ಬ್ರೆಜಿಲ್‌ನ ಜನತೆ ತಮ್ಮ ದೇಶದ ಅಧ್ಯಕ್ಷ ಬೊಲ್ಸೆನಾರೋ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ಸರ್ಕಾರದ ನಿರ್ಲಕ್ಷ ಮತ್ತು ವೈಫಲ್ಯಗಳು ಬ್ರೆಜಿಲ್‌ ಜನರನ್ನು ಸಿಡಿದೇಳುವಂತೆ ಮಾಡಿದೆ.

ಬ್ರೆಜಿಲ್‌ ದೇಶದ 16 ನಗರಳಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ʼಬೊಲ್ಸೆನಾರೋ ಕೆಳಗಿಳಿಸಿʼ ʼಬೊಲ್ಸೆನಾರೋ ಪದಚ್ಯುತಗೊಳಿಸಿʼ ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಪ್ರತಿಭಟಿಸತೊಡಗಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ತಜ್ಞರ ಎಚ್ಚರಿಕೆಗಳನ್ನೆಲ್ಲ ಗಾಳಿಗೆ ತೂರಿ ನಿರ್ಲಕ್ಷ ವಹಿಸಿದ ಬೊಲ್ಸಾನಾರೋ ಈಗ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ.

ಬೊಲ್ಸಾನಾರೋ ಅವರ ಜನಪ್ರಿಯತೆ ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ತೀವ್ರವಾಗಿ ಕುಸಿತಕಂಡಿದೆ. ಇದುವರೆಗೆ ಬ್ರೆಜಿಲ್‌ ನಲ್ಲಿ 4,60,000 ಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬೊಲ್ಸೊನಾರೋ ಅವರ ಕೊರೋನಾ ಸೋಂಕಿನ ಬಗೆಗಿನ ತೀವ್ರ ನಿರ್ಲಕ್ಷ್ಯ, ಉಡಾಫೆಯ ಹೇಳಿಕೆ ಮತ್ತು ಕೊರೋನಾ ಲಸಿಕೆ ಬಗೆಗಿನ ಅಸಡ್ಡೆಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಇದುವರೆಗೆ ಕಟು ಶಬ್ಧಗಳಲ್ಲಿ ಎಚ್ಚರಿಸುತ್ತ ಬಂದಿವೆ. ಇದಾವುದನ್ನು ಲೆಕ್ಕಿಸದೇ ಬೊಲ್ಸೆನಾರೋ ತಮ್ಮ ಎಂದಿನ ಸುಳ್ಳು ಮತ್ತು ಉಡಾಫೆಯ ಹೇಳಿಕೆಗಳನ್ನು ಮುಂದುವರೆಸಿದ್ದರು. ಕಡ್ಡಾಯ ಮಾಸ್ಕ್‌ ಧರಿಸುವ ನಿಯಮಗಳನ್ನು ಬ್ರೆಜಿಲ್‌ ನಲ್ಲಿ ಬೊಲ್ಸೆನಾರೋ ಇತ್ತೀಚೆಗೆ ತೆಗೆದುಹಾಕಿದ್ದರು. ಬೊಲ್ಸೆನಾರೋ ಈ ನಡೆಯ ವಿರುದ್ಧ ಅಂತಾರಷ್ಟ್ರೀಯ ಸಮುದಾಯ ತೀವ್ರವಾದ ಆಕ್ಷೇಪಗಳನ್ನು ಹೊರಹಾಕಿತ್ತು. ಇದೀಗ ತಮ್ಮ ಅಧ್ಯಕ್ಷನ ನಡೆಯಿಂದ ಬೇಸತ್ತು ಬ್ರೆಜಿಲ್‌ ಜನತೆ ಬೀದಿಗಿಳಿದಿದ್ದಾರೆ.

ಈಗ ಬ್ರೆಜಿಲ್ ಜನತೆ ತಮ್ಮ ಮುಂದೆ ಇರುವುದು ಎರಡೇ ಆಯ್ಕೆ. ಒಂದು ಕೊರೋನಾ ಸೋಂಕಿನಿಂದ ಮರಣವನ್ನಪ್ಪುವುದು. ಇನ್ನೊಂದು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಅಧ್ಯಕ್ಷ ಜೈರ್‌ ಬೊಲ್ಸನಾರೋ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು. ಇದರ ಹೊರತಾಗಿ ನಮಗೆ ಬೇರೆ ದಾರಿಯಿಲ್ಲ. ಇವರೆಡರಲ್ಲಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರತಿಭಟಸದೆ ಮನೆಯಲ್ಲಿದ್ದರೂ ಸೋಂಕಿನಿಂದ ಸಾಯುತ್ತೇವೆ. ಹಾಗಾಗಿ ಬೊಲ್ಸೆನಾರೋ ವಿರುದ್ಧ ಪ್ರತಿಭಟನೆಗೆ ಇಳಿದಿದ್ದೇವೆ ಎಂದು ಪ್ರತಿಭಟನಾನಿರತರು ಕಿಡಿಕಾರಿದ್ದಾರೆ.

ಬೊಲ್ಸೆನಾರೋ ವಿರುದ್ಧ ಬ್ರೆಜಿಲ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನೇತೃತ್ವವನ್ನು ಅಲ್ಲಿನ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು , ಕಾರ್ಮಿಕ ಸಂಘಟನೆಗಳು ವಹಿಸಿಕೊಂಡಿವೆ. ಮೇ 29 ಶನಿವಾರ ಬ್ರೆಝಿಲ್‌ ರಾಜಧಾನಿ ಬ್ರೆಝೆಲಿಯಾ ಮತ್ತು ರಿಯೋ ಡಿ ಜನೈರೋ ದಲ್ಲಿ ನಡೆದ ಪ್ರತಿಭಟನೆಗಳು ಅತ್ಯಂತ ಶಾಂತವಾಗಿದ್ದವು. ಆದರೆ ದೇಶದ ಈಶಾನ್ಯ ಭಾಗದ ನಗರಗಳಾದ ರೆಸಿಫೆ ಮುಂತಾದ ಕಡೆ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿವೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಮುಂದಾಗಿರುವ ಬೊಲ್ಸೆನಾರೋ ಸರ್ಕಾರ ಪ್ರತಿಭಟನಾಕಾರರ ಮೇಲೆ ಅಶ್ರವಾಯು ಮತ್ತು ಜಲ ಫಿರಂಗಿಗಳನ್ನು ಸಿಡಿಸಿದೆ.

ಬ್ರೆಝಿಲ್‌ ನ ಅತಿದೊಡ್ಡ ನಗರ ಸಾವೋ ಪೋಲೋ ದ ಬೀದಿಗಳು ಈಗ ಸಾವಿರಾರು ಪ್ರತಿಭಟನಾಕಾರರಿಂದ ತುಂಬಿಹೋಗಿದೆ. ಸಾವಿರಾರು ಮಾಸ್ಕ್‌ ಧರಿಸಿದ ಪ್ರತಿಭಟನಾಕಾರರು ಬೊಲ್ಸೆನಾರೋ ಅವರನ್ನು ಹಾವಿನಂತೆ ಚಿತ್ರಿಸಿದ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಬೊಲ್ಸೆನಾರೋ ಅವರನ್ನು ಹಾವಿನಂತೆ ಚಿತ್ರಿಸಿದ ಬೃಹತ್‌ ಬಲೂನುಗಳನ್ನು ಪ್ರತಿಭಟನಾಕಾರರು ಆಗಸದಲ್ಲಿ ಹಾರಿ ಬಿಟ್ಟಿದ್ಧಾರೆ.

ಕೋವಿಡ್‌ ಕುರಿತಾಗಿ ಉಡಾಫೆಯ ಹೇಳಿಕೆ ನೀಡುತ್ತ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸದೆ ಲಕ್ಷಾಂತರ ಅಮೆರಿಕ್ಕನ್ನರ ಸಾವಿಗೆ ಕಾರಣರಾದ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಮೆರಿಕಾದ ಜನರು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಟ್ರಂಪ್‌ ಅವರ ಆತ್ಮೀಯ ಸ್ನೇಹಿತರೆಂದು ಹೇಳಲಾಗುವ ಬೊಲ್ಸೆನಾರೋ ವಿರುದ್ಧವೂ ಬ್ರೆಝಿಲ್‌ ನಾಗರಿಕರಲ್ಲಿ ಈಗ ಆಕ್ರೋಶ ಭುಗಿಲೆದ್ದಿದೆ. ಟ್ರಂಪ್‌ ಮತ್ತು ಬೊಲ್ಸೆನಾರೋ ಇಬ್ಬರೂ ತೋವ್ರ ಬಲಪಂಥೀಯವಾದಿ ನಾಯಕರು ಎಂಬುದು ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಚಾರ. ಇನ್ನು ಭಾರತದಲ್ಲಿಯೂ ಇದೇ ಪರಿಸ್ಥಿತಿ ಏರ್ಪಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ ಕುಸಿಯುತ್ತಾ ಸಾಗಿದೆ.


ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here