ವಿದೇಶಿಯರೆಂದು ಶಂಕಿಸಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿರುವ ಪಶ್ಚಿಮ ಬಂಗಾಳದ ಆರು ನಿವಾಸಿಗಳನ್ನು ತಾತ್ಕಾಲಿಕ ಕ್ರಮವಾಗಿ ವಾಪಸ್ ಕರೆತರುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ನವೆಂಬರ್ 25) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಗಡಿಪಾರು ಮಾಡುವಾಗ ತುಂಬು ಗರ್ಭಿಣಿಯಾಗಿದ್ದ ಸುನಾಲಿ ಖಾತೂನ್, ಆಕೆಯ ಗಂಡ ದಾನಿಷ್ ಶೇಖ್, ಮಗ ಶಬೀರ್ (ಇವರು ಪ್ರಕರಣದ ಅರ್ಜಿದಾರ ಭೋದು ಶೇಖ್ ಎಂಬವರ ಕುಟುಂಬಸ್ಥರು) ಮತ್ತು ಸ್ವೀಟಿ ಬೀಬಿ ಎಂಬ ಮಹಿಳೆ, ಆಕೆಯ ಇಬ್ಬರು ಮಕ್ಕಳಾದ ಕುರ್ಬಾನ್ ಶೇಖ್ ಮತ್ತು ಇಮಾಮ್ ದೇವಾನ್ ಇವರನ್ನು ವಾಪಸ್ ಕರೆತರಲು ಕೋರ್ಟ್ ನಿರ್ದೇಶಿಸಿದೆ.
ಗಡಿಪಾರಾದವರು ತಾವು ಭಾರತೀಯ ನಾಗರಿಕರು ಎಂದು ಹೇಳಿಕೊಳ್ಳುತ್ತಿದ್ದು, ಹಾಗಾಗಿ ಅವರು ತಮ್ಮಲ್ಲಿರುವ ದಾಖಲೆಗಳನ್ನು ಸಲ್ಲಿಸಿ ಸಂಬಂಧಿತ ಅಧಿಕಾರಿಗಳ ಮುಂದೆ ತಮ್ಮ ವಾದ ಮಂಡಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಸರ್ಕಾರ ಮಧ್ಯಂತರ ಕ್ರಮವಾಗಿ ಅವರನ್ನು ಮರಳಿ ಕರೆತಂದು ವಿಚಾರಣೆಗೆ ಅವಕಾಶ ನೀಡಬೇಕು ಎಂದು ಹೇಳಿದೆ. ಸರ್ಕಾರಿ ಸಂಸ್ಥೆಗಳು ಗಡಿಪಾರು ಮಾಡಿದವರ ದಾಖಲೆಗಳ ನೈಜತೆಯನ್ನು ಪರಿಶೀಲಿಸಬಹುದು ಎಂದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಪ್ರಕರಣ ವಿಚಾರಣೆ ನಡೆಸಿದೆ. ಕೇಂದ್ರ ಸರ್ಕಾರದ ಪರ ಹಾಜರಿದ್ದ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಸಂಜಯ್ ಹೆಗ್ಡೆ ಹಾಜರಾಗಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್ ಹೆಗ್ಡೆ, “ಗಡಿಪಾರು ಮಾಡಿದವರನ್ನು ವಾಪಸ್ ಕರೆ ತರುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದ ಸುಮಾರು ಒಂದು ತಿಂಗಳ ನಂತರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅರ್ಜಿದಾರರು ನ್ಯಾಯಾಂಗ ನಿಂದನೆ ಆರೋಪ ಮಾಡಿದ ಬಳಿಕವಷ್ಟೇ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಈ ನಡುವೆ ಪ್ರಕರಣ ಗೊಂದಲ ಸ್ಥಿತಿಯಲ್ಲಿ ಇತ್ತು. ಅರ್ಜಿದಾರರು ಭಾರತೀಯ ನಾಗರಿಕರು, ಅವರನ್ನು ಗಡಿಯಾಚೆಗೆ ತಳ್ಳಲಾಗಿದೆ” ಎಂದು ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಕಾಂತ್ ಅವರು, ಈಗ ದಾಖಲೆಗಳಲ್ಲಿ ಬಹಳಷ್ಟು ವಿಷಯಗಳು ಬರುತ್ತಿವೆ, ಜನನ ಪ್ರಮಾಣಪತ್ರ, ಸನಿಹ ಕುಟುಂಬ ಸದಸ್ಯರ ಜಮೀನು ದಾಖಲೆಗಳು ಇವೆಲ್ಲವೂ ಸಾಕ್ಷ್ಯಗಳೇ ಆಗಿವೆ, ಸಾಧ್ಯತೆಯ ಸಾಕ್ಷ್ಯಗಳು (evidence of probability). ಇಷ್ಟು ದಾಖಲೆಗಳಿದ್ದರೂ ನಿಮಗೇನು ತಡೆಯಿದೆ? ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ್ದಾರೆ.
ಗಡಿಪಾರು ಮಾಡಲಾದ ವ್ಯಕ್ತಿಗಳ ವಾದವನ್ನೇ ಆಲಿಸಿಲ್ಲ ಎಂಬುವುದು ಆರೋಪ. ಅವರ ಅಭಿಪ್ರಾಯ ಕೇಳದೆಯೇ ನೀವು ಅವರನ್ನು ದೇಶದಿಂದ ಹೊರಹಾಕಿಬಿಟ್ಟಿದ್ದೀರಿ. ಆದ್ದರಿಂದ, ಕನಿಷ್ಠ ತಾತ್ಕಾಲಿಕ ಕ್ರಮವಾಗಿಯಾದರೂ ನೀವು ಅವರನ್ನು ಮರಳಿ ತಂದು, ಅವರಿಗೆ ಸಮರ್ಥನೆ ಸಲ್ಲಿಸಿಕೊಳ್ಳಲು ಅವಕಾಶ ಕೊಡಿ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಸಂಪೂರ್ಣವಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ನಂತರ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಗಡಿಪಾರಾದವರು ಭಾರತೀಯ ನಾಗರಿಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಅಧಿಕಾರಿಗಳ ಮುಂದೆ ತಮ್ಮ ವಾದ ಮಂಡಿಸುವ ಹಕ್ಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಒತ್ತಿ ಹೇಳಿದ್ದಾರೆ. ಗಡಿಪಾರು ಮಾಡಲ್ಪಟ್ಟವರು ಬಾಂಗ್ಲಾದೇಶದ ಅಕ್ರಮ ವಲಸಿಗರಾದರೆ ನಿಮ್ಮ ಕ್ರಮ ಶೇಕಡ 100ರಷ್ಟು ಸಮರ್ಥನೀಯ. ಅದನ್ನು ಯಾರೂ ವಿವಾದ ಮಾಡುವುದಿಲ್ಲ. ಆದರೆ, ಗಡಿಪಾರಾದವರು ನಾವು ಭಾರತೀಯ ಪ್ರಜೆಗಳು ಎಂದು ಹೇಳುತ್ತಿದ್ದಾರೆ. ನಾವು ಭಾರತಕ್ಕೆ ಸೇರಿದವರು, ಇಲ್ಲೇ ಹುಟ್ಟಿ ಬೆಳೆದವರು ಎನ್ನುತ್ತಿದ್ದಾರೆ. ಅವರು ಏನೋ ದಾಖಲೆ ತೋರಿಸುತ್ತಿರಬೇಕಾದರೆ ಅವರಿಗೆ ತಮ್ಮ ವಾದ ಮಂಡಿಸುವ ಹಕ್ಕಿದೆ ಎಂದಿದ್ದಾರೆ.
ಅಂತಿಮವಾಗಿ, ಸೋಮವಾರದವರೆಗೆ ಸೂಚನೆಗಳನ್ನು ಪಡೆಯಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿದ ನ್ಯಾಯಪೀಠ, ಕೇಂದ್ರ ಸರ್ಕಾರ ತಾತ್ಕಾಲಿಕ ಕ್ರಮವಾಗಿ ಗಡಿಪಾರು ಮಾಡಿದವರನ್ನು ಮರಳಿ ಭಾರತಕ್ಕೆ ಕರೆತರಬಹುದು ಮತ್ತು ತನಿಖಾ ಸಂಸ್ಥೆಗಳ ಮೂಲಕ ಅವರ ಸಲ್ಲಿಸಿರುವ ದಾಖಲೆಗಳು (ಜನ್ಮ ಪತ್ರ, ಜಮೀನು ದಾಖಲೆಗಳು ಇತ್ಯಾದಿ) ನಿಜವಾದವುಗಳೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು ಎಂದು ಹೇಳಿದೆ.
ಗಡಿಪಾರು ಮಾಡಿದವರನ್ನು ವಾಪಸ್ ಕರೆ ತರುವಂತೆ ಸೆಪ್ಟೆಂಬರ್‌ನಲ್ಲಿ ಕಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಅವರನ್ನು ಗಡಿಯಾಚೆಗೆ ಕಳುಹಿಸುವಾಗ ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡಿಲ್ಲ, ತಪ್ಪು ಮಾಡಿದ್ದೀರಿ ಎಂದಿತ್ತು. ಅವರು ಭಾರತೀಯರೇ ಆಗಿರಬಹುದು, ಹಾಗಾಗಿ 4 ವಾರದೊಳಗೆ ಅವರನ್ನು ಮತ್ತೆ ಭಾರತಕ್ಕೆ ಕರೆತನ್ನಿ ಎಂದು ಸೂಚಿಸಿತ್ತು. ಅವರ ನಾಗರಿಕತ್ವ ಏನು ಎಂಬುದನ್ನು ಇನ್ನಷ್ಟು ದಾಖಲೆಗಳನ್ನು ನೋಡಿ, ಸರಿಯಾಗಿ ವಿಚಾರಣೆ ಮಾಡಿ ನಿರ್ಧಾರ ಮಾಡಿ ಎಂದು ಹೇಳಿತ್ತು. ಈ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಭೋದು ಶೇಖ್ ಎಂಬುವವರು ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ನನ್ನ ಮಗಳು, ಅಳಿಯ ಮತ್ತು ಮೊಮ್ಮಗನನ್ನು ಸುಳ್ಳು ಆರೋಪದ ಮೇಲೆ ಬಂಧಿಸಿ ಗಡಿಪಾರು ಮಾಡಿದ್ದಾರೆ. ದಯಮಾಡಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಕೇಳಿಕೊಂಡಿದ್ದರು. ನಾನು ಪಶ್ಚಿಮ ಬಂಗಾಳದಲ್ಲಿ ಖಾಯಂ ನಿವಾಸಿ. ನನ್ನ ಮಗಳು, ಅಳಿಯನೂ ಭಾರತದಲ್ಲಿ ಹುಟ್ಟಿ ಬೆಳೆದ ಭಾರತೀಯ ನಾಗರಿಕರು. ನಮ್ಮ ಕುಟುಂಬ ತಲೆತಲಾಂತರದಿಂದ ಪಶ್ಚಿಮ ಬಂಗಾಳದಲ್ಲೇ ಇದೆ. ಕೆಲಸಕ್ಕಾಗಿ ಮಾತ್ರ ಮಗಳು, ಅಳಿಯ ದೆಹಲಿಗೆ ಹೋಗಿದ್ದರು ಎಂದು ಭೋದು ಶೇಖ್ ಹೇಳಿದ್ದರು.
‘ಗುರುತು ಪರಿಶೀಲನೆ ಅಭಿಯಾನ’ ಎಂಬ ಹೆಸರಿನಲ್ಲಿ ಪೊಲೀಸರು ಬಂದು ನನ್ನ ಮಗಳು, ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದರು. ನಂತರ ಅವರನ್ನು ಕಸ್ಟಡಿಯಲ್ಲಿಟ್ಟು, ಸರಿಯಾದ ವಿಚಾರಣೆ ನಡೆಸದೆ 2025ರ ಜೂನ್ 26ರಂದು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದಾರೆ. ಗಡಿಪಾರು ಮಾಡುವ ವೇಳೆ ನನ್ನ ಮಗಳು ತುಂಬು ಗರ್ಭಿಣಿಯಾಗಿದ್ದಳು. ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಆಕೆಯನ್ನು ಗಡಿಯಾಚೆಗೆ ತಳ್ಳಲಾಗಿದೆ ಎಂದು ಭೋದು ಶೇಖ್ ಅಳಲು ತೋಡಿಕೊಂಡಿದ್ದರು.
ದೆಹಲಿಯಲ್ಲಿರುವ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು, ಗೃಹ ಇಲಾಖೆಯಿಂದ ಬಂದ 2025ರ ಮೇ 2ರಂದು ನೀಡಿದ ಆದೇಶದ ಪ್ರಕಾರ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಆದರೆ, ಆ ಆದೇಶದಲ್ಲೇ ಹೇಳಿರುವಂತೆ ಯಾವುದೇ ರೀತಿಯ ತನಿಖೆ-ವಿಚಾರಣೆ ಮಾಡುತ್ತಿಲ್ಲ. ನನ್ನ ಮಗಳು, ಅಳಿಯನನ್ನು ಬಂಧಿಸಿದ ಕೇವಲ 2 ದಿನಗಳಲ್ಲೇ ಗಡಿಯಾಚೆಗೆ ತಳ್ಳಿದ್ದಾರೆ ಎಂದು ವಿವರಿಸಿದ್ದರು.
ಬಂಧಿತರು ತಾವು ಬಾಂಗ್ಲಾದೇಶದ ನಿವಾಸಿಗಳು ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ತಮ್ಮ ಆಧಾರ್ ಕಾರ್ಡ್‌ಗಳು, ಪಡಿತರ ಚೀಟಿಗಳು, ಮತದಾರರ ಗುರುತಿನ ಚೀಟಿಗಳು ಅಥವಾ ತಾವು ಭಾರತದ ನಾಗರಿಕರು ಎಂದು ಸಾಬೀತುಪಡಿಸುವ ಯಾವುದೇ ಇತರ ದಾಖಲೆಗಳನ್ನು ತೋರಿಸಲು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳು ಹೈಕೋರ್ಟ್‌ನಲ್ಲಿ ವಾದಿಸಿದ್ದರು.
ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಬಂಧಿತರು ದೆಹಲಿ ಪೊಲೀಸರ ಮುಂದೆ ಬಾಂಗ್ಲಾದೇಶದ ನಾಗರಿಕರು ಎಂದು ಒಪ್ಪಿಕೊಂಡರೂ ಕೂಡ, ಪೊಲೀಸರು ಒತ್ತಡ ಹಾಕಿ, ಬೆದರಿಸಿ ಆ ಹೇಳಿಕೆಯನ್ನು ಪಡೆದಿರಬಹುದು ಎಂದಿತ್ತು. ಅದು ಸ್ವಯಂಪ್ರೇರಿತ ಹೇಳಿಕೆ ಆಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ನಾಲ್ಕು ವಾರಗಳಲ್ಲಿ ಗಡಿಪಾರು ಮಾಡಿದವರನ್ನು ವಾಪಸ್ ಕರೆತರಲು ಆದೇಶಿಸಿತ್ತು.


