ಕೋವಿಡ್ ಲಸಿಕೆಗಳ ಖರೀದಿ ಅವ್ಯವಹಾರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಪಾತ್ರ ಕುರಿತು ತನಿಖೆ ನಡೆಸುವಂತೆ ಬ್ರೆಜಿಲ್ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕರ್ತವ್ಯ ಲೋಪದ ಕುರಿತು ವಿಶೇಷ ವಿಚಾರಣಾಧೀಕಾರಿಗಳ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರೋಸಾ ವೆಬ್ಬರ್ ಆದೇಶಿಸಿದ್ದಾರೆ.
ಅಧ್ಯಕ್ಷ ಬೊಲ್ಸನಾರೊ ಭಾರತ ಬಯೋಟೆಕ್ ಕಂಪನಿಯ ಜೊತೆ ಕೋವ್ಯಾಕ್ಸಿನ್ ಲಸಿಕೆ ಖರೀದಿಯ ಸಂಬಂಧ ಫೆಭ್ರುವರಿಯಲ್ಲಿ 316 ಮಿಲಿಯನ್ ಡಾಲರ್ ರೂಪಾಯಿ ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ ಭಾರತ್ ಬಯೋಟೆಕ್ ಕಂಪನಿ ಬ್ರೆಜಿಲ್‌ಗೆ 20 ಮಿಲಯನ್ ವ್ಯಾಕ್ಸಿನ್ ಡೋಸ್‌ಗಳನ್ನು ಪೂರೈಕೆ ಮಾಡಬೇಕಿತ್ತು. ವ್ಯಾಕ್ಸಿನ್ ಖರೀದಿಯಲ್ಲಿ ವ್ಯಾಪಕ ಹಗರಣ ನಡೆದಿದೆ ಮತ್ತು ಹೆಚ್ಚಿನ ಬೆಲೆಗೆ ವ್ಯಾಕ್ಸಿನ್ ಖರೀದಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಕಾರಣ ಬ್ರೆಜಿಲ್ ಸರ್ಕಾರ ಒಪ್ಪಂದವನ್ನು ರದ್ದು ಮಾಡಿತ್ತು.
ಬೊಲ್ಸನಾರೊ ಸರ್ಕಾರದ ಕೋವಿಡ್ ನಿರ್ವಹಣೆಯ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿ ವ್ಯಾಕ್ಸಿನ್ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿರುವ ಕುರಿತು ಸಂಶಯ ವ್ಯಕ್ತಪಡಿಸಿದ ಪರಿಣಾಮ ಬ್ರೆಜಿಲ್ ಸರ್ಕಾರ ವ್ಯಾಕ್ಸೀನ್ ಖರೀದಿಯನ್ನೇ ಕೈಬಿಟ್ಟಿದೆ.
ಬ್ರೆಜಿಲ್‌ನ ಫೆಡರಲ್ ತನಿಖಾಧಿಕಾರಿಗಳು ಮತ್ತು ಕಂಟ್ರೋಲರ್ ಜನರಲ್ ಕಚೇರಿಯು ವ್ಯಾಕ್ಸಿನ್ ಖರೀದಿಯಲ್ಲಿನ ಅವ್ಯವಹಾರದ ಕುರಿತು ಪ್ರತ್ಯೇಕ ತನಿಖೆ ನಡೆಸುತ್ತಿದೆ. ಬ್ರೆಜಿಲ್ ಸರ್ಕಾರದ ಮುಖ್ಯ ಸಚೇತಕರಾದ ರಿಕಾರ್ಡೋ ಬರೋಸ್ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ.
ಅಧ್ಯಕ್ಷ ಬೊಲ್ಸನಾರೊ ಮತ್ತು ರಿಕಾರ್ಡೋ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಬೊಲ್ಸೆನಾರೋ ವಿರುದ್ಧದ ತನಿಖೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಲಿದೆ. 90 ದಿನಗಳಲ್ಲಿ ಸಾಕ್ಷ ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸುವಂತೆ ಜಸ್ಟಿಸ್ ರೋಸಾ ವೆಬ್ಬರ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು


