Homeರಂಜನೆಕ್ರೀಡೆಕ್ರಿಕೆಟ್, ಕಾಮೆಂಟ್ರಿ ಮತ್ತು ಭಾಷೆ

ಕ್ರಿಕೆಟ್, ಕಾಮೆಂಟ್ರಿ ಮತ್ತು ಭಾಷೆ

- Advertisement -
- Advertisement -

ಕ್ರಿಕೆಟ್ ಜಗತ್ತು ತನ್ನದೇ ಆದ ಪರಿಭಾಷೆಯನ್ನು ಹೊಂದಿದೆ. ಯಾವುದೇ ಒಂದು ತಂಡವು ತನ್ನ ಎಲ್ಲಾ ಆಟಗಾರರಿಗೆ ಅರ್ಥವಾಗುವ ಭಾಷೆಯಲ್ಲಿ ಪಂದ್ಯದ ರೂಪುರೇಷೆಗಳನ್ನು ತಯಾರು ಮಾಡಿಕೊಂಡು ಮೈದಾನಕ್ಕೆ ಇಳಿಯುತ್ತದೆ. ಕ್ರಿಕೆಟ್ ಕೇವಲ ಬ್ಯಾಟ್-ಬಾಲ್‌ಗಳ ಮಧ್ಯದ ಸಂಘರ್ಷವಲ್ಲ. ಅದು ತಾಳ್ಮೆ, ಸಕಾರಾತ್ಮಕ ಮಾನಸಿಕತೆ, ದೈಹಿಕ ಸದೃಢತೆ, ಆತ್ಮವಿಶ್ವಾಸ, ಒಗ್ಗಟ್ಟು, ಸಮಯಪ್ರಜ್ಞೆ, ಆಟಗಾರರ ಸಾಮರ್ಥ್ಯದ ಬಗ್ಗೆ ನಂಬಿಕೆ, ಹೀಗೆ ಹಲವು ಬಗೆಯ ನಿರೀಕ್ಷೆಯನ್ನು ಬಯಸುತ್ತದೆ. ಮೈದಾನದ ಒಳಗೆ ಬಳಸುವ ಭಾಷೆ, ವೀಕ್ಷಕ ವಿವರಣೆ ನೀಡುವಾಗ ಬಳಸುವ ಭಾಷೆ, ದಿನನಿತ್ಯದ ಜೀವನದಲ್ಲಿ ಕ್ರಿಕೆಟ್ ಪದಗಳ ಬಳಕೆ, ಹೀಗೆ ಮೂರು ಬಗೆಯಲ್ಲಿ ಕ್ರಿಕೆಟ್ ಪರಿಭಾಷೆ ನಮ್ಮ ಮಧ್ಯೆ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಮೈದಾನದ ಒಳಗೆ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುವ ತಂಡವು, ವಿರೋಧಿ ತಂಡಕ್ಕೆ ಅರ್ಥವಾಗದ ಭಾಷೆಯಲ್ಲಿ ತಮ್ಮೊಳಗೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತದೆ. ಗೂಟರಕ್ಷಕ (wicket keeper), ಎಸೆತಗಾರರಿಗೆ (bowler), ದಾಂಡಿಗರ (Batsman) ದೌರ್ಬಲ್ಯಗಳನ್ನು ಹೇಳುವಾಗಲೂ ಎಚ್ಚರಿಕೆಯಿಂದ ಭಾಷೆಯನ್ನು ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾದರೆ ಭಾರತದ ಆಟಗಾರರು ಹಿಂದಿಯಲ್ಲಿ ಮಾತಾಡಿಕೊಳ್ಳುತ್ತಾರೆ. ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆ ನಿಂತುಕೊಂಡು “ವೋ ಆಗೆ ಆಕೆ ಮಾರೇಗಾ, ಬಾಹರ್ ಡಾಲ್ ನಾ” (ಅವನು ಮುಂದೆ ಬಂದು ಹೊಡೆಯುತ್ತಾನೆ, ಆಚೆ ಹಾಕು) ಎಂದು ಬೌಲರ್‌ಗೆ, ಬ್ಯಾಟ್ಸ್‌ಮನ್ ಮುಂದೇನು ಮಾಡಬಹುದೆಂದು ಎಚ್ಚರಿಸುವ ಮೂಲಕ ವಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಒದಗಿಸಿಕೊಡುವುದನ್ನು ಗಮನಿಸಬಹುದು. ಬ್ಯಾಟ್ಸ್‌ಮನ್‌ನ ಏಕಾಗ್ರತೆಯನ್ನು ಭಂಗ ಮಾಡಲು “ಚೆಂಡು ಕಾಣಿಸ್ತಾ ಇಲ್ಲ, ನಿಧಾನವಾಗಿ ಬೌಲಿಂಗ್ ಮಾಡು” ಎಂದು ಕಿಚಾಯಿಸುವುದು. “ಈ ಚೆಂಡನ್ನು ಹೊಡಿ ಎಂದು” ಸವಾಲು ಹಾಕುವುದು, ಸಹಜವಾಗಿ ಕಂಡು ಬರುವ ಸ್ಲೆಡ್ಜಿಂಗ್ ಆಗಿದೆ. ಕ್ರಿಕೆಟ್ ಆಟಗಾರರು ಮೈದಾನದಲ್ಲಿ ತಮ್ಮ ಹೆಸರಿನ ಬದಲು ಚಿಕ್ಕದಾಗಿರುವ ಅನ್ವರ್ಥನಾಮಗಳನ್ನು ಹೊಂದಿದ್ದಾರೆ. ಜಡ್ಡು, ಮಾಹಿ, ಜಂಬು, ದಾದಾ, ಜಾಮಿ, ಗೌತಿ, ಬಿಗ್ ಬರ್ಡ್, ಗಿಲ್ಲಿ ಹೀಗೆ ಪಟ್ಟಿ ಬೆಳೆಯುತ್ತದೆ.

ತಮ್ಮ ಸ್ಥಳೀಯ ತಂಡಗಳಲ್ಲಿ ಆಡಿ ತಮ್ಮ ಭಾಷೆಗಳಲ್ಲಿಯೇ ವ್ಯವಹರಿಸುವ ಆಟಗಾರರು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕಾದರೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಾಯಕ ಮತ್ತು ಸಹ ಆಟಗಾರರ ಜೊತೆ ಸಂವಹನ ನಡೆಸಬೇಕಾಗುತ್ತದೆ. ಆದರೆ ಕೆಲ ಆಟಗಾರರು ಕ್ರೀಡಾಂಗಣದಲ್ಲಿ ನಾಯಕನೊಟ್ಟಿಗಿನ ಸಂವಹನ ಕೊರತೆಯಿಂದಾಗಿ ಸ್ಥಾನ ಕಳೆದುಕೊಂಡಿದ್ದಿದೆ. ಇದನ್ನು ಭಾರತ ತಂಡವನ್ನು ಪ್ರತಿನಿಧಿಸಿದ್ದ ದೊಡ್ಡ ಗಣೇಶ್ ಒಂದು ಕಾರ್ಯಕ್ರಮದಲ್ಲಿ ಮಾತಾಡುತ್ತಾ ಹೇಳಿದ್ದರು; ಭಾರತ ತಂಡದಲ್ಲಿ ಹೆಚ್ಚು ಕಾಲ ಆಡಲು ಸಾಧ್ಯವಾಗದಿರುವುದಕ್ಕೆ ’ಸಂವಹನ ಕೊರತೆ’ಯೇ ಕಾರಣವೆಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಕೆಲವೊಮ್ಮೆ ಭಾಷೆ ಬಳಕೆಯ ಕಾರಣಕ್ಕೆ ಮೈದಾನದೊಳಗೆ ಜಗಳ ಹುಟ್ಟಿರುವ ಉದಾಹರಣೆಗಳಿವೆ. 2008ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತದ ಆಫ್‌ಸ್ಪಿನ್ನರ್ ಹರ್‌ಭಜನ್ ಸಿಂಗ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್‌ಗೆ “ಮಂಕಿ” ಎಂದು ಹೀಯಾಳಿಸಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ಆಂಡ್ರ್ಯೂ ದೂರು ನೀಡಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್‌ಭಜನ್ ಪ್ರತಿಕ್ರಿಯೆ ನೀಡುತ್ತಾ “ಮಾಕಿ” (ಅದು ಕೂಡ ಬೈಗುಳದ ಭಾಷೆಯ ಬಳಕೆಯೆ) ಎಂದು ಹಿಂದಿಯಲ್ಲಿ ಕೋಪ ಬಂದಿದ್ದಕ್ಕಾಗಿ ಹೇಳಿದ್ದೆ. ಆಂಡ್ರ್ಯೂ ಅದನ್ನು ಇಂಗ್ಲಿಷ್‌ನಲ್ಲಿ “ಮಂಕಿ” ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದು ಸಮಜಾಯಿಷಿಕೊಟ್ಟರು. ಹೀಗೆ ಭಾಷೆಯ ಕಾರಣಕ್ಕೆ ಅನರ್ಥಗಳು ಸಂಭವಿಸಿ ಮೈದಾನದಲ್ಲಿ ಬಿಸಿಯಾದ ವಾತಾವರಣ ನಿರ್ಮಾಣವಾಗುತ್ತದೆ. ಬೌಲರ್ ಆದವನು ಬ್ಯಾಟ್ಸ್‌ಮನ್‌ಗೆ ಗುರಾಯಿಸಿ ಒಂದಷ್ಟು ಬೈದರೆ, ವಿಕೆಟ್ ಪಡೆದುಕೊಳ್ಳಬಹುದು ಎಂಬ ನಂಬಿಕೆ ಇದೆ. ಅದು ಕೆಲವೊಮ್ಮೆ ನಿಜವಾಗಿರುವುದು ಇದೆ.

2003ರ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯವೊಂದರಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ ಬೌಲಿಂಗ್‌ನಲ್ಲಿ ಹುಕ್ ಶಾಟ್ ಆಡುವಂತೆ ವೀರೇಂದ್ರ ಸೆಹ್ವಾಗ್‌ಗೆ ಪದೇಪದೇ ಛೇಡಿಸಿ ಸೂಚಿಸಿದರು. ತಾಳ್ಮೆಗೆಟ್ಟ ಸೆಹ್ವಾಗ್ “ವೋ ತೇರಾ ಬಾಪ್ ಸಾಮ್ನೆ ಖಡಾ ಹೈ ನಾನ್‌ಸ್ಟ್ರೈಕರ್ ಎಂಡ್ ಪೇ, ಉಸ್ ಕೋ ಬೋಲೋ ವೋ ಮಾರ್ ಕೆ ದಿಖಾಯೆ ಗಾ” (ಅದೋ ನಾನ್ ಸ್ಟ್ರೈಕರ್‌ನಲ್ಲಿ ನಿಮ್ಮಪ್ಪ ನಿಂತಿದ್ದಾನೆ. ಅವರಿಗೆ ಹೇಳು ಅವರು ಹೊಡೆದು ತೋರಿಸುತ್ತಾರೆ) ಎಂದು ಛೇಡಿಸುತ್ತಾರೆ. ಇನ್ನೊಂದು ಬದಿಯಲ್ಲಿ ಸಚಿನ್ ಆಡುತ್ತಿರುತ್ತಾರೆ. ಮುಂದಿನ ಅಖ್ತರ್ ಓವರ್‌ನಲ್ಲಿ ಬೌನ್ಸರ್‌ಗೆ ಸಚಿನ್ ಸಿಕ್ಸರ್ ಸಿಡಿಸುತ್ತಾರೆ. ಆಗ ಸೆಹ್ವಾಗ್ “ಬಾಪ್ ಬಾಪ್ ಹೋತಾ ಹೈ, ಬೇಟಾ ಬೇಟಾ ಹೋತಾ ಹೈ” (ಅಪ್ಪ ಅಪ್ಪನೇ, ಮಗ ಮಗನೇ) ಎಂದು ತಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. 1995ರ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಕ್ವಾಟರ್‌ಫೈನಲ್ ಪಂದ್ಯದಲ್ಲಿ 288ರ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಅದ್ಭುತ ಆರಂಭವನ್ನು ಪಡೆದುಕೊಳ್ಳುತ್ತದೆ. ಅಮೀರ್ ಸೋಹೆಲ್ ಅರ್ಧಶತಕ ಗಳಿಸಿ ಆಡುತ್ತಿರುತ್ತಾರೆ. ವೆಂಕಟೇಶ್ ಪ್ರಸಾದ್ ಬೌಲಿಂಗ್‌ನಲ್ಲಿ ಆಫ್‌ಸೈಡ್‌ನಲ್ಲಿ ಭರ್ಜರಿಯಾದ ಬೌಂಡರಿ ಸಿಡಿಸಿ “ಹೋಗು ಬಾಲನ್ನು ಎತ್ತಿಕೊಂಡು ಬಾ” ಎಂದು ರೇಗಿಸುತ್ತಾರೆ. ಮುಂದಿನ ಎಸೆತದಲ್ಲೇ ವೆಂಕಟೇಶ್ ಪ್ರಸಾದ್, ಬೋಲ್ಡ್ ಮಾಡುವುದರ ಮೂಲಕ ಸೋಹೆಲ್‌ಗೆ ಪೆವಿಲಿಯನ್ ಮಾರ್ಗ ತೋರಿಸುತ್ತಾರೆ. ಒಂದು ಪಂದ್ಯದ ಗತಿಯನ್ನು ಮಾತುಗಳ ಮೂಲಕ ಬದಲಾಯಿಸಿದ ಕೆಲವು ಘಟನೆಗಳಿವು. ಭಾರತ-ಪಾಕಿಸ್ತಾನ ಪಂದ್ಯವೆಂದರೆ ಯಾವಾಗಲೂ ಬಿಸಿಯಾದ ವಾತಾವರಣ ನಿರ್ಮಾಣವಾಗುವುದು ಸಹಜ. ಆದರೆ ಅದು ಬಹುಪಾಲು ಸಂದರ್ಭಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ನಡುವೆ ಮಾತ್ರ. ಆಟಗಾರರು ಕ್ರೀಡಾ ಸ್ಫೂರ್ತಿಯಿಂದಲೇ ಆಡುವರು. ಯಾವಾಗಲೋ ಅಪರೂಪಕ್ಕೆ ಇಂತಹ ಘಟನೆಗಳು ಸಂಭವಿಸುತ್ತವೆ.

ಇನ್ನು ಕ್ರಿಕೆಟ್ ಪಂದ್ಯದ ಕುತೂಹಲವನ್ನು ಹೆಚ್ಚಿಸುವುದು ವೀಕ್ಷಕವಿವರಣೆ. ಎಂಭತ್ತರ ದಶಕದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ರೇಡಿಯೋ ಮೂಲಕ ಕೇಳಿ, ಪಂದ್ಯದ ಆನಂದವನ್ನು ಅನುಭವಿಸಬೇಕಾಗಿತ್ತು. ಆ ನಂತರ ಟೆಲಿವಿಷನ್ ಮೂಲಕ ಪಂದ್ಯ ವೀಕ್ಷಿಸುವ ಮಾಡುವ ಮತ್ತು ವೀಕ್ಷಕ ವಿವರಣೆ ಕೇಳುವ ಅವಕಾಶ ಎರಡು ಒಟ್ಟಿಗೆ ಸಿಕ್ಕಿತು. ಸಮೂಹ ಮಾಧ್ಯಮಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆಯನ್ನು ಕೇಳಿಸಿಕೊಳ್ಳುವುದಕ್ಕೂ, ಸ್ಥಳೀಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮೈದಾನದಲ್ಲೇ ನೇರವಾಗಿ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಸ್ಥಳೀಯ ಪಂದ್ಯಗಳ ವೀಕ್ಷಕ ವಿವರಣೆ ಬಹುಪಾಲು ಪ್ರಾದೇಶಿಕ ಭಾಷೆಯಲ್ಲಿಯೇ ಮಾಡುವುದನ್ನ ಹಿಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಸ್ಥಳೀಯ ಮಟ್ಟದ ಪಂದ್ಯಾವಳಿಗಳಲ್ಲಿ ಕನ್ನಡದಲ್ಲಿಯೇ ವೀಕ್ಷಕ ವಿವರಣೆ ನೀಡುವುದು ವಿಶೇಷ. ಇಲ್ಲಿ ವೀಕ್ಷಕ ವಿವರಣೆ ನೀಡುವವರು ಬಳಸುವ ಭಾಷೆ ಕೇಳುಗರಿಗೆ ಆಶ್ಚರ್ಯ ಮತ್ತು ಕುತೂಹಲವನ್ನುಂಟು ಮಾಡುತ್ತದೆ. ಕೆಲವೊಂದು ಉದಾಹರಣೆಯನ್ನು ಇಲ್ಲಿ ಗಮನಿಸೋಣ.

’ಸೂರ್ಯನ ಬೆಳಕನ್ನು ನಾಚಿಸುವಂತಿರುವ ಹೊನಲು ಬೆಳಕಿನಲ್ಲಿ, ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಾಗ್ತಾ ಇದೆ’,

’ಗಾಳಿಯ ಒತ್ತಡದ ಕಡೆ ಚೆಂಡನ್ನು ಬಾರಿಸಿದ ಪಕ್ಷದಲ್ಲಿ, ಬೌಂಡರಿ ಅಥವಾ ಷಡ್ಕವನ್ನು ಗಳಿಸುವ ಎಲ್ಲಾ ಸಾಧ್ಯತೆಗಳಿವೆ’

’ದಾಂಡು-ಚೆಂಡಿನ ನಡುವಿನ ರೋಚಕ ಪಂದ್ಯದಲ್ಲಿ, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಾಗಿದೆ’

’ಗೂಟಗಳ ಮಧ್ಯೆ ಉತ್ತಮ ಓಟ’,

’ಮಳೆಯಿಲ್ಲದ ಬೆಳೆ’,

’ಚೆಂಡಿಗೆ ಒಳ ಮತ್ತು ಹೊರ ತಿರುವನ್ನು (inswing and out swing) ಕೊಡಬಲ್ಲ ಎಸೆತಗಾರ (Bowler)’,

’ಹೊಡೆಬಡಿ ದಾಂಡಿಗ’,

’ಆಕಾಶದೆತ್ತರಕ್ಕೆ ಚಿಮ್ಮಿದ ಚೆಂಡು’,

’ತಂಡದ ಸವ್ಯಸಾಚಿ ಆಟಗಾರ ಮೈದಾನದ ಮಧ್ಯಭಾಗದಲ್ಲಿ’,

’ತನ್ನ ಮುಂಗಾಲಿನ ಮೇಲೆ ಚೆಂಡನ್ನು ತೆಗೆದುಕೊಂಡು ಬೌಂಡರಿ ಗೆರೆಯನ್ನು ದಾಟಿಸಿದ್ದಾನೆ’,

’ಉತ್ತಮ ಕ್ಷೇತ್ರ ರಕ್ಷಣೆಗೆ “ಚೀನಾದ ಮಹಾಗೋಡೆ ಮಹೇಶ್”’,

ಡೀನ್ ಜೋನ್ಸ್

ಎನ್ನುವ ವಾಕ್ಯಗಳು ಕೇಳುಗರ ಮನಗೆಲ್ಲುತ್ತವೆ ಅಥವಾ ಮನಸ್ಸಿಗೆ ಮುದನೀಡುತ್ತವೆ. ಮೈದಾನದಲ್ಲಿ ನೆರೆದಿರುವ ಪ್ರೇಕ್ಷಕರಿಗೆ ವೀಕ್ಷಕ ವಿವರಣೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತವೆ. ಏಕೆಂದರೆ ಆ ಮಾತುಗಳು ಪ್ರೇಕ್ಷಕರ ಮನಸ್ಸಿನ ಮೇಲೆ ನೇರ ಪ್ರಭಾವವನ್ನು ಬೀರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ವೀಕ್ಷಕ ವಿವರಣಾಕಾರರು ಅವರ ಅರಿವಿಗೆ ಬರದಂತೆ ರೂಪಕ, ಉಪಮೆ ಕೆಲವೊಮ್ಮೆ ಉತ್ಪ್ರೇಕ್ಷಾಲಂಕಾರಗಳನ್ನು ಬಳಸುವುದು ಪಂದ್ಯದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ವೀಕ್ಷಕ ವಿವರಣೆ ಮಾಡುವ ಸಂದರ್ಭದಲ್ಲಿ ಅಸಭ್ಯ ಶಬ್ದಗಳನ್ನು ಬಳಸಿ ಕ್ಷಮೆ ಯಾಚಿಸಿರುವ ಅತವಾ ಶಿಕ್ಷೆಗೆ ಗುರಿಯಾಗಿರುವ ಅನೇಕ ಪ್ರಕರಣಗಳಿವೆ. ಆಸ್ಟ್ರೇಲಿಯಾದ ಖ್ಯಾತ ಆಟಗಾರ ಡೀನ್ ಜೋನ್ಸ್ ಆಗಸ್ಟ್ 7, 2006ರಲ್ಲಿ ಟೆನ್ ಸ್ಪೋರ್ಟ್ಸ್‌ಗೆ ವೀಕ್ಷಕ ವಿವರಣೆಯನ್ನು ಮಾಡುವ ಸಂದರ್ಭದಲ್ಲಿ ಸೌತ್ ಆಫ್ರಿಕಾದ ಹಶೀಮ್ ಆಮ್ಲಾರನ್ನು “ಟೆರರಿಸ್ಟ್” (ಭಯೋತ್ಪಾದಕ) ಎಂದು ಕರೆದಿದ್ದು ಕ್ರಿಕೆಟ್ ಜಗತ್ತಿನ ಒಳಗೆ ಮತ್ತು ಹೊರಗೆ ಕೋಲಾಹಲವನ್ನುಂಟುಮಾಡಿತು. ತಕ್ಷಣ ಜೋನ್ಸ್ ಕ್ಷಮೆ ಕೇಳಬೇಕಾಗಿ ಬಂತು ಹಾಗೂ ಅವರನ್ನು ಟೆನ್ ಸ್ಪೋರ್ಟ್ಸ್‌ನಿಂದ ತೆಗೆದುಹಾಕಲಾಯಿತು.

ಇಷ್ಟಲ್ಲದೆ ಕ್ರಿಕೆಟ್ ಭಾಷೆ ದಿನನಿತ್ಯದ ಜೀವನದಲ್ಲೂ ಬಳಕೆಯಾಗುತ್ತದೆ. ರಾಜಕೀಯದ ವಿಚಾರವಾಗಿ ಮಾಧ್ಯಮಗಳಲ್ಲಿ ’ಜನಸಾಮಾನ್ಯ ಪಕ್ಷದ ಒಂದು ವಿಕೆಟ್ ಪತನ’ ಎಂಬ ಶೀರ್ಷಿಕೆಯೊಂದಿಗೆ ಪಕ್ಷ ಬಿಟ್ಟು ಹೋಗುವ ರಾಜಕಾರಣಿಯ ಬಗ್ಗೆ ಸುದ್ದಿ ಪ್ರಸಾರವಾಗುತ್ತದೆ. ’ಏನಪ್ಪ ಅವನ ಕಡೆ ಬ್ಯಾಟಿಂಗ್ ಮಾಡ್ತಿದ್ದೀಯಾ’ ಎಂದು ಒಬ್ಬರ ಪರವಾಗಿ ಪಕ್ಷವಹಿಸಿ ಮಾತನಾಡಿದಾಗ ಎಚ್ಚರಿಸುವುದುಂಟು. ಹೆಚ್ಚು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾತನಾಡಿದಾಗ ’ಎಲ್ಲಾ ಯಾರ್ಕರ್ರೆ ಹಾಕ್ತಿಯಲ್ಲಪ್ಪಾ’ ಎಂದು, ಯಾವುದಾದರೂ ಕೆಲಸದಲ್ಲಿ ಮುಂಚೂಣಿಯಲ್ಲಿ ಹೋಗಿ ಕೆಲಸ ಮಾಡಬೇಕಾದವರಿಗೆ, ’ನೀನೆ ಓಪನಿಂಗ್ ಬ್ಯಾಟ್ಸ್‌ಮನ್’ ಎಂದು ಅವನ ಜವಾಬ್ದಾರಿಯನ್ನು ಜೊತೆಯಲ್ಲಿರುವವರು ನೆನಪಿಸುತ್ತಾರೆ. ಪ್ರೀತಿಗೆ ಸಂಬಂಧಿಸಿದಂತೆ ’ಅನುಷ್ಕಾ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್ ಆದ ವಿರಾಟ್ ಕೊಹ್ಲಿ’ ಎಂಬ ಶೀರ್ಷಿಕೆಯೊಂದಿಗೆ ಕ್ರಿಕೆಟ್‌ನ ಕ್ಲೀನ್ ಬೋಲ್ಡ್ ಪದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಲಾಗಿದೆ. ಸ್ವತಪ್ಪಿನಿಂದಾಗಿ ನಷ್ಟ ಅನುಭವಿಸಿದರೆ ’ಹಿಟ್ ವಿಕೆಟ್ ಆದ’ ಎಂದು ತಪ್ಪನ್ನು ಎತ್ತಿ ತೋರಿಸಲಾಗುತ್ತದೆ. ’ಮೈದಾನ ಸಿದ್ಧವಾಗಿದೆ’ ಎಂದು ಮಾಡಬೇಕಾದ ಕೆಲಸದ ಸಿದ್ಧತೆಗಳೆಲ್ಲಾ ಆದ ಮೇಲೆಹೇಳುವ ಮಾತಾಗಿದೆ.

ಒಟ್ಟಿನಲ್ಲಿ ಕ್ರಿಕೆಟ್ ತನ್ನದೇ ಆದ ವಿಶೇಷ ಪರಿಭಾಷೆಯನ್ನು ಹೊಂದಿದೆ. ಅದು ಮುಂದೆ ಯಾವ ರೂಪವನ್ನು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ. ಕ್ರಿಕೆಟ್ ಅನ್ನು ’ಜಂಟಲ್‌ಮ್ಯಾನ್ ಗೇಮ್’ ಎಂದು ಕರೆಯಲಾಗುತ್ತದೆ. ಆದರೆ ಆಟಗಾರರು ಒಬ್ಬರಿಗೊಬ್ಬರು ಬೈದಾಡಿಕೊಂಡು ಅದರ ’ಜಂಟಲ್ ಕ್ರೀಡಾಸ್ಫೂರ್ತಿ’ಯನ್ನು ಹಾಳು ಮಾಡಿರುವ ಅಸಂಖ್ಯ ಪ್ರಕರಣಗಳಿವೆ. ಭಾಷೆಯನ್ನು ವೀಕ್ಷಕ ವಿವರಣೆ, ಸಂದರ್ಶನ ಹಾಗೂ ಮೈದಾನದ ಒಳಗೆ ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕಾದ ಅವಶ್ಯಕತೆಯಿದೆ.

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...