ಭಾರತ ಮತ್ತು ಚೀನಾ ಗಡಿ ವಿವಾದ ಸಮಸ್ಯೆಯನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ. “ಚೀನಾ ಮತ್ತು ಭಾರತ ಸಮಸ್ಯೆಗಳನ್ನು ಸಂವಾದ ಹಾಗೂ ಸಮಾಲೋಚನೆಯ ಮೂಲಕ ಪರಿಹರಿಸಲು ಸಮರ್ಥವಾಗಿವೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಮರ್ಥವಾಗಿ ಮಧ್ಯಸ್ಥಿಕೆ ವಹಿಸಲು ಅಮೆರಿಕವು ಸಿದ್ಧ ಎಂದು ಕಳೆದ ಬುಧವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅಲ್ಲದೆ ಅದನ್ನು ಇಂದು ಕೂಡಾ ಪುನರುಚ್ಛರಿಸಿದ್ದರು.
ಅಮೆರಿಕಾ ಅಧ್ಯಕ್ಷರ ಪ್ರಸ್ತಾಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಎರಡು ದೇಶಗಳ ಮಿಲಿಟರಿ ವಿವಾದ ಪರಿಹರಿಸಲು ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಉಭಯ ದೇಶಗಳು ಬಯಸುವುದಿಲ್ಲ ಎಂದು ಹೇಳಿದ್ದಾರೆ.
“ಚೀನಾ ಮತ್ತು ಭಾರತದ ನಡುವೆ ಅಸ್ತಿತ್ವದಲ್ಲಿರುವ ಗಡಿ ಸಂಬಂಧಿತ ಕಾರ್ಯವಿಧಾನಗಳು ಮತ್ತು ಸಂವಹನ ಮಾರ್ಗಗಳಿವೆ” ಎಂದು ಝಾವೋ ಸುದ್ದಿಗಾರರಿಗೆ ತಿಳಿಸಿದರು. “ಸಂಭಾಷಣೆ ಮತ್ತು ಸಮಾಲೋಚನೆಯ ಮೂಲಕ ನಮ್ಮ ನಡುವಿನ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ” ಎಂದು ಅವರು ಹೇಳಿದರು.
ಲಡಾಖ್ ಮತ್ತು ಸಿಕ್ಕಿಂನಲ್ಲಿನ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೂರ್ವ ಲಡಾಖ್‌ನ ಲೈನ್ ಆಫ್ ಕಂಟ್ರೋಲ್ ಉದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ. ಇದು 2017 ರಲ್ಲಿ ಡೋಕ್ಲಾಮ್ ಬಿಕ್ಕಟ್ಟಿನ ನಂತರ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದೆ ಎನ್ನಲಾಗಿದೆ.
ಗಡಿ ನಿರ್ವಹಣೆಯ ಬಗ್ಗೆ ಭಾರತ ಯಾವಾಗಲೂ ಅತ್ಯಂತ ಜವಾಬ್ದಾರಿಯುತ ನಡೆಯನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು, ಭಾರತದ ಎಲ್ಲಾ ಚಟುವಟಿಕೆಗಳನ್ನು ಗಡಿಯ ಬದಿಯಲ್ಲಿ ನಡೆಸಲಾಗಿದೆ ಎಂದು ಹೇಳಿದೆ.
“ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಕಾರ್ಯವಿಧಾನಗಳ ಮೂಲಕ ನೇರವಾಗಿ ಚೀನಾದೊಂದಿಗೆ ಸಂಪರ್ಕದಲ್ಲಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ.
ಓದಿ: ಸುಳ್ಳನ್ನು ’ಫ್ಯಾಕ್ಟ್ ಚೆಕ್’ ಮಾಡಿದ ಟ್ವಿಟ್ಟರ್: ಜಾಲತಾಣ ಮುಚ್ಚುವುದಾಗಿ ಟ್ರಂಪ್ ಬೆದರಿಕೆ


