Homeರಂಜನೆಕ್ರೀಡೆಮಹಿಳಾ ಕ್ರಿಕೆಟ್ ನಡೆದು ಬಂದ ಹಾದಿ

ಮಹಿಳಾ ಕ್ರಿಕೆಟ್ ನಡೆದು ಬಂದ ಹಾದಿ

- Advertisement -
- Advertisement -

ಅಕ್ಟೋಬರ್ 27, 2022 ಭಾರತದ ಮಹಿಳಾ ಕ್ರಿಕೆಟ್‌ನ ಇತಿಹಾಸದಲ್ಲಿ ಮರೆಯಲಾರದ ದಿನ. ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಸಂಭ್ರಮಿಸಿದ ದಿನ. ಭಾರತ ಕ್ರಿಕೆಟ್ ಮಂಡಳಿಯು ಅಂತಾರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಮಹಿಳಾ ಆಟಗಾರ್ತಿಯರಿಗೂ “ಸಮಾನ ವೇತನ” ಘೋಷಣೆ ಮಾಡಿದೆ. ನ್ಯೂಜಿಲ್ಯಾಂಡ್ ಈಗಾಗಲೇ ಈ ಕ್ರಮವನ್ನು ವಹಿಸಿದ ಮೊದಲ ರಾಷ್ಟ್ರವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ದಿಟ್ಟ ನಿರ್ಧಾರ ಕೈಗೊಂಡಿರುವುದು ಮಹತ್ವದ್ದಾಗಿದೆ. ಪುರುಷ ಕ್ರಿಕೆಟಿಗರಂತೆ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನದ ಪಂದ್ಯಕ್ಕೆ 6ಲಕ್ಷ, ಟಿ20 ಪಂದ್ಯಕ್ಕೆ 3ಲಕ್ಷ ರೂಗಳನ್ನು ಮಹಿಳೇ ಕ್ರಿಕೆಟಿಗರು ಪಡೆದುಕೊಳ್ಳಲಿದ್ದಾರೆ. ಪುರುಷರ ಆಟವೆಂಬಂತೆ ಕಾಣಲಾಗುವ ಕ್ರಿಕೆಟ್‌ನಲ್ಲಿ ಮಹಿಳೆಯರು ತಮ್ಮ ಗುರುತನ್ನು ಸ್ಥಾಪಿಸಲು ಹರಸಾಹಸ ಪಡಬೇಕಾಯಿತು. ಲಿಂಗಾಧಾರಿತ ಶೋಷಣೆಯಿಂದ ಸಮಾಜದಲ್ಲಿ ದಮನಕ್ಕೆ ಒಳಗಾಗಿರುವುದರಿಂದ ಮಹಿಳೆಯರು ಇತರ ವಲಯಗಳಂತೆಯೇ ತಮ್ಮ ಸ್ಥಾನವನ್ನು ಸಾಬೀತುಮಾಡಲು ಹೆಣಗಾಡಬೇಕಾಯಿತು. ಮಹಿಳೆಯರಿಗೆ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ ಎಂಬ ಸ್ಥಾಪಿತ ಭ್ರಮೆಯಿಂದ ಸಮಾಜವನ್ನು ಹೊರತರಲು ಬಹಳ ವರ್ಷಗಳೇ ಬೇಕಾದವು. ಮಹಿಳಾ ಕ್ರಿಕೆಟ್ ಮೊದಲಿನಿಂದಲೂ ಸಾರ್ವಜನಿಕ ಅಂಗೀಕಾರವನ್ನು ಪಡೆಯಲು ಇನ್ನಿಲ್ಲದ ಕಸರತ್ತು ಮಾಡಿದೆ. ಆದರೆ ಇತ್ತೀಚೆಗೆ ತಮ್ಮ ಅದ್ಭುತ ಪ್ರದರ್ಶನದಿಂದ ಕ್ರಿಕೆಟ್‌ಪ್ರಿಯರು ತಲೆತೂಗುವಂತೆ ಹಾಗೂ ತಾವು ಪ್ರತಿನಿಧಿಸುವ ರಾಷ್ಟ್ರಗಳು ಹೆಮ್ಮೆಪಡುವಂತೆ ಮಾಡಿದ್ದಾರೆ.

ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ವಲಯ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ದೇಶೀಯ ಮಹಿಳಾ ಕ್ರಿಕೆಟ್ ಇದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾದ ಸ್ವೀಕಾರಾರ್ಹತೆಯೊಂದಿಗೆ ಮಹಿಳಾ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಹಾಗಾಗಿ ಈ ಮಹಿಳಾ ಕ್ರಿಕೆಟ್‌ನ ಉಜ್ವಲ ಭವಿಷ್ಯಕ್ಕೆ ಅದರ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಬೇಕಾಗಿದೆ.

ಇಂಗ್ಲೆಂಡಿನಲ್ಲಿ ಕ್ರಿಕೆಟ್ ಪ್ರಾರಂಭವಾಗಿರುವುದರಿಂದ ಈ ನೆಲದಲ್ಲಿ ನಡೆದ ಪಂದ್ಯಾವಳಿಗಳ ಹಿನ್ನೆಲೆಯಲ್ಲಿಯೇ ಕ್ರಿಕೆಟ್‌ನ ಪರಂಪರೆಯ ಹೆಜ್ಜೆ ಗುರುತುಗಳನ್ನು ಕಂಡುಹಿಡಿಯಬೇಕಾಗಿದೆ. ಮಹಿಳೆಯರ ಕ್ರಿಕೆಟಿಗೂ 3-4 ಶತಮಾನಗಳ ಇತಿಹಾಸವಿದೆ. 1745ರಲ್ಲಿ ರೀಡಿಂಗ್ ಮರ್ಕ್ಯುರಿ ಸುದ್ದಿಪತ್ರಿಕೆಯ ಪ್ರಕಾರ ಮೊದಲ ದಾಖಲಿತ ಪಂದ್ಯವು ಸರ್ರೆಯಲ್ಲಿ ನಡೆಯಿತು. ಇದು ಬ್ರಾಮ್ಲಿಯ ಹನ್ನೊಂದು ದಾಸಿಯರು ಹಾಗೂ ಹ್ಯಾಮಲ್ಟನ್ನಿನ ಹನ್ನೊಂದು ದಾಸಿಯರ ನಡುವೆ ಜರುಗಿತು. ಮಹಿಳಾ ಕ್ರಿಕೆಟ್‌ನ ಇತಿಹಾಸದ ಪುಟ ಇಲ್ಲಿಂದ ತೆರೆದುಕೊಳ್ಳುತ್ತದೆ. ಆ ಮೊದಲ ಪಂದ್ಯದಿಂದ ಇಲ್ಲಿಯವರೆಗೆ ಮಹಿಳೆಯರು ಬಹಳ ದೂರ ಪ್ರಯಾಣ ಮಾಡಿದ್ದಾರೆ. ಅಧಿಕೃತವಾಗಿ ಮಹಿಳಾ ಕ್ರಿಕೆಟ್ ಅಸೋಸಿಯೇಷನನ್ನು 1926ರಲ್ಲಿ ಸ್ಥಾಪಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4ರಂದು ಲಂಡನ್ನಿನ ವಿಕ್ಟೋರಿಯಾ ನಿಲ್ದಾಣದ ಬಳಿ ಮೊದಲ ಸಭೆ ನಡೆಯಿತು. ಹಾಜರಿದ್ದವರಲ್ಲಿ ಒಬ್ಬರಾದ ಮಿಸ್ ಕ್ಯಾಥ್ಲೀನ್ ಡೊಮನ್ “ಮಹಿಳಾ ಕ್ರಿಕೆಟ್‌ಗಾಗಿ ಕೇಂದ್ರೀಯ ಸಂಘ”ದ ರಚನೆಯನ್ನು ಪ್ರಸ್ತಾಪಿಸಿದರು. ಇದು ಹೆಚ್ಚು ಮತಗಳ ಮೂಲಕ ಅಂಗೀಕಾರಗೊಂಡಿತು. ಇದರಿಂದ ಮಹಿಳಾ ಕ್ರಿಕೆಟ್ ಅಸೋಸಿಯೇಶನ್ (WCA) ಹುಟ್ಟಿಕೊಂಡಿತು. ಇದು 1998ರವರೆಗೆ ಇಂಗ್ಲೆಂಡ್‌ನಲ್ಲಿ ಮಹಿಳಾ ಕ್ರಿಕೆಟ್‌ನ ಮಂಡಳಿಯಾಗಿ ಉಳಿಯಿತು. ಮಹಿಳಾ ಕ್ರಿಕೆಟ್ ಅಸೋಸಿಯೇಷನ್‌ನ ಮೊದಲ ಸಭೆಯಲ್ಲಿ ಎರಡು ಗುರಿಗಳನ್ನು ಹೊಂದಲಾಯಿತು. ಮೊದಲನೆಯದು ಇಂಗ್ಲೆಂಡ್ ದೇಶದಾದ್ಯಂತ ಮಹಿಳಾ ಕ್ರಿಕೆಟ್ ಕ್ಲಬ್‌ಗಳ ಸ್ಥಾಪನೆಯನ್ನು ಪ್ರೋತ್ಸಾಹಿಸುವುದು, ಎರಡನೆಯದು ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಅಲ್ಲಿ ಸೇರಿಸುವುದು. ಈ ಉದ್ದೇಶದ ಅನ್ವಯ ಅನೇಕ ಹುಡುಗಿಯರು ಶಾಲೆ, ಕಾಲೇಜುಗಳನ್ನು ಬಿಟ್ಟು ಕ್ರಿಕೆಟ್ ಆಡುವ ಅವಕಾಶವನ್ನು ಬಳಸಿಕೊಂಡರು. 1938ರ ಹೊತ್ತಿಗೆ 18 ಕಾಲೇಜುಗಳು ಹಾಗೂ 85 ಶಾಲೆಗಳನ್ನು ಮಹಿಳಾ ಕ್ರಿಕೆಟ್ ಅಸೋಸಿಯೇಷನ್‌ನ ಜೊತೆ ಸಂಯೋಜನೆಗೊಳಿಸಲಾಯಿತು. 105 ಕ್ಲಬ್‌ಗಳನ್ನು ಹಾಗೂ 18 ಕೌಂಟಿ ಅಸೋಸಿಯೇಷನ್‌ಗಳನ್ನು ರಚಿಸಲಾಯಿತು. ಇದರಿಂದ ಇಂಗ್ಲೆಂಡ್‌ನಲ್ಲಿ ಸಂಘಟಿತವಾದ ರಾಷ್ಟ್ರೀಯ ಪಂದ್ಯಾವಳಿಗಳ ಸ್ಪರ್ಧೆಗೆ ಅಡಿಪಾಯ ಹಾಕಲಾಯಿತು. ಇಂಗ್ಲೆಂಡ್ ತಂಡವು ಲೀಸೆಸ್ಟರ್‌ನಲ್ಲಿ ’ದಿ ರೆಸ್ಟ್’ ವಿರುದ್ಧ ಮೊದಲ ಬಾರಿಗೆ ಆಡಿತು ಹಾಗೂ 1934-35ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರವಾಸವನ್ನು ಕೈಗೊಂಡಿತು.

ಅಷ್ಟು ಹೊತ್ತಿಗಾಗಲೇ ಅಂದರೆ 1931ರಲ್ಲಿ ಆಸ್ಟ್ರೇಲಿಯನ್ ವುಮೆನ್ಸ್ ಕ್ರಿಕೆಟ್ ಕೌನ್ಸಿಲ್ (AWCC) ರಚನೆಯು ಜಾಗತಿಕ ಅಂತಾರಾಷ್ಟ್ರೀಯ ಮಹಿಳಾ ಪ್ರವಾಸಕ್ಕೆ ಮೊದಲ ಅವಕಾಶವನ್ನು ಸೃಷ್ಟಿಸಿತ್ತು. ಆಗಿನ ಕಾಲದಲ್ಲಿ ಪ್ರವಾಸ ಮಾಡಲು ಆಟವಾಡುವ ಅರ್ಹತೆ ಮುಖ್ಯವಾಗಿರದೆ ಪ್ರವಾಸದ ಖರ್ಚನ್ನು ನೋಡಿಕೊಳ್ಳುವವರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇಂಗ್ಲಿಷ್ ಅಸೋಸಿಯೇಷನ್‌ನ ಕಾರ್ಯದರ್ಶಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಅಲ್ಲಿ ಎ.ಡಬ್ಲ್ಯೂ.ಸಿ.ಸಿ ಸದಸ್ಯರ ಜೊತೆ ಮಾತನಾಡಿ ಅಂತಾರಾಷ್ಟ್ರೀಯ ಪಂದ್ಯಾಟ ಏರ್ಪಾಟಾಗಲು ಕಾರಣರಾದರು. ಇದರಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತು. ಡಿಸೆಂಬರ್ 1934ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಿತು.

ಇಷ್ಟೆಲ್ಲಾ ಇತಿಹಾಸವಿದ್ದರೂ, ಪುರುಷರ ಕ್ರಿಕೆಟ್‌ನಂತೆ ಮಹಿಳಾ ಕ್ರಿಕೆಟ್‌ಗೆ ಜನಮನ್ನಣೆ ಸಿಗಲಿಲ್ಲ. ದೈಹಿಕ ಸಾಮರ್ಥ್ಯದ ಅನುಮಾನ ಮತ್ತು ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಮಹಿಳಾ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ತಮ್ಮ ದೈತ್ಯ ಸಾಮರ್ಥ್ಯ ಹಾಗೂ ಪ್ರತಿಭೆಯ ಪ್ರದರ್ಶನದ ಮೊರೆ ಹೋಗಬೇಕಾಯಿತು. ಬಹಳ ಕಾಲದವರೆಗೆ ಮಾಧ್ಯಮದ ಗಮನವೂ ಇವರ ಕಡೆಗೆ ಬೀಳಲೇ ಇಲ್ಲ. ಶಿಷ್ಟಾಚಾರದ ಪ್ರಕಾರ ವಿದೇಶ ಪ್ರವಾಸ ಮಾಡುವ ತಂಡಕ್ಕೆ ಬೀಳ್ಕೊಡುಗೆ ಅಥವಾ ಪ್ರವಾಸ ಮುಗಿಸಿ ಬರುವ ತಂಡಕ್ಕೆ ಸ್ವಾಗತ ಕೋರಲು ಅಧಿಕೃತ ಸ್ವಾಗತ ಸಮಿತಿಯೂ ಇರುತ್ತಿರಲಿಲ್ಲ. ಇದಕ್ಕೆ ಕಾರಣ ದೀರ್ಘಕಾಲದವರೆಗೆ ಬಹುಪಾಲು ಜನರು ಡಬ್ಲ್ಯೂ.ಜಿ.ಗ್ರೇಸ್ ಅವರ ವಾದವಾದ ’ಕ್ರಿಕೆಟ್ ಮಹಿಳೆಯರ ಆಟವಲ್ಲ’ ಎಂಬುದನ್ನು ಒಪ್ಪಿಕೊಂಡಿದ್ದರು. ಹಾಗಾಗಿ ಪ್ರಾರಂಭದ ಹಂತದಲ್ಲಿ ಮಹಿಳೆಯರು ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ದೈಹಿಕ ತರಬೇತಿ ಕಾಲೇಜುಗಳಲ್ಲಿ, ಕೆಲಸದ ಸ್ಥಳಗಳಲ್ಲಿ ರಹಸ್ಯವಾಗಿ ಕ್ರಿಕೆಟ್ ಆಡಬೇಕಾಯಿತು. ನಿರಂತರವಾಗಿ ಮಹಿಳೆಯರು ಕ್ರಿಕೆಟ್ ಆಡಿಕೊಂಡು ಬಂದಿದ್ದರೂ ಬ್ರಿಟನ್‌ನಲ್ಲಿ 1950ರ ದಶಕದ ಮಧ್ಯಭಾಗ ಮತ್ತು 1990ರ ದಶಕದ ಅಂತ್ಯದ ನಡುವೆ ಕ್ರಿಕೆಟ್ ಆಡುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಕುಸಿಯಿತು. ಈ ಕಾಲಘಟ್ಟದಲ್ಲಿ 1993ರ ವಿಶ್ವಕಪ್‌ಅನ್ನು ಆಯೋಜಿಸುವ ವೆಚ್ಚದಿಂದಾಗಿ WCA ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಯು.ಕೆ ಸ್ಪೋರ್ಟ್ ಕೌನ್ಸಿಲ್ ಪುರುಷ ಕ್ರಿಕೆಟ್ ನಡೆಸುವವರೊಂದಿಗೆ ನಿರಂತರವಾದ ಸಂಪರ್ಕವನ್ನು ಸ್ಥಾಪಿಸಲು ಉತ್ಸುಕವಾಗಿತ್ತು. ಏಕೆಂದರೆ ಮಹಿಳಾ ಕ್ರಿಕೆಟ್ ಮಾರುಕಟ್ಟೆಯ ದೃಷ್ಟಿಯಿಂದ ನಷ್ಟದ ಸರಕಾಗಿತ್ತು. 29 ಮಾರ್ಚ್ 1998ರಂದು ಒಂದು ಸಭೆಯಲ್ಲಿ WCA ತನ್ನನ್ನು ತಾನು ವಿಸರ್ಜಿಸಿಕೊಳ್ಳಲು ಹಾಗೂ ಇಡೀ ಮಹಿಳಾ ಕ್ರಿಕೆಟ್‌ನ ನಿಯಂತ್ರಣವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲು ಮತ ಹಾಕುವುದರ ಮೂಲಕ ಅಂಗೀಕರಿಸಿತು. 2005ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಮಂಡಳಿಯು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ಹಸ್ತಾಂತರಿಸಿತು.

ಮಹೇಂದ್ರ ಕುಮಾರ್ ಶರ್ಮಾ

ಕ್ರಿಕೆಟ್‌ನಲ್ಲಿ 1790ರಲ್ಲಿ ’ರೌಂಡ್ ಆರ್ಮ್’ (Round Arm) ಬೌಲಿಂಗನ್ನು ಟಾಮ್ ವಾಕರ್ ರೂಪಿಸಿದ್ದು. ಅಂಡರ್ ಆರ್ಮ್ ಬೌಲಿಂಗ್ ಮಾಡುತ್ತಿದ್ದ ಮಹಿಳಾ ಕ್ರಿಕೆಟಿಗರಿಗೆ 19ನೇ ಶತಮಾನದ ಪ್ರಾರಂಭದಲ್ಲಿ ಕ್ರಿಸ್ಟಿಯಾನಾ ವಿಲ್ಲೆಸ್ ತಮ್ಮ ಸ್ಕರ್ಟ್‌ಗಳಲ್ಲಿ ಕೈ ಸಿಕ್ಕಿಕೊಳ್ಳುತ್ತಿದ್ದದ್ದನ್ನು ತಪ್ಪಿಸಲು ರೌಂಡ್ ಆರ್ಮ್ ಬೌಲಿಂಗ್ ಆಕ್ಷನ್ ಪ್ರಾರಂಭಿಸಿದರು. 1926ರವರೆಗೆ ಮಹಿಳಾ ಕ್ರಿಕೆಟ್‌ಅನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕ್ರಿಕೆಟ್ ಮೈದಾನಗಳು ಸಾಮಾನ್ಯವಾಗಿ ಪುರುಷ ಒಡೆತನದಲ್ಲಿದ್ದು ಆಡಲು ಮೈದಾನಗಳನ್ನು ಹುಡುಕುವುದು ಮಹಿಳೆಯರಿಗೆ ಸವಾಲಿನ ಕೆಲಸವಾಗಿತ್ತು. 1914ರ ಮೊದಲು ಕೆಲವು ಉದ್ಯೋಗದಾತರು ಮಹಿಳಾ ಕೆಲಸಗಾರರಿಗೆ ಕ್ರಿಕೆಟ್ ಸೌಲಭ್ಯನ್ನು ಒಂದು ಚಟುವಟಿಕೆಯಾಗಿ ಕೊಡುತ್ತಿದ್ದರು. ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್‌ನ ರಹಸ್ಯ ಸ್ವರೂಪ ಬದಲಾಯಿತು. ಯುದ್ಧ ಸಾಮಗ್ರಿ ಕಾರ್ಖಾನೆ, ಸೇನಾ ಬ್ಯಾರಕ್‌ಗಳು, ತರಬೇತಿ ಡಿಪೋಗಳು, ಮಿಲಿಟರಿ ಶಿಬಿರಗಳು ಮತ್ತು ಆಸ್ಪತ್ರೆ ಮೈದಾನಗಳಲ್ಲಿ ಕೆಲವು ಮಹಿಳೆಯರು ಕ್ರಿಕೆಟ್ ತಂಡಗಳನ್ನು ರಚನೆ ಮಾಡಿಕೊಂಡು ಆಡುತ್ತಿದ್ದರು. ಆರಂಭಿಕ ಪಂದ್ಯಗಳ ವಿಜೇತರ ಬಹುಮಾನಗಳು ತೀರ ಸಣ್ಣಮಟ್ಟದ್ದಾಗಿದ್ದವು. ಕೇಕ್ ಅಂತಹ ತಿನಿಸುಗಳನ್ನು ಬಹುಮಾನವಾಗಿ ನೀಡುತ್ತಿದ್ದರು.

ಕ್ರಿಕೆಟ್‌ಅನ್ನು ಒಂದು ಧರ್ಮದಂತೆ ಕಾಣುವ ಮತ್ತು ಕ್ರಿಕೆಟಿಗರು ದೇವರುಗಳಾಗಿರುವ ಭಾರತ ದೇಶದಲ್ಲಿ ಮಹಿಳಾ ಕ್ರಿಕೆಟ್ ಪ್ರಾರಂಭವಾದ ಬಗೆ ರೋಚಕವಾಗಿದೆ. ಕ್ರಿಕೆಟ್ ದೇಶದಾದ್ಯಂತ ವ್ಯಾಪಕವಾಗಿ ಪುರುಷರು ಆಡುವ ಆಟವಾಗಿದೆ. 1970ರಲ್ಲಿ ಕೆಲ ಉತ್ಸಾಹಿ ಹುಡುಗಿಯರು ಕ್ರಿಕೆಟ್ ಆಡಬೇಕೆಂದು ಮನಸ್ಸು ಮಾಡಿದರು. ಆದರೆ ಇದು ಸಂಘಟಿತ ರೂಪ ಪಡೆದುಕೊಳ್ಳಲು ಕಾರಣರಾದವರು ಸ್ಥಾಪಕ ಕಾರ್ಯದರ್ಶಿಯಾದ ಉದ್ಯಮಿ ಮಹೇಂದ್ರ ಕುಮಾರ್ ಶರ್ಮಾ. 1973ರಲ್ಲಿ ಲಕ್ನೋದಲ್ಲಿ ಸೊಸೈಟಿ ಕಾಯ್ದೆಯ ಪ್ರಕಾರ ಭಾರತ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ (WCAI)ಅನ್ನು ಬೇಗಂ ಹಮೀದಾ ಹಬೀಬುಲ್ಲಾ ಅವರ ಅಧ್ಯಕ್ಷತೆಯಲ್ಲಿ ನೊಂದಾಯಿಸಿದರು. ಇದು ಅನೇಕ ಉದಯೋನ್ಮುಖ ಮಹಿಳಾ ಕ್ರಿಕೆಟ್ ಆಟಗಾರರ ಉಗಮಕ್ಕೆ ಕಾರಣವಾಯಿತು ಹಾಗೂ ಅವರಿಗೆ ವರದಾನದಂತೆ ಪರಿಣಮಿಸಿತು. ಅದೇ ವರ್ಷ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ (IWCC) ಸದಸ್ಯತ್ವವನ್ನು ಪಡೆದುಕೊಂಡಿತು. ಏಪ್ರಿಲ್ 1973ರಲ್ಲಿ ಭಾರತದಲ್ಲಿ ಬಾಂಬೆ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಈ ಮೂರು ಮಹಿಳಾ ರಾಜ್ಯ ತಂಡಗಳು ಭಾಗವಹಿಸುವುದರ ಮೂಲಕ ರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್‌ಗೆ ಚಾಲನೆ ಸಿಕ್ಕಿತು. ಇದು ಪುಣೆಯಲ್ಲಿ ಮೊದಲ ಬಾರಿಗೆ ಜರುಗಿತು. ಅದೇ ವರ್ಷದ ಅಂತ್ಯದಲ್ಲಿ ವಾರಣಾಸಿಯಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ತಂಡಗಳ ಸಂಖ್ಯೆ ಮೂರರಿಂದ ಎಂಟಕ್ಕೆ ಏರಿತು.

ಇದನ್ನೂ ಓದಿ: ಕ್ರಿಕೆಟ್, ಕಾಮೆಂಟ್ರಿ ಮತ್ತು ಭಾಷೆ

ಹೀಗೆ ಭಾರತದಲ್ಲಿ ಮಹಿಳಾ ಕ್ರಿಕೆಟ್ ಹಂತಹಂತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬಂದಿತು. ಇದರ ಪರಿಣಾಮವಾಗಿ ವಾರಣಾಸಿಯ ಕ್ರಿಕೆಟ್ ಚಾಂಪಿಯನ್‌ಶಿಪ್ ಆವೃತ್ತಿಯ ನಂತರ ಕಾರ್ಯಕಾರಿ ಸಮಿತಿಯನ್ನು ಮರುಸಂಘಟಿಸಲಾಯಿತು. ಶ್ರೀಮತಿ ಚಂದ್ರ ತ್ರಿಪಾಠಿ ಗೌರವಾಧ್ಯಕ್ಷರಾಗಿ, ಶ್ರೀಮತಿ ಪ್ರಮಿಳಾ ಬಾಯಿ ಚವಾಣ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಇಬ್ಬರು ಮಹಿಳೆಯರು ಮಹಿಳಾ ಕ್ರಿಕೆಟ್‌ನ ಪ್ರಾರಂಭದ ದಿನಗಳಿಂದಲೂ ಸಂಸ್ಥಾಪಕ ಕಾರ್ಯದರ್ಶಿ ಎಂ.ಕೆ.ಶರ್ಮಾ ಅವರೊಂದಿಗೆ ಇದ್ದು ಇದರ ಬೆಳವಣಿಗೆಗೆ ಶ್ರಮವಹಿಸಿದರು. ಹೀಗಾಗಿ ಕಲ್ಕತ್ತಾದಲ್ಲಿ ಮೂರನೇ ಚಾಂಪಿಯನ್‌ಶಿಪ್ ನಡೆಯುವ ಹೊತ್ತಿಗೆ ತಂಡಗಳ ಸಂಖ್ಯೆ 14ಕ್ಕೆ ಏರಿತು. ನಂತರದ ದಿನಗಳಲ್ಲಿ ಎಲ್ಲಾ ರಾಜ್ಯಗಳು ಭಾಗಹಿಸಲು ಪ್ರಾರಂಭಿಸಿದವು. ರೈಲ್ವೇಸ್ ಹಾಗೂ ಏರ್ ಇಂಡಿಯಾ ಮಹಿಳಾ ಕ್ರಿಕೆಟಿಗರನ್ನು ನೇಮಿಸಿಕೊಂಡವು ಹಾಗೂ ಎರಡು ಪ್ರತ್ಯೇಕ ತಂಡಗಳಾಗಿ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡವು.

ಮಹಿಳಾ ಕ್ರಿಕೆಟ್‌ನ ವ್ಯಾಪಕ ಬೆಳವಣಿಗೆಗಾಗಿ ಇತರ ಪಂದ್ಯಾವಳಿಗಳನ್ನು ಆಯೋಜಿಸಲಾಯಿತು. ರಾಣಿ ಝಾನ್ಸಿ ಟ್ರೋಫಿ ಅಂತರ-ವಲಯ ಸೀಮಿತ ಓವರ್‌ಗಳ ಪಂದ್ಯಾಟಗಳು (1974), ಅದೇ ವರ್ಷ ರಾಜ್‌ಕೋಟ್‌ನಲ್ಲಿ ಅಂತರ-ವಿಶ್ವವಿದ್ಯಾಲಯ, 15 ವರ್ಷದೊಳಗಿನ, 19 ವರ್ಷದೊಳಗಿನ ಪಂದ್ಯಾವಳಿಗಳನ್ನು ಕೂಡ ನಡೆಸಲಾಯಿತು. ಐದು ವರ್ಷಗಳ ಸತತ ಯಶಸ್ಸಿನ ನಂತರ ಮೊದಲ ಬಾರಿಗೆ 1975ರಲ್ಲಿ ದ್ವಿಪಕ್ಷೀಯ ಮಹಿಳಾ ಸರಣಿಯನ್ನು 25 ವರ್ಷದೊಳಗಿನ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತವು ತನ್ನ ತವರು ನೆಲದಲ್ಲಿ ಆಡಿತು. ಆಸ್ಟ್ರೇಲಿಯಾ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಭಾರತದ ಪ್ರವಾಸ ಕೈಗೊಂಡಿತ್ತು. ಪುಣೆ, ದೆಹಲಿ ಮತ್ತು ಕಲ್ಕತ್ತಾಗಳಲ್ಲಿ ಈ ಪಂದ್ಯಗಳು ನಡೆದವು. ಕುತೂಹಲಕಾರಿ ಅಂಶವೆಂದರೆ ಭಾರತದ ಪರ ಮೂರು ಟೆಸ್ಟ್‌ಗಳಿಗೆ ಮೂವರು ನಾಯಕಿಯರು ಮುನ್ನಡೆಸಿದ್ದು- ಉಜ್ವಲಾ ನಿಕಮ್, ಸುಧಾ ಶಾ ಮತ್ತು ಶ್ರೀ ರೂಪಾ ಬೋಸ್. ಇದಾದ ನಂತರ ಭಾರತವು ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಿತು. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸ್ಕರ್ಟ್‌ಗಳಲ್ಲಿ ಆಡಿದರೆ, ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡದ ಆಟಗಾರ್ತಿಯರು ಪ್ಯಾಂಟ್‌ನಲ್ಲಿ ಆಡಿದರು. ಸಾಕಷ್ಟು ಹೋರಾಟ ಮತ್ತು ಕಠಿಣ ಪರಿಶ್ರಮದ ನಂತರ 1995ರಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಶತಮಾನೋತ್ಸವ ಆಚರಣೆಯಲ್ಲಿ ಭಾರತ ತನ್ನ ಮೊದಲ ಸೀಮಿತ ಓವರ್‌ಗಳ (ODI) ಸರಣಿಯನ್ನು ಗೆದ್ದುಕೊಂಡಿತು. ಇದು ಭಾರತದ ಮಹಿಳೆಯರಿಗೆ, ಅದರಲ್ಲೂ ಕ್ರಿಕೆಟ್‌ನಲ್ಲಿ ಆಸಕ್ತಿ ತಳೆದಿದ್ದ ಮಹಿಳೆಯರಿಗೆ ಹೊಸ ಬಗೆಯ ರೋಮಾಂಚನವನ್ನುಂಟು ಮಾಡಿತು. ಹದಿನೇಳು ವರ್ಷಗಳ ಸತತ ಪರಿಶ್ರಮದ ನಂತರ ಭಾರತದ ಮಹಿಳಾ ಕ್ರಿಕೆಟ್ ತಂಡ ಒಂದು ಸಶಕ್ತ ತಂಡವಾಗಿ ರೂಪುಗೊಳ್ಳಲು ಸಾಧ್ಯವಾಯಿತು.

ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಆದರ್ಶಪ್ರಾಯವಾಗಿ ಸ್ಫೂರ್ತಿಯಾದವರು ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ, ಸಂಧ್ಯಾ ಅಗರ್ವಾಲ್, ಅಂಜುಂ ಚೋಪ್ರಾ, ಮಿಥಾಲಿ ರಾಜ್‌ರಂತಹ ಪ್ರಮುಖ ಆಟಗಾರ್ತಿಯರು. ಇವರು ಅನೇಕ ಯುವ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮೇಲೆ ಪ್ರಭಾವ ಬೀರಿದ್ದಾರೆ ಹಾಗೂ ಭಾರತೀಯ ಮಹಿಳಾ ಕ್ರಿಕೆಟ್‌ಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಈ ಐವರಿಗೂ ಭಾರತ ಸರ್ಕಾರ ಪ್ರತಿಷ್ಠಿತ ’ಅರ್ಜುನ ಪ್ರಶಸ್ತಿ’ ನೀಡಿ ಗೌರವಿಸಿದೆ. ಇವರಲ್ಲಿ ಶಾಂತಾ ರಂಗಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಸುಧಾ ಶಾ ಕ್ರಿಕೆಟ್ ಜೀವನಸಾಧನೆಯನ್ನು ಗುರುತಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿ.ಕೆ.ನಾಯ್ಡು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1986ರಲ್ಲಿ ಸಂಧ್ಯಾ ಅಗರ್ವಾಲ್ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 190 ರನ್ ಗಳಿಸುವ ಮೂಲಕ ವಿಶ್ವ ದಾಖಲೆ ಮಾಡಿದವರಾಗಿದ್ದಾರೆ. ಹೀಗೆ ಮಹಿಳಾ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ದಾಖಲೆಗಳನ್ನು ಬರೆದ ಭಾರತೀಯರು ವಿಶ್ವದ ಗಮನವನ್ನು ತಮ್ಮ ಕಡೆಗೆ ಸೆಳೆದಿದ್ದಾರೆ.

ವರ್ತಮಾನದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವವರಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರ ಕೊಡುಗೆ ಅಪಾರವಾಗಿದೆ. ಇವರು 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿ ನಿಗದಿತ ಐವತ್ತು ಓವರ್‌ಗಳ ಏಕದಿನ ಪಂದ್ಯಾಟಗಳಲ್ಲಿ 2000 ರನ್‌ಗಳನ್ನು ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಹೊಡೆದು, 2018ರಲ್ಲಿ ’ಐ.ಸಿ.ಸಿ ಮಹಿಳಾ ಕ್ರಿಕೆಟರ್’ (ICC WOMEN’S CRICKETER) ಪ್ರಶಸ್ತಿ ಪಡೆದುಕೊಂಡಿದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೂಲನ್ ಗೋಸ್ವಾಮಿ, ಪೂನಮ್ ಯಾದವ್ ಹೀಗೆ ಅನೇಕ ಮಹಿಳೆಯರು ತಮ್ಮ ಕ್ರೀಡಾ ಬದುಕಿನಲ್ಲಿ ಅಸಾಧಾರಣ ಸಾಧನೆ ಮಾಡಿ ಬೇರೆಬೇರೆ ವರ್ಷಗಳಲ್ಲಿ ’ಐ.ಸಿ.ಸಿ ಮಹಿಳಾ ಕ್ರಿಕೆಟರ್’ ಹಾಗೂ ಇನ್ನಿತರೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕಡಿಮೆ ಪ್ರೇಕ್ಷಕರು ಪಂದ್ಯ ವೀಕ್ಷಣೆ ಮಾಡುತ್ತಿದ್ದ ಕಾಲದಿಂದ ಹಿಡಿದು ಈ ಕಾಲದಲ್ಲಿ ಅತಿಹೆಚ್ಚು ಅಂದರೆ ಎಂಭತ್ತು ಸಾವಿರ ಪ್ರೇಕ್ಷಕರನ್ನು ಸೆಳೆಯುವವರೆಗೆ ಕ್ರಿಕೆಟ್ ಬೆಳೆದಿದೆ. ಮಹಿಳಾ ಆಟಗಾರರ ಪ್ರದರ್ಶನದಲ್ಲೂ ಭಾರಿ ಪ್ರಮಾಣದ ಬದಲಾವಣೆಯಾಗಿದ್ದು 1978ರ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾರದ ತಂಡವು 2005 ಮತ್ತು 2017ರ ವಿಶ್ವಕಪ್‌ನಲ್ಲಿ ಫೈನಲ್ ತಲುಪುವವರೆಗೆ ಬಹಳ ದೂರ ಸಾಗಿ ಬಂದಿದೆ.

ಇಪ್ಪತ್ತೊಂದನೇ ಶತಮಾನದ ಮಹಿಳಾ ಕ್ರಿಕೆಟ್ ಜಗತ್ತು ಬಹಳಷ್ಟು ಪ್ರಗತಿ ಕಂಡಿದೆ. ಜಾಹಿರಾತು, ವೀಕ್ಷಕ ವಿವರಣೆ, ಸ್ಕೋರಿಂಗ್, ಅಂಪೈರಿಂಗ್, ಮುಂತಾದ ಬೇರೆಬೇರೆ ಪಾತ್ರಗಳನ್ನು ಮಹಿಳೆಯರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಇನ್ನೂ ಎತ್ತರಕ್ಕೆ ತಲುಪಬೇಕಾದರೆ ಅಂತರ ಶಾಲಾ, ಅಂತರ ಕಾಲೇಜು, ಅಂತರವಲಯ ಮಟ್ಟದ ಪಂದ್ಯಾವಳಿಗಳು ಹೆಚ್ಚೆಚ್ಚು ಆಯೋಜನೆಯಾಗಬೇಕಿದೆ. ಮಹಿಳಾ ಆಟಗಾರ್ತಿಯರಿಗೂ ಪುರುಷರಂತೆ ಪ್ರೋತ್ಸಾಹ, ಬೆಂಬಲ ಸಿಗಬೇಕಿದೆ. ಹೀಗಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಉಚ್ಛ್ರಾಯ ಸ್ಥಿತಿ ತಲುಪಬಹುದು ಜೊತೆಗೆ ಪುರುಷರ ಕ್ರಿಕೆಟ್‌ನಲ್ಲಿ ಸ್ಥಾನಕ್ಕಾಗಿ ನಡೆಯುವ ಪೈಪೋಟಿಯಂತೆ ಮಹಿಳಾ ಕ್ರಿಕೆಟ್‌ನಲ್ಲೂ ಬಿರುಸಿನ ಸ್ಪರ್ಧೆ ನಡೆದರೆ ಅಚ್ಚರಿಯಿಲ್ಲ.

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...