ದಲಿತ ಕಾನೂನು ವಿದ್ಯಾರ್ಥಿ ಸೋಮನಾಥ್ ಸೂರ್ಯವಂಶಿ ಅವರ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಬಾಂಬೆ ಹೈಕೋರ್ಟ್ ಆದೇಶಿಸಿದೆ.
2024ರ ನವೆಂಬರ್‌ನಲ್ಲಿ ಭಾರತದ ಸಂವಿಧಾನದ ಪ್ರತಿಕೃತಿಯನ್ನು ಧ್ವಂಸಗೊಳಿಸಿದ್ದನ್ನು ಖಂಡಿಸಿ ಪ್ರತಿಭಟಿಸಿದ ನಂತರ ಪೊಲೀಸರು ಬಂಧಿಸಲ್ಪಟ್ಟವರಲ್ಲಿ ಸೋಮನಾಥ ಸೂರ್ಯವಂಶಿ ಕೂಡ ಒಬ್ಬರು.
ತನ್ನ ಮಗನನ್ನು ಕಾನೂನುಬಾಹಿರವಾಗಿ ಬಂಧಿಸಿದ್ದ ಪೊಲೀಸರು ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದರಿಂದಾಗಿ ಆತ ಡಿಸೆಂಬರ್ 15, 2024ರಂದು ಸಾವನ್ನಪ್ಪಿದ್ದಾನೆ ಎಂದು ಸೋಮನಾಥ್ ಸೂರ್ಯವಂಶಿ ಅವರ ತಾಯಿ ಆರೋಪಿಸಿದ್ದರು.
ಈ ಆರೋಪವನ್ನು ಅಲ್ಲಗಳೆದಿದ್ದ ಪೊಲೀಸರು, ಬಂಧನದ ನಂತರ ಸೂರ್ಯವಂಶಿಗೆ ಎದೆ ನೋವು ಕಾಣಿಸಿಕೊಂಡಿತ್ತು, ಅವರು ಚಡಪಡಿಸುತ್ತಿದ್ದರು. ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದರು.
ತನ್ನ ಮಗನ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ನೊಂದ ಸೂರ್ಯವಂಶಿ ಅವರ ತಾಯಿ, ಹೈಕೋರ್ಟ್ ಮೊರೆ ಹೋಗಿದ್ದರು.
ಕಸ್ಟಡಿ ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪೂರ್ಣಗೊಳಿಸಿದ ಬಳಿಕ, ಅಧಿಕಾರಿಗಳು ಏನು ಮಾಡಬೇಕು ಎಂಬುದರ ಕುರಿತ ಮಾರ್ಗಸೂಚಿಗಳನ್ನು ಸಹ ಅವರು ಕೋರಿದ್ದರು.
ಜುಲೈ 4ರಂದು, ನ್ಯಾಯಮೂರ್ತಿ ವಿಭಾ ವಿ ಕಂಕಣವಾಡಿ ಮತ್ತು ನ್ಯಾಯಮೂರ್ತಿ ಸಂಜಯ್ ಎ ದೇಶಮುಖ್ ಅವರಿದ್ದ ಪೀಠವು, ಪೊಲೀಸರು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ, ಅವರು ಕ್ರಮ ಕೈಗೊಂಡಿಲ್ಲ ಎಂದಿದೆ. ಒಂದು ವಾರದೊಳಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂಬ ವರದಿಗಳನ್ನು ನೋಡಿದ ಹಿಂದೂ ಸಕಲ್ ಸಮಾಜ ಮೋರ್ಚಾ ಮಹಾರಾಷ್ಟ್ರದ ಪರ್ಭಾನಿಯಲ್ಲಿ ನವೆಂಬರ್ 10, 2024ರಂದು ಪ್ರತಿಭಟನೆ ಆಯೋಜಿಸಿತ್ತು.
ಪ್ರತಿಭಟನೆ ವೇಳೆ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಇರಿಸಲಾಗಿದ್ದ ಭಾರತದ ಸಂವಿಧಾನದ ಪ್ರತಿಕೃತಿಯನ್ನು ವ್ಯಕ್ತಿಯೊಬ್ಬ ಧ್ವಂಸಗೊಳಿಸಿದ್ದಾನೆ ಎಂಬ ಆರೋಪಿಸಲಾಗಿತ್ತು. ಇದರ ವಿರುದ್ದ ನವೆಂಬರ್ 11, 2024ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಪ್ರತಿಭಟನೆ ಬಳಿಕ ಪೊಲೀಸರು ಮನೆಗಳ ಮೇಲೆ ದಾಳಿ ನಡೆಸಿದ್ದರು. ಸೋಮನಾಥ ಸೂರ್ಯವಂಶಿ ಸೇರಿದಂತೆ ಹಲವರನ್ನು ಬಂಧಿಸಿದ್ದರು.
ತನ್ನ ಮಗನನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಸಂವಿಧಾನದ ಅಪವಿತ್ರತೆಯ ವಿರುದ್ಧದ ಶಾಂತಿಯುತ ಪ್ರತಿಭಟನೆಯಲ್ಲಿ ಮಾತ್ರ ಆತ ಭಾಗವಹಿಸಿದ್ದ ಎಂದು ಆತನ ತಾಯಿ ಹೇಳಿಕೊಂಡಿದ್ದರು. ಸೋಮನಾಥ್ ಮತ್ತು ಇತರರನ್ನು ಬಂಧಿಸಿದ ನಂತರ ತೀವ್ರವಾಗಿ ಥಳಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಸೋಮನಾಥ್ ಡಿಸೆಂಬರ್ 15, 2024ರಂದು ನ್ಯಾಯಾಂಗ ಬಂಧನದಲ್ಲಿದ್ದಾಗ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲಾದ ತೀವ್ರವಾದ ಗಾಯಗಳು ಸಾವಿಗೆ ಕಾರಣ ಎಂದು ತಿಳಿದು ಬಂದಿತ್ತು.
ನಂತರ, ಸೋಮನಾಥ್ ಅವರ ತಾಯಿ ಜೈಲಿನಲ್ಲಿ ತಮ್ಮ ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನಗಳನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ, ಕಸ್ಟಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಕಸ್ಟಡಿ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಮುಗಿದ ನಂತರದ ಕಾರ್ಯವಿಧಾನದ ಬಗ್ಗೆ ಮಾರ್ಗಸೂಚಿಗಳನ್ನು ನೀಡುವಂತೆಯೂ ಅವರು ಕೋರಿದ್ದರು.
ಪರ್ಭಾನಿಯಿಂದ ದೂರದಲ್ಲಿ ಸದ್ದಿಲ್ಲದೆ ಅಂತ್ಯಕ್ರಿಯೆ ನಡೆಸುವಂತೆ ಪೊಲೀಸರು ತನ್ನ ಮೇಲೆ ಒತ್ತಡ ಹೇರಿದ್ದರು. ಪೊಲೀಸರ ವಿರುದ್ಧ ಪ್ರಕರಣವನ್ನು ಹೂಡದಿರಲು 50 ಲಕ್ಷದ ರೂಪಾಯಿ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಸೋಮನಾಥ್ ಅವರ ತಾಯಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ದರು.
ಆದ್ದರಿಂದ, ಹೈಕೋರ್ಟ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಸರ್ಕಾರ ತನ್ನ ಮಗನ ಸಾವಿಗೆ ಕಾರಣರಾದ ಪೊಲೀಸರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಗುರುತಿಸಬಹುದಾದ ಅಪರಾಧ ಕಂಡು ಬಂದಿದೆ. ಆದ್ದರಿಂದ ಪೊಲೀಸರು ಲಲಿತಾ ಕುಮಾರಿ ಮಾರ್ಗಸೂಚಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ನ್ಯಾಯಾಲಯವು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿಪಡಿಸಿದೆ.
ನಕಲಿ ಪದವಿ ಪ್ರಮಾಣಪತ್ರ: ಯುಪಿ ಡಿಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರಿದ್ಧ ಅರ್ಜಿ ವಜಾ


