ಗಾಜಿಯಾಬಾದ್ ಲೋನಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯ್ಯೂಬ್ ಅವರನ್ನು 4 ವಾರಗಳ ಕಾಲ ಬಂಧಿಸದಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.
ಜೂನ್ ಮೊದಲ ವಾರದಲ್ಲಿ ಗಾಝಿಯಾಬಾದ್ ಲೋನಿಯಲ್ಲಿ ಮುಸ್ಲಿಂ ವೃದ್ಧರೊಬ್ಬರನ್ನು ಯುವಕರು ಥಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ರಾಣಾ ಅಯ್ಯೂಬ್ ಅವರ ವಿರುದ್ಧ FIR ದಾಖಲಾಗಿತ್ತು. FIR ದಾಖಲಾದ ಬೆನ್ನಲ್ಲೇ ರಾಣಾ ಅಯ್ಯೂಬ್ ತಮ್ಮ ಬಂಧನಕ್ಕೆ ತಡೆಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ಜಸ್ಟಿಸ್ ಪ್ರಕಾಶ್ ಡಿ. ನಾಯ್ಕ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠ ರಾಣಾ ಅಯ್ಯೂಬ್ ಅವರ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿತು. ಅಯ್ಯೂಬ್ ಅವರ ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸೂಕ್ತ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿದೆ.
ರಾಣಾ ಅಯ್ಯೂಬ್, ದಿ ವೈರ್, ಮೊಹಮ್ಮದ್ ಜುಬೇರ್, ಸಬಾ ನಕ್ವಿ ಸೇರಿದಂತೆ ಹಲವರು ಘಟನೆಯ ಹಿನ್ನಲೆಯನ್ನು ಪರಿಶೀಲಿಸದೇ ವಿಡಿಯೋವನ್ನು ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಘಟನೆಗೆ ಧರ್ಮದ ಲೇಪನವನ್ನು ನೀಡಿದ್ದರು. ಇದು ಸಮಾಜದಲ್ಲಿನ ಕೋಮು ಸಾಮರಸ್ಯವನ್ನು ಹದಗೆಡಿಸಿದೆ. ಈ ಕಾರಣದಿಂದ ಇವರ ವಿರುದ್ಧ IPC ಸೆಕ್ಷನ್ 153(ದಂಗೆಗೆ ಪ್ರಚೋದನೆ), 153A (ಸಮುದಾಯಗಳ ನಡುವೆ ಧಾರ್ಮಿಕ ದ್ವೇಷ ಹರಡುವ ಕೃತ್ಯ), ಸೆಕ್ಷನ್ 295A, ಸೆಕ್ಷನ್, ಸೆಕ್ಷನ್ 505 (ಅಪರಾಧಿಕ ಕೃತ್ಯಗಳಿಗೆ ಪ್ರಚೋದನೆ), ಸೆಕ್ಷನ್ 120B (ಅಪರಾಧಿಕ ಒಳಸಂಚು) ಗಂಭೀರವಾದ ಅಪರಾಧಿಕ ಸೆಕ್ಷನ್‌ಗಳ ಅಡಿ FIR ದಾಖಲಿಸಿಕೊಳ್ಳಲಾಗಿತ್ತು ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನಲೆ
ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್ ಲೋನಿ ಪ್ರದೇಶದಲ್ಲಿ 72 ವರ್ಷದ ಅಬ್ದುಲ್ ಸಮೀದ್ ಸಫಿ ಎಂಬುವವರನ್ನು ಯುವಕರ ಗುಂಪು ಥಳಿಸುತ್ತಿರುವ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಲವರು ಸಫಿ ಅವರಲ್ಲಿ ಜೈ ಶ್ರೀರಾಮ್ ಪಠಣವನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಹ ಘಾಜಿಯಾಬಾದ್ ಘಟನೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದರು.
ಇದನ್ನು ಓದಿ : ಸರಳ, ಸಜ್ಜನಿಕೆಯ ದಿಟ್ಟ ಹೋರಾಟಗಾರ ದೊರೆಸ್ವಾಮಿಯವರು ನಮಗೆಲ್ಲಾ ಮಾದರಿ


