Homeಕ್ರೀಡೆಕ್ರಿಕೆಟ್ಕ್ರಿಕೆಟ್ ಬೆನ್ನು ಹತ್ತಿದ ರೂಢಿಗಳು, ನಂಬಿಕೆ-ಆಚರಣೆ ಮತ್ತು ಮೂಢನಂಬಿಕೆಗಳು

ಕ್ರಿಕೆಟ್ ಬೆನ್ನು ಹತ್ತಿದ ರೂಢಿಗಳು, ನಂಬಿಕೆ-ಆಚರಣೆ ಮತ್ತು ಮೂಢನಂಬಿಕೆಗಳು

- Advertisement -
- Advertisement -

ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಅಥವಾ ಕಂಡುಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಅವು ಬೆರೆತುಕೊಂಡಿವೆ ಹಾಗೂ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅಜ್ಞಾನ, ಅವಿವೇಕದ ಹಿನ್ನೆಲೆಯಿಂದ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವದ ಕೊರತೆಯ ಕಾರಣದಿಂದ ಸಾಕಷ್ಟು ಪ್ರಮಾಣದಲ್ಲಿ ಮೂಢನಂಬಿಕೆಗಳು ಜನಸಾಮಾನ್ಯರಲ್ಲಿ ಜನ್ಮತಾಳಿವೆ. ಅವು ಹಲವು ಬಾರಿ ಅಸಹಾಯಕತೆಯಿಂದ, ಭಯದಿಂದ, ಇನ್ನು ಕೆಲವೊಮ್ಮೆ ಕಾಕತಾಳೀಯವಾಗಿ ಉಂಟಾಗುತ್ತವೆ. ಈ ಭೂಮಿಯ ಮೇಲೆ ಬಹುಶಃ ಮಾನವನ ಹುಟ್ಟಿನಿಂದಲೂ ಮೂಢನಂಬಿಕೆಗಳಿವೆ. ಅದೃಷ್ಟ ಸಂಖ್ಯೆಯ ಮೇಲಿನ ನಂಬಿಕೆ, ಕೆಟ್ಟ ಶಕುನಗಳ ಮೇಲಿನ ನಂಬಿಕೆ, ಧಾರ್ಮಿಕ ಕಾರಣಗಳಿಗಾಗಿ ನಂಬಿಕೆ- ಹೀಗೆ ಇವೆಲ್ಲ ಜನಸಾಮಾನ್ಯರ ಬದುಕಿನಲ್ಲಿ ಬಹಳ ದೊಡ್ಡಮಟ್ಟದ ಪಾತ್ರವನ್ನು ವಹಿಸುತ್ತವೆ. ಕ್ರಿಕೆಟ್ ಆಟವು ಹೆಚ್ಚು ತರಬೇತಿ, ಕೌಶಲ್ಯದ ಆಧಾರದ ಮೇಲೆ ಅವಲಂಬಿತವಾಗುತ್ತಾದರೂ ಮೂಢನಂಬಿಕೆಗಳು ಈ ಕ್ಷೇತ್ರವನ್ನೂ ಬಿಟ್ಟಿಲ್ಲ. ಘಟಾನುಘಟಿ ಆಟಗಾರರು ಕೂಡ ಮೂಢನಂಬಿಕೆಯ ಮೊರೆ ಹೋಗಿದ್ದಾರೆ. ಅವರ ಹೃದಯದ ಅಂತರಂಗದಲ್ಲಿ ಇವು ಮನೆಮಾಡಿರುವುದರಿಂದ ಅವರನ್ನು ಇವಗಳಿಂದ ಹೊರತರುವುದು ಅಸಾಧ್ಯದ ಮಾತಾಗಿದೆ. ಆಟಗಾರರ ಪ್ರಾದೇಶಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ಮೂಢನಂಬಿಕೆಗಳು ತಮ್ಮ ಸ್ವರೂಪವನ್ನು ಪಡೆದುಕೊಂಡಿರುತ್ತವೆ.

ಕಿರಿಯರ, ದೇಶೀಯ, ಮಹಿಳಾ, ಅಂತಾರಾಷ್ಟ್ರೀಯ – ಹೀಗೆ ಎಲ್ಲಾ ಸ್ತರದ ಕ್ರಿಕೆಟ್‌ನಲ್ಲಿ ಮೂಢನಂಬಿಕೆಗಳಿವೆ. ಕ್ರಿಕೆಟ್‌ನಲ್ಲಿ 111 ಅಶುಭ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ’ನೆಲ್ಸನ್’ ಎಂದು ಇದನ್ನು ಕರೆಯಲಾಗುತ್ತದೆ. 222ಅನ್ನು ಡಬಲ್ ನೆಲ್ಸನ್ ಎಂದು 333ಅನ್ನು ತ್ರಿಬಲ್ ನೆಲ್ಸನ್ ಎಂದು ಪರಿಗಣಿಸಲಾಗಿದೆ. ನೆಲ್ಸನ್ ಅಶುಭವೇಕೆ ಎಂಬ ಪ್ರಶ್ನೆ ಎದುರುಗೊಂಡಾಗ ಲಾರ್ಡ್ ನೆಲ್ಸನ್ ಒಂದು ಕಣ್ಣು, ಒಂದು ಕೈ, ಒಂದು ಕಾಲು, ಹೊಂದಿದ್ದಕ್ಕಾಗಿ 111 ದುರದೃಷ್ಟಕರ ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಲಾರ್ಡ್ ನೆಲ್ಸನ್‌ಗೆ ಎರಡು ಕಾಲುಗಳಿದ್ದವು ಆದ್ದರಿಂದ ದುರದೃಷ್ಟವೆಂದು ಪರಿಗಣಿಸಬೇಕಾಗಿಲ್ಲವೆಂದು ಪ್ರಾಜ್ಞರು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಪ್ರಸಿದ್ಧ ಅಂಪೈರ್ ಡೇವಿಡ್ ಶೆಫರ್ಡ್ ತಾವು ಅಂಪೈರಿಂಗ್ ಮಾಡಿದ ಪ್ರತಿ ಪಂದ್ಯದಲ್ಲೂ ಬೌಲರ್ ಬೌಲಿಂಗ್ ಮಾಡಲು ಓಡಿಬರುತ್ತಿರುವಾಗ ತಮ್ಮ ಕಾಲನ್ನು ನೆಲದ ಮೇಲಿಂದ ಎತ್ತುತ್ತಿದ್ದರು. ಅದು ನೆಲ್ಸನ್‌ನನ್ನು ಸೂಚಿಸುತ್ತಿದ್ದ ಕಾರಣ, ಎಲ್ಲರ ಗಮನ ಅವರ ಕಡೆಗೆ ಹೋಗುತ್ತಿತ್ತು. ಆಸ್ಟ್ರೇಲಿಯನ್ನರಿಗೆ 87 ದುರದೃಷ್ಟಕರ ಸಂಖ್ಯೆ. ಡೆವಿಲ್ಸ್ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಈ ರೀತಿಯ ಸಂಖ್ಯೆಗಳಿಂದ ಅನಾಹುತಗಳು ಸಂಭವಿಸಬಾರದೆಂದು ಪ್ರೇಕ್ಷಕರಿಂದ ಹಿಡಿದು ಆಟಗಾರರವರೆಗೆ ಪಂದ್ಯ ಮುಗಿಯುವವರೆಗೆ ಕುಳಿತುಕೊಂಡ ಜಾಗ ಬಿಟ್ಟು ಕದಲುವುದಿಲ್ಲ. ಜಾಗ ಬಿಟ್ಟು ಕದಲಿದರೆ ಪಂದ್ಯ ಸೋಲಬಹುದು, ತಮ್ಮ ಇಷ್ಟದ ಆಟಗಾರರು ಔಟ್ ಆಗಬಹುದು ಎಂಬ ಆತಂಕದ ಮೂಢನಂಬಿಕೆಯಿದೆ. ತೀವ್ರ ಕುತೂಹಲಕಾರಿ ಪಂದ್ಯದ ಅಂತಿಮ ಎಸೆತದಲ್ಲಿ ಆರು ರನ್, ಬೌಂಡರಿ ಅಥವಾ ಎರಡು ರನ್ ಹೀಗೆ ರೋಚಕವಾಗಿದ್ದರೆ, ಎಷ್ಟೋ ಪ್ರೇಕ್ಷಕರು, ಆಟಗಾರರು ಕಣ್ಣು ಮುಚ್ಚಿಕೊಂಡಿದ್ದು, ಬೌಲರ್ ಆ ಎಸೆತ ಎಸೆದು, ಪರಿಣಾಮ ಬಂದ ಮೇಲೆಯೇ ಕಣ್ಣು ತೆಗೆಯುವರು. ಕೆಲವು ಆಟಗಾರರಂತೂ ಔಟ್ ಆಗಿ ಬಂದ ಮೇಲೆ ಪಂದ್ಯ ಮುಗಿಯುವವರೆಗೆ ಪ್ಯಾಡ್ ಬಿಚ್ಚುವುದಿಲ್ಲ. ಕಾಕತಾಳಿಯವೆಂಬಂತೆ ಅನೇಕ ಸಂದರ್ಭಗಳಲ್ಲಿ ಇದು ಸಕಾರಾತ್ಮಕ ಫಲಿತಾಂಶವನ್ನು ತಂದುಕೊಟ್ಟಿದೆ. ಹಾಗಾಗಿ ಆಟಗಾರರು ಈ ನಂಬಿಕೆಗಳನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ. ಕೆಲವು ಪ್ರಮುಖ ಆಟಗಾರರ ನಂಬಿಕೆಗಳನ್ನು ನೋಡುವುದಾದರೆ, ಶ್ರೀಲಂಕಾದ ಪ್ರಮುಖ ಆಟಗಾರರಾಗಿದ್ದ ಸನತ್ ಜಯಸೂರ್ಯ ಪ್ರತಿ ಬಾರಿ ಎದುರಿಸುವ ಮುನ್ನ ಪ್ಯಾಡ್‌ಗೆ ಬ್ಯಾಟ್‌ನಿಂದ ತಟ್ಟುವುದು, ನೆಲಕ್ಕೆ ತಟ್ಟುವುದು ಹಾಗೂ ಹೆಲ್ಮೆಟ್‌ನ ಮುಟ್ಟುವುದು ಮಾಡುತ್ತಿದ್ದರು. ಬಹುಶಃ ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದಿರಬೇಕು.

ಈ ನಂಬಿಕೆಯನ್ನು ಅಭ್ಯಾಸಬಲ ಎಂದರೂ ತಪ್ಪಾಗಲಾರದೇನೋ! ಶ್ರೀಲಂಕಾದ ಮತ್ತೊಬ್ಬ ಆಟಗಾರ ಮಹೇಲ ಜಯವರ್ಧನೆ ಅವರಿಗೆ ಬ್ಯಾಟಿಂಗ್‌ನಲ್ಲಿ ಪ್ರತಿ ಹೊಡೆತದ ನಂತರ ಬ್ಯಾಟ್‌ನ ಚುಂಬಿಸುವುದು ರೂಢಿಯಾಗಿತ್ತು. ಅವರಿಗೆ ಧೈರ್ಯ ತಂದುಕೊಡುತ್ತಿದ್ದ ಆ ನಂಬಿಕೆ, ಪ್ರತಿ ಹೊಡೆತಕ್ಕೆ ಆ ಬ್ಯಾಟೇ ಕಾರಣ ಎನ್ನುವಂತೆ ಪ್ರೇಕ್ಷಕರಿಗೆ ಭಾಸವಾಗುತ್ತಿತ್ತು. ಆದರೆ ಮೂಲತಃ ಪ್ರತಿ ಗಂಟೆಗೆ 130ರಿಂದ 150 ಕಿ.ಮೀ ವೇಗದಿಂದ ಬರುವ ಚೆಂಡನ್ನು ಎದುರಿಸಲು ಚಾಕಚಕ್ಯತೆ, ಕೌಶಲ್ಯವಿರಬೇಕಾಗುತ್ತದೆ. ಇದರ ಹೊರತಾಗಿಯೂ ಅಂತಹ ನಂಬಿಕೆಗಳಿಗೆ ಮಹತ್ವ ಕೊಡಲಾಗುತ್ತದೆ. ಆಸ್ಟ್ರೇಲಿಯಾದ ಅದ್ಭುತ ಆಲ್‌ರೌಂಡರ್ ಹಾಗೂ ಮಾಜಿನಾಯಕ ಸ್ಟೀವ್ ವಾ ಯಾವಾಗಲೂ ತಮ್ಮ ಅಜ್ಜ ಕೊಟ್ಟಿದ್ದ ಕರವಸ್ತ್ರವನ್ನು, ಮೈದಾನದ ಒಳಕ್ಕೂ ತಮ್ಮ ಜೊತೆಗೆ ಒಯ್ಯುತ್ತಿದ್ದರು. ಕೌಟುಂಬಿಕ ಭಾವನೆಗಳಿಗೂ ಆಟಗಾರರು ಬೆಲೆ ಕೊಡುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಭಾರತದ ಆಲ್‌ರೌಂಡರ್ ಜಿಮ್ಮಿ ಅಮರ್‌ನಾಥ್ ಕೂಡ ಕ್ಷೇತ್ರರಕ್ಷಣೆ ಮಾಡುವಾಗ ಕೆಂಪು ಕರವಸ್ತ್ರವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಧಾರ್ಮಿಕ ನಂಬಿಕೆಗಳು ಆಟಗಾರರ ಜೀವನದಲ್ಲಿ ಜಾಗ ಪಡೆದಿದ್ದವು ಎನ್ನುವುದಕ್ಕೆ ಭಾರತದ ಎಡಗೈ ಬ್ಯಾಟ್ಸ್‌ಮನ್ ಹಾಗೂ ಯಶಸ್ವಿ ಮಾಜಿನಾಯಕ ಸೌರವ್ ಗಂಗೂಲಿ ಬ್ಯಾಟಿಂಗ್ ಮಾಡುವಾಗ ಅವರ ಆರಾಧ್ಯ ಗುರೂಜಿಯ ಭಾವಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು. ಇಂಗ್ಲೆಂಡಿನ ಮಾಜಿ ನಾಯಕ ಮೈಕೆಲ್ ಆಥರ್ಟನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಟ್‌ಔಟ್ ಆಗಿ ಉಳಿಯುತ್ತಿದ್ದ ದಿನದಂದು ಯಾರಿಗೂ ಸಂದರ್ಶನ ನೀಡುತ್ತಿರಲಿಲ್ಲ. ಬಹುಶಃ ತನ್ನ ಏಕಾಗ್ರತೆಯ ಆಟದ ಹಿಂದೆ ಇರುವ ಪರಿಶ್ರಮದ ವಿಚಾರ ಬಹಿರಂಗವಾಗುತ್ತದೆ ಎನ್ನುವ ಭಯ ಅಥವಾ ಆ ದಿನ ಚೆಂಡುಗಳನ್ನು ಎದುರಿಸಲು ಅನುಸರಿಸಿದ ಮಾನದಂಡ ವಿರೋಧಿ ಪಾಳಯಕ್ಕೆ ಗೊತ್ತಾಗಬಾರದು ಎಂಬುದು, ಆ ನಿರ್ಧಾರದ ಹಿಂದೆ ಇದ್ದ ಜಾಣತನವಿದ್ದಿರಬಹುದು. ದಕ್ಷಿಣ ಆಫ್ರಿಕಾದ ನೀಲ್ ಮೆಕಂಜಿ ಎಂಬ ಮಾಜಿ ಆಟಗಾರನಿಗೆ ವಿಚಿತ್ರವಾದ ಗೀಳೊಂದಿತ್ತು; ಆತ ಬ್ಯಾಟಿಂಗ್‌ಗೆ ಹೋಗುವ ಮೊದಲು ಡ್ರೆಸ್ಸಿಂಗ್ ರೂಮ್‌ನ ಟಾಯ್ಲೆಟ್‌ನ ಸೀಟ್‌ಗಳು ಕೆಳಗಿರಬೇಕು ಹಾಗೂ ಫ್ಲಶ್ ಮಾಡಿರಬೇಕು. ಈ ಸಂದರ್ಭದಲ್ಲಿ ಯಾರಾದರು ಟಾಯ್ಲೆಟ್‌ನ ಒಳಗಿದ್ದರೆ ಆತನನ್ನು ಹೊರಗೆ ಕರೆದು ತನ್ನ ಆಚರಣೆಯನ್ನು ಪೂರೈಸಿ, ನಂತರ ಆತನನ್ನು ಒಳಕ್ಕೆ ಕಳುಹಿಸಲಾಗುತ್ತಿತ್ತು. ಭಾರತದ ಸವ್ಯಚಾಚಿ ಆಟಗಾರ ಸಚಿನ್ ತೆಂಡೂಲ್ಕರ್ ತಮ್ಮ ಎಡಗಾಲಿಗೆ ಮೊದಲು ಪ್ಯಾಡ್‌ಗಳನ್ನು ಕಟ್ಟಿಕೊಳ್ಳುತ್ತಿದ್ದರು ಹಾಗೂ ಪ್ರಾರಂಭದಲ್ಲಿ ಬಂದ ಬಕಲ್ ಟೈಪ್ ಪ್ಯಾಡ್‌ಗಳನ್ನೇ ಬಳಸುತ್ತಿದ್ದರು. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್ ಬ್ಯಾಟಿಂಗ್‌ಗೆ ಇಳಿದಾಗ ಸೂರ್ಯನನ್ನು ನೋಡುತ್ತಿದ್ದರು ಹಾಗು ತಮ್ಮ ಇನ್ನೊಬ್ಬ ಸಂಗಾತಿಯ ಬಲಕ್ಕೆ ನಡೆಯುತ್ತಾ ಮೈದಾನ ಪ್ರವೇಶ ಮಾಡುತ್ತಿದ್ದರು. ಭಾರತದ ಮಾಜಿನಾಯಕ ಮೊಹಮ್ಮದ್ ಅಜ಼ರುದ್ದೀನ್ ಕುತ್ತಿಗೆಯಲ್ಲಿ ’ತಾವೀಜ಼್’ ಧರಿಸುತ್ತಿದ್ದರು. ಮುಸ್ಲಿಮರ ನಂಬಿಕೆಯಂತೆ ತಾವೀಜ಼್ ಎಲ್ಲಾ ಕೆಟ್ಟದೃಷ್ಟಿಗಳಿಂದಲೂ ತಪ್ಪಿಸುವುದಾಗಿದೆ. ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ತಮ್ಮ ಅದೃಷ್ಟ ಖುಲಾಯಿಸಲು ’ಬಂಧನ’ವನ್ನು ಕಟ್ಟಿಕೊಳ್ಳುತ್ತಿದ್ದರು. ಪಾಕಿಸ್ತಾನದ ಯಶಸ್ವಿ ನಾಯಕ ಇಮ್ರಾನ್ ಖಾನ್ 1992ರ ವಿಶ್ವಕಪ್‌ನ ಫೈನಲ್‌ನಲ್ಲಿ ಅದೃಷ್ಟಕ್ಕಾಗಿ ಹುಲಿಯ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದರು. ಕಾಕತಾಳೀಯವೆಂಬಂತೆ ಪಾಕಿಸ್ತಾನ ಆ ವಿಶ್ವಕಪ್‌ಅನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಇದನ್ನೂ ಓದಿ: ಇದು ಕ್ರಿಕೆಟ್ ಪಂದ್ಯವೋ ರಾಜಕೀಯ ರ್‍ಯಾಲಿಯೋ?: ಬಿಜೆಪಿಯವರೇ ಟಿಕೆಟ್‌ ಖರೀದಿಸಿದ ಕಥೆ!

ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ ಎಲ್ಲಾ ಹತ್ತು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಕುಂಬ್ಲೆ ವಿಶೇಷ ದಾಖಲೆ ಮಾಡಿದ್ದಾರೆ. ಈ ರೀತಿಯ ದಾಖಲೆ ಮಾಡಿದ ಎರಡನೇ ಬೌಲರ್ ಅವರು. ಈ ಪಂದ್ಯದಲ್ಲಿ ಕುಂಬ್ಲೆ ಪ್ರತಿ ಓವರ್ ಎಸೆಯಲು ಬಂದಾಗ ಸಚಿನ್ ತೆಂಡೂಲ್ಕರ್ ಅವರ ಸ್ವೆಟರ್ ಮತ್ತು ಟೋಪಿಯನ್ನು ತೆಗೆದುಕೊಂಡು ಅಂಪೈರ್‌ಗೆ ಕೊಡುತ್ತಿದ್ದರು. ಇದು ಇಡೀ ಇನ್ನಿಂಗ್ಸ್‌ನ ಉದ್ದಕ್ಕೂ ನಡೆದ ಪ್ರಕ್ರಿಯೆಯಾಗಿದ್ದು ಆಸಕ್ತಿದಾಯಕವಾಗಿತ್ತು. ಬೇರೆ ಯಾರಿಗೂ ವಿಕೆಟ್ ಬೀಳದೆ ಕುಂಬ್ಲೆಗೆ ಎಲ್ಲಾ ಹತ್ತು ವಿಕೆಟ್ ಸಿಕ್ಕಿದ್ದು ವಿಶೇಷವಾಗಿತ್ತು. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಯನ್ ಪ್ರತಿ ಸ್ಪೆಲ್‌ನಲ್ಲಿ ಬೌಲಿಂಗ್ ಮಾಡಲು ಬಂದಾಗ ಬೌಲಿಂಗ್ ತುದಿಯಲ್ಲಿ ಬೇಲ್ಸ್‌ಗಳನ್ನು ಉರುಳಿಸುವ ಹವ್ಯಾಸವನ್ನು ಹೊಂದಿದ್ದಾರೆ. ಶ್ರೀಶಾಂತ್ ಬೌಲಿಂಗ್ ಮಾಡುವ ಮೊದಲು ದೇವರ ಮೊರೆ ಹೋಗುತ್ತಿದ್ದದ್ದು, ಮಾಲಿಂಗ ಬೌಲಿಂಗ್ ಮಾಡುವ ಮೊದಲು ಬಾಲ್‌ಗೆ ಚುಂಬಿಸುತ್ತಿದ್ದದ್ದು ವಿಶೇಷ ಆಚರಣೆಗಳಾಗಿವೆ. ಇತ್ತೀಚೆಗೆ ಫಾರ್ಮ್‌ನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಮೊದಲು (9-3-2023ರಿಂದ 13-3-2023 ರವರೆಗೆ ನಡೆದ ಟೆಸ್ಟ್) ಉಜ್ಜಯಿನಿಯ ದೇವಸ್ಥಾನಕ್ಕೆ ತಮ್ಮ ಸಂಗಾತಿ ಅನುಷ್ಕಾ ಜೊತೆಗೆ ಭೇಟಿಕೊಟ್ಟಿದ್ದರು. ಅದರ ಪರಿಣಾಮವೇನೋ ಎಂದು ಎಷ್ಟೋ ಜನ ಮಾತಾಡಿಕೊಂಡಂತೆ ಅವರು 75ನೆಯ ಅಂತಾರಾಷ್ಟ್ರೀಯ ಶತಕವನ್ನು ದಾಖಲಿಸಿದರು. ಸಾಮಾನ್ಯ ಜನರ ಮೂಢನಂಬಿಕೆಗಳಂತೆ ಕ್ರಿಕೆಟಿಗರಿಗೆ ಪಂದ್ಯ ಪ್ರಾರಂಭವಾಗುವುದಕ್ಕೆ ಮುಂಚೆ ಬೆಕ್ಕು ಅಡ್ಡ ಬಂದರೆ, ಉಲ್ಟಾ ಚಪ್ಪಲಿ ಕಾಣಿಸಿಕೊಂಡರೆ ಪಂದ್ಯ ಸೋಲುತ್ತೇವೆಂದು ಅಥವಾ ಪ್ರದರ್ಶನ ಚೆನ್ನಾಗಿರುವುದಿಲ್ಲವೆಂದು ಅನ್ನಿಸಿಬಿಡುತ್ತದೆ. ಪಂದ್ಯಕ್ಕೂ ಮೊದಲೇ ಈ ರೀತಿ ಆತ್ಮಬಲ ಕುಗ್ಗಿದರೆ, ಸಹಜವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗೆ ಅನೇಕ ರೂಢಿಗಳು, ನಂಬಿಕೆ-ಆಚರಣೆ, ಮೂಢನಂಬಿಕೆಗಳು ಕ್ರಿಕೆಟ್ ಜಗತ್ತಿನಲ್ಲಿ ತನ್ನ ಕದಂಬಬಾಹುಗಳನ್ನು ಚಾಚಿಕೊಂಡಿವೆ. ಇವು ಕೇವಲ ಪ್ರಾತಿನಿಧಿಕವಾದ ಉದಾಹರಣೆಗಳಾಗಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಇಂತಹ ನೂರಾರು ಮೂಢನಂಬಿಕೆಗಳಿವೆ.

ವಾಸ್ತವದಲ್ಲಿ ಆಟಗಾರರ ಮನೋಬಲ, ಆತ್ಮವಿಶ್ವಾಸ ಉತ್ತಮವಾಗಿದ್ದರೆ ಮಾತ್ರ ಪ್ರದರ್ಶನ ಚೆನ್ನಾಗಿ ಮೂಡಿಬರಲು ಸಾಧ್ಯ. ಆ ಮನೋಬಲವನ್ನು ನಂಬಿಕೆ ಒದಗಿಸಿಕೊಡುತ್ತದೆ ಎಂಬ ಮನಸ್ಥಿತಿಯನ್ನು ಆಟಗಾರರು ಹೊಂದಿದ್ದಾರೆ. ಆದರೆ ಬಹುತೇಕ ಪ್ರೇಕ್ಷಕರಿಗೆ ಆಟಗಾರನ ಅಭ್ಯಾಸ, ಕೌಶಲ್ಯ, ಪ್ರತಿಭೆ, ಏಕಾಗ್ರತೆ ಅವನ ಅದ್ಭುತ ಆಟದಲ್ಲಿ ಕಾಣಿಸುತ್ತಿದ್ದು, ಅದರಿಂದ ಆತ ಯಶಸ್ಸನ್ನು ಸಾಧಿಸುತ್ತಿದ್ದಾನೆ ಎಂಬ ನಿಶ್ಚಿತವಾದ ಅಭಿಪ್ರಾಯವಿರುತ್ತದೆ. ಏಕೆ ಕ್ರಿಕೆಟಿಗರು ಇಂತಹ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೆಂದು ಯೋಚಿಸಿದಾಗ, ಇವು ಇತ್ತೀಚೆಗೆ ಹುಟ್ಟಿಕೊಂಡಿರುವುದಂತಹುದ್ದೇನಲ್ಲ.

ಪೀಳಿಗೆಯಿಂದ ಪೀಳಿಗೆಗೆ ರವಾನಿಸಿರುವಂತಹವು. ಆದ್ದರಿಂದ ಇವುಗಳನ್ನು ಬುಡಸಮೇತ ಒಂದೇ ಸಾರಿ ಕಿತ್ತುಹಾಕಲು ಸಾಧ್ಯವಾಗುವುದಿಲ್ಲ. ಹೇಗೆ ಬಸವಣ್ಣನವರು ದೇವರನ್ನು ನಿರಾಕರಿಸದೆ ’ದೇಹವೇ ದೇಗುಲ’ವೆಂದು ದೇವರ ಅಸ್ತಿತ್ವದ ಪರಿಕಲ್ಪನೆಯನ್ನು ಬದಲಾಯಿಸಿ, ಜನರು ಭಿನ್ನವಾಗಿ ಆಲೋಚಿಸುವಂತೆ ಮಾಡಿದರೋ ಹಾಗೆ ತಂಡದ ಮೆಂಟರ್‌ಗಳು ಆಟಗಾರರ ಮನಸ್ಥಿತಿಯನ್ನು ಬದಲಾಯಿಸಲು ಹೆಜ್ಜೆ ಇಟ್ಟರೆ ಒಂದಷ್ಟು ಸುಧಾರಣೆ ಸಾಧ್ಯವೇನೋ! ತಮ್ಮ ಅಮೋಘ ಆಟದ ಮೂಲಕ ಬಹಳಷ್ಟು ಕಷ್ಟಪಟ್ಟು ಮೆಟ್ಟಿಲುಗಳನ್ನು ಹತ್ತಿ ಮೇಲೆ ಬರುವ/ಬರಬೇಕಿರುವ ಕ್ರಿಕೆಟಿಗರು ದೃಢಮನಸ್ಸಿನಿಂದ ಆಟವಾಡುತ್ತಾ, ತನ್ನ ಸುತ್ತ ಅಂಟಿಕೊಂಡಿರುವ ಈ ಬಗೆಯ ರೂಢಿ, ನಂಬಿಕೆ-ಮೂಢನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ವಾತಾವರಣ ನಿರ್ಮಿಸಿಕೊಂಡರೆ ಹೆಚ್ಚು ಹಿತವೇನೋ!

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...