ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಹೊಂದಿರುವ ಟಿ-ಶರ್ಟ್‌ಗಳನ್ನು ಧರಿಸಿ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಗುರುವಾರ (ಮಾ.20) ಒಂದು ಮಟ್ಟಿಗೆ ಮುಂದೂಡಲಾಯಿತು.
ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರುದ್ದ ವಿಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದಾಗ ಸ್ಪೀಕರ್ ಪೀಠದಲ್ಲಿದ್ದ ಕೃಷ್ಣ ಪ್ರಸಾದ್ ಟೆನ್ನೇಟಿ, ಸದಸ್ಯರು ತಮ್ಮ ಆಸನಗಳಲ್ಲಿ ಹೋಗಿ ಕೂರುವಂತೆ ವಿನಂತಿಸಿದರು.
“ಕೃಷಿಯ ಬಗ್ಗೆ ನಾವು ಚರ್ಚೆ ಮಾಡಬೇಕಿದೆ. ದೇಶದ ಇಂತಹ ಪ್ರಮುಖ ವಿಷಯ ಕುರಿತು ನೀವು ಚರ್ಚೆ ನಡೆಯಲು ಬಿಡುತ್ತಿಲ್ಲ. ನೀವು ಸಹಕರಿಸಿ ಕಲಾಪ ಮುಂದುವರಿಸಲು ಬಿಡಿ ಎಂದು ನಾನು ವಿನಂತಿಸುತ್ತೇನೆ” ಎಂದು ಸ್ಪೀಕರ್ ಪ್ರತಿಪಕ್ಷ ಸದಸ್ಯರಿಗೆ ಮನವಿ ಮಾಡಿದರು.
ಇದಕ್ಕೆ ಒಪ್ಪದೆ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದಾಗ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು. ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಹಿನ್ನೆಲೆ, ಗುರುವಾರ ಲೋಕಸಭಾ ಕಲಾಪ ಪದೇ ಪದೇ ಮುಂದೂಡಿಕೆಯಾಯಿತು.
ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡುವ ಮುನ್ನ, ಡಿಎಂಕೆ ಸದಸ್ಯರು ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಆಕ್ಷೇಪಿಸಿದರು. ಇಂತಹ ನಡವಳಿಕೆಗಳು ಸದನದ ಕಾರ್ಯವಿಧಾನದ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಹೇಳಿದರು. ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ್ದರು.
ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗಲೂ ವಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರಿಯಿತು. ಈ ವೇಳೆ ಸ್ಪೀಕರ್ ಪೀಠದಲ್ಲಿದ್ದ ಟಿಡಿಪಿ ಸಂಸದ ಟೆನ್ನೇಟಿ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
ಡಿಎಂಕೆ ಸದಸ್ಯರು ಪ್ರತಿಭಟನೆಯ ಭಾಗವಾಗಿ ಲೋಕಸಭೆಯಲ್ಲಿ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿದ್ದರು, ಅವುಗಳ ಮೇಲೆ ‘#fairdelimitation ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಓಂ ಬಿರ್ಲಾ ಅವರು “ಸದನವು ನಿಯಮಗಳು ಮತ್ತು ಕಾರ್ಯವಿಧಾನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಸದನದ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಕೆಲವು ಸಂಸದರು ನಿಯಮಗಳನ್ನು ಪಾಲಿಸುತ್ತಿಲ್ಲ ಮತ್ತು ಘನತೆಯನ್ನು ಉಲ್ಲಂಘಿಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಬೆಳಿಗ್ಗೆ 11 ಗಂಟೆಗೆ ಹೇಳಿದ್ದರು.
ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಬಂದಿದ್ದ ಸದಸ್ಯರಿಗೆ ಸ್ಪೀಕರ್ ಸದನದಿಂದ ಹೊರಗೆ ಹೋಗಿ ಘನತೆಯನ್ನು ಕಾಪಾಡಿಕೊಳ್ಳುವ ಸರಿಯಾದ ಉಡುಪಿನೊಂದಿಗೆ ಹಿಂತಿರುಗಲು ನಿರ್ದೇಶಿಸಿದ್ದರು.
“ಒಬ್ಬ ನಾಯಕ ಎಷ್ಟೇ ದೊಡ್ಡವನಾಗಿದ್ದರೂ, ಸದನದೊಳಗೆ ಇಂತಹ ಅಗೌರವದ ಉಡುಪು ಸ್ವೀಕಾರಾರ್ಹವಲ್ಲ” ಎಂದಿದ್ದರು.
“ಹೊರಗೆ ಹೋಗಿ, ಬಟ್ಟೆ ಬದಲಾಯಿಸಿ ಸರಿಯಾದ ಉಡುಪಿನೊಂದಿಗೆ ಬನ್ನಿ” ಎಂದು ಸಂಸದೀಯ ನಿಯಮಗಳನ್ನು ಉಲ್ಲೇಖಿಸಿ ಸದಸ್ಯರಿಗೆ ಹೇಳಿ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ್ದರು.
ಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ವಿಷಯವನ್ನು ಎತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನಗಣತಿ ಇನ್ನೂ ನಡೆಯದ ಕಾರಣ ಈ ವಿಷಯವು ಸರ್ಕಾರದ ಗಮನದಲ್ಲಿಲ್ಲ ಎಂದು ಹೇಳಿ ಸ್ಪೀಕರ್ ಅವರ ಡಿಎಂಕೆ ಸಂಸದರ ಮನವಿಯನ್ನು ತಿರಸ್ಕರಿಸಿದ್ದಾರೆ.
ರಾಜ್ಯಸಭೆ ಕಲಾಪ ಮುಂದೂಡಿಕೆ
ಗುರುವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆ ಮತ್ತೆ ಸೇರಿದ ತಕ್ಷಣ, ಡಿಎಂಕೆ ಸದಸ್ಯರು ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿದ್ದರ ಬಗ್ಗೆ ಗದ್ದಲ ಉಂಟಾದ ಕಾರಣ, ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಡಿಎಂಕೆ ಸಂಸದರ ಪ್ರತಿಭಟನೆಯ ಕಾರಣಕ್ಕೆ ಊಟದ ವಿರಾಮದ ಮೊದಲ ಅವಧಿಯಲ್ಲಿ ಮೇಲ್ಮನೆಯ ಕಲಾಪವನ್ನು ಮೂರು ಬಾರಿ ಮುಂದೂಡಲ್ಪಟ್ಟವು.
“ಮಾರ್ಚ್ 21 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸದನವನ್ನು ಮುಂದೂಡಲಾಗಿದೆ” ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ದಾಖಲೆಗಳನ್ನು ಮಂಡಿಸಿದ ಕೂಡಲೇ, ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಮಧ್ಯಾಹ್ನ 12 ಗಂಟೆಯವರೆಗೆ ಕಲಾಪವನ್ನು ಒಂದು ಗಂಟೆ ಮುಂದೂಡಿದ್ದರು ಮತ್ತು ವಿವಿಧ ಪಕ್ಷಗಳ ಸದನ ನಾಯಕರ ಸಭೆ ಕರೆದಿದ್ದರು.
ಆದಾಗ್ಯೂ, ಈ ವಿಷಯದ ಬಗ್ಗೆ ಬಿಕ್ಕಟ್ಟು ಮುಂದುವರೆಯಿತು ಮತ್ತು ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗ, ಉಪಾಧ್ಯಕ್ಷ ಹರಿವಂಶ್ ಅವರು ಕಲಾಪವನ್ನು ಮತ್ತೆ 15 ನಿಮಿಷಗಳ ಕಾಲ ಮುಂದೂಡಲಾಗಿದೆ ಎಂದು ಘೋಷಿಸಿದರು.
12.15 ಕ್ಕೆ, ಅವರು ಮತ್ತೆ ಬಂದು, ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ ಎಂದು ಘೋಷಿಸಿದರು, ಆದರೆ ಬಿಕ್ಕಟ್ಟು ಇನ್ನೂ ಮುಂದುವರೆದಿತ್ತು.
ಕಲಾಪ ಮುಂದೂಡಿಕೆಗೆ ಸಭಾಧ್ಯಕ್ಷರು ಯಾವುದೇ ಕಾರಣವನ್ನು ಉಲ್ಲೇಖಿಸದಿದ್ದರೂ, ಡಿಎಂಕೆ ಸದಸ್ಯರು ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿದ್ದಕ್ಕೆ ಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.
40 ವರ್ಷದ ಬಳಿಕ ಸುಪ್ರೀಂಕೋರ್ಟ್‌ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!


