ಪುಣೆಯಲ್ಲಿ ನಡೆದ 2012ರ ಸರಣಿ ಸ್ಫೋಟ ಪ್ರಕರಣದ ಆರೋಪಿ, 42 ವರ್ಷದ ಟೈಲರ್‌ಗೆ ಬಾಂಬೆ ಹೈಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 20) ಜಾಮೀನು ಮಂಜೂರು ಮಾಡಿದೆ.
ಆರೋಪಿ (ಮೇಲ್ಮನವಿದಾರ) ಮುನಿಬ್ ಮೆಮನ್‌ಗೆ ಜಾಮೀನು ನೀಡುವಾಗ, ಆತ 2012ರಿಂದ ಹನ್ನೊಂದುವರೆ ವರ್ಷಗಳ ಕಾಲ ಬಂಧನದಲ್ಲಿರುವುದನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಶರ್ಮಿಳಾ ದೇಶಮುಖ್ ಅವರ ಪೀಠ ಗಮನಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
“ಮೇಲ್ಮನವಿದಾರ ಕಳೆದ ಹನ್ನೊಂದುವರೆ ವರ್ಷಗಳಿಂದ ಬಂಧನದಲ್ಲಿದ್ದಾರೆ. ವಿಚಾರಣೆಯು ನಿಗದಿತ ಅವಧಿಯೊಳಗೆ ಮುಕ್ತಾಯಗೊಳ್ಳುವ ಯಾವುದೇ ನಿರೀಕ್ಷೆಯಿಲ್ಲ. ಘಟನೆ ಡಿಸೆಂಬರ್ 2012 ರಲ್ಲಿ ನಡೆದಿದ್ದರೂ, 2022ರಲ್ಲಿ ಆರೋಪ ಹೊರಿಸಲಾಗಿದೆ. ಫೆಬ್ರವರಿ 2024ರಲ್ಲಿ ಮೊದಲ ಸಾಕ್ಷಿಯನ್ನು ವಿಚಾರಣೆ ನಡೆಸಲಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ಪ್ರಾಸಿಕ್ಯೂಷನ್ 300 ಸಾಕ್ಷಿಗಳನ್ನು ಉಲ್ಲೇಖಿಸಿದೆ, ಈ ಪೈಕಿ 107 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲು ಮುಂದಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.
“ಇಲ್ಲಿಯವರೆಗೆ ಕೇವಲ 8 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಭಾರತದ ಸಂವಿಧಾನದ 21 ನೇ ವಿಧಿಯಡಿ ತ್ವರಿತ ವಿಚಾರಣೆ ಮೂಲಭೂತ ಹಕ್ಕು” ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.
ಪುಣೆಯ ಪ್ರಸಿದ್ಧ ದಗಡು ಶೇಠ್ ಗಣಪತಿ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಕ್ಕಾಗಿ ಬಂಧಿತನಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸದಸ್ಯ ಕ್ವಾಟಿಲ್ ಸಿದ್ದಿಕ್ ಎಂಬಾತನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜಿಸಲಾಗಿದ್ದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುನಿಬ್ ಮೆಮನ್ ಅನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ : ಶೇ.33 ಮಹಿಳಾ ಮೀಸಲಾತಿ : ದೇಶದ ಎಲ್ಲಾ ವಕೀಲರ ಸಂಘಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್


