Homeಅಂಕಣಗಳುಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ - ಇವುಗಳ ನಡುವೆ ಸಂಭ್ರಮಿಸುವುದಾದರೂ...

ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

- Advertisement -
- Advertisement -

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹರ್ಯಾಣದ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತೀಯ ಮಾಧ್ಯಮಗಳಲ್ಲಿ, ಕ್ರೀಡಾಸಕ್ತರಲ್ಲಿ ಉತ್ಸಾಹ ಮೂಡಿಸಿದ್ದಾರೆ. ಕ್ರೀಡೆ ಬಹುತೇಕ ಭಾರತೀಯರ ನಿತ್ಯಜೀವನದ ಭಾಗವಾಗಿರುವುದಿಲ್ಲ, ಅದು ಸಾಮಾನ್ಯವಾಗಿ ದೃಶ್ಯಮಾಧ್ಯಮಗಳ ಮೂಲಕ ಕನ್ಸ್ಯೂಮ್ ಮಾಡುವುದಕ್ಕಾಗಿ ಇರುವ ಮನರಂಜನೆಯ ಸಾಧನವಾಗಿಯೋ, ಇನ್ನೂ ಹೆಚ್ಚಿನದೆಂದರೆ ಕ್ರಿಕೆಟ್ ಕ್ರೀಡೆಯಂತಹ ಸಂದರ್ಭದಲ್ಲಿ ದೇಶಗಳ ನಡುವಿನ ಸ್ಪರ್ಧಾತ್ಮಕ ನ್ಯಾಷನಲಿಸಂ ಉತ್ತೇಜಿಸುವ ಸಂಗತಿಯಾಗಿ ರೂಪುಗೊಂಡಿರುವುದೇ ಹೆಚ್ಚು. ಈಗ ಭಾರತೀಯ ಕ್ರೀಡಾಪಡುಗಳು ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಿಂದೆಂದಿಗಿಂತಲೂ ಅತ್ಯುತ್ತಮ ಪ್ರದರ್ಶನ ನೀಡಿ ಹಿಂದಿರುಗಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದದ್ದರ ಬಗ್ಗೆ ಭಾರತೀಯರು ಹೆಮ್ಮೆ ಪಡುವುದು ಸಹಜ. ಆದರೆ ಅದನ್ನು ಮೀರಿದ ಸಕಾರಾತ್ಮಕ ಅಥವಾ ಕ್ರೀಡಾಸ್ಫೂರ್ತಿಯ ಬೆಳವಣಿಗೆ ಈ ದೇಶದಲ್ಲಿ ಸಂಭವಿಸಬೇಕಲ್ಲವೇ

ಕ್ರಿಕೆಟ್ ಒಳ್ಳೆಯದಕ್ಕಿಂತ ಮಾಡಿರುವ ಅಪಾಯವೇ ಹೆಚ್ಚು!

ಭಾರತದಲ್ಲಿ ಕ್ರಿಕೆಟ್ ಆಟ ನೀಡಿದ್ದಕಿಂತ ಕಸಿದುಕೊಂಡಿದ್ದೇ ಹೆಚ್ಚು. ಮಾಧ್ಯಮಗಳ ಡಾರ್ಲಿಂಗ್ ಆಗಿ, 11 ಜನರಾಡುವ ಈ ಆಟ ಇಡೀ ದೇಶದ ಮುಖ್ಯ ಆಟವೇನೋ ಎಂಬಂತೆ ಹಲವು ದಶಕಗಳಿಂದ ಬಿಂಬಿತವಾಗಿ ಇತರೆ ನೂರಾರು ಆಟಗಳ ಬಗ್ಗೆ ಜನರಿಗೆ ಆಸಕ್ತಿಯೇ ಹುಟ್ಟದಂತೆ ಮಾಡಿತು. ತಮ್ಮ ಜಾಹೀರಾತಿಗಾಗಿ ಕಾರ್ಪೊರೆಟ್ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಪ್ರಾಯೋಜಿಸಿ, ಮಾಧ್ಯಮಗಳ ಮೂಲಕ ಬೃಹತ್ತಾಗಿ ಪ್ರಚಾರ ಮಾಡಿದ್ದೂ ಇದಕ್ಕೆ ಮುಖ್ಯ ಕಾರಣವಾಗಿದೆ. ಇನ್ನು ದೇಶದೇಶಗಳ ತಂಡಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಗಳನ್ನು ಯುದ್ಧಗಳೇನೋ ಎಂಬಂತೆ ಬಿಂಬಿಸುವುದನ್ನು ಕೂಡ ಮಾಧ್ಯಮಗಳು ಮಾಡಿದವು. ಭಾರತ ಕ್ರಿಕೆಟ್ ತಂಡ ಸೋಲುವ ಸಮಯದಲ್ಲಿ ಕ್ರೀಡಾಂಗಣದಲ್ಲಿ ದಾಂಧಲೆ, ಭಾರತ ಪಾಕಿಸ್ತಾನ ಪಂದ್ಯಗಳ ಸಮಯದಲ್ಲಿ ಟಿವಿಗಳನ್ನು ಒಡೆಯುವುದು, ಅಲ್ಪ ಸಂಖ್ಯಾತ ಧರ್ಮೀಯರ ಮೇಲೆ ಗುಮಾನಿ ವ್ಯಕ್ತಪಡಿಸಿ ಅವರನ್ನು ಅನ್ಯರಾಗಿಸುವುದು ಸರ್ವೇಸಾಮಾನ್ಯವಾಗಿಬಿಟ್ಟಿತು. ಒಂದು ರೀತಿಯ ತೀವ್ರ ಅನಾರೋಗ್ಯಕರ ನ್ಯಾಷನಲಿಸಂಅನ್ನು ಬಿತ್ತುವಲ್ಲಿ ಕ್ರಿಕೆಟ್‌ನ ಕೊಡುಗೆ ಸಣ್ಣದೇನಲ್ಲ.

PC : Rediffmail

ಇನ್ನು ಕ್ರಿಕೆಟ್‌ನಲ್ಲಿ ಆದ ಐಪಿಎಲ್ 20-20ಯಂತಹ ಮಾರ್ಪಾಡು, ಈ ಎದೆಬಡಿ ಕೊಳ್ಳುವ ನ್ಯಾಷನಲಿಸಂಗೆ ಅವಕಾಶ ನೀಡದೆ ಹೋದರೂ, ಆಟಗಾರರ ಹರಾಜು ಪ್ರಕ್ರಿಯೆ ಮತ್ತು ಬ್ರಾಂಡ್‌ಗಳ ಮಾರಾಟದಲ್ಲಿ ಇದ್ದಬದ್ದ ಆಟ ಗೌಣವಾಯಿತು. ಬ್ಯಾಟು ಬೀಸಿ ಕ್ಷಣಕ್ಷಣವೂ ಉದ್ರೇಕಿಸುವ ತಂತ್ರಕ್ಕೆ, ಹಿಂದೆ ಹೆಚ್ಚು ವ್ಯಾಪಕವಾಗಿದ್ದ ಫಾರ್ಮಾಟ್‌ಗಳಲ್ಲಿ ಸಿಗಲು ಸ್ವಲ್ಪವಾದರೂ ಸಾಧ್ಯವಿದ್ದ ನೈಜ ಮತ್ತು ಕಲಾತ್ಮಕ ಆಟವೂ ಕಣ್ಮರೆಯಾಯಿತು. ಒಟ್ಟಿನಲ್ಲಿ ಮನರಂಜನೆಯು ಆಕ್ರಮಿಸಿಕೊಂಡಂತೆ ಕ್ರೀಡೆ ಮತ್ತು ಕ್ರೀಡಾಸ್ಫೂರ್ತಿ ಎರಡೂ ಹಿಂದಕ್ಕೆ ಸರಿದವು.

ಭಾರತದಲ್ಲಿ ಕ್ರೀಡೆ ನಿತ್ಯಜೀವನದ ಭಾಗವಾಗಿರದೇ ಹೋಗಿದೆ!

ನಮ್ಮ ದೇಶದಲ್ಲಿ ಕ್ರೀಡೆ ಜನಸಾಮಾನ್ಯರ ನಿತ್ಯಜೀವನದ ಭಾಗವಾಗುವಂತೆ ಸಮಾಜ ರೂಪುಗೊಂಡಿಲ್ಲ. ತೀವ್ರ ಅಸಮಾನತೆ ಇರುವ ನಾಡಿನಲ್ಲಿ ಸವಲತ್ತು ಹೊಂದಿರುವ ಜಾತಿ ಮತ್ತು ವರ್ಗಗಳಿಗೆ ಮಾತ್ರ ಪರಂಪರಾಗತವಾಗಿ ಬಿಡುವು-ಕ್ರೀಡೆ ಮತ್ತು ಮನರಂಜನೆಯ ಅವಕಾಶ ಒದಗಿದೆ. ಸಮಾಜ ಆಧುನಿಕಗೊಳ್ಳುತ್ತಿರುವ ಸಮಯದಲ್ಲಿಯೂ ಬದುಕಿನ ಜಂಜಾಟ ಎಲ್ಲರಿಗೂ ಬಿಡುವಿನ ಮತ್ತು ಕ್ರೀಡೆಯ ಹಕ್ಕನ್ನು ಒದಗಿಸುವುದಿಲ್ಲ. ಇಂತಹ ಸಮಯದಲ್ಲಿ ಈ ಒಲಿಂಪಿಕ್ಸ್ ಸಾಧನೆ ಕೇವಲ ಹೆಚ್ಚು ಪದಕಗಳನ್ನು ಗೆಲ್ಲುವ ನಾಲ್ಕು ವರ್ಷಗಳ ಯೋಜನೆಯಾಗದೆ ಜನಸಾಮಾನ್ಯರಿಗೂ ಅವರ ಬದುಕಿನಲ್ಲಿ ಕ್ರೀಡೆ ದಕ್ಕುವಂತೆ ಸಾಧ್ಯವಾಗುವ ಯೋಜನೆಗಳನ್ನು ಭಾರತ ಪ್ರಭುತ್ವ ರೂಪಿಸುವತ್ತ ದಾಪುಗಾಲು ಹಾಕಬೇಕಿದೆ. ವಿದೇಶಿ ಕೋಚ್‌ಗಳನ್ನು ಕರೆಸಿ ಬೆರಳೆಣಿಕೆಯ ಕ್ರೀಡಾಪಟುಗಳನ್ನು ತರಬೇತಿಗೊಳಿಸುವುದು ಕೇವಲ ಕಾಸ್ಮೆಟಿಕ್ ಬದಲಾವಣೆಯಷ್ಟೇ ಆಗಬಹುದು. ಅದು ಸಮಾಜದಲ್ಲಿನ ವ್ಯವಸ್ಥಿತ ಬದಲಾವಣೆಗೆ ಆಸ್ಪದ ನೀಡುವುದಿಲ್ಲ.

ನಮ್ಮ ಸುತ್ತ ಸುಲಭವಾಗಿ ಕಾಣುವ ಹಲವು ಉದಾಹರಣೆಗಳಿವೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳಿಗೆ ನೀಡುವ ಪ್ರೋತ್ಸಾಹ ಇಲ್ಲವೇ ಇಲ್ಲ ಎನ್ನುವಷ್ಟು ಕನಿಷ್ಟ ಮಟ್ಟದ್ದು. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಇರುವುದಿಲ್ಲ. ಇದ್ದರೂ ಅದು ನಾಮಕಾವಸ್ಥೆ ಮತ್ತು ದೈಹಿಕ ಶಿಕ್ಷಣ ಶಿಕ್ಷೆಯ ರೂಪವಾಗಿ ಬಳಕೆಯಾದದ್ದೇ ಹೆಚ್ಚು. ಇನ್ನು ನಗರ ಕೇಂದ್ರಿತ ಖಾಸಗಿ ಶಾಲೆಗೆಳಲ್ಲಿ ಕೂಡ ಸುಸಜ್ಜಿತ ಆಟದ ಮೈದಾನ ಎಂಬುದು ಮರೀಚಿಕೆಯೇ! ಓದು-ಬರಹ ಮತ್ತು ಉರು ಹೊಡೆಯುವುದಕ್ಕೆ ನೀಡುವ ಪ್ರಾಮುಖ್ಯತೆಯಲ್ಲಿ ಸಣ್ಣ ಅಂಶವನ್ನೂ ಬಹುತೇಕ ಈ ಶಾಲೆಗಳು ನೀಡುವುದಿಲ್ಲ. ಬೆಂಗಳೂರಿನಂತಹ ನಗರದ ಜನಸಂಖ್ಯೆ 1 ಕೋಟಿಗೂ ಮೀರಿ ಹಲವು ವರ್ಷಗಳು ಕಳೆದಿವೆ. ಬೆರಳೆಣಿಕೆಯ ಪಾರ್ಕ್‌ಗಳನ್ನು, ಕೆಲವು ಗ್ರೌಂಡ್‌ಗಳನ್ನು ಹೊರತುಪಡಿಸಿದರೆ, ನಗರಜೀವಿಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಹುಟ್ಟಿಸುವ ಅಥವಾ ಉತ್ತೇಜಿಸುವ ಬೇರೆ ಕ್ರಮಗಳ್ಯಾವುವೂ ಜನಪ್ರಿಯ ಮಟ್ಟದಲ್ಲಿ ನಡೆದುಬಂದಿಲ್ಲ. ಈ ನಿಟ್ಟಿನಲ್ಲಿ ಈಗಲಾದರೂ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಹಾಗೂ ನಗರ-ಪುರಸಭೆಗಳು ಆಸಕ್ತಿವಹಿಸಬೇಕಲ್ಲವೇ?

ಇನ್ನು ಜಾತಿ ಶ್ರೇಣೀಕರಣದ ಸಮಾಜದಲ್ಲಿ, ಅದರಲ್ಲೂ ಹಳ್ಳಿಗಳಲ್ಲಿ (ನಗರಗಳು ಹೊರತು ಎಂದೇನಲ್ಲ) ಎಲ್ಲ ಸಮುದಾಯದ ಮಕ್ಕಳು ಮತ್ತು ಯುವಕರು ಒಟ್ಟಿಗೆ ಸೇರಿ ಆಟಗಳನ್ನು ಆಯೋಜಿಸುವ, ಆಡುವ ಪರಿಪಾಠ ಇಲ್ಲದೇ ಇರುವುದು ಕೂಡ ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಕ್ರೀಡೆ ಅತ್ಯುತ್ತಮ ಮಟ್ಟಕ್ಕೆ ಬೆಳೆಯದೆ ಇರುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು. ಇದು ಒಂದು ಮಟ್ಟದಲ್ಲಿ ಸರಿಹೋಗಬೇಕಿದ್ದರೆ ಅದು ಶಾಲೆಗಳೆಂಬ ಸಾಮಾಜೀಕರಣ ಸಾಧ್ಯವಿರುವ ವಾತಾವರಣದಲ್ಲಿ ಮಾತ್ರ ಸಾಧ್ಯ. ಅದು ಹೆಚ್ಚು ಸಾಧ್ಯವಾಗುವುದು ಸರ್ಕಾರಿ ಶಾಲೆಗಳಲ್ಲಿ. ಒಂದು ಕಡೆ ಸರ್ಕಾರಿ ಶಾಲೆಗಳು ಪುನರುಜ್ಜೀವನಗೊಂಡು, ಅಲ್ಲಿ ಕ್ರೀಡಾ ಪ್ರಾಶಸ್ತ್ಯ ಸಿಕ್ಕಿ, ತಾರತಮ್ಯಗಳು ಕೊನೆಯಾಗುವ ವ್ಯವಸ್ಥೆಗೆ ಆಡಳಿತ ವ್ಯವಸ್ಥೆಗಳು ತೋರುವ ಲಕ್ಷ್ಯವೆಷ್ಟು?

ವಂದನಾ ಕಟಾರಿಯಾ ಕುಟುಂಬಕ್ಕೆ ಜಾತಿ ನಿಂದನೆ ಮಾಡುವ ದೇಶದಲ್ಲಿ ಕ್ರೀಡೆ ಸಮೃದ್ಧಿಗಳಿಸೀತೆ?

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದೆ ಹೋದರೂ ಕ್ರೀಡಾಸಕ್ತರ ಜನಮನ ಗೆದ್ದದ್ದು ಭಾರತೀಯ ಮಹಿಳಾ ಹಾಕಿ ತಂಡ. 80ರ ನಂತರ 2016ರಲ್ಲಿ ಮತ್ತು ಪ್ರಸಕ್ತ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮಹಿಳಾ ಹಾಕಿ ತಂಡದ ಈ ಸಾಲಿನ ಸಾಧನೆ ಐತಿಹಾಸಿಕವಾದದ್ದು. ಈ ದೇಶದ ಕ್ರೀಡೆಗಳಲ್ಲಿ ಕ್ರಿಕೆಟ್ ಅಧಿಪತ್ಯ ಸಾಧಿಸಿದ್ದರೆ, ಅದರ ನಂತರ ’ರಾಷ್ಟ್ರೀಯ ಕ್ರೀಡೆ’ ಎಂಬ ಹೆಸರಿಗಾದರೂ ಹಾಕಿ ಒಂದು ಮಟ್ಟಕ್ಕೆ ಜನರ ಮತ್ತು ಮಾಧ್ಯಮಗಳ ನಡುವೆ ಮಾತಿನಲ್ಲಿ ಚಾಲ್ತಿಯಲ್ಲಿದೆ. ಜನಸಾಮಾನ್ಯರು ಸಾಮಾನ್ಯವಾಗಿ ಆಡುವ ಆಟ ಇದಾಗದೇ ಹೋದರೂ, ಲೆಗೆಸಿಯ ಕಾರಾಣಕ್ಕಾದರೂ ಹಾಕಿಗೆ ಒಂದು ಮಟ್ಟದ ಉತ್ತೇಜನ ಇದ್ದೇ ಇದೆ. ಆದರೆ ಈ ಎರಡೂ ಕ್ರೀಡೆಗಳಲ್ಲಿ ಪುರುಷರ ತಂಡಕ್ಕೆ ಸಿಗುವ ಮಹತ್ವ ಮಹಿಳೆಯರ ತಂಡಕ್ಕೆ ಸಿಗುವುದಿಲ್ಲ ಎಂಬುದು ಕೂಡ ವಿದಿತವೇ. ಇಂತಹ ತಾರತಮ್ಯದ ವಾತಾವರಣದಲ್ಲಿಯೇ ಸಾಧನೆಗೈದು ಈ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದ ಭಾರತ ಮಹಿಳಾ ಹಾಕಿ ತಂಡಕ್ಕೆ ’ಜಾತಿ ಭೂತದ’ ನಿಂದನೆಯೂ ತವರಿನಲ್ಲಿ ಕಾದಿತ್ತು!

ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಭಾರತ ಪರಾಭವಗೊಂಡಿತ್ತು. ಆ ಸಮಯದಲ್ಲಿ ಹರಿದ್ವಾರದಲ್ಲಿರುವ ರೋಶನಾಬಾದ್‌ನ ವಂದನಾ ಕಟಾರಿಯಾ ಅವರ ಮನೆಯ ಮೇಲೆ ದಾಂಧಲೆ ನಡೆಸಿದ್ದಲ್ಲದೆ ಅವರ ಜಾತಿ ನಿಂದನೆ ಮಾಡಿದ್ದ ಶೋಷಕ ಜಾತಿಯ ಜನರು, ಭಾರತ ಹಾಕಿ ಪಂದ್ಯ ಸೋತಿದ್ದನ್ನು ಪಟಾಕಿ ಸುಟ್ಟು ಸಂಭ್ರಮಿಸಿದ್ದರು. ಇದಕ್ಕೆ ಒಂದೇ ಕಾರಣ ಹಾಕಿ ತಾರೆ ವಂದನಾ ಅವರು ದಲಿತ ಸಮುದಾಯಕ್ಕೆ ಸೇರಿದ್ದು ಮತ್ತು ಭಾರತೀಯ ಮಹಿಳಾ ಹಾಕಿ ತಂಡದಲ್ಲಿ ಹೆಚ್ಚು ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಕ್ರೀಡಾಪಟುಗಳು ಇದ್ದದ್ದು! ಈಗ ಹರಿದ್ವಾರದ ಪೊಲೀಸರು ಈ ಪ್ರಕರಣದಲ್ಲಿ ಮೂವರು ಶೋಷಕ ಜಾತಿಯ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಆಗಲೀ, ಈ ಒಲಿಂಪಿಕ್ಸ್ ಸಾಧನೆಯನ್ನು ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಹವಣಿಸುತ್ತಿರುವ ಸರ್ಕಾರದ ಕ್ರೀಡಾ ಸಚಿವಾಲಯದಿಂದ ಆಗಲೀ, ಉಳಿದ ಯಾವುದೇ ಸಚಿವರಿಂದ ಆಗಲೀ, ಪ್ರಧಾನಿಗಳಿಂದ ಆಗಲಿ ಇದನ್ನು ಖಂಡಿಸುವ ಮತ್ತು ಇಂತಹ ಜಾತಿಗ್ರಸ್ತ ಮನೋಭಾವ ಭಾರತೀಯ ಕ್ರೀಡೆಗೆ ಮಾರಕ ಎಂಬುದನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವ ಕೆಲಸವನ್ನಾಗಲೀ ಮಾಡಲಿಲ್ಲ ಎಂಬುದು ದುರಂತದ ಸಂಗತಿ.

PC : The Bridge

ಕ್ರಿಕೆಟ್ ಪಂದ್ಯವನ್ನು ಸೋತಾಗ ದಾಂಧಲೆ ಮಾಡುವ ವಿದ್ಯಮಾನವನ್ನು ಈ ವಿದ್ಯಮಾನದ ಜೊತೆಗೆ ತುಲನೆ ಮಾಡಿ ನೋಡುವುದು ಮುಖ್ಯವಾದೀತು. ಕ್ರಿಕೆಟ್ ಸಂದರ್ಭದಲ್ಲಿ ಭಾರತದ ಪಂದ್ಯಗಳನ್ನು ಯುದ್ಧದ ರೀತಿಯಲ್ಲಿ ನೋಡುವ, ಹೈಪರ್ ನ್ಯಾಷನಲಿಸಂ ಪ್ರದರ್ಶಿಸುವ ಜನಕ್ಕೆ ಕ್ರೀಡಾಪಟುಗಳ ಬಗ್ಗೆ ನಿಜವಾದ ಕಾಳಜಿ ಇರುತ್ತದೆಯೇ? ಅಥವಾ ಕ್ರೀಡೆಯ ಬಗ್ಗೆಯಾದರೂ ಕಾಳಜಿ ಇರುತ್ತದೆಯೇ? ಪ್ರಚಾರದ ಅಬ್ಬರದಲ್ಲಿ ಮೈಮರೆಯುವ ಇವರು ಕ್ರಿಕೆಟ್ ತಂಡದಲ್ಲಿ ಯಾಕೆ ಹಿಂದುಳಿದ ಸಮುದಾಯದ ವ್ಯಕ್ತಿಗಳಿಗೆ ಸ್ಥಾನ ಸಿಗುವುದು ಬಹಳ ಕಷ್ಟ ಎಂಬ ಸಂಗತಿ ಅರ್ಥವಾಗುತ್ತದೆಯೇ? ವಿನೋದ್ ಕಾಂಬ್ಳಿಯಂತಹ ಹಿಂದುಳಿದ ಸಮುದಾಯದ ವ್ಯಕ್ತಿ ಏಕೆ ತಾರತಮ್ಯ ಅನಭವಿಸಬೇಕಾಯಿತು ಎಂಬ ಸಂಗತಿ ಇವರಿಗೆ ತಿಳಿಯದೆ ಏಕೆ ಹೋಗುತ್ತದೆ? ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲು ಹೊಡೆದು ದಾಖಲೆ ನಿರ್ಮಿಸಿದ ವಂದನಾ ಕಟಿಯಾರ್ ಅಂತಹ ಮಹಿಳೆಯನ್ನು ನಿಂದನೆ ಮಾಡಿ ಭಾರತದ ಹಾಕಿ ಸೋಲನ್ನು ಸಂಭ್ರಮಿಸುವಾಗ ನ್ಯಾಷನಲಿಸಂ ಮಾಯವಾಗುವುದು ಹೇಗೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ ಕ್ರೀಡೆ ಹುಟ್ಟುಹಾಕುವ ನ್ಯಾಷನಲಿಸಂ ಎಷ್ಟು ಪೊಳ್ಳು ಸ್ವಭಾವದ್ದು ಎಂಬುದು ಅರಿವಿಗೆ ಬಂದೀತು! ಇದು ನಿರ್ಮಿಸುವುದು ಪೊಳ್ಳು ಅಭಿಮಾನದ ಕಲ್ಪಿತ ’ನ್ಯಾಷನಲಿಸಂ’ ಎನ್ನುವುದು ನಿರ್ವಿವಾದ.

ಇಲ್ಲಿ ಒಂದು ಸಮಾಧಾನಕರ ಸಂಗತಿಯಂತೂ ಇದೆ. ಈ ವಿದ್ಯಮಾನವನ್ನು ವಿನಯ ಕಟಿಯಾರ್ ಅವರು ಗಟ್ಟಿಯಾಗಿ ವಿರೋಧಿಸಿದ್ದಾರೆ. ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಅವರು ಕೂಡ ಇದನ್ನು ’ನಾಚಿಕೆಗೇಡಿನ ಕೆಲಸ’ ಎಂದಿದ್ದಾರೆ. ತಾರತಮ್ಯದ ವಿರುದ್ಧ ಸಾಮಾನ್ಯವಾಗಿ ತುಟಿಬಿಚ್ಚದ, ಬೇರೆ ಯಾವುದೇ ಸಾಮಾಜಿಕ ಸಮಸ್ಯೆಗೆ ಧ್ವನಿ ಎತ್ತದ ಕ್ರಿಕೆಟರ್‌ಗಳಿಗೆ ಹೋಲಿಸಿಕೊಂಡರೆ ಇದು ದಿಟ್ಟತನದ ನಡೆಯಾಗಿದೆ. ಈ ವಿದ್ಯಮಾನ, ಕ್ರೀಡೆಗಳಲ್ಲಿ ಹಾಸುಹೊಕ್ಕಾಗಿರುವ ಸಾಮಾಜಿಕ ತಾರತಮ್ಯ ಇನ್ನಷ್ಟು ಬೆಳಕಿಗೆ ಬರುವಂತೆ ಮಾಡಿ ಹೆಚ್ಚು ಚರ್ಚೆಗೆ ಮತ್ತು ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಕಾರಣವಾಗಲಿ.

ಪ್ರಜಾಪ್ರಭುತ್ವದ ಉಳಿವಿಗಾಗಿ ಪಟ್ಟುಹಾಕಿದ್ದವರಿಗೂ ಒಲಿಯಿತು ಪದಕ

ಮತ್ತೆ ಮತ್ತೆ ಕ್ರಿಕೆಟ್‌ಅನ್ನು ಇಲ್ಲಿ ರೆಫರ್ ಮಾಡುತ್ತಿರುವುದಕ್ಕೆ ಕಾರಣವಿಲ್ಲದಿದ್ದಿಲ್ಲ. ಭಾರತದಲ್ಲಿ ಶಾಲಾಬಾಲಕನೂ ಕೂಡ ಹಲವು ಕ್ರಿಕೆಟರ್‌ಗಳ ಹೆಸರುಗಳನ್ನು ತಿಳಿದಿರುತ್ತಾನೆ. ಆದರೆ ಉಳಿದ ಕ್ರೀಡೆಗಳ ಬಗ್ಗೆ, ಕ್ರೀಡಾಪಟುಗಳ ಬಗ್ಗೆ ತಿಳಿವಳಿಕೆ ಬಹುತೇಕ ಶೂನ್ಯದ ಹತ್ತಿರವಿರುತ್ತದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವುದಕ್ಕೂ ಮುಂಚೆ ಎಷ್ಟು ಜನಕ್ಕೆ ಬಜರಂಗ್ ಪುನಿಯಾ ಅವರ ಹೆಸರು ತಿಳಿದಿತ್ತು ಎಂಬ ಪ್ರಶ್ನೆಗೆ ಬಹುತೇಕ ಸಕಾರಾತ್ಮಕ ಉತ್ತರ ಸಿಗುವುದು ಕಷ್ಟವೇ!

ರೈತರಿಗೆ ಬೇಡವಾಗಿರುವ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಮಾಡಲು ಒಕ್ಕೂಟ ಸರ್ಕಾರ ಪಟ್ಟುಹಿಡಿದು ಕೂತಿರುವುದು ಮತ್ತು ಅದು ಸರ್ಕಾರ ನಡೆಸುತ್ತಿರುವ ಇಬ್ಬರು ವ್ಯಕ್ತಿಗಳ ಪ್ರತಿಷ್ಠೆಯ ಪ್ರಶ್ನೆಯಾಗಿ ರೈತರ ಪ್ರತಿಭಟನೆಯನ್ನೂ ದಮನಿಸುತ್ತಿರುವುದನ್ನು ದೇಶವೆಲ್ಲಾ ನೋಡಿದೆ. ಇದರ ವಿರುದ್ಧ ಯಾರಾದರೂ ಕ್ರಿಕೆಟರ್
ಧ್ವನಿ ಎತ್ತಿದ್ದಾನ ಎಂಬುದನ್ನು ಭೂತಕನ್ನಡಿ ಹಿಡಿದು ಹುಡುಕಬೇಕಿದೆ. ಜನವರಿ-ಫೆಬ್ರವರಿಯ ಸಮಯದಲ್ಲಿ ರೈತರ ಪ್ರತಿಭಟನೆ ಹೆಚ್ಚಿದ್ದಾಗ ಅವರ ಮೇಲೆ ದೆಹಲಿ ಪೊಲೀಸರು ಎಸಗಿದ ದೌರ್ಜನ್ಯ ಅಷ್ಟಿಷ್ಟಲ್ಲ. ಆಗ ’ದ ಕ್ಯಾರವಾನ್’ ಪತ್ರಿಕೆಯ ಜೊತೆಗೆ ಕೆಲಸ ಮಾಡುತ್ತಿದ್ದ ಮಂದೀಪ್ ಪುನಿಯಾ ಎಂಬುವ ಪತ್ರಕರ್ತನನ್ನು ದೆಹಲಿಯ ಸಿಂಘು ಗಡಿಯಿಂದ ಕ್ಷುಲ್ಲಕ ಆರೋಪ ಮಾಡಿ ದೆಹಲಿ ಪೊಲೀಸರು ಎತ್ತಿಹಾಕಿಕೊಂಡು ಹೋಗಿ ಬಂಧನದಲ್ಲಿರಿಸುತ್ತಾರೆ. ಹಲವು ಐಪಿಸಿ ಸೆಕ್ಷನ್‌ಗಳನ್ನು ಅವರ ಮೇಲೆ ಆರೋಪಿಸಲಾಗುತ್ತದೆ.

ಆಗ ಕುಸ್ತಿಪಟು ಬಜರಂಗ್ ಪುನಿಯಾ ಅವರು ಮಾಡಿರುವ ಟ್ವೀಟ್ ನಿಜಕ್ಕೂ ಒಂದು ಕ್ರೀಡೆ ಕಲಿಸಬಹುದಾದ ಮಾನವೀಯತೆಯ ಬಗ್ಗೆ ಭರವಸೆಯನ್ನು ಹುಟ್ಟಿಸುತ್ತದೆ. “ಅರ್ನಬ್ (ಗೋಸ್ವಾಮಿ) ಅವರಿಗಾಗಿ ತುರ್ತು ವಿಚಾರಣೆ ನಡೆಸಿದ್ದ ಇದೇ ಸುಪ್ರೀಂ ಕೋರ್ಟ್ ಈಗ ಮಂದೀಪ್ ಪುನಿಯಾ ಬಂಧನದಲ್ಲಿ ಮೌನವಾಗಿದೆ. ಇದರ ಬಗ್ಗೆ ಯೋಚಿಸಿ, ಇದು ಪ್ರಜಾಪ್ರಭುತ್ವಕ್ಕೆ ಸರಿಯಾದುದಲ್ಲ. ಪತ್ರಕರ್ತರ ಧ್ವನಿಯನ್ನು ಹೀಗೆ ಅಡಗಿಸಬಾರದು. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ಏಕೆ ಬದಲಿಸಲಾಗುತ್ತಿದೆ? ರೈತರ ಕೂಗನ್ನು ಆಲಿಸಿ, ಅದನ್ನು ದಮನಿಸಬೇಡಿ” ಎಂದು ಅವರು ಬರೆದಿದ್ದರು.

ಕ್ರೀಡೆಯಲ್ಲಿ ಸೋಲುವುದು ಮತ್ತು ಗೆಲುವುದು ಮನುಷ್ಯನಿಗೆ ಮೂಲಭೂತವಾಗಿ ಕಲಿಸಬೇಕಾಗಿರುವುದು ಇದನ್ನೇ! ಅಂದರೆ ಸಹಜೀವಿಯ ಕಷ್ಟಕ್ಕೆ ಎದ್ದು ನಿಲ್ಲುವ ಧೈರ್ಯವನ್ನು, ಮಾನವೀಯತೆಯನ್ನು, ಒಳಗೊಳ್ಳುವುದನ್ನು ಮತ್ತು ಕ್ರೀಡಾಸ್ಫೂರ್ತಿಯನ್ನು. ಇದು ಟೋಕಿಯೋದಲ್ಲಿ ಕಂಚು ಗೆದ್ದ ಬಜರಂಗ್ ಪುನಿಯಾ ಅವರ ಮಾತು-ನಡೆಗಳಲ್ಲಿ ಧ್ವನಿಸುತ್ತದಲ್ಲವೇ!

PC : The Economic Times

ಇದೇ ಸಮಯದಲ್ಲಿ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ ದಹಿಯಾ ಅವರ ಒಂದು ಮಾತು ಕೂಡ ಮುಖ್ಯವಾಗುತ್ತದೆ. ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನೂರಿಸ್ಲಾಮ್ ಸನಯೇವ್ ಅವರ ವಿರುದ್ಧ ಪಂದ್ಯ ಜಾರಿಯಲ್ಲಿದ್ದಾಗ ಮತ್ತು ಇನ್ನೇನು ರವಿಕುಮಾರ್ ಅವರ ಗೆಲುವು ಖಚಿತ ಎನ್ನುವಾಗ ಸನಯೇವ್ ಅವರು ರವಿಯವರ ಕೈಕಚ್ಚುತ್ತಾರೆ. ಇದು ಕ್ರೀಡಾ ನಿಯಮದ ಖಚಿತ ಉಲ್ಲಂಘನೆ. ಆದರೆ ಅದಕ್ಕೂ ಮೊದಲೇ ರವಿಯವರು ಪಂದ್ಯವನ್ನು ಗೆದ್ದಾಗಿರುತ್ತದೆ. ನಂತರ ಇದರ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ “ಇದು ಕುಸ್ತಿಯಲ್ಲಿ ಆಗಾಗ ಆಗುತ್ತದೆ. ಕಚ್ಚಿದ್ದರಿಂದ ಆದ ನೋವನ್ನು ಅಲ್ಲಿಯೇ ಬಿಟ್ಟೆ. ಅವರ ಮೇಲೆ ನನಗೆ ಯಾವುದೇ ಕೆಟ್ಟಭಾವನೆಗಳಿಲ್ಲ. ಅವರು ಮುಂದಿನ ದಿನ ತಬ್ಬಿಕೊಂಡು ಕ್ಷಮೆ ಕೇಳಿದರು. ನಾನೂ ಕ್ಷಮಿಸಿದೆ” ಎಂಬ ಮಾತುಗಳನ್ನು ರವಿ ಆಡಿದ್ದಾರೆ. ಇಂದು ರಾಜಕೀಯದಲ್ಲಿ ವಿಷಮತೆ-ದ್ವೇಷ ತುಂಬಿದ ವಾತಾವರಣದಲ್ಲಿ, ಒಂದು ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದು ಕಿರುಚಿಕೊಳ್ಳುವ ರಾಜಕಾರಣಿಗಳ ನಡುವೆ ಇಂತಹ ಕ್ರೀಡಾಸ್ಫೂರ್ತಿಯ ಮಾತುಗಳು ವಿವೇಕ ನೀಡಬಲ್ಲವೇ?

ಕಡೆಗಣನೆಗೆ ಒಳಗಾದ ರಾಜ್ಯಗಳಿಂದ ಕಾಣಿಸಿಕೊಳ್ಳುವ ಫೈಟರ್ಸ್

ಕೆಲವೇ ದಿನಗಳ ಹಿಂದೆ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೋರಾಂ ನಡುವೆ ಇದ್ದ ಹಳೆಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಘ್ನ ವಾತಾವರಣ ಉಂಟಾಗಿ ಹಲವರು ಪ್ರಾಣ ಕಳೆದುಕೊಂಡರು. ಇಂತಹ ಸನ್ನಿವೇಶಗಳಲ್ಲಿಯು ಆ ರಾಜ್ಯಗಳ ಸುದ್ದಿಗಳಿಗೆ ಬಗ್ಗೆ ಮಾಧ್ಯಮಗಳು ನೀಡುವ ಜಾಗ ಅತ್ಯಂತ ಕಡಿಮೆಯೇ. ಈಶಾನ್ಯ ರಾಜ್ಯಗಳ ಜನರು ಇತರ ರಾಜ್ಯಗಳಲ್ಲಿ ಅನುಭವಿಸುವ ಜನಾಂಗೀಯ ಕಿರುಕುಳಕ್ಕೂ ಕಡಿಮೆಯೇನಿಲ್ಲ. ಬಹುಶಃ ಒಲಿಂಪಿಕ್ಸ್ ಸಂದರ್ಭದಲ್ಲಿ ಮಾತ್ರವೇ ಈ ರಾಜ್ಯಗಳ ಹೆಸರುಗಳು ಭಾರತದ ಜನತೆಗೆ ಹೆಚ್ಚು ಕೇಳಿಸುವುದು ಮತ್ತು ಈ ರಾಜ್ಯದ ಜನರ ಬಗ್ಗೆ ಸ್ವಲ್ಪವಾದರೂ ಭ್ರಾತೃತ್ವದ ಭಾವನೆ ಮುಡುವುದು! ಆ ಮಟ್ಟಿಗೆ ಒಲಿಂಪಿಕ್ಸ್ ಇಂತಹ ಸಂದರ್ಭದಲ್ಲಿ ಭ್ರಾತೃತ್ವದ ನ್ಯಾಷನಲಿಸಂಗೆ ಕಾರಣವಾಗುತ್ತದೆ ಅನ್ನಬಹುದೇನೋ!

ಈ ಬಾರಿಯೂ ಅಸ್ಸಾಂನ ಲವ್ಲಿನಾ ಬಾಕ್ಸಿಂಗ್‌ನಲ್ಲಿ ಕಂಚು ಮತ್ತು ಮಣಿಪುರದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಸ್ಫೂರ್ತಿ ನೀಡಿದ್ದಾರೆ. ಮಣಿಪುರದವರೇ ಆದ, 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಮೇರಿ ಕೋಮ್ ಅವರು ಪದಕ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಉತ್ತಮ ಆಟ ಪ್ರದರ್ಶಿಸಿ ಪದಕವಿಲ್ಲದೆ ವಾಪಸಾಗಿದ್ದಾರೆ.

ಅಭಿನಂದನೆಯಲ್ಲಿ ರಾರಾಜಿಸಿದ ಮೋದಿಯವರ ಬೃಹತ ಫೋಟೋ!

ಒಲಿಂಪಿಕ್ಸ್ ಪದಕ ವಿಜೇತರಿಗೆ ಅಭಿನಂದಿಸಲು ಒಕ್ಕೂಟ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದ ಬ್ಯಾಕ್‌ಡ್ರಾಪ್‌ನಲ್ಲಿ ಗೆದ್ದ ಕ್ರೀಡಾಪಟುಗಳ ಫೋಟೋ ಸಣ್ಣ ಗಾತ್ರದಲ್ಲಿ ಇದ್ದು ಪ್ರಧಾನಿ ಮೋದಿಯವರದ್ದು ಬೃಹತ್ ಗಾತ್ರದಲ್ಲಿ ಕಾಣಿಸಿಕೊಂಡಿತ್ತು. ಅಭಿನಂದನೆಯನ್ನೂ ತಮ್ಮ ಪ್ರಚಾರ ಸಾಧನವಾಗಿಯೇ ಬಳಸಿಕೊಂಡ ಪ್ರಧಾನಿಯವರದ್ದು ಸಣ್ಣತನವೇ ಅಥವಾ ಕ್ರೀಡಾಸ್ಫೂರ್ತಿ ಮರೆತ ಸರ್ಕಾರದ ಪ್ರತಿಬಿಂಬವೇ ಊಹಿಸಲು ಕಷ್ಟವಾಗಲಾರದು!

ಒಟ್ಟಿನಲ್ಲಿ ಸಂಭ್ರಮಿಸಲು ಕಾರಣವಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆಗಳು.


ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ರೈತರ ಮಕ್ಕಳ ಕಮಾಲ್, ಸಂತಸ ಹಂಚಿಕೊಂಡ ಪ್ರತಿಭಟನಾ ನಿರತ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...