2022ರ ಹದಿನೈದನೆ ಆವೃತಿಯ ಐ.ಪಿ.ಎಲ್ ಕೊರೊನಾ ಸಾಂಕ್ರಾಮಿಕ ರೋಗದ ಕರಿನೆರಳ ಭಯದ ನಡುವೆಯೂ, ಭಾರತದಲ್ಲಿಯೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಂಗವಿಲ್ಲದೆ ನೆರವೇರುತ್ತಿದೆ. ಈ ಬಾರಿಯ ಐ.ಪಿ.ಎಲ್‌ನಲ್ಲಿ ಗುಜರಾತ್ ಟೈಟನ್ಸ್, ಲಕ್ನೋ ಸೂಪರ್ ಜಯಂಟ್ಸ್ ಎಂಬ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ಹತ್ತು ತಂಡಗಳು ಟ್ರೋಫಿಗಾಗಿ ಸೆಣಸುತ್ತಿವೆ. ಈ ವರ್ಷದ ಮಾರ್ಚ್ 26ರಿಂದ ಪ್ರಾರಂಭವಾದ ಈ ಕ್ರಿಕೆಟ್ ಜ್ವರ ಎರಡು ತಿಂಗಳಿಗೂ ಮೀರಿ ಸಾಗಿ, ಮೇ 29ರಂದು ಫೈನಲ್ ಪಂದ್ಯದೊಂದಿಗೆ,
ಅದ್ಧೂರಿತನದಲ್ಲಿ ಮುಕ್ತಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಟ್ಟು ಈ 74 ಪಂದ್ಯಗಳು ಚುಟುಕು ಕ್ರಿಕೆಟ್ ಆಗಿರುವುದರಿಂದ ಪ್ರತಿ ಪಂದ್ಯವೂ ರೋಮಾಂಚನದೊಂದಿಗೆ ಪ್ರೇಕ್ಷಕರಿಗೆ ಭರಪೂರವಾದ ಮನರಂಜನೆಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ ನಡೆದಿರುವ 14 ಆವೃತಿಗಳಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಅಂದರೆ ಅತಿ ಹೆಚ್ಚು ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತ ತಂಡದ ’ಕೂಲ್ ಕ್ಯಾಪ್ಟನ್’ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಂತರದ ಸ್ಥಾನದಲ್ಲಿ ಇದ್ದು, ಅದಕ್ಕೆ ನಾಲ್ಕು ಬಾರಿ ವಿಜಯಲಕ್ಷ್ಮಿ ಒಲಿದಿದ್ದಾಳೆ. ಹೈದರಾಬಾದ್ ಮತ್ತು ಕೋಲ್ಕತ್ತಾ ತಂಡ ಎರಡು ಬಾರಿ, ರಾಜಸ್ತಾನ್ ರಾಯಲ್ಸ್ ಒಂದು ಬಾರಿ ಐ.ಪಿ.ಎಲ್ ಟ್ರೋಫಿಯನ್ನು ಗೆದ್ದು, ಗೆಲುವಿನ ನಗೆಯನ್ನು ಬೀರಿದ್ದಾರೆ. ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್‍ಸ್ ಬೆಂಗಳೂರು, ಟ್ರೋಫಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಈ ಸಲವಾದರೂ ಈ ಮೂರು ತಂಡಗಳಲ್ಲಿ ಒಂದು ತಂಡ ಫೈನಲ್ ಗೆದ್ದು, 40 ಕೋಟಿ ನಗದು ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಳ್ಳುತ್ತದೆಯೇ? ಕಾದುನೋಡಬೇಕಾಗಿದೆ. ಯುವಕರೇ ಹೆಚ್ಚು ವೀಕ್ಷಿಸುವ ಈ ಐ.ಪಿ.ಎಲ್. ಪ್ರತಿ ವರ್ಷ ಪರೀಕ್ಷಾ ತಿಂಗಳುಗಳಾದ ಏಪ್ರಿಲ್/ಮೇನಲ್ಲಿ ನಡೆಯುತ್ತದೆ. ಇದರಿಂದ ಯುವಕರ ಪರೀಕ್ಷಾ ಓದಿಗೆ ತೊಡಕಾಗುತ್ತದೆ ಎಂದು ಅನೇಕ ಪೋಷಕರು ಇದಕ್ಕೆ ಹಿಡಿಶಾಪ ಹಾಕುವುದು ಉಂಟು.
ಏನೇ ಆಗಲಿ 2008ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಈ ಐ.ಪಿ.ಎಲ್ ಯಾವ ತೊಡಕಿಲ್ಲದೇ ನಡೆದುಕೊಂಡು ಬಂದಿದೆ. ಈ ವರ್ಷ ಬಿ.ಸಿ.ಸಿ.ಐ ಎರಡು ಹೊಸ ತಂಡಗಳಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ, 12,71.5 ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸಿತು. ಈ ಐ.ಪಿ.ಎಲ್. ಚುಟುಕು ಕ್ರಿಕೆಟ್‌ನಿಂದಾಗಿ ಭಾರತೀಯ ಕ್ರಿಕೆಟ್ ಸಂಸ್ಥೆಗೆ, ಐ.ಪಿ.ಎಲ್ ಆಡುವ ಆಟಗಾರರಿಗೆ ಕೋಟಿಗಟ್ಟಲೆ ಹಣ ಹರಿದುಬರುತ್ತದೆ. ಫ್ರಾಂಚೈಸಿಗಳು (ತಂಡದ ಮಾಲೀಕರು)
ಆಟಗಾರರಿಗೆ ಹಣಕೊಟ್ಟು ತಮ್ಮ ತಂಡಕ್ಕೆ ಆಡಲು ಬಿಡ್ಡಿಂಗ್‌ನಲ್ಲಿ ಕೊಂಡುಕೊಳ್ಳುತ್ತಾರೆ. ಒಂದು ತಂಡಕ್ಕೆ ಕನಿಷ್ಠ ಹದಿನೆಂಟು, ಗರಿಷ್ಠ ಇಪ್ಪತ್ತೈದು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಗರಿಷ್ಠ ಎಂಟು ವಿದೇಶಿ ಆಟಗಾರರು ಮಾತ್ರ ಒಂದು ತಂಡದಲ್ಲಿ ಆಡಬಹುದಾಗಿದೆ. ಒಬ್ಬ ನುರಿತ ವ್ಯಕ್ತಿಯು ಈ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತಾನೆ. ಪ್ರತಿಯೊಂದು ತಂಡದ ಆಯ್ಕೆಗಾಗಿ ತಂಡದ ಮಾಲೀಕನ ಜೊತೆ ಆಡಳಿತ ಮಂಡಳಿಯ ಸದಸ್ಯರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಒಂದು ಫ್ರಾಂಚೈಸಿಯ ಬಳಿ ಗರಿಷ್ಠ 90 ಕೋಟಿ ಇದ್ದು, ಅದು ಕನಿಷ್ಠ 67.5 ಕೋಟಿ ಹಣ ತನ್ನ ಕಿಸೆಯಿಂದ ಖರ್ಚು ಮಾಡಬೇಕಾಗುತ್ತದೆ. ಈ ಬಾರಿಯ ಐ.ಪಿ.ಎಲ್‌ಗಾಗಿ ಒಟ್ಟು 1214 ಆಟಗಾರರು ಆಯ್ಕೆ ಬಯಸಿದ್ದು ಫ್ರಾಂಚೈಸಿಗಳ ಇಚ್ಛೆಯಂತೆ 590 ಆಟಗಾರರನ್ನು ಮಾತ್ರ ಪರಿಗಣಿಸಿ ಶಾರ್ಟ್‌ಲಿಸ್ಟ್ ಮಾಡಲಾಯಿತು. ಹಿಂದಿನ ಆವೃತ್ತಿಯಲ್ಲಿ ಆಡಿದ್ದ ಎಂಟು ತಂಡಗಳು ತಲಾ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಹೊಸ ಎರಡು ತಂಡಗಳಿಗೆ ಫ್ರಾಂಚೈಸಿಗಳ ಇಚ್ಛೆಯಂತೆ ಮೂರು ಆಟಗಾರರನ್ನು ಹರಾಜಿಗೆ ಮೊದಲೇ ಆ ತಂಡ ಸೇರಲು ಅನುವು ಮಾಡಿಕೊಡಲಾಗಿತ್ತು.
23 ವರ್ಷ ವಯಸ್ಸಿನ ಇಶಾನ್ ಕಿಶನ್ ಎಂಬ ಬಿಹಾರದ ಪಟ್ನಾ ನಗರದ ವಿಕೆಟ್ ಕೀಪರ್-ಎಡಗೈ ಬ್ಯಾಟ್ಸ್‌ಮನ್ ಐ.ಪಿ.ಎಲ್ 2022ರ ಹರಾಜಿನಲ್ಲಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗುವುದರ ಮೂಲಕ ಅತಿಹೆಚ್ಚು ಹಣಕ್ಕೆ ಮಾರಾಟವಾದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾದನು. ಈತ ಭಾರತ ತಂಡದ ಪರ ಆಡಿರುವುದು ಕೇವಲ ಮೂರು ಅಂತಾರಾಷ್ಟ್ರೀಯ ಹಾಗೂ ಹತ್ತು ಟಿ20 ಪಂದ್ಯಗಳು. ಅತಿಹೆಚ್ಚು ಹಣಕ್ಕೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು 29 ವರ್ಷ ವಯಸ್ಸಿನ ಉತ್ತರ ಪ್ರದೇಶದ ಆಗ್ರಾ ನಗರದ ದೀಪಕ್ ಚಹರ್. ಈತನಿಗೆ 14 ಕೋಟಿ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ
ಸೇರಿಸಿಕೊಂಡಿತು. ಈತನು ಕೂಡ ಭಾರತ ತಂಡದ ಪರ ಆಡಿರುವುದು ಏಳು ಒಂದು ದಿನದ ಮತ್ತು ಇಪ್ಪತ್ತು ಟಿ20 ಪಂದ್ಯಗಳು. ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ 12.25 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್‍ಸ್‌ಗೆ, ಲಿಯಾಮ್ ಲಿವಿಂಗ್‌ಸ್ಟೋನ್ 11.5 ಕೋಟಿ ಪಂಜಾಬ್ ಕಿಂಗ್ಸ್‌ಗೆ, ಶಾರ್ದೂಲ್ ಠಾಕೂರ್ 10.75 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೇವಲ ಎರಡು ತಿಂಗಳುಗಳ ಕಾಲ ನಡೆಯುವ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಒಬ್ಬ ಆಟಗಾರ ಆಡಬಹುದಾದ ಗರಿಷ್ಠ ಇಪ್ಪತ್ತು ಪಂದ್ಯಗಳಿಗೆ ಕೋಟಿಗಟ್ಟಲೆ ಹಣ ಪಡೆಯುತ್ತಿರುವುದು ಆಟ ಗೌಣವಾಗಿ, ಹಣವೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿರುವ ಕಾಲಘಟ್ಟದ ಜೀವಂತ ಸಾಕ್ಷಿಯಾಗಿದೆ.
ಮ್ಯಾಚ್ ಫಿಕ್ಸಿಂಗ್‌ನಂತಹ ಪಿಡುಗು ಸದ್ದು ಮಾಡದಿದ್ದ, ಕ್ರಿಕೆಟ್‌ನ ಬಗೆಗಿನ ಅಭಿಮಾನ ಉತ್ತುಂಗಸ್ಥಿತಿಯಲ್ಲಿದ್ದ ಕಾಲಘಟ್ಟದಲ್ಲಿ 1983ರ ವಿಶ್ವಕಪ್‌ಅನ್ನು ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡಿದ್ದು ಈಗ ಇತಿಹಾಸ. ಕ್ರಿಕೆಟ್ ಅಭಿಮಾನಿಗಳು ಈ ವಿಶ್ವಕಪ್‌ನ ವೀಕ್ಷಕ ವಿವರಣೆಯನ್ನು ರೇಡಿಯೋದಲ್ಲಿ ಕೇಳಿ ಆನಂದಪಡುತ್ತಿದ್ದ ಕಾಲದಲ್ಲಿ ಭಾರತೀಯರಿಗೆ ಈ ಸುದ್ದಿ ಅತೀವ ಸಂತೋಷವನ್ನುಂಟು ಮಾಡಿತ್ತು. ಕ್ರಿಕೆಟ್ ಆಟಗಾರರನ್ನು ’ಹೀರೋ’ಗಳ ರೀತಿ ನೋಡಲಾಯಿತು. ಜಿಂಬಾಬ್ವೆಯ ವಿರುದ್ಧ ಭಾರತ ತಂಡ 17 ರನ್ನುಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ದುಸ್ಥಿತಿಯಲ್ಲಿದ್ದಾಗ ನಾಯಕ ಕಪಿಲ್ ದೇವ್ ಅಜೇಯ 175 ರನ್ನುಗಳನ್ನು ಹೊಡೆದು ತಂಡಕ್ಕೆ ಆಸರೆಯಾಗಿ ಗೆಲುವಿನ ರೂವಾರಿಯಾದರು. ಫೈನಲ್ಸ್‌ನಲ್ಲಿ ಆಗಿನ ಬಲಿಷ್ಠ ತಂಡ ವಿವಿಯನ್ ರಿಚರ್ಡ್ಸ್ ನೇತೃತ್ವದ ವೆಸ್ಟ್ ಇಂಡೀಸ್‌ಅನ್ನು ಎದುರಿಸಬೇಕಾಗಿತ್ತು. ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ’ಬಾಡಿ ಲೈನ್’ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ದೇಹದ ರಕ್ಷಣೆಗೆ ಸರಿಯಾದ ಪರಿಕರಗಳು ಇರಲಿಲ್ಲ. ಹೆಲ್ಮೆಟ್‌ಗೆ ಮುಖವನ್ನು ಮುಚ್ಚುವ ತಂತಿಯ ಆಸರೆಯೂ ಇರಲಿಲ್ಲ. ಆದರೂ ದಿಟ್ಟವಾಗಿ ಅವರ ಕೈಯಿಂದ ಬರುತ್ತಿದ್ದ ಬೆಂಕಿಯುಂಡೆಯಂತಹ ಚೆಂಡುಗಳನ್ನು ಎದುರಿಸಿ, 183 ರನ್ನುಗಳನ್ನು ಹೊಡೆದು ವೆಸ್ಟ್ ಇಂಡೀಸನ್ನು 140 ರನ್ನುಗಳಿಗೆ ಕಟ್ಟಿ ಹಾಕಿ ಗೆಲುವಿನ ದಡ ಸೇರಿದರು. ಆಗ ಇವರ ಪಾಲಿಗೆ ಸಿಕ್ಕ ಪಂದ್ಯ ಶುಲ್ಕ ದಿನಕ್ಕೆ ತಲಾ 200 ರೂಗಳಂತೆ ಇಡೀ ಟೂರ್ನಿಗೆ 2100 ರೂಗಳು. ಈಗ ರಾಜ್ಯ ದೇಶ ಮಟ್ಟದ ತಂಡಕ್ಕಲ್ಲ, ಕೇವಲ ಐ.ಪಿ.ಎಲ್ ಆಡಿದರೆ ಸಾಕು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬಹುದು. ಇಂತಹ ಮನೋಭಾವನೆ ಯುವಕರಲ್ಲಿ ಮೂಡಿ ಅವರು ನೈಜ ತಾಂತ್ರಿಕ ಆಟದ ಕಡೆ ಗಮನ ಹರಿಸುತ್ತಿಲ್ಲ.
ಭಾರತ ಜೂನಿಯರ್ 19 ವರ್ಷ ವಯಸ್ಸಿನ ತಂಡದಲ್ಲಿ ಆಡಿ ಬಂದಿರುವ, ರಾಜ್ಯ ತಂಡವನ್ನು ಪ್ರತಿನಿಧಿಸಿ ಬಂದಿರುವ ಯುವ ಪ್ರತಿಭಾವಂತ ಆಟಗಾರರು ಈ ಟೂರ್ನಿಯ ಭಾಗವಾಗಿದ್ದಾರೆ. ಅಭಿಶೇಕ್ ಶರ್ಮ, ಉಮ್ರಾನ್ ಮಲಿಕ್, ರಯಾನ್ ಪರಾಗ್, ರಿಂಕು ಸಿಂಗ್, ಬಡೋನಿ, ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್‌ರಂತಹ ದೇಶಿಯ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಉಮ್ರಾನ್ ಮಲಿಕ್ 157 ಕಿ.ಮೀ ವೇಗದಲ್ಲಿ ಚೆಂಡನ್ನು ಬೌಲ್ ಮಾಡಿ ವಿಶ್ವದ ಗಮನವನ್ನು ತನ್ನ ಕಡೆಗೆ ಸೆಳೆದಿದ್ದಾನೆ. ಮುಂದೊಂದು ದಿನ ಈತ ಭಾರತ ತಂಡವನ್ನು ಪ್ರತಿನಿಧಿಸಬಹುದು. ಹೀಗೆ ಬೇರೆ ಯುವ ಆಟಗಾರರು ಈ ಸಾಲಿನಲ್ಲಿರಬಹುದು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಹಣದ ವ್ಯಾಮೋಹ ಮೂಡುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದೇಶವನ್ನು ಪ್ರತಿನಿಧಿಸಬೇಕೆಂಬ ಛಲ ಪೂರ್ಣಪ್ರಮಾಣದಲ್ಲಿ ಮೂಡುತ್ತಿಲ್ಲ. ಕ್ರಿಕೆಟ್ ಅಕಾಡೆಮಿಗಳಿಗೆ ಸೇರಿಕೊಳ್ಳುವ ಸಣ್ಣ ಮಕ್ಕಳು ಕೂಡ ಐ.ಪಿ.ಎಲ್. ಪಂದ್ಯಗಳನ್ನು ನೋಡಿ, ತಾಂತ್ರಿಕವಾಗಿ ಉತ್ತಮವಾದ, ಶಾಸ್ತ್ರೀಯಬದ್ಧವಾದ ಆಟವನ್ನು ಕಲಿತುಕೊಳ್ಳಲು ಇಷ್ಟಪಡುತ್ತಿಲ್ಲ. ಕಲಿಯುವವರಿಗೆ ಕ್ರಿಕೆಟ್ ಎಂದರೆ ಕೇವಲ ಸಿಕ್ಸರ್, ಫೋರ್ ಮಾತ್ರವಲ್ಲ ಇದರಲ್ಲಿ ತಾಂತ್ರಿಕ ನೈಪುಣ್ಯತೆಯೂ ಅಡಕವಾಗಿದ್ದು, ಅದು ಮುಖ್ಯ ಎಂದು ಹೇಳಿಕೊಡುವಷ್ಟರ ಮಟ್ಟಿಗೆ ಅಲ್ಲಿನ ತರಬೇತುದಾರರಿಗೆ (ಕೋಚ್) ಸಾಕುಸಾಕಾಗುತ್ತದೆ. ಭವಿಷ್ಯದಲ್ಲಿ ಎಲ್ಲಾ ತರಬೇತುದಾರರಿಗೆ ಇದೊಂದು ಸವಾಲೇ ಸರಿ.
ಆಟಗಾರರು ಕ್ರಿಕೆಟ್ ಆಡಿಯೇ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದರೂ, ಅವರಿಗೆ ಹಣದ ದಾಹ ಕಡಿಮೆಯಾಗಿಲ್ಲವೆನಿಸುತ್ತಿದೆ. ಏಕೆಂದರೆ ಅವರು ’ಆನ್‌ಲೈನ್ ಗೇಮ್’ಗಳಾದ ಡ್ರೀಮ್11, ಎಂ.ಪಿ.ಎಲ್, ಮೈ11ಸರ್ಕಲ್, ವಿನ್‌ಜ಼ೋಗಳಂತಹ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಆಟದ ಮೂಲಕ ಮಾದರಿಯಾಗಬೇಕಾಗಿದ್ದ ಆಟಗಾರರು ಹಣವನ್ನು ಕಳೆದುಕೊಳ್ಳುವ, ವ್ಯಸನಕಾರಿಯಾದ ಆನ್‌ಲೈನ್ ಗೇಮ್‌ಗಳ ದಾಸರಾಗುವಂತೆ ಜನಸಾಮಾನ್ಯರಿಗೆ ಕರೆ ಕೊಡುತ್ತಿದ್ದಾರೆ. ಹೀಗೆ ಮಾಡುವುದರಿಂದಲೂ ಅವರಿಗೆ ಹಣ ಸಂಪಾದನೆಯಾಗುತ್ತಿದೆ. ಒಟ್ಟಿನಲ್ಲಿ ಐ.ಪಿ.ಎಲ್. ಎಲ್ಲಾ ದೃಷ್ಟಿಕೋನಗಳಿಂದ ಆಟಕ್ಕಿಂತ ಹಣ ಪ್ರಧಾನವಾಗಿರುವ ಪಂದ್ಯಕೂಟವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಈ ಹಣದ ಸಂತೆಯಲ್ಲಿ ಆಟಗಾರರು, ಫ್ರಾಂಚೈಸಿಗಳು, ಜಾಹಿರಾತುದಾರರು, ಕ್ರಿಕೆಟ್ ಬೋರ್ಡ್‌ಗಳು, ತಂತ್ರಜ್ಞರು, ವೀಕ್ಷಕ ವಿವರಣೆಗಾರರು, ತಂಡಗಳ ಆಡಳಿತ ಮಂಡಳಿಗಳು, ತರಬೇತುದಾರರು, ಆಯ್ಕೆದಾರರು……. ಹೀಗೆ ಅನೇಕರು ತಮಗೆ ಸಿಕ್ಕಷ್ಟು ಬಾಚಿಕೊಳ್ಳುತ್ತಿದ್ದಾರೆ.
ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: IPL2022: ಸತತ ಮುಗ್ಗರಿಸುತ್ತಿರುವ ದಿಗ್ಗಜ ತಂಡಗಳು – ಗೆಲುವಿನ ಅಲೆಯಲ್ಲಿ ಹೊಸ ತಂಡಗಳು