Homeಮುಖಪುಟಇದು ಕ್ರಿಕೆಟ್ ಪಂದ್ಯವೋ ರಾಜಕೀಯ ರ್‍ಯಾಲಿಯೋ?: ಬಿಜೆಪಿಯವರೇ ಟಿಕೆಟ್‌ ಖರೀದಿಸಿದ ಕಥೆ!

ಇದು ಕ್ರಿಕೆಟ್ ಪಂದ್ಯವೋ ರಾಜಕೀಯ ರ್‍ಯಾಲಿಯೋ?: ಬಿಜೆಪಿಯವರೇ ಟಿಕೆಟ್‌ ಖರೀದಿಸಿದ ಕಥೆ!

- Advertisement -
- Advertisement -

ಗುರುವಾರ ಬೆಳಿಗ್ಗೆ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ಪ್ರಾರಂಭವಾಗುವ ಮೊದಲು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರದಕ್ಷಿಣೆ ಹಾಕಿದರು.

‘ಕ್ರಿಕೆಟ್ ಮೂಲಕ ಸ್ನೇಹ’ ಎಂಬ ಸಂದೇಶವನ್ನು ಒಳಗೊಂಡಿರುವ ರಥದಂತಹ ವಾಹನವನ್ನು ಈ ಇಬ್ಬರು ನಾಯಕರು ಏರಿದ್ದರು.

ಮೋದಿ ಅವರು ತಮ್ಮ ಹೆಸರಿನಲ್ಲೇ ಇರುವ ಕ್ರೀಡಾಂಗಣದ ಸುತ್ತಲೂ ಪ್ರದಕ್ಷಿಣೆ ಹೋದರು. ಬಿಸಿಸಿಐ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಮೋದಿಯವರ ಚಿತ್ರವನ್ನು ಮೋದಿಯವರಿಗೆಯೇ ಉಡುಗೊರೆಯಾಗಿ ನೀಡಿದರು. ಈ ಕ್ರೀಡಾಂಗಣವನ್ನು ನವೀಕರಿಸಿ ಮರುನಾಮಕರಣ ಮಾಡಿದ ನಂತರ ಮೋದಿಯವರು ಇಲ್ಲಿಗೆ ನೀಡಿರುವ ಮೊದಲ ಭೇಟಿ ಇದಾಗಿತ್ತು.

ಕೆಲವು ವಿಶ್ಲೇಷಕರ ಪ್ರಕಾರ, “ಈ ಘಟನೆಯು ಕ್ರಿಕೆಟ್ ಪಂದ್ಯಕ್ಕಿಂತ ಹೆಚ್ಚಾಗಿ ರಾಜಕೀಯ ರ್‍ಯಾಲಿಯಂತೆ ತೋರುತ್ತಿದೆ. ಈ ಟೆಸ್ಟ್ ಪಂದ್ಯದ ಮೊದಲ ದಿನದಂದು 80,000 ಟಿಕೆಟ್‌ಗಳನ್ನು ಬಿಜೆಪಿ ಖರೀದಿಸಿದೆ ಎಂದು ಗುಜರಾತಿ ಪತ್ರಿಕೆ ದಿವ್ಯಾ ಭಾಸ್ಕರ್ ವರದಿ ಮಾಡಿದೆ. ಈ ಕ್ರೀಡಾಂಗಣದಲ್ಲಿ ಸುಮಾರು 1,30,000 ಜನರು ಕುಳಿತುಕೊಳ್ಳಬಹುದು.”

ಪಂದ್ಯಕ್ಕೆ ಟಿಕೆಟ್ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ಗುಜರಾತ್‌ನ ನಾಲ್ವರು ಬಿಜೆಪಿ ಶಾಸಕರು ‘ದಿ ವೈರ್‌’ ಜಾಲತಾಣಕ್ಕೆ ತಿಳಿಸಿದ್ದಾರೆ. ತಾನೊಬ್ಬನೇ 12,000 ಟಿಕೆಟ್ ಖರೀದಿಸಿದ್ದೇನೆ ಎಂದು ಶಾಸಕರೊಬ್ಬರು ಹೇಳಿದ್ದಾರೆ. ಟಿಕೆಟ್‌ಗಳನ್ನು ಮಾರಾಟ ಮಾಡುವ ‘ಬುಕ್‌ಮೈಷೋ’ಅನ್ನು ‘ದಿ ವೈರ್’ ಸಂಪರ್ಕಿಸಿದ್ದು, ಪ್ರತಿಕ್ರಿಯೆ ನೀಡಲು ಬುಕ್‌ಮೈಷೋ ನಿರಾಕರಿಸಿದೆ.

ಗುಜರಾತ್‌ನ ಕಾಂಗ್ರೆಸ್ ಶಾಸಕ ಅರ್ಜುನ್ ಮೊದ್ವಾಡಿಯಾ ಪ್ರತಿಕ್ರಿಯಿಸಿದ್ದು, “ಕ್ರಿಕೆಟ್ ಪಂದ್ಯವನ್ನು ಈ ರೀತಿಯಲ್ಲಿ ರಾಜಕೀಯಗೊಳಿಸಲು ಬಿಸಿಸಿಐ ಅನುಮತಿ ನೀಡಿದೆ” ಎಂದು ಟೀಕಿಸಿದ್ದಾರೆ.

“ಕ್ರಿಕೆಟ್‌ನಂತಹ ಶ್ರೇಷ್ಠ ಕ್ರೀಡೆಯನ್ನು ರಾಜಕೀಯ ರಂಗಕ್ಕೆ ಇಳಿಸುವುದು ಹಾಸ್ಯಾಸ್ಪದವಾಗಿದೆ” ಎಂದು ಅವರು ‘ದಿ ವೈರ್‌’ಗೆ ತಿಳಿಸಿದ್ದಾರೆ. ಈ ರೀತಿಯಾಗಿ ಟಿಕೆಟ್ ಅನ್ನು ಖರೀದಿಸುವ ಮೂಲಕ ಭಾರತೀಯ ಜನತಾ ಪಕ್ಷವು ಕ್ರಿಕೆಟ್‌ ಪಂದ್ಯವನ್ನು ರಾಜಕೀಯಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿದೇಶದಿಂದ ಬಂದಿದ್ದ ಕ್ರಿಕೆಟ್‌ ಅಭಿಮಾನಿಗಳು ಈ ನಿರ್ದಿಷ್ಟ ಪಂದ್ಯಕ್ಕಾಗಿ ಟಿಕೆಟ್ ಪಡೆಯಲು ಪರದಾಡಬೇಕಾಯಿತು ಎಂದು ವರದಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಟಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ‘ಎಬಿಸಿ ನ್ಯೂಸ್’ ವರದಿ ಮಾಡಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ಗೆ ಸಂಘಪರಿವಾರದವರಿಂದ ಸರಣಿ ಕೊಲೆ ಬೆದರಿಕೆ!

ಒತ್ತಡ ಸೃಷ್ಟಿಯಾದ ನಂತರವೇ ಆಸ್ಟ್ರೇಲಿಯನ್ನರಿಗೆ ಇನ್ನೂ ಕೆಲವು ಟಿಕೆಟ್‌ಗಳು ಲಭ್ಯವಾದವು. “ಆಸೀಸ್ ಅಭಿಮಾನಿಗಳಿಗೆ ಟಿಕೆಟ್ ಖರೀದಿಸಲು ಕ್ರೀಡಾಂಗಣದಲ್ಲಿ ಬಾಕ್ಸ್ ಆಫೀಸ್ ಅನ್ನು ತೆರೆಯಲಾಗುತ್ತಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿತು.

ವಿಐಪಿಗಳ ಭೇಟಿಗೆ ಮುಂಚಿತವಾಗಿ, ಅಹಮದಾಬಾದ್‌ನ ಬೀದಿಗಳನ್ನು ಸ್ವಚ್ಛಗೊಳಿಸಲಾಯಿತು ಮತ್ತು ಪೋಸ್ಟರ್‌ಗಳನ್ನು ಹಾಕಲಾಗಿತ್ತು.

ಈ ಕುರಿತು ಆಸ್ಟ್ರೇಲಿಯಾದಲ್ಲಿ ಪ್ರಶ್ನೆಗಳು ಎದ್ದಿದ್ದು, ನಮ್ಮ ದೇಶವು ಭಾರತದ ಆಡಳಿತ ಪಕ್ಷವನ್ನು ಈ ರೀತಿ ಏಕೆ ಅನುಮೋದಿಸುತ್ತಿದೆ ಎಂಬ ಕೇಳುತ್ತಿರುವುದಾಗಿ ವರದಿಗಳಾಗಿವೆ.

“ಅಸಹಿಷ್ಣುತೆಯನ್ನು ನಾವ್ಯಾಕೆ ಸಹಿಸಿಕೊಳ್ಳುತ್ತಿದ್ದೇವೆ?” ಎಂದು ಕ್ರಿಕೆಟ್ ಬರಹಗಾರ ಗಿಡಿಯಾರ್‌ ಹೈ ಅವರು ‘ಆಸ್ಪ್ರೇಲಿಯನ್‌’ ವೆಬ್‌ಸೈಟ್‌ನಲ್ಲಿ ಬರೆದಿರುವ ಲೇಖನ ಹಲವಾರು ಮಹತ್ವದ ಸಂಗತಿಗಳನ್ನು ಉಲ್ಲೇಖಿಸಿದೆ. ವಿಶೇಷವಾಗಿ 2002ರ ಗುಜರಾತ್ ಗಲಭೆಗಳ ಸಮಯದಲ್ಲಿ ಮೋದಿಯವರ ಆಡಳಿತ ವೈಖರಿಯ ಬಗ್ಗೆ ಗಿರಿಯಾರ್‌‌ ಪ್ರಸ್ತಾಪಿಸಿದ್ದಾರೆ.

ಮೋದಿಯವರು ಭೇಟಿ ನೀಡುವ ಇತರ ಕಾರ್ಯಕ್ರಮಗಳಂತೆ ಈ ಪಂದ್ಯವು ಹೇಗೆ ಪಿಆರ್‌ ಕಸರತ್ತಾಗಿ ಕಂಡು ಬಂದಿತು ಎಂಬುದನ್ನು ‘ಎಬಿಸಿ ನ್ಯೂಸ್‌’ ವರದಿ ಪ್ರಸ್ತಾಪಿಸಿದೆ.

ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಧಾನ ಮಂತ್ರಿಯ ಮುಖವನ್ನು ಇಷ್ಟೊಂದು ಪ್ರಮುಖವಾಗಿ ಪ್ರದರ್ಶಿಸುವುದನ್ನು ನೋಡುವುದು ಕೇಳರಿಯದ ಸಂಗತಿಯಾಗಿದೆ. ವಾಸ್ತವವಾಗಿ ಅನೇಕ ಕ್ರೀಡಾಭಿಮಾನಿಗಳು (ಈ ಘಟನೆಯಿಂದ) ಅಸಮಾಧಾನಗೊಂಡಿರಬಹುದು ಎನ್ನಲಾಗುತ್ತಿದೆ.

(ವರದಿ ಕೃಪೆ: ದಿ ವೈರ್‌)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...