Homeಕರ್ನಾಟಕ15 ಹಕ್ಕೊತ್ತಾಯ ಮುಂದಿಟ್ಟ ರೈತ ಪ್ರಣಾಳಿಕೆ; ಸಭೆಗೆ ಹಾಜರಾಗದ ಬಿಜೆಪಿ ಬೆಂಬಲಿಸದಿರಲು ನಿರ್ಧಾರ

15 ಹಕ್ಕೊತ್ತಾಯ ಮುಂದಿಟ್ಟ ರೈತ ಪ್ರಣಾಳಿಕೆ; ಸಭೆಗೆ ಹಾಜರಾಗದ ಬಿಜೆಪಿ ಬೆಂಬಲಿಸದಿರಲು ನಿರ್ಧಾರ

‘ರಾಜಕೀಯ ಪಕ್ಷಗಳೊಂದಿಗೆ ರೈತ ಸಂಘಟನೆಗಳ ಮುಖಾಮುಖಿ’ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕಾಂಗ್ರೆಸ್, ಜೆಡಿಎಸ್‌ ನಾಯಕರು ಪಾಲ್ಗೊಂಡಿದ್ದರು.

- Advertisement -
- Advertisement -

ಬೆಂಗಳೂರಿನ ಗಾಂಧಿಭವನ ಇಂದು (ಬುಧವಾರ) ಬಹಳ ವಿಶಿಷ್ಟವಾದಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರ್ನಾಟಕದ ಸಮಸ್ತ ರೈತ, ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳ ಬಣಗಳು ಒಟ್ಟುಗೂಡಿ ರಾಜಕೀಯ ಪಕ್ಷಗಳ ಮುಂದೆ ‘ರೈತ ಪ್ರಣಾಳಿಕೆ’ಯನ್ನು ಮಂಡಿಸಿದವು.

‘ರಾಜಕೀಯ ಪಕ್ಷಗಳೊಂದಿಗೆ ರೈತ ಸಂಘಟನೆಗಳ ಮುಖಾಮುಖಿ’ ಎಂಬ ವಿನೂತನ ಕಾರ್ಯಕ್ರಮವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್‌ ಅಡಿಯಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಬಂದಂತಹ ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು. ದೆಹಲಿ ಮತ್ತು ಕರ್ನಾಟಕದಲ್ಲಿ ನಡೆದ ರೈತಾಂದೋಲನಗಳ ಚಿತ್ರಗಳಿಂದ ಸಭಾಂಗಣ ತುಂಬಿತ್ತು. ದೆಹಲಿ, ಕರ್ನಾಟಕದಲ್ಲಿ ಮಡಿದ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ಹನಾನ್‌ ಮುಲ್ಲಾಹ್, ಪ್ರೊ.ಯೋಗೇಂದ್ರ ಯಾದವ್, ಅವಿಕ್ ಶಾಹಾ ಮುಂತಾದವರು ಪಾಲ್ಗೊಂಡಿದ್ದರು. ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರೈತ ಮುಖಂಡರು ತಮ್ಮ ಹದಿನೈದು ಹಕ್ಕೋತ್ತಾಯಗಳನ್ನು ಸಭೆಯ ಮುಂದಿಟ್ಟರು.

‘ರಾಜಕೀಯ ಪಕ್ಷಗಳೊಂದಿಗೆ ರೈತ ಸಂಘಟನೆಗಳ ಮುಖಾಮುಖಿ’ ಕಾರ್ಯಕ್ರಮ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಿತು.

ರೈತ ವಿರೋಧಿ ಕಾಯ್ದೆಗಳಾದ ‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆ’, ‘ಎಪಿಎಂಸಿ ತಿದ್ದುಪಡಿ ಕಾಯ್ದೆ’ ಮತ್ತು ‘ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆ’ಗಳನ್ನು ರದ್ದುಪಡಿಸಬೇಕು; ವಿದ್ಯುತ್ಛಕ್ತಿಯನ್ನು ಖಾಸಗೀಕರಣಗೊಳಿಸಬಾರದು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕಾಯ್ದೆ ಜಾರಿಗೆ ತರಬೇಕು, ರೈತರನ್ನು ಋಣಮುಕ್ತಗೊಳಿಸಬೇಕು, ಸರ್ಕಾರಿ ಭೂಮಿಗಳನ್ನು ಬಗರ್‌ಹುಕುಂ ರೈತರಿಗೆ, ವಸತಿಹೀನರಿಗೆ ವಿತರಣೆ ಮಾಡಬೇಕು ಎಂಬುದು ಪ್ರಮುಖ ಹಕ್ಕೊತ್ತಾಯಗಳಾಗಿದ್ದವು.

ಇದನ್ನೂ ಓದಿರಿ: ಬಿಜೆಪಿಯಲ್ಲಿಯೇ ಗುಲಾಮರಾಗಿ ಇರಬೇಕಿತ್ತಾ?: ಶೆಟ್ಟರ್‌ ವಾಗ್ದಾಳಿ

ರೈತರು ಕಳುಹಿಸಿಕೊಟ್ಟಿದ್ದ ಈ ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಮಾತನಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ಎಐಸಿಸಿ ಸದಸ್ಯರಾದ ರಾಜೀವ್ ಶುಕ್ಲಾ, ಕಾಂಗ್ರೆಸ್ ಪ್ರಣಾಳಿಕೆ ಸಿದ್ಧತಾ ಸಮನ್ವಯಕರಾದ ರಾಧಾಕೃಷ್ಣ ಆಗಮಿಸಿದ್ದರು. ಜೆಡಿಎಸ್‌ ಪಕ್ಷದ ಪರವಾಗಿ ಎಂಎಲ್‌ಸಿ ಹಾಗೂ ಪ್ರಣಾಳಿಕೆ ಸಿದ್ಧತಾ ಸಮಿತಿಯ ಸಮನ್ವಯಕರೂ ಆಗಿರುವ ತಿಪ್ಪೇಸ್ವಾಮಿ ಆಗಮಿಸಿದ್ದರು. ಬಿಜೆಪಿ ಪಕ್ಷಕ್ಕೂ ಆಹ್ವಾನ ನೀಡಲಾಗಿತ್ತಾದರೂ ಬಿಜೆಪಿಯ ಪ್ರತಿನಿಧಿಗಳ್ಯಾರೂ ಹಾಜರಿರಲಿಲ್ಲ. ಬಿಜೆಪಿ ಹೆಸರನ್ನು ಬರೆದಿದ್ದ ಖುರ್ಚಿಯನ್ನು ಹಾಗೆಯೇ ಖಾಲಿಬಿಡಲಾಗಿತ್ತು.

ಬಿಜೆಪಿ ಪ್ರತಿನಿಧಿಗೆ ಮೀಸಲಾಗಿದ್ದ ಖುರ್ಚಿ

ರೈತರು ಮುಂದಿಟ್ಟ ಹದಿನೈದು ಹಕ್ಕೋತ್ತಾಯಗಳನ್ನು ಬೇಷರತ್ತಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಪ್ಪಿಕೊಂಡವು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್‌, “ನಾವು ಭಿನ್ನವಾದ ಆಡಳಿತ ನಡೆಸಲು ಬಯಸುತ್ತೇವೆ. ರೈತರ ಋಣ ನಮ್ಮ ಮೇಲಿದೆ. ಬಿಜೆಪಿ ಸರ್ಕಾರ ರೈತರನ್ನು ನಾಶಮಾಡುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ನಾವು ಅಧಿಕಾರಕ್ಕೆ ಬಂದರೆ, ಬಿಜೆಪಿ ಜಾರಿಗೆ ತಂದಿರುವ ಎಲ್ಲಾ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸುತ್ತೇವೆ. ವಿದ್ಯುತ್ ಕ್ಷೇತ್ರವನ್ನು ಯಾವುದೇ ರೀತಿಯಲ್ಲೂ ಖಾಸಗೀಕರಣಗೊಳಿಸುವುದಿಲ್ಲ. ಬೆಲೆ ನಿಗದಿ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರುತ್ತೇವೆ, ಸಾಲಮನ್ನಾದ ವಿಚಾರದಲ್ಲಿ ಗರಿಷ್ಠ ಸಾಧ್ಯವಿರುವುದನ್ನು ಮಾಡುತ್ತೇವೆ” ಎಂದು ತಮ್ಮ ನಿಲುವನ್ನು ದೃಢೀಕರಿಸಿದರು.

Image
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಸಭೆಯಲ್ಲಿ ಮಾತನಾಡಿದರು

ಜೆಡಿಎಸ್‌ನ ತಿಪ್ಪೇಸ್ವಾಮಿಯವರು ಎಲ್ಲಾ ಹಕ್ಕೋತ್ತಾಯಗಳನ್ನು ಒಪ್ಪುವುದಾಗಿ ಹೇಳಿದರೂ ರೈತ ಮುಖಂಡರು ಕೇಳಿದ ಪ್ರಶ್ನೆಯೊಂದಕ್ಕೆ ಅವರ ಬಳಿ ಉತ್ತರವಿರಲಿಲ್ಲ. “ಬಿಜೆಪಿ ಸರ್ಕಾರ ಭೂಸುಧಾರಣಾ ತಿದ್ದುಪಡಿ ಮಸೂದೆಯನ್ನು ಮುಂದಿಟ್ಟಾಗ ಮೇಲ್ಮನೆಯಲ್ಲಿ ಜೆಡಿಎಸ್‌ ಸದಸ್ಯರು ಒಪ್ಪಿಕೊಂಡಿದ್ದರಿಂದಲೇ ಮಸೂದೆ ಅಂಗೀಕಾರವಾಯಿತು. ಈ ತಪ್ಪನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಲು ಸಿದ್ಧರಿದ್ದೀರಾ? ಎಲ್ಲಾ ಕಾಯ್ದೆಗಳನ್ನು ಜಾರಿಗೆ ತರಲು ಸಿದ್ಧರಿದ್ದೀರಾ?” ಎಂದು ರೈತರು ಮರುಸವಾಲು ಹಾಕಿದರು. ಈ ಮಸೂದೆಯನ್ನು ಜೆಡಿಎಸ್‌ ಯಾಕೆ ಬೆಂಬಲಿಸಿತು ಎಂಬ ಉತ್ತರ ತಿಪ್ಪೇಸ್ವಾಮಿಯವರ ಬಳಿ ಇಲ್ಲವಾದರೂ, “ನಾವು ಅಧಿಕಾರಕ್ಕೆ ಬಂದರೆ ಎಲ್ಲಾ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ” ಎಂಬುದನ್ನು ಒತ್ತಿ ಹೇಳಿದರು.

“ಹದಿನೈದು ಷರತ್ತುಗಳನ್ನು ಒಪ್ಪುತ್ತೇವೆ ಮತ್ತು ಅಧಿಕಾರಕ್ಕೆ ಬಂದರೆ ಅವುಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ” ಎಂಬುದಾಗಿ ಸಿದ್ಧಪಡಿಸಲಾಗಿದ್ದ ಪ್ರಮಾಣಪತ್ರಕ್ಕೆ ಎರಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದಲೂ ಸಹಿಯನ್ನು ಪಡೆಯಲಾಯಿತು.

ಇದಾದ ನಂತರ ರಾಜಕೀಯ ಪಕ್ಷಗಳನ್ನು ಬೀಳ್ಕೊಟ್ಟ ರೈತ ಸಮುದಾಯ, “ರೈತ ವಿರೋಧಿ ದುರಾಡಳಿತ ನೀಡಿದ ಬಿಜೆಪಿ ಪಕ್ಷವನ್ನು ಸೋಲಿಸೋಣ; ರೈತ ಪ್ರಣಾಳಿಕೆ ಒಪ್ಪಿ ಪ್ರಮಾಣ ಮಾಡಿದವರಿಗೆ ನಮ್ಮ ಮತ ಹಾಕೋಣ” ಎಂದು ಒಕ್ಕೊರಲ ತೀರ್ಮಾನ ಮಾಡಿತು. ಪ್ರತಿ ತಾಲ್ಲೂಕು, ಹಳ್ಳಿಮಟ್ಟಕ್ಕೂ ಈ ಸಂದೇಶವನ್ನು ಕೊಂಡೊಯ್ಯುವ ನಿರ್ಧಾರ ಮಾಡಲಾಯಿತು.

ಇದನ್ನೂ ಓದಿರಿ: ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎಚ್.ಆರ್‌.ಬಸವರಾಜಪ್ಪ ವಹಿಸಿದ್ದರು. ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಬಯ್ಯಾರೆಡ್ಡಿ, ಪ್ರಕಾಶ್ ಕಮ್ಮರಡಿ, ಸಿದ್ಗೌಡ ಮೋದಗಿ, ಡಿ.ಎಚ್.ಪೂಜಾರ್‌, ವಿ.ಗಾಯತ್ರಿ ಮುಂತಾದವರು ಪಾಲ್ಗೊಂಡಿದ್ದರು. ಮುಖಂಡರಾದ ನೂರ್‌ ಶ್ರೀಧರ್‌ ಮತ್ತು ಕವಿತಾ ಕುರುಗುಂಟಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಿಜೆಪಿಯನ್ನು ಸೋಲಿಸಿ, ರೈತ ಸಮುದಾಯವನ್ನು ಕಾಪಾಡುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.

‘ರಾಜಕೀಯ ಪಕ್ಷಗಳೊಂದಿಗೆ ರೈತ ಸಂಘಟನೆಗಳ ಮುಖಾಮುಖಿ’ ಕಾರ್ಯಕ್ರಮ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಿತು.

ರೈತ ಸಮುದಾಯದ 15 ಪ್ರಮುಖ ಹಕ್ಕೊತ್ತಾಯಗಳು

 1. 2019ರಲ್ಲಿ ಬಿಜೆಪಿ ಸರ್ಕಾರವು ರೈತರ ವಿರೋಧದ ನಡುವೆಯೂ ಜಾರಿ ಮಾಡಿದ ರೈತ ವಿರೋಧಿ ಕಾಯ್ದೆಗಳಾದ ‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆ’, ‘ಎಪಿಎಂಸಿ ತಿದ್ದುಪಡಿ ಕಾಯ್ದೆ’ ಮತ್ತು ‘ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆ’ಗಳನ್ನು ಹೊಸ ಸರ್ಕಾರ ರಚನೆಯಾದ ಕೂಡಲೇ ರದ್ದುಗೊಳಿಸಬೇಕು.
 2. ವಿದ್ಯುತ್ ಖಾಸಗೀಕರಣ ಮಾಡಬಾರದು. ರೈತರಿಗೆ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಮುಂದುವರೆಯಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಖಾಸಗೀಕರಣದ ಕಾಯ್ದೆ ತಂದರೂ ರಾಜ್ಯ ಅದನ್ನು ಜಾರಿಗೊಳಿಸಬಾರದು.
 3. ರೈತರ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಕಾನೂನಾತ್ಮಕವಾಗಿ ಖಾತ್ರಿಗೊಳಿಸುವ ಹೊಸ ಕಾಯ್ದೆಯನ್ನು ಜಾರಿಗೆ ತರಬೇಕು. ಡಾ. ಪ್ರಕಾಶ್ ಕಮ್ಮರಡಿ ಅವರ ಅಧ್ಯಕ್ಷತೆಯಲ್ಲಿ ನಿಯೋಜಿಸಲಾಗಿದ್ದ ಆಯೋಗದ ವರದಿಯನ್ನು ರೈತ ಪ್ರತಿನಿಧಿಗಳ ಜೊತೆ ಸಮಾಲೋಚಿಸಿ, ಪರಿಷ್ಕರಿಸಿ, ಅಗತ್ಯ ತಿದ್ದುಪಡಿಗಳೊಂದಿಗೆ, ಜಾರಿಗೊಳಿಸಬೇಕು.
 4. ಈಗಾಗಲೇ ನಷ್ಟಕ್ಕೆ ತುತ್ತಾಗಿರುವ ಕಬ್ಬು, ಕೊಬರಿ, ಹರಿಷಿಣ ಮುಂತಾದ ವಾಣಿಜ್ಯ ಬೆಳೆ ಉತ್ಪಾದಕ ರೈತರ ನೆರವಿಗೆ ರಾಜ್ಯ ಧಾವಿಸಬೇಕು. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಷ್ಟಕ್ಕೆ ಗುರಿಯಾಗಿರುವ ರೈತರಿಗೆ ಸೂಕ್ತ ಸರ್ಕಾರಿ ವಿಮೆ ರಚನೆಯ ಮೂಲಕ ರಕ್ಷಣೆ ಒದಗಿಸಬೇಕು. ಪ್ರಾಕೃತಿಕ ಬೆಳೆ ನಷ್ಟವನ್ನು ನಿಭಾಯಿಸಲು 10 ಸಾವಿರ ಕೋಟಿಗಳ ಇಡಗಂಟು ನಿಧಿ ರಚಿಸಬೇಕು.
 5. ಸಾಲದ ಶೂಲಕ್ಕೆ ಸುಲುಕಿ ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆಗೆ ತುತ್ತಾಗುತ್ತಿರುವ ರೈತರನ್ನು ಕಾಪಾಡಲು ಸಾಲಮುಕ್ತಿ ಕಾಯ್ದೆಯನ್ನು ಜಾರಿಗೆ ತರಬೇಕು. ಇದುವರೆಗಿನ ಕೃಷಿ ನಷ್ಟಕ್ಕೆ ಸರ್ಕಾರದ ನೀತಿಗಳೇ ಪ್ರಮುಖ ಕಾರಣವಾಗಿರುವುದರಿಂದ ರೈತರ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಭೂಮಿ ದಾಖಲಾತಿ ಇಲ್ಲದಿರುವ ರೈತರಿಗೂ ಕೃಷಿ ಸಾಲ ಪಡೆಯಲು ಅವಕಾಶವಿರಬೇಕು. ಕೃಷಿ ಸಾಲದ ಪ್ರಮಾಣವನ್ನು ಕನಿಷ್ಟ 1 ಲಕ್ಷ ಹೆಚ್ಚಿಸಬೇಕು.
 6. 1995 ರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲಾ ರೈತ ಕುಟುಂಬಗಳಲ್ಲಿನ ಮಹಿಳಾ ರೈತರಿಗೆ ಸರಿಯಾದ ಪುನರ್ವಸತಿಗಾಗಿ ಗುರುತಿನ ಚೀಟಿಗಳನ್ನು ನೀಡಬೇಕು ಮತ್ತು ಬಾಕಿ ಇರುವ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು, ಇದರಿಂದ ಅವರು ಹೊಸದಾಗಿ ತಮ್ಮ ಜೀವನವನ್ನು ಪ್ರಾರಂಭಿಸಲು ನೆರವಾಗಬೇಕು.
 7. ಬಗರ್ ಹುಕುಂ ಭೂಮಿಗಳನ್ನು ಕೂಡಲೇ ಬಡ ಉಳುಮೆದಾರರಿಗೆ ಮಂಜೂರು ಮಾಡಬೇಕು. ಸರ್ಕಾರಿ ಭೂಮಿಗಳಲ್ಲಿ ಬಡವರು ಕಟ್ಟಿಕೊಂಡಿರುವ ಮನೆಗಳ ನಿವೇಶನಗಳನ್ನು ಕೂಡಲೇ ಅವರಿಗೆ ಮಂಜೂರು ಮಾಡಬೇಕು. ಪ್ರತಿ ಕುಟುಂಬಕ್ಕೊಂದು ಸ್ವಂತದ ಸೂರು ನೀತಿಯನ್ನು ಜಾರಿಗೆ ತರಬೇಕು. ಸರ್ಕಾರಿ ಭೂಮಿಯ ಹಂಚಿಕೆಯ ಮೊದಲ ಆಧ್ಯತೆ ವಸತಿಯಾಗಿರಬೇಕು. 2018ರಲ್ಲಿ ಸರ್ಕಾರ ರಚಿಸಿದ್ದ, ಬಿಜೆಪಿ ಸರ್ಕಾರ ನಿಷ್ಟ್ರಿಯಗೊಳಿಸಿದ್ದ ಉನ್ನತ ಸಮಿತಿಯನ್ನು ಮತ್ತೆ ಪುನರ್ರಚಿಸಿ ಕಾರ್ಯರೂಪಕ್ಕೆ ತರಬೇಕು.
 8. ಸರ್ಕಾರಿ ಭೂಮಿಯನ್ನು ಕಂಪನಿಗಳಿಗೆ, ರಾಜಕಾರಣಿಗಳಿಗೆ, ಬಲಾಢ್ಯರಿಗೆ, ತಮಗೆ ಬೇಕಾದ ಸಂಸ್ಥೆ, ಮಠ-ಮಾನ್ಯಗಳಿಗೆ ಮನ ಬಂದಂತೆ ಭೂಮಿ ಪರಭಾರೆ ಮಾಡುವುದನ್ನು ನಿಲ್ಲಿಸಬೇಕು. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಮರು ವರ್ಗಾವಣೆಯಾಗುತ್ತಿರುವ ಭೂಮಿಯನ್ನು ಪ್ಲಾಂಟರುಗಳಿಗೆ ನೀಡಬಾರದು. ಅದು ಅವಲಂಬಿತ ಕುಟುಂಬಗಳಿಗೆ ಮತ್ತು ಭೂ ಹೀನರಿಗೆ ಮೀಸಲಾಗಿರಬೇಕು. ಭೂ ಸ್ವಾಧೀನ ಪುನರ್ವಸತಿ ಮತ್ತು ಪುನರ್ ನೆಲೆ ಕಾಯ್ದೆ [LARR] 2013ಕ್ಕೆ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ರೈತರ ಇಚ್ಛೆಗೆ ವಿರುದ್ಧವಾಗಿ ಯಾವ ಭೂಮಿಯನ್ನೂ ಸ್ವಾಧೀನ ಪಡೆಸಿಕೊಳ್ಳಬಾರದು. ಅನಿವಾರ್ಯ ಅತ್ಯಗತ್ಯ ಕಾರಣಗಳಿಂದಾಗಿ ರೈತರ ಭೂಮಿಯನ್ನು ಸರ್ಕಾರ ಪಡೆದುಕೊಂಡ ಸಂದರ್ಭದಲ್ಲೂ ರೈತರ ಮಾಲಿಕತ್ವ ರದ್ದು ಮಾಡದೆ ನಿಯಮಿತ ಆದಾಯ ರೈತ ಕುಟುಂಬಕ್ಕೆ ದೊರಕುವಂತೆ ಮಾಡಬೇಕು.
 9. ಅರಣ್ಯ ಹಕ್ಕು ಕಾಯ್ದೆ 2006 ರ ಸರಿಯಾದ ಅನುಷ್ಠಾನವಾಗಬೇಕು. ಜನ ವಿರೋಧಿ ಅರಣ್ಯ ಯೋಜನೆ ಅಥವಾ ವರದಿಗಳ ಹೆಸರಿನಲ್ಲಿ ಯಾವುದೇ ಅರಣ್ಯ ಅವಲಂಬಿತ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು.
 10. ನರೇಗ ಯೋಜನೆಯನ್ನು ಬಲಪಡಿಸಬೇಕು ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಬೇಕು. ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಕಾರ್ಮಿಕರಿಗೆ ನೆರವಾಗುವ ರೀತಿಯಲ್ಲಿ ಇದರ ಯೋಜನೆಗಳನ್ನು ಮರು ರೂಪಿಸಬೇಕು. ಕೃಷಿ ಕೂಲಿಗಳ ಅಭಿವೃದ್ಧಿಗೆ ಕಲ್ಯಾಣ ಮಂಡಳಿಯನ್ನು ನೇಮಿಸಬೇಕು.
 11. ಪೆಂಡಿಂಗ್ ಇರುವ ನೀರಾವರಿ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಅಲ್ಲದೆ ಎತ್ತಿನಹೊಳೆ ಮೇಕೆದಾಟು ಇತ್ಯಾದಿ ಯೋಜನೆಗಳನ್ನು ಜಾರಿ ಮಾಡಬೇಕು.
 12. ಸರ್ಕಾರವು ಪರಿಸರದ, ರೈತರ, ಬಳಕೆದಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಕ್ರಿಮಿನಾಶಕ ಅಥವಾ ಜೀವಾಣು ಬದಲಾವಣೆಯಂತಹ ವಿಷಯುಕ್ತ ತಂತ್ರಜ್ಞಾನವನ್ನು ಕೃಷಿಯಲ್ಲಿ ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು. ಜಿಎಂ ತಂತ್ರಜ್ಞಾನದ ಮೂಲಕ ಬೀಜದ ಮೇಲೆ ಕಾರ್ಪೋರೇಟ್ ಕಂಪನಿಗಳು ಮೇಲಾಧಿಪತ್ಯ ಸಾಧಿಸುವುದನ್ನು ತಡೆಯಬೇಕು.
 13. ಕರ್ನಾಟಕದ ರೈತ ಸಮುದಾಯ ಶಾಂತಿ ಪ್ರಿಯ ಸಮುದಾಯವಾಗಿದೆ. ವಿವಿಧ ಜಾತಿ, ಧರ್ಮಗಳಿಂದ ಅದು ಕೂಡಿದ್ದರೂ ಕೂಡಿ ಬಾಳುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿರುವುದು ಅದರ ಹೆಮ್ಮೆಯ ಪರಂಪರೆಯಾಗಿದೆ. ರಾಜಕೀಯಕ್ಕಾಗಿ ಸಮಾಜದಲ್ಲಿ ಜಾತಿ ಮತ್ತು ಧರ್ಮದ ಮೇಲಾಟ ನಡೆಸಿರುವುದನ್ನು ಕಂಡು ರೈತ ಕುಲ ಕಳವಳಕ್ಕೆ ತುತ್ತಾಗಿದೆ. ಇದಕ್ಕೆ ಕೊನೆ ಹಾಡಬೇಕೆಂದು ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತದೆ.
 14. ರೈತ ಸಮುದಾಯ ಬ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಹೆಜ್ಜೆಹೆಜ್ಜೆಗೂ ಲಂಚ ನೀಡಿ ನಾವು ದಣಿದಿದ್ದೇವೆ. ಸರ್ಕಾರದ ಕೃಷಿ ಸಂಬಂಧಿತ ನೀತಿ ನಿರೂಪಣೆಗಳು ಮುಕ್ತವಾಗಿ, ರೈತರನ್ನು ಒಳಗೊಂಡು ನಡೆಯಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಈ ನೀತಿಗಳು ಮೂಲಭೂತವಾಗಿ ರೈತ ಹಿತವನ್ನು ಗಮನದಲ್ಲಿಟ್ಟುಕೊಂಡು ರೂಪಗಳ್ಲಬೇಕೇ ಹೊರತು ಕಂಪನಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅಲ್ಲ.
 15. ಕೃಷಿಗೆ ಸಂಬಂಧಿತ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರವು ತನ್ನ ಸಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು ಮತ್ತು ಅದನ್ನು ಹರಣ ಮಾಡುವ ಕೇಂದ್ರ ಸರ್ಕಾರದ ನಡೆಗಳನ್ನು ದಿಟ್ಟವಾಗಿ ವಿರೋಧಿಸಬೇಕು.

ಇದನ್ನೂ ಓದಿರಿ: ಬಸವಣ್ಣನ ಆಶೀರ್ವಾದವಿರುವಾಗ ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕಿಲ್ಲ: ನಡ್ಡಾ ಹೇಳಿಕೆಗೆ ಗುಡುಗಿದ ಪ್ರಿಯಾಂಕಾ ಗಾಂಧಿ

ತುರ್ತು ಮತ್ತು ವಿಶೇಷ ಹಕ್ಕೊತ್ತಾಯ: ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುವ ಅಥವಾ ಅಮುಲ್ ಅನ್ನು ನಂದಿನಿ ಜೊತೆ ಸ್ಪರ್ಧಿಸಲು ಬಿಡುವ ರೈತ ವಿರೋಧಿ ನಡೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ನಿಲ್ಲಿಸಬೇಕು. ನಂದಿನಿಯು 15 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರಿ ಸಂಸ್ಥೆಗಳ ಸಮೂಹವಾಗಿದ್ದು, 60 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಇದರ ಜೊತೆ ಹೆಣೆದುಕೊಂಡಿವೆ. ಅಂಬಾನಿಯಂತದ ದೈತ್ಯ ಕಂಪನಿಯ ದುಷ್ಟ ಯೋಜನೆಗೆ ವೇದಿಕೆ ಸಜ್ಜು ಮಾಡುವ, ರೈತರ ಬದುಕಿನ ಜೊತೆ ಚೆಲ್ಲಾಟವಾಡುವ ದುಸ್ಸಾಹಸಕ್ಕೆ ಯಾವುದೇ ಪಕ್ಷ ಕೈ ಹಾಕಬಾರದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...