್ನೇ ರೆಡ್‍ಲೈನಿಂಗ್ಸ್ (Red linings) ಎಂದು ಘೋಷಣೆ ಮಾಡಿ ಹಲವು ರೀತಿಯ ನಿರ್ಬಂಧಗಳನ್ನು ಮಾಡಿ, ಸಣ್ಣ ಪುಟ್ಟ ಅಪರಾಧಗಳಿಗೂ ಲಕ್ಷಾಂತರ ಕಪ್ಪು ಪುರುಷರನ್ನು ಜೈಲುಗಳಿಗೆ ಕಳಿಸಿ ಕ್ರೂರವಾದ ಶಿಕ್ಷೆಗಳನ್ನು ನೀಡಿದೆ. ಹೀಗೆ ಕರಿಯರು ಬಿಳಿಯರಿಗೆ ಯಾವ ರೀತಿಯಲ್ಲೂ ಸಮನಾಗಿ ಇರುವುದನ್ನು ಅಮೆರಿಕದ ಬಿಳಿಯರು ಎಂದಿಗೂ ಸಹಿಸುತ್ತಿರಲಿಲ್ಲ. ಜೊತೆಗೆ ಅಮೆರಿಕದಲ್ಲಿ ಸಾಂಸ್ಥಿಕ ಜನಾಂಗೀಯಭೇದ(Institutional racism) ಅತಿ ಹೆಚ್ಚು ಪ್ರಮಾಣದಲ್ಲಿ ಇದೆ ಎಂಬುದಕ್ಕೆ ಅಮೆರಿಕ ಪೊಲೀಸ್ ಇಲಾಖೆ ಕಪ್ಪು ಜನರ ಮೇಲೆ ನಡೆಸಿರುವ ದೌರ್ಜನ್ಯ ಮತ್ತು ದಾಳಿಗಳೇ ಸಾಕ್ಷಿ. ಆ ಕಾರಣಕ್ಕೆ ಅಮೆರಿಕದ ಕಪ್ಪು ಪುರುಷರು ಶಾಲಾ/ ಕಾಲೇಜುಗಳಲ್ಲಿ ಇರುವುದಕ್ಕಿಂತ ಜೈಲುಗಳಲ್ಲೇ ಇರುವುದೇ ಹೆಚ್ಚು. ದುರಂತದ ಸಂಗತಿಯೆಂದರೆ ಜೈಲಿನಲ್ಲಿ ಇರುವವರ ಸಂಖ್ಯೆ ಭಾರತದಲ್ಲಿ 4 ಲಕ್ಷ. ಆದರೆ ಅಮೆರಿಕದ ಜೈಲುಗಳಲ್ಲಿ ಇರುವವರ ಸಂಖ್ಯೆ 23 ಲಕ್ಷ. ಇದರಲ್ಲಿ ಬಹುತೇಕರು ಕಪ್ಪು ಜನಾಂಗಕ್ಕೆ ಸೇರಿದವರು. ಈ ದೇಶ ಬಿಳಿಯರ ದೇಶ, ಇಲ್ಲಿ ಬಿಳಿಯರು ಯಾವೊತ್ತು ಸರ್ವಶ್ರೇಷ್ಟರು, ಇಲ್ಲಿನ ಸಂಪತ್ತೆಲ್ಲಾ ಅವರಿಗೆ ಸೇರಿದ್ದು ಎಂಬ ಭಾವನೆ ಸಾಂಪ್ರದಾಯಿಕ ಜನಾಂಗೀಯವಾದಿ ಬಿಳಿಯರಲ್ಲಿ ಗಾಢವಾಗಿ ಬೇರೂರಿದೆ.

ಆದರೆ ಅಮೆರಿಕದ ಈಗಿನ ಚಿತ್ರಣ ತೀರ ಬದಲಾಗಿದೆ. ಬಿಳಿಯರು ಸರ್ವಶ್ರೇಷ್ಟರು ಎಂಬ ಕಲ್ಪನೆ ಕಡಿಮೆಯಾಗುತ್ತಿದೆ. ಜೊತೆಗೆ ಬಿಳಿಯರಲ್ಲಿ ಉನ್ನತ ಶಿಕ್ಷಣ ಪಡೆಯುವವರು ಕಡಿಮೆಯಾಗುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ದೇಶಗಳಿಂದ ಅಮೆರಿಕಾಗೆ ಬರುವವರ ಸಂಖ್ಯೆಯು ಹೆಚ್ಚಾಗಿದೆ. ಕೋಟ್ಯಂತರ ಉದ್ಯೋಗಗಳು ಯಾಂತ್ರಿಕೃತ(Automation)ಗೊಂಡಿವೆ. ಮೊದಲಿನಷ್ಟು ಸುಲಭವಾಗಿ ಬಿಳಿಯರಿಗೆ ಇಂದು ಕೆಲಸಗಳು ಸಿಗುತ್ತಿಲ್ಲ. ಈ ಎಲ್ಲಾ ಸಂಗತಿಗಳು ಸಂಪ್ರದಾಯಸ್ಥ ಬಿಳಿಯರಲ್ಲಿ ಅಸಹನೆಯನ್ನು ಹೆಚ್ಚು ಮಾಡಿದೆ. ಜೊತೆಗೆ ಕಪ್ಪು ಜನಾಂಗಕ್ಕೆ ಸೇರಿದ ಬರಾಕ್ ಒಬಾಮ ಎರಡು ಅವಧಿಗೆ ಅಮೆರಿಕದ ಅಧ್ಯಕ್ಷನಾಗಿದ್ದು; ಕಪ್ಪು, ಕೆಂಪು, ಕಂದು ಮುಂತಾದ ಇತರೇ ಜನಾಂಗದವರು ಪ್ರಬಲವಾಗುತ್ತಿದ್ದಾರೆ, ದೇಶ ನಮ್ಮ ಕಣ್ಮುಂದೆಯೇ ನಮ್ಮಿಂದ ಕೈತಪ್ಪಿ ಹೋಗುತ್ತಿದೆ, ಎಂಬ ಆತಂಕವೂ ಹಳೆತಲೆಮಾರಿನ ಬಿಳಿಯರನ್ನು ಕಾಡಲು ಶುರುವಾಯಿತು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಟ್ರಂಪ್ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ (Make America great again) ಎಂಬ ಘೋಷಣೆಯನ್ನು ಮುನ್ನೆಲೆಗೆ ತಂದಾಗ ಸಹಜವಾಗಿಯೇ ಒಂದು ವರ್ಗದ ಬಿಳಿಯರಿಗೆ ಟ್ರಂಪ್ ಮಾತುಗಳು ಸುಂದರ ಕನಸುಗಳಾಗಿ ಕಂಡವು. ಈ ಮೊದಲು ಕನಿಷ್ಟ ಶಿಕ್ಷಣ ಹೊಂದಿದ್ದರು ಆದ್ಯತೆಯ ಮೇರೆಗೆ ಬಿಳಿಯರಿಗೆ ಉತ್ತಮವಾದ ಕೆಲಸಗಳು ಸಿಗುತ್ತಿದ್ದವು. ಆ ಕೆಲಸಗಳೆಲ್ಲ ಈಗ ಇಲ್ಲದಾಗಿದೆ. ಹಾಗಾಗಿ ನಮ್ಮ ದೇಶ ಬಿಳಿಯರ ಕೈಯಲ್ಲೇ ಇದ್ದರೆ ನಮಗೆ ಬೇಕಾದ ಕೆಲಸ ಸಿಗುತ್ತೆ ಆ ಕಾರಣಕ್ಕೆ ಮೊದಲಿನ ಹಾಗೆ ಬಿಳಿಯರ ದೇಶವಾಗಿಯೇ ಇದನ್ನು ಉಳಿಸಿಕೊಳ್ಳಬೇಕು ಎಂಬ ಭಾವನೆ ಜನಾಂಗೀಯವಾದಿ ಬಿಳಿಯರಲ್ಲಿ ಹೆಚ್ಚಾಯಿತು.

Image Courtesy: bangordailynews

ಸಾಮಾನ್ಯವಾಗಿ ರಾಜಕಾರಣದಲ್ಲಿ ಗೆಲ್ಲಬೇಕಾದರೆ ಒಬ್ಬ ಶತ್ರುವನ್ನು ಸೃಷ್ಟಿಸಲಾಗುತ್ತದೆ. ಹಾಗೆ ಇಲ್ಲಿ ಬಿಳಿಯೇತರರು ಅದರಲ್ಲೂ ಕಪ್ಪು, ಕೆಂಪು, ಕಂದು ಬಣ್ಣದವರನ್ನೆಲ್ಲಾ ನಮ್ಮ ಶತ್ರುಗಳು ಎಂಬಂತೆ ಬಿಂಬಿಸಲಾಯಿತು. ಇದೇ ಅಂಶಗಳನ್ನು ನಾವು ಭಾರತದಲ್ಲೂ ನೋಡಬಹುದು. 2014ರ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಕೋಮುವಾದಿ ಪಕ್ಷ ಬಿಜೆಪಿ ಭಾರತದಲ್ಲಿ ಮುಸ್ಲಿಂರ ಸಂಖ್ಯೆ ಹೆಚ್ಚಾಗುತ್ತಿದೆ, ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಆ ಕಾರಣ ಇನ್ನು ಕೆಲವೇ ವರ್ಷಗಳಲ್ಲಿ ಅವರು ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲಿದ್ದಾರೆ, ಹಿಂದೂಗಳು ಈಗಲೇ ಎಚ್ಚೆತ್ತುಕೊಳ್ಳಬೇಕು ಇತ್ಯಾದಿ ಇತ್ಯಾದಿ ಭ್ರಮಾತ್ಮಕ ಸುಳ್ಳುಗಳನ್ನೇ ವ್ಯವಸ್ಥಿತವಗಿ ಪ್ರಚಾರ ಮಾಡಿದ್ದು ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿ ಯಶಸ್ಸನ್ನು ತಂದುಕೊಟ್ಟಿದೆ. ಇನ್ನು ಇದೇ ರೀತಿ ಟ್ರಂಪ್ ಮೆಕ್ಸಿಕನ್ನರೆಲ್ಲ ಅತ್ಯಾಚಾರಿಗಳು ಎಂಬುದಾಗಿ ಹೇಳಿದ. ವಲಸೆ ನಿಯಂತ್ರಣ ಕಾನೂನುಗಳು ತಂದು “ನಿಮಗೆ ಸಿಗಬೇಕಾದ” ಕೆಲಸಗಳನ್ನು ನಿಮಗೆ (ಬಿಳಿಯರಿಗೆ) ಕೊಡಿಸುತ್ತೇನೆ. ಆ ಮೂಲಕ ಐವತ್ತರ ದಶಕದ ಗ್ರೇಟ್ ಅಮೆರಿಕವನ್ನು ಮರುಸೃಷ್ಟಿಸುತ್ತೇನೆ ಎಂದ ಕಾರಣ ಬಿಳಿಯರು ಅವನನ್ನು ಸುಲಭವಾಗಿ ನಂಬಿದರು.

ಆದರೆ ಟ್ರಂಪ್ ಆಡಳಿತದಲ್ಲಿ ಈಗ ನಡೆಯುತ್ತಿರುವುದೇ ಬೇರೆ. ಈ ಹಿನ್ನೆಲೆಯಲ್ಲಿ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬ ಘೋಷಣೆಯನ್ನು ವಿಶ್ಲೇಷಿಸುವುದಾದರೆ ಇದೊಂದು ಚುನಾವಣಾ ಗೆಲುವಿಗಾಗಿ ಸೃಸ್ಟಿಸಿದ ಭ್ರಮಾತ್ಮಕ ಕನಸು ಮಾತ್ರವಲ್ಲ, ಜನಾಂಗೀಯ ಭೇದವನ್ನು ಪ್ರತಿಪಾದಿಸುವ, ಬಿಳಿಯ ಸಾರ್ವಭೌಮತೆಯನ್ನು ಸ್ಥಾಪಿಸುವ ಘೋಷಣೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟ್ ಅಮೆರಿಕವನ್ನು ಮರುಸೃಷ್ಟಿಸುತ್ತೇನೆ ಎನ್ನುವುದು ಮತ್ತೆ ಹಿಂಸಾತ್ಮಕ, ‘ಜನಾಂಗೀಯವಾದಿ’ ಬಿಳಿಯರ ಅಮೆರಿಕವನ್ನು ಸೃಷ್ಟಿಸುವುದೇ ಟ್ರಂಪ್‍ನ ಉದ್ದೇಶವಾಗಿದೆ. ಹಾಗಾಗಿ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬುದರ ಒಳಅರ್ಥ ‘ಮೇಕ್ ಅಮೆರಿಕ ‘ವೈಟ್’(white) ಅಗೈನ್’ ಅನ್ನುವುದೇ ಆಗಿದೆ. ಇದರ ಪ್ರತಿರೂಪವೇ ಅಮೆರಿಕದಲ್ಲಿ ‘ಜಾರ್ಜ್‍ಪ್ಲಾಯ್ಡ್’, ‘ಎಲಿಜಾಮೆಕ್ಲಿನ್’ ಮುಂತಾದ ಲಕ್ಷಾಂತರ ಕಪ್ಪು ಜನರ ಮೇಲೆ ನಡೆಯುತ್ತಿರುವ ಕೊಲೆ ಮತ್ತು ಮುಂತಾದ ದೌರ್ಜನ್ಯಗಳು.

ಆದರೆ ಇಂದಿನ ಅಮೆರಿಕಾದ ಹೊಸತಲೆಮಾರು ತುಂಬಾ ಮುಕ್ತವಾಗಿ ಯೋಚಿಸುವಂತಾಗಿರುವುದು ಸಮಾಧಾನದ ಸಂಗತಿ. ಹಾಗಾಗಿಯೇ ಮಾನವೀಯತೆ, ಸಮಾನತೆಯನ್ನು ಪ್ರತಿಪಾದಿಸುವ ಪ್ರಜ್ಞಾವಂತ ಕಪ್ಪು, ಬಿಳಿ, ಕೆಂಪು, ಕಂದು ಮುಂತಾದವರಲ್ಲರೂ ಮುಂಬರುವ ಜನರ ಸಮತೆಯ ಬದುಕಿಗಾಗಿ ‘ಮಾನವರೆಲ್ಲರೂ ಸಮಾನರು’ ಎಂಬ ಧ್ಯೇಯದೊಂದಿಗೆ ವ್ಯವಸ್ಥೆಯ ವಿರುದ್ಧ ಇಂದು ಬೀದಿಗಿಳಿದಿದ್ದಾರೆ.

ಡಾ. ಅಮರ್ ಕುಮಾರ್, ವೈದ್ಯರು, ಜನಪರ ಚಿಂತಕರು, ಅಮೆರಿಕ.


ಇದನ್ನು ಓದಿ: ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ: ಚಳವಳಿಗಳ ಗೆಲುವು ಮತ್ತು ಸೋಲು – ನ್ಯಾಯಪಥ ಸಂಪಾದಕೀಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...