ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರಾದ ಹೆಚ್.ಆರ್ ಬಸವರಾಜಪ್ಪನವರ ಐದು ದಶಕಗಳ ರೈತ ಹೋರಾಟದ ಕುರಿತ ‘ಹಸಿರು ಹಾದಿಯ ಕಥನ’ ಪುಸ್ತಕ ಮತ್ತು ಸಾಕ್ಷ್ಯ ಚಿತ್ರ ಬಿಡುಗಡೆ ಕಾರ್ಯಕ್ರಮ ಮೇ 25ರ ಬುಧವಾರ ಶಿವಮೊಗ್ಗದಲ್ಲಿ ನಡೆಯಲಿದೆ.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್‌ರವರು ಚಾಲನೆ ನೀಡಲಿದ್ದಾರೆ. ರೈತ ಹೋರಾಟಗಾರರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತರಬಾಳು ಜಗದ್ಗುರುಗಳಾದ ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ನಾಗಮೋಹನ್ ದಾಸ್‌ರವರು ಕೃತಿ ಪರಿಚಯ ಮಾಡಲಿದ್ದು, ಇದೇ ಕಾರ್ಯಕ್ರಮದಲ್ಲಿ ರೈತ ಹೋರಾಟದಲ್ಲಿ ತಮ್ಮ ಬದುಕನ್ನು ಸವೆಸಿದ ಕಡಿದಾಳು ಶಾಮಣ್ಣ ಮತ್ತು ಡಾ.ಬಿ.ಎಂ ಚಿಕ್ಕಸ್ವಾಮಿರವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಹಿರಿಯ ರೈತ ಹೋರಾಟಗಾರ್ತಿ ಅನಸೂಯಮ್ಮ, ಪ್ರಜಾನುಡಿ ಪತ್ರಿಕೆಯ ಸಂಪಾದಕರಾದ ವೀರಭದ್ರಪ್ಪ ಬಿಸ್ಲಳ್ಳಿ, ದಲಿತ ಸಂಘರ್ಷ ಸಮಿತಿಯ ಟಿ.ಎಚ್ ಹಾಲೇಶಪ್ಪ, ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್ ಮತ್ತು ಪತ್ರಕರ್ತರಾದ ಗಿರೀಶ್ ತಾಳಿಕಟ್ಟೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: RSS, ಬಿಜೆಪಿಯ ಪಠ್ಯ ಪರಿಷ್ಕರಣೆಗೆ ವಿರೋಧ: ತನ್ನ ಪಠ್ಯ ಕೈಬಿಡಲು ದೇವನೂರ ಮಹಾದೇವ ಪತ್ರ
80ರ ದಶಕದಲ್ಲಿ ಆರಂಭವಾದ ರೈತ ಚಳವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿರುವ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್ ಮನೆ ಜಪ್ತಿ ಮಾಡುವ ಹೋರಾಟ ನಡೆದಿತ್ತು. ಅಲ್ಲಿಂದ ಆರಂಭವಾಗಿ ದೆಹಲಿಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ನಿರ್ದೇಶಕರ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದರು. ನಾಗಸಮುದ್ರ ಗೋಲಿಬಾರ್ ವಿರುದ್ಧ ಹಲವು ವರ್ಷಗಳ ಕಾಲ ರೈತ ಹೋರಾಟ ಮುನ್ನಡೆಸಿದ್ದ ಎಚ್.ಆರ್. ಬಸವರಾಜಪ್ಪನವರ ಐದು ದಶಕದ ಸುದೀರ್ಘ ಹೋರಾಟದ ಕಥನವನ್ನು ಪತ್ರಕರ್ತರಾದ ಗಿರೀಶ್ ತಾಳಿಕಟ್ಟೆ ಮತ್ತು ಹೋರಾಟಗಾರರಾದ ಕೆ.ಎಲ್ ಅಶೋಕ್ ದಾಖಲು ಮಾಡಿದ್ದಾರೆ. ಈ ಕೃತಿಯನ್ನು ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿದೆ.


