Homeಕರ್ನಾಟಕಟಿಕೆಟ್ ಹಂಚಿಕೆ: ಬಿಜೆಪಿಗೆ ಬಂಡಾಯದ ಬಿಸಿ, ಜೆಡಿಎಸ್‌ನಲ್ಲಿ ಅತೃಪ್ತಿ

ಟಿಕೆಟ್ ಹಂಚಿಕೆ: ಬಿಜೆಪಿಗೆ ಬಂಡಾಯದ ಬಿಸಿ, ಜೆಡಿಎಸ್‌ನಲ್ಲಿ ಅತೃಪ್ತಿ

- Advertisement -
- Advertisement -

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲವೂ ಸರಿಯಿಲ್ಲ ಎನ್ನುವುದು ಕಂಡು ಬರುತ್ತಿದೆ. ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ಬಿಜೆಪಿಗೆ ಸ್ವಪಕ್ಷದೊಳಗಿನ ಬಂಡಾಯದ ಬಿಸಿಯ ಜೊತೆಗೆ ಮೈತ್ರಿ ಪಕ್ಷ ಜೆಡಿಎಸ್‌ನ್ನು ಸಮಾಧಾನಗೊಳಿಸುವ ಸವಾಲು ಎದುರಾಗಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್‌ ಹಂಚಿಕೆ ಬಳಿಕ ಬಿಜೆಪಿಯೊಳಗೆ ಭಾರೀ ಬಂಡಾಯ ಭುಗಿಲೆದ್ದಿತ್ತು, ಲೋಕಸಭೆ ಚುನಾವಣೆಗೆ ಟಿಕೆಟ್‌ ಘೋಷಣೆ ಬಳಿಕವೂ ಇದೇ ರೀತಿಯ ಅಸಮಾಧಾನದ ಜ್ವಾಲೆ ಭುಗಿಲೆದ್ದಿದ್ದು, ರಾಜ್ಯ ಬಿಜೆಪಿಗೆ ಬಂಡಾಯ ಶಮನ ದೊಡ್ಡ ಸವಾಲಾಗಿದೆ. ಈ ಬಾರಿ 9 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದ್ದು, ಕೆಲ ಸಂಸದರು ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಪುತ್ರನಿಗೆ ಟಿಕೆಟ್‌ ಸಿಗದ ಹಿನ್ನೆಲೆ  ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ವಿರುದ್ಧ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಸಿಟಿ ರವಿ, ರೇಣುಕಾಚಾರ್ಯ, ಸದಾನಂದ ಗೌಡ, ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದು, ಬಿಜೆಪಿಗೆ ಬಂಡಾಯ ಶಮನ ಸವಾಲಾಗಿದೆ.

ಇನ್ನು 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸುವಾಗ ಸೌಜನ್ಯಕ್ಕಾದರೂ ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದು ರಾಜ್ಯದಲ್ಲಿ ಎನ್‌ಡಿಎ ಪಾಲುದಾರ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ-ಜೆಡಿಎಸ್‌ ನಡುವೆ ಮೈತ್ರಿ ಮಾತುಕತೆ ನಡೆದು 6 ತಿಂಗಳು ಕಳೆದರೂ ಈವರೆಗೆ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಇದಲ್ಲದೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವಾಗ ಜೆಡಿಎಸ್‌ ನಾಯಕರ ಜೊತೆಗೆ ಸಮಾಲೋಚನೆಯೇ ನಡೆಸಿಲ್ಲ ಎನ್ನಲಾಗಿದೆ. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಈ ಹಿಂದೆ ಸಹಮತ ವ್ಯಕ್ತಪಡಿಸಿದ್ದರು. ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಕ್ಕೆ ಕುಮಾರಸ್ವಾಮಿ ಪ್ರಸ್ತಾಪ ಮುಂದಿಟ್ಟಿದ್ದರು. ಇದೀಗ ಬೆಂಗಳೂರು ಗ್ರಾಮಾಂತರಕ್ಕೆ ದೇವೇಗೌಡರ ಕುಟುಂಬದ ಡಾ.ಸಿ.ಎನ್‌.ಮಂಜುನಾಥ್ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಲಾಗಿದೆ. ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಾಗಿದೆ,  ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯ ಸಂಸದರಿದ್ದು, ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಒಲವು ಹೊಂದಿಲ್ಲ. ಮಂಡ್ಯ ಕ್ಷೇತ್ರದಲ್ಲೂ ನಿಖಿಲ್‌ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕುಮಾರಸ್ವಾಮಿಗೆ  ಶಾ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಬಿಜೆಪಿ-ಜೆಡಿಎಸ್‌ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಕಗ್ಗಂಟಾಗಿ ಉಳಿದಿದೆ.

ಇನ್ನೊಂದು ಕಡೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡು ಪಕ್ಷಗಳಲ್ಲಿ ವಿರೋಧ ವ್ಯಕ್ತವಾಗಿತ್ತು.  ಪ್ರೀತಂ ಗೌಡ, ಶರಣುಗೌಡ ಕುಂದಕೂರು, ಕರೆಮ್ಮ ನಾಯಕ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು.  ಇನ್ನು ಸಂಘ ಪರಿವಾರದ ನಾಯಕರು, ಕೆಳ ಹಂತದ ಮುಖಂಡರು, ಕಾರ್ಯಕರ್ತರಿಗೆ ಈ ಮೈತ್ರಿ ಬಗ್ಗೆ ಒಮ್ಮತ ಇಲ್ಲ ಎನ್ನಲಾಗಿದೆ. ಮೇಲ್ಮಟ್ಟದಲ್ಲಿ ಏನೇ ಮೈತ್ರಿಯಾದರೂ ಕೆಳ ಹಂತದಲ್ಲಿ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಎರಡೂ ಪಕ್ಷಗಳ ನಡುವೆ ಮೈತ್ರಿ ನಿರ್ಧಾರವಾಗಿದೆಯಾದರೂ ನಿರೀಕ್ಷಿತ ಚುನಾವಣಾ ಫಲಿತಾಂಶ ಕಷ್ಟ ಎಂದು ಹೇಳಲಾಗಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...