ರಫೇಲ್ ಯುದ್ಧ ವಿಮಾನ ತಯಾರಕರಾದ ಡಸಾಲ್ಟ್ ಕಂಪನಿಯು 36 ರಫೇಲ್ ವಿಮಾನಗಳನ್ನು ಭಾರತಕ್ಕೆ ಮಾರುವುದಕ್ಕಾಗಿ ಭಾರತದ ಮಧ್ಯವರ್ತಿಯೊಬ್ಬರಿಗೆ 7.5 ಮಿಲಿಯನ್ ಯೂರೋ (65 ಕೋಟಿ ರೂ) ಲಂಚ ನೀಡಿದೆ ಎಂದು ಫ್ರೆಂಚ್ ಪತ್ರಿಕೆ ‘ಮೀಡಿಯಾಪಾರ್ಟ್; ಆರೋಪಿಸಿದೆ. ಈ ಕುರಿತು ಸ್ಪಷ್ಟ ದಾಖಲೆಗಳಿದ್ದರೂ ಸಹ CBI ತನಿಖೆ ಮಾಡಲು ವಿಫಲವಾಗಿದೆ ಎಂದು ಅದು ಹೇಳಿದ ಬೆನ್ನಲ್ಲೆ ಭಾರತದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ವಾಗ್ವಾದ ಆರಂಭಗೊಂಡಿದೆ.
59,000 ಕೋಟಿ ರೂಗಳ ರಫೇಲ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮೀಡಿಯಾಪಾರ್ಟ್ 2013 ಕ್ಕೆ ಮುಂಚೆಯೇ ಕಂಪನಿಯು ಮಧ್ಯವರ್ತಿಗೆ ಹಣ ನೀಡಿದೆ ಎಂದು ಹೇಳಿದೆ. ಅಂದರೆ ಈ ಭ್ರಷ್ಟಾಚಾರವು ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನವೇ ನಡೆದಿದೆ, ಇದು ಕಾಂಗ್ರೆಸ್ ಮಾಡಿರುವುದು ಎಂದು ಬಿಜೆಪಿ ಆರೋಪಿಸಿದೆ. ಅದೇ ಸಮಯದಲ್ಲಿ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘INC (Indian National Congress) ಎಂದರೆ I need Commission (ನನಗೆ ಕಮಿಷನ್ ಬೇಕು)’ ಎಂದರ್ಥ ಎಂದು ಕಾಂಗ್ರೆಸ್ ಪಕ್ಷದ ಸಂಕ್ಷಿಪ್ತ ರೂಪದ ಕುರಿತು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ. ಯುಪಿಎ ಸರ್ಕಾರವು ಪ್ರತಿ ಒಪ್ಪಂದದೊಳಗೆ ಒಪ್ಪಂದ ಮಾಡಿಕೊಳ್ಳುತ್ತದೆ, ಹಾಗಾಗಿ ರಫೇಲ್ ಹಗರಣದಲ್ಲಿಯೂ ಲಂಚ ಪಡೆದಿರಬಹುದು ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಇಟಲಿಯಿಂದ ಉತ್ತರಿಸಲಿ. ಇಷ್ಟು ವರ್ಷ ನೀವು ಮತ್ತು ನಿಮ್ಮ ಪಕ್ಷದವರು ರಫೇಲ್ ಬಗ್ಗೆ ಸುಳ್ಳು ಪ್ರಚಾರ ಮಾಡಲು ಏಕೆ ಪ್ರಯತ್ನಿಸಿದ್ದೀರಿ? 2007 ರಿಂದ 2012 ರವರೆಗೆ ಅವರದೇ ಸರ್ಕಾರ ಅಧಿಕಾರದಲ್ಲಿದ್ದಾಗ ಕಮಿಷನ್ ಪಾವತಿಸಲಾಗಿದೆ ಎಂಬುದು ಈಗ ಬಹಿರಂಗವಾಗಿದೆ, ಇದರಲ್ಲಿ ಮಧ್ಯವರ್ತಿಯ ಹೆಸರೂ ಬಂದಿದೆ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮತ್ತು ರಫೇಲ್ ಹಗರಣವನ್ನು ಮುಚ್ಚಿಹಾಕಲು ಮೋದಿ ಸರ್ಕಾರ-ಸಿಬಿಐ-ಜಾರಿ ನಿರ್ದೇಶನಾಲಯದ ನಡುವಿನ ಸಂಶಯಾಸ್ಪದ ಸಂಬಂಧವನ್ನು ಮೀಡಿಯಾ ಪಾರ್ಟ್ ಬಹಿರಂಗಪಡಿಸಿದೆ” ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಪ್ರತಿ ಹೆಜ್ಜೆಯಲ್ಲೂ ಸತ್ಯ ನಿಮ್ಮೊಂದಿಗಿರುವಾಗ, ತಡವೇಕೆ? ನನ್ನ ಕಾಂಗ್ರೆಸ್ ಸಂಗಾತಿಗಳೆ, ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಇದೇ ರೀತಿ ಹೋರಾಟ ಮುಂದುವರಿಸಿ. ಕಾಯಬೇಡಿ, ಆಯಾಸಗೊಳ್ಳಬೇಡಿ, ಭಯಪಡಬೇಡಿ” ಎಂದು ತಿಳಿಸಿದ್ದಾರೆ.
ತಮ್ಮ ಟ್ವೀಟ್‌ನೊಂದಿಗೆ ಹಿಂದಿ ಪತ್ರಿಕೆಯ ತುಣುಕೊಂದನ್ನು ರಾಹುಲ್ ಗಾಂಧಿ ಲಗತ್ತಿಸಿದ್ದಾರೆ. “ರಫೇಲ್ ಡೀಲ್‌ನಲ್ಲಿ ನಕಲಿ ರಶೀದಿಗಳನ್ನು ಬಳಸಿ ಮಧ್ಯವರ್ತಿಗಳಿಗೆ ಕಮಿಷನ್ ನೀಡಲಾಗಿದೆ. ಈ ದಾಖಲೆಗಳಿದ್ದರೂ ಭಾರತೀಯ ತನಿಖಾ ಸಂಸ್ಥೆಗಳು ಪ್ರಕರಣವನ್ನು ಮುಂದುವರಿಸಲಿಲ್ಲ ಎಂದು ಫ್ರೆಂಚ್ ನಿಯತಕಾಲಿಕ ಆರೋಪಿಸಿದೆ” ಎಂದು ಅದರಲ್ಲಿ ಬರೆಯಲಾಗಿದೆ.
ಭಾರತದ ಸುಶೇನ್ ಗುಪ್ತಾ ಎಂಬಾತನಿಗೆ ರಹಸ್ಯವಾಗಿ ಲಂಚ ನೀಡಲಾಗಿದೆ. ಸುಳ್ಳು ರಶೀದಿಗಳನ್ನು ಸೃಷ್ಟಿಸಲಾಗಿದೆ. ಇಷ್ಟೆಲ್ಲಾ ದಾಖಲೆಗಳು 2018 ರಲ್ಲಿಯೇ ಸಿಬಿಐ ಮತ್ತು ಇಡಿಗೆ ಸಿಕ್ಕಿದ್ದರೂ ಅವರು ತನಿಖೆ ಆರಂಭಿಸಿಲ್ಲ ಎಂದು ಪತ್ರಿಕೆ ದೂರಿದೆ. ಅಗುಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್‌ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ಮೇಲೆ ಈ ಪ್ರಕರಣದಲ್ಲಿ ಏಕೆ ತನಿಖೆಯಿಲ್ಲ ಎಂದು ಅದು ಪ್ರಶ್ನಿಸಿದೆ.
ಮೀಡಿಯಾ ಪಾರ್ಟ್ ಪತ್ರಿಕೆಯೂ ರಾಫೇಲ್ ಹಗರಣದ ದಾಖಲೆಗಳ ತನಿಖೆಯ ಕುರಿತು ಸರಣಿ ಲೇಖನಗಳನ್ನು ಪ್ರಕಟಿಸಿದೆ. ಇದು ರಾಫೇಲ್ ಭ್ರಷ್ಟಾಚಾರದ ಕುರಿತು ಫ್ರಾನ್ಸ್‌ನಲ್ಲಿ ನ್ಯಾಯಾಂಗ ತನಿಖೆಗೆ ಕಾರಣವಾಗಿದೆ.
ಇದನ್ನೂ ಓದಿ: ರಫೇಲ್ ಹಗರಣ: ಸತ್ಯ ನಿಮ್ಮೊಂದಿಗೆ, ಭಯವಿಲ್ಲದೆ ಹೋರಾಡಿ – ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ


