Homeಅಂಕಣಗಳುಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

- Advertisement -
- Advertisement -

ಮಹಿಳಾ ಹಾಕಿ ಒಲಿಂಪಿಕ್ಸ್ ತಾರೆ ವಂದನಾ ಕಟಾರಿಯಾ ಮನೆ ಮುಂದೆ ದಲಿತವಿರೋಧಿ ದಾಂಧಲೆ ನಡೆಸಿದ ಜಾತಿವಾದಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ದೇಶದಲ್ಲಿ ದಲಿತ ದ್ವೇಷ ಮಾಡಿ ದಕ್ಕಿಸಿಕೊಳ್ಳುವುದು ಬಲಿಷ್ಠ ಜಾತಿಗಳಿಗೆ ಅದೆಷ್ಟು ಸಲೀಸು ಎಂಬ ಕಠೋರ ಸತ್ಯವನ್ನು ಈ ಪ್ರಕರಣ ಪ್ರತಿಫಲಿಸಿದೆ.

ಕಳಪೆ ಪ್ರದರ್ಶನ ನೀಡಿರುವ ಅದೆಷ್ಟು ಬಲಿಷ್ಠ ಜಾತಿಗಳ ಕ್ರೀಡಾ ತಾರೆಯರ ಮನೆಗಳ ಮುಂದೆ ಜಾತಿಯ ಹೆಸರು ಹಿಡಿದು ಹಳಿದ ಉದಾಹರಣೆ ಇದೆ? ಇಂತಹ ನಿರ್ದಿಷ್ಟ ಬಲಿಷ್ಠ ಜಾತಿಯವರು ತಂಡದಲ್ಲಿ ಬಹಳ ಮಂದಿ ಇದ್ದಾರೆ… ಹೀಗಾಗಿಯೇ ಭಾರತದ ತಂಡ ಸೋತಿತು ಎಂಬ ಪ್ರತಿಭಟನೆ ನಡೆದಿದೆಯೇ? ಆರೋಗ್ಯವಂತ ಸಮಾಜ ಬೇಕೆಂದು ಬಯಸುವವರು ಯಾರೂ ಇಂತಹ ಪ್ರತಿಭಟನೆ ನಡೆಯಬೇಕೆಂದು ಬಯಸುವುದಿಲ್ಲ.

ವಂದನಾ ಮನೆಯ ಮುಂದೆ ನಡೆದ ದಲಿತ ದ್ವೇಷದ ವಿಕೃತಿಯನ್ನು ಖಂಡಿಸಿರುವ ಮಹಾಮಹಿಮರು ಯಾರಾದರೂ ಇದ್ದಾರೆಯೇ? ಅವರ ಬಾಯಿಗಳು ಸಾರಾಸಗಟಾಗಿ ಹೊಲಿದುಕೊಂಡಿರುವುದು ಯಾಕೆ? ಮೌನ
ಧರಿಸಿರುವುದು ಸಮ್ಮತಿಯ ಅಥವಾ ನಿರ್ಲಕ್ಷ್ಯದ ಲಕ್ಷಣ ಅಲ್ಲವೇ?

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಸೆಮಿಫೈನಲ್ಸ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತದ ಸೋಲಿಗೆ ದಲಿತರನ್ನು ದೂರಿದ್ದು ನಾಚಿಕೆಗೇಡು. ತಂಡದ ಪ್ರಮುಖ ಆಟಗಾರ್ತಿ ವಂದನಾ ಕಟಾರಿಯ ದಲಿತ ಜನಾಂಗಕ್ಕೆ ಸೇರಿದವರು. ಹರಿದ್ವಾರದ ರೋಶನಾಬಾದ್ ಗ್ರಾಮದ ವಾಸಿ. ತಂಡದ ಸೋಲಿನ ಕೆಲವೇ ತಾಸುಗಳಲ್ಲಿ ಆಕೆಯ ಮನೆಯ ಮುಂದೆ ಆಕೆಯ ಜಾತಿ ಹಿಡಿದು ಬೈಗುಳಗಳ ಕಿರುಚಾಟ ಕೇಳಿತು.

ಬಲಿಷ್ಠ ಜಾತಿಯ ಮೂವರು ಯುವಕರು ವಂದನಾ ಕಟಾರಿಯ ಕುಟುಂಬವನ್ನು ಹಳಿದು ಅಣಕಿಸಿ ಪಟಾಕಿ ಸಿಡಿಸಿ ಕುಣಿದಾಡಿದ್ದಾರೆ. ತಂಡದಲ್ಲಿ ಬಹಳ ಮಂದಿ ದಲಿತ ಆಟಗಾರ್ತಿಯರಿದ್ದ ಕಾರಣದಿಂದಲೇ ಭಾರತ ತಂಡ ಸೋತಿತು. ಹಾಕಿಯಲ್ಲಿ ಮಾತ್ರವಲ್ಲ ಎಲ್ಲ ಕ್ರೀಡೆಗಳಿಂದಲೂ ದಲಿತರನ್ನು ದೂರ ಇರಿಸಬೇಕೆಂದು ಅವಹೇಳನ ಮಾಡಿದ್ದಾರೆ.

ಇದೇ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಿದ್ದೇ ವಂದನಾ ಅವರ ಅದ್ಭುತ ಆಟ. ದಕ್ಷಿಣ ಆಫ್ರಿಕಾ ವಿರುದ್ಧದ ಆ ಪಂದ್ಯದಲ್ಲಿ ವಂದನಾ ಸತತ ಮೂರು ಗೋಲು ಬಾರಿಸಿದ್ದರು. ಭಾರತ ನಾಲ್ಕು ಗೋಲುಗಳನ್ನು ಮತ್ತು ದಕ್ಷಿಣ ಆಫ್ರಿಕಾ ಮೂರು ಗೋಲುಗಳನ್ನು ಗಳಿಸಿತ್ತು. ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಥಮ ಭಾರತೀಯಳೆಂಬ ದಾಖಲೆಯನ್ನು ವಂದನಾ ನಿರ್ಮಿಸಿದ್ದರು.

ಅರ್ಜೆಂಟೀನಾ ವಿರುದ್ಧ ಸೋತ ಪಂದ್ಯ ತೀವ್ರ ಸೆಣಸಿನದಾಗಿತ್ತು. ಭಾರತದ ತಂಡ ಸೋತದ್ದು ಒಂದು ಗೋಲಿನ ಅಂತರದಿಂದ. ಕಂಚಿನ ಪದಕಕ್ಕಾಗಿ ನಡೆದ ಮುಂದಿನ ಪಂದ್ಯದಲ್ಲಿ ಭಾರತದ ಈ ತಂಡ ಬ್ರಿಟನ್ ವಿರುದ್ಧ ವಿರೋಚಿತವಾಗಿ ಸೋತಿತು. ಈ ಪಂದ್ಯದಲ್ಲೂ ಮೂರನೆಯ ಗೋಲು ವಂದನಾ ಅವರದಾಗಿತ್ತು. ಆಕೆ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಫಾರ್ವರ್ಡ್ ಆಟಗಾರ್ತಿಯರಲ್ಲೊಬ್ಬರು.

ದೆಹಲಿಯ ಸ್ಮಶಾನವೊಂದರಲ್ಲಿ ಒಂಬತ್ತು ವರ್ಷದ ಹಾಲುಗಲ್ಲದ ದಲಿತ ಹೆಣ್ಣುಮಗುವನ್ನು ರೇಪ್ ಮಾಡಿ ಕೊಂದು ಸುಟ್ಟುಹಾಕಿದ ವಿಕೃತಿಯ ಬೆನ್ನಿಗೇ ವಂದನಾ ಕಟಾರಿಯ ಪ್ರಕರಣ ವರದಿಯಾಗಿದೆ. ಇಂತಹ ಸಾವಿರಾರು ಪ್ರಕರಣಗಳನ್ನು ಸದ್ದಿಲ್ಲದೆ ಹೂತುಹಾಕಲಾಗುತ್ತಿದೆ.

ದಲಿತ ದ್ವೇಷದ ಅಪರಾಧಗಳು, ದಮನ ದೌರ್ಜನ್ಯ ತಾರತಮ್ಯಗಳು ನಿತ್ಯ ಬದುಕಿನ ರಿವಾಜುಗಳಾಗಿ ಹೋಗಿವೆ. ಗ್ರಾಮಗಳಲ್ಲಿ ಅವರನ್ನು ಊರಹೊರಗಿನ ಹೊಲಗೇರಿಗಳಲ್ಲಿ ಇಡಲಾಗಿದೆ. ಪೇಟೆ ಪಟ್ಟಣ ನಗರಗಳಲ್ಲಿ ಅವರನ್ನು ಮನೋನಿರ್ಮಿತ ಹೊಲಗೇರಿಗಳಿಗೆ ಅಟ್ಟಲಾಗಿದೆ. ಮುಖ್ಯಧಾರೆಯ ಸಮಾಜವೆಂಬುದು ಅವರ ಪಾಲಿನ ಅಗೋಚರ ಕಾರಾಗೃಹ. ಎತ್ತರೆತ್ತರಕ್ಕೆ ಎದ್ದುನಿಂತಿರುವ ಬಗೆಬಗೆಯ ಅಸ್ಪೃಶ್ಯತೆಯ ತಡೆಗೋಡೆಗಳ ನಡುವೆ ಅವರು ವಿನಾಕಾರಣ ಕಳಂಕಿತ ಕೈದಿಗಳು.

ಈ ಅಮಾನುಷ ನಡವಳಿಕೆಯು ಭಾರತದ ಆತ್ಮವನ್ನು ಗಾಯಗೊಳಿಸಿದೆ. ಶತಮಾನಗಳ ಕೀವು ಮಡುಗಟ್ಟಿದೆ. ಈ ಗಾಯವನ್ನು ತೊಳೆದು ಮದ್ದು ತುಂಬಿ ಪಟ್ಟಿಕಟ್ಟುವುದು ಪೆಟ್ಟು ನೀಡುತ್ತಿರುವವರ ಕರ್ತವ್ಯ. ಆದರೆ ನಿರಾಕರಣೆ ನಿರ್ಲಕ್ಷ್ಯಗಳಲ್ಲಿ ಮುಳುಗಿಬಿಟ್ಟಿದ್ದಾರೆ ಅವರು. ಮದ್ದು ಅರೆಯುವ ಬದಲಿಗೆ ನಂಜು ಕಾರತೊಡಗಿದ್ದಾರೆ. ಉಪ್ಪು ಉಜ್ಜತೊಡಗಿದ್ದಾರೆ. ಭಾರತದ ಆತ್ಮದ ಗಾಯವು ತಮ್ಮ ಆತ್ಮಕ್ಕೆ ಅಂಟಿರುವ ವ್ಯಾಧಿ ಎಂಬುದನ್ನು ಕಾಣದೆ ಹೋಗಿದ್ದಾರೆ. ಖುದ್ದು ದಲಿತ ಮತ್ತು ಸ್ತ್ರೀದ್ವೇಷದ ಕೈದಿಗಳಾಗಿದ್ದಾರೆ. ದಲಿತ ಜನಕೋಟಿಯ ವಿಮೋಚನೆಯಲ್ಲಿ ತಮ್ಮ ಬಿಡುಗಡೆಯೂ ಆಡಗಿದೆ ಎಂಬ ನಿಜವನ್ನು ನಿರಾಕರಿಸತೊಡಗಿದ್ದಾರೆ.

ವಿನೋದ್ ಕಾಂಬ್ಳಿಯಂತಹ ಕ್ರಿಕೆಟಿಗನ ಪ್ರತಿಭೆ ಚಮ್ಮಾರನೆಂದು ಮೂದಲಿಕೆಗಳಲ್ಲಿ ಕಮರಿ ಹೋಯಿತು. ಕಾಂಬ್ಳಿ ಕಡಿಮೆ ರನ್ ಗಳಿಸಿದಾಗ ಜಾತಿ ಹಿಡಿದು ಹಂಗಿಸಿದ ಮನಸುಗಳು, ಬಲಿಷ್ಠ ಜಾತಿಗಳ ಆಟಗಾರರು ರನ್ ಗಳಿಗೆಯಲ್ಲಿ ಪರದಾಡಿ ಔಟ್ ಆದಾಗ ಅವರ ಜಾತಿಗಳನ್ನು ಹಿಡಿದು ಬೈದ ಉದಾಹರಣೆ ಹುಡುಕಿದರೂ ಕಾಣದು.

ಸುರೇಶ್ ರೈನಾ ಇತ್ತೀಚೆಗಷ್ಟೇ ಬ್ರಾಹ್ಮಣ್ಯದ ಗರಿಮೆ ಮೆರೆದರು. ’ಭಾರತ ರತ್ನ’ವೆನಿಸಿದ ಸಚಿನ್ ತೆಂಡೂಲ್ಕರ್ ತಾವು ಜನಿವಾರ ಧರಿಸಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಹಂಚಿಕೊಳ್ಳುತ್ತಾರೆ. ತೆಂಡೂಲ್ಕರ್ ಅವರನ್ನು ದೈವವೆಂದು ಆರಾಧಿಸಲಾಗುತ್ತದೆ. ಹ್ಯಾಟ್ರಿಕ್ ಗೋಲು ದಾಖಲೆ ಸ್ಥಾಪಿಸಿದ ವಂದನಾ ಅವರ ದಲಿತ ಜಾತಿ ಮೂಲವನ್ನು ಹಿಡಿದು ಹಳಿಯಲಾಗುತ್ತದೆ. ಖಡ್ಗಗಳನ್ನು ಹಿರಿದು ಝಳಪಿಸಿ ತಾನು ರಜಪೂತನೆಂದು ಮೆರೆಯುತ್ತಾರೆ ರವೀಂದ್ರ ಜಡೇಜ. ಈ ಹಿಂದೆ ತಮ್ಮೊಂದಿಗೆ ಆಡಿದ ಯಜುವೇಂದ್ರ ಚಹಲ್ ಎಂಬ ದಲಿತ ಕ್ರಿಕೆಟಿಗನನ್ನು ’ಭಂಗಿ’ (ಮಾನವ ಮಲ ಬಾಚಿ ಹೊತ್ತು ಸಾಗಿಸುವ ಕೆಲಸ ಮಾಡುವ ದಲಿತ ಜಾತಿ) ಎಂದು ಕರೆಯುತ್ತಾರೆ ಮತ್ತೊಬ್ಬ ಕ್ರಿಕೆಟ್ ತಾರೆ ಯುವರಾಜ್ ಸಿಂಗ್. ಟೀಕೆ ಎದುರಾದಾಗ ಈ ಜಾತಿಸೂಚಕದ ಸಾಧಕ ಬಾಧಕಗಳು ತನಗೆ ತಿಳಿದೇ ಇರಲಿಲ್ಲ ಎಂದು ವಾದಿಸುತ್ತಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತ ತಂಡ ಸೇರಿ ಕ್ರಿಕೆಟ್ ಆಡಿದ ದಲಿತರು ಮತ್ತು ಹಿಂದುಳಿದವರು ಬೆರಳೆಣಿಕೆಯವರು-ಏಕನಾಥ ಸೋಲ್ಕರ್, ಕರ್ಸನ್ ಘಾವ್ರಿ, ವಿನೋದ್ ಕಾಂಬ್ಳಿ, ಭುವನೇಶ್ವರ ಕುಮಾರ್, ದೊಡ್ಡನರಸಯ್ಯ ಗಣೇಶ್, ವಿಜಯಕೃಷ್ಣ…

ತುಳಸಿ ಹೆಲೆನ್ ಎಂಬ ಬಾಕ್ಸರ್ ತನ್ನ ದಲಿತ ಹಿನ್ನೆಲೆಯ ಕುರಿತು ಮುಕ್ತವಾಗಿ ಮಾತಾಡಿ ಮೂಲೆಗುಂಪಾದಳು. ಲೇಡಿ ಮಹಮ್ಮದ್ ಆಲಿ ಎಂದು ಕರೆಸಿಕೊಂಡಿದ್ದ ಈಕೆ ಹೊಟ್ಟೆ ಹೊರೆಯಲು ಆಟೋ ಓಡಿಸಿದಳು. ಪೀಜ್ಜಾ ಡೆಲಿವರಿ ಮಾಡಿದಳು. ದಲಿತಳಾಗಿ ಹುಟ್ಟಿದ್ದಕ್ಕೆ ತಳದಿಂದ ಮೇಲೇಳುವ ಅವಕಾಶವೇ ನನಗಿಲ್ಲ ಎಂದು ಹಲುಬುವುದಷ್ಟೇ ಆಕೆಗೆ ಉಳಿದದ್ದು.

ದೆಹಲಿಯ ಬ್ಯಾಂಕ್ ಜವಾನನ ಮಗಳಾಗಿ ಹುಟ್ಟಿದ ದಲಿತೆ ಕುಸ್ತಿಪಟು ಜ್ಯೋತಿ. ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಕಂಚು ಪದಕ ವಿಜೇತೆ. ’ಡೊಮೆಸ್ಟಿಕ್ ಟೂರ್ನಿಯೊಂದರ ಸೆಮಿಫೈನಲ್‌ನಲ್ಲಿ ನಿಚ್ಚಳ ಗೆಲುವು ನನ್ನದಾಗಿದ್ದರೂ, ಸೋತಿದ್ದೇನೆಂದು ಸಾರಲಾಯಿತು. ಈ ಸೆಮಿಫೈನಲ್ ಮರುದಿನ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ನನಗೆ ಹೆಚ್ಚು ವಿಶ್ರಾಂತಿ ಸಿಗಬಾರದೆಂದೂ, ಕಂಚಿನ ಪದಕ ನನಗೆ ದಕ್ಕಬಾರದೆಂದೂ ಸಂಚು ಮಾಡಿ ಅದೇ ದಿನ ಪಂದ್ಯ ನಡೆಸಲಾಯಿತು. ನನ್ನ ದಲಿತ ಹುಟ್ಟೇ ಈ ಅನ್ಯಾಯದ ಮೂಲ’ ಎಂಬುದು ಆಕೆಯ ಅಳಲು.

ಸಾಂತಿ ಸೌಂದರ ರಾಜನ್ ಎಂಬ ದಲಿತ ಅಥ್ಲೆಟ್ ಆತ್ಮಹತ್ಯೆಯ ವಿಫಲ ಪ್ರಯತ್ನ ನಡೆಸಿದ್ದಳು. ಪಾದಗಳಲ್ಲಿ ಆರು ಬೆರಳುಗಳುಳ್ಳ ಸ್ವಪ್ನಾ ಬರ್ಮನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ದಲಿತ ಹೆಣ್ಣುಮಗಳು. ಏಷ್ಯನ್ ಕ್ರೀಡೆಗಳ ಅತಿ ಕಠಿಣ ಹೆಪ್ಟತ್ಲಾನ್‌ನಲ್ಲಿ ಪಾದಗಳ ನೋವಿನ ನಡುವೆಯೂ ಛಲ ತೊಟ್ಟು ಚಿನ್ನದ ಪದಕ ಗಳಿಸಿದಳು. ಆರು ಬೆರಳುಗಳು ಹಿಡಿಯುವ ವಿಶೇಷ ಶೂಗಳ ಖರೀದಿಸಲು ಅಸಮರ್ಥಳು. ಭಾರತದ ಧ್ವಜವನ್ನು ಅಂತಾರಾಷ್ಟ್ರೀಯ ಕ್ರೀಡಾವೇದಿಕೆಗಳಲ್ಲಿ ಹಾರಿಸಿರುವ ಹಿಮಾ ದಾಸ್ ಎಂಬ ದಲಿತ ಓಟಗಾರ್ತಿಯ ಜಾತಿ ಯಾವುದೆಂದು ತಿಳಿಯಲು ದಾಖಲೆ ಸಂಖ್ಯೆಯ ಗೂಗಲ್ ಸರ್ಚ್ ಮಾಡಲಾಗಿದೆ. ನಿವೃತ್ತಿ ಹೊಂದಿದ ನಂತರವೂ ಪಿ.ಟಿ. ಉಷಾ ಎಂಬ ಮತ್ತೊಬ್ಬ ದಲಿತ ದಂತಕತೆಯ ಕುಲವನ್ನು ಹೀಗೆಯೇ ಹುಡುಕಿದ ದಾಖಲೆಗಳಿವೆ.

‘1979-80ರಲ್ಲಿ ನಾನು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದೆ. ಹಿಂದುಳಿದ ಜಾತಿಯ ಹಣೆಪಟ್ಟಿ ಬೇಟೆಯಾಡಿತು. ಆಸೆಗಳೆಲ್ಲ ನುಚ್ಚುನೂರಾಗಿ ಅಕೆಡಮಿಕ್ಸ್ ಹಾದಿ ಹಿಡಿದೆ. ಆಧುನಿಕ ದ್ರೋಣಾಚಾರ್ಯರು ಅರ್ಜುನರಿಗೆ ತರಬೇತಿ ನೀಡುತ್ತಾರೆಯೇ ವಿನಾ ಏಕಲವ್ಯರಿಗೆ ಅಲ್ಲ. ಹಲವು ಅಥ್ಲೀಟ್‌ಗಳ ಬದುಕು ನಾಶವಾದದ್ದನ್ನು ಕಣ್ಣಾರೆ ಕಂಡಿದ್ದೇನೆ. ಮಹಿಳಾ ದಲಿತ ಅಥ್ಲೀಟ್‌ಗಳ ಸ್ಥಿತಿ ಮತ್ತಷ್ಟು ಶೋಚನೀಯ’ ಎಂದಿರುವವರು ಪ್ರೊಫೆಸರ್ ವೈ. ಸ್ವರೂಪಾ ಆರ್. ಶಂಕರ್ ಹೈದರಾಬಾದ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ.


ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...