ನ್ಯೂಯಾರ್ಕ್: ಮಹತ್ವದ ಬೆಳವಣಿಗೆಯೊಂದರಲ್ಲಿ 265 ಮಿಲಿಯನ್ ಡಾಲರ್ ಲಂಚದ ಆರೋಪದ ಮೇಲೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಮೂರು ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ನ್ಯೂಯಾರ್ಕ್ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣಗಳನ್ನು ಜಂಟಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಎಲ್ಲಾ ಪ್ರಕರಣಗಳು ಒಂದೇ ರೀತಿಯ ಆರೋಪಗಳನ್ನು ಹೊಂದಿರುವುದನ್ನು ಗಮನಿಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.
ಯುಎಸ್ ವರ್ಸಸ್ ಅದಾನಿ ಮತ್ತು ಇತರರು (ಅದಾನಿ ವಿರುದ್ಧ ಕ್ರಿಮಿನಲ್ ಪ್ರಕರಣ), ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ವರ್ಸಸ್ ಅದಾನಿ ಮತ್ತು ಇತರರು (ಅದಾನಿ ವಿರುದ್ಧ ಸಿವಿಲ್ ಪ್ರಕರಣ), ಮತ್ತು ಎಸ್ಇಸಿ ವರ್ಸಸ್ ಕ್ಯಾಬನ್ಸ್ (ಇತರ ಆರೋಪಿಗಳ ವಿರುದ್ಧ ಸಿವಿಲ್ ಪ್ರಕರಣ) ಪ್ರಕರಣಗಳನ್ನು ಜೊತೆಗೂಡಿಸಲಾಗಿದೆ.
ನ್ಯಾಯಾಂಗ ದಕ್ಷತೆಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅದಾನಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯ ಮೇಲುಸ್ತುವಾರಿ ವಹಿಸಿರುವ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಜಿ ಗರೌಫಿಸ್ ಅವರಿಗೆ ಈ ಪ್ರಕರಣಗಳ ಜಂಟಿ ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರಕರಣಗಳನ್ನು ವ್ಯವಸ್ಥಿತವಾಗಿ ನಿಯೋಜಿಸುವಂತೆ ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಲಾಗಿದೆ.
ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಅದಾನಿ ಮತ್ತು ಇತರರು 265 ಮಿಲಿಯನ್ ಡಾಲರ್ (ಸುಮಾರು 2,029 ಕೋಟಿ ರೂ.) ಲಂಚವನ್ನು ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ, ಸೌರಶಕ್ತಿ ಯೋಜನೆಗಳಿಗಾಗಿ ಅದಾನಿ ಗ್ರೂಪ್ ಸಂಗ್ರಹಿಸಿದ ನಿಧಿಯಿಂದ ಯುಎಸ್ ಬ್ಯಾಂಕ್‌ಗಳು ಮತ್ತು ಹೂಡಿಕೆದಾರರಿಗೆ ಸತ್ಯವನ್ನು ಮರೆಮಾಡಲಾಗಿತ್ತು ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು.
ಅದಾನಿ ಗ್ರೂಪ್ ತನ್ನ ಮೇಲಿನ ಆರೋಪಗಳು “ಆಧಾರರಹಿತ” ಎಂದು ತಳ್ಳಿಹಾಕಿದೆ ಮತ್ತು ನಮ್ಮದು ಕಾನೂನು ಪಾಲಿಸುವ ಸಂಸ್ಥೆಯಾಗಿದೆ. ಎಲ್ಲಾ ಕಾನೂನುಗಳನ್ನು ಸಂಪೂರ್ಣವಾಗಿ ಅನುಸರಿಸಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.


