ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಬಳಿಕ ಭಾರತ ತಂಡ ಎಸಿಸಿ ಮುಖ್ಯಸ್ಥ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿರುವುದನ್ನು ಶಿವಸೇನಾ ಸಂಸದ ಸಂಜಯ್ ರಾವತ್ ‘ನಾಟಕ’ ಎಂದಿದ್ದಾರೆ.
ಏಷ್ಯಾ ಕಪ್ ಸರಣಿಯ ಆರಂಭದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊಹ್ಸಿನ್ ನಖ್ವಿಯೊಂದಿಗೆ ಕೈಕುಲುಕಿದ, ಸಂಭಾಷಣೆ ನಡೆಸಿದ ಮತ್ತು ಫೋಟೋಗೆ ಪೋಸ್ ನೀಡಿದ ವಿಡಿಯೋಗಳನ್ನು ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾವತ್ ಹಂಚಿಕೊಂಡಿದ್ದಾರೆ.
“ಸರಣಿಯ ಆರಂಭದಲ್ಲಿ, 15 ದಿನಗಳ ಹಿಂದೆ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರೊಂದಿಗೆ ಕೈಕುಲುಕಿದ, ಫೋಟೋ ತೆಗೆಸಿಕೊಂಡ ಈ ಜನರು ಈಗ ದೇಶದ ಮುಂದೆ ಶೋ ಆಫ್ ಮಾಡುತ್ತಿದ್ದಾರೆ. ನಿಮ್ಮ ರಕ್ತದಲ್ಲಿ ಅಷ್ಟೊಂದು ದೇಶಭಕ್ತಿ ಇದ್ದಿದ್ದರೆ, ನೀವು ಪಾಕಿಸ್ತಾನದೊಂದಿಗೆ ಮೈದಾನಕ್ಕೇ ಇಳಿಯಬಾರದಿತ್ತು. ಮೇಲಿನಿಂದ ಕೆಳಕ್ಕೆ, ಎಲ್ಲವೂ ಕೇವಲ ನಾಟಕ. ನಮ್ಮ ಜನ ಮೂರ್ಖರು” ಎಂದು ರಾವತ್ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
सीरीज़ की शुरुआत में, 15 दिन पहले, पाकिस्तान के मंत्री मोहसिन नकवी के साथ हाथ भी मिलाया ,फोटो खिंचवाया
अभी ये लोग देश को नौटंकी दिखा रहे है!
इतनी राष्ट्रभक्ती आपके खुन में थी तो पाकिस्तान के साथ मैदान में नही उतरना था,
उपर से नीचे तक ड्रामा ही ड्रामा ।
🇮🇳 की जनता मूर्ख 👎 है pic.twitter.com/6SOBhG7lPP— Sanjay Raut (@rautsanjay61) September 29, 2025
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾವತ್, “ಟ್ರೋಫಿ ಸ್ವೀಕರಿಸದಿರುವುದು ಕೇವಲ ನಾಟಕ. ನಾನು ಹಂಚಿದ ವಿಡಿಯೋದಲ್ಲಿ ಕೈಕುಲುಕಿರುವುದು, ಚಹಾ ಕುಡಿದಿರುವುದು, ಫೋಟೋ ತೆಗೆಸಿಕೊಂಡಿರುವುದು ಎಲ್ಲವೂ ಸ್ಪಷ್ಟವಾಗಿದೆ. ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.
ಭಾರತ–ಪಾಕಿಸ್ತಾನದ ನಡುವಿನ ಪಂದ್ಯ ಸೇನೆ ಮತ್ತು ಪಹಲ್ಗಾಂ ದಾಳಿಯ ಹುತಾತ್ಮರಿಗೆ ಮಾಡಿದ ಅವಮಾನ ಎಂದ ರಾವತ್, “ಪ್ರಶ್ನೆ ಒಂದೇ – ಪಾಕಿಸ್ತಾನದ ವಿರುದ್ಧ ಆಟವಾಡುವುದೇಕೆ? ಹುತಾತ್ಮ ಸೈನಿಕರ ತ್ಯಾಗವನ್ನು ಗೌರವಿಸುವುದಾದರೆ, ಇಂತಹ ಪ್ರದರ್ಶನ ಬೇಡವಿತ್ತು” ಎಂದು ಹೇಳಿದ್ದಾರೆ.
ಈ ಕುರಿತಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಕೂಡ ಪ್ರತಿಕ್ರಿಯಿಸಿದ್ದು, “ಸರಣಿಯ ಆರಂಭದಲ್ಲಿ ಪಾಕಿಸ್ತಾನದ ಸಚಿವರೊಂದಿಗೆ ಕೈಕುಲುಕಿ ಫೋಟೋ ತೆಗೆಸಿಕೊಂಡಿದ್ದರು. ಆದರೆ, ಭಾರತದಲ್ಲಿ ವಿರೋಧ ವ್ಯಕ್ತವಾದ ಬಳಿಕ ಆಟಗಾರರಿಗೆ ಪ್ರಚಾರಕ್ಕಾಗಿ ಹೊಸ ಸ್ಕ್ರಿಪ್ಟ್ ನೀಡಲಾಗಿದೆ” ಎಂದು ಟೀಕಿಸಿದ್ದಾರೆ.
ಏಷ್ಯಾ ಕಪ್ ವಿವಾದ: ಮೊಹ್ಸಿನ್ ನಖ್ವಿ ವಿರುದ್ಧ ಐಸಿಸಿ ಸಭೆಯಲ್ಲಿ ಪ್ರತಿಭಟನೆ ದಾಖಲಿಸಲು ಮುಂದಾದ ಬಿಸಿಸಿಐ


