ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾದ ತನಿಖೆಗೆ ಸಹಕರಿಸುವಂತೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಶುಕ್ರವಾರ ಭಾರತಕ್ಕೆ ಆಗ್ರಹಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡ ಇದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು.
ಭಾರತವು ಕೆನಡಾದೊಂದಿಗೆ ಸಹಕರಿಸುವುದು ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ. ಈ ಸಮಸ್ಯೆ ಪರಿಹರಿಸಲು ಅವರು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಈ ವಿಚಾರದಲ್ಲಿ ಭಾರತವು ಕೆನಡಾದೊಂದಿಗೆ ಕೆಲಸ ಮಾಡುತ್ತದೆ ಮತ್ತು ನಾನು ಈ ಬಗ್ಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಕೆನಡಾ ನಮ್ಮ ಇಬ್ಬರು ಆಪ್ತ ಸ್ನೇಹಿತರು ಮತ್ತು ಪಾಲುದಾರರು ಮತ್ತು ಇಬ್ಬರೂ ಸ್ನೇಹಿತರಾಗಿ ಅವರು ಹೊಂದಿರುವ ಯಾವುದೇ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳನ್ನು ಪರಿಹರಿಸುವುದನ್ನು ನಾವು ನೋಡಲು ಬಯಸುತ್ತೇವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿದರು.
5ನೇ ಭಾರತ-ಯುಎಸ್ 2+2 ಸಂವಾದಕ್ಕಾಗಿ ಬ್ಲಿಂಕನ್ ಮತ್ತು US ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ದೆಹಲಿಗೆ ಆಗಮಿಸಿದ್ದರು. ಭಾರತದ ಕಡೆಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಇಲಾಖೆಯ ಸಚಿವ ಜೈ ಶಂಕರ್ ಅವರು ಮಾತುಕತೆಯಲ್ಲಿ ಭಾಗಿಯಾಗಿದ್ದರು.
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಆರೋಪಗಳ ಬಳಿಕ ಭಾರತ ಮತ್ತು ಕೆನಡಾದ ನಡುವಿನ ಸಂಬಂಧ ಹದಗೆಟ್ಟಿತ್ತು. ಭಾರತ ಮತ್ತು ಕೆನಡಾ ಎರಡೂ ದೇಶಗಳು ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಛಾಟಿಸಿತ್ತು.
ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು ಮತ್ತು ದೇಶದಲ್ಲಿ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಡಿಮೆ ಮಾಡಲು ಕೆನಡಾವನ್ನು ಕೇಳಿಕೊಂಡಿತ್ತು.ಕೆನಡಾ ಈಗಾಗಲೇ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರನ್ನು ಭಾರತದಿಂದ ವಾಪಾಸ್ಸು ಕರೆಸಿಕೊಂಡಿದೆ. ಕಳೆದ ತಿಂಗಳು ಭಾರತವು ಕೆಲವು ವೀಸಾ ಸೇವೆಗಳನ್ನು ಪುನರಾರಂಭಿಸಿದೆ.
ಇದನ್ನು ಓದಿ: ದಲಿತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಸಬ್ ಇನ್ಸ್‌ಪೆಕ್ಟರ್‌ಗೆ ಸ್ಥಳೀಯರಿಂದ ಥಳಿತ


