ಪ್ರೀತಿಸಿದ ಯುವಕನೊಂದಿಗೆ ತೆರಳಿದ 16 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ ಕೊಂದು, ಮೃತದೇಹವನ್ನು ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯ ಕುಟುಂಬಸ್ಥರು ಪ್ರಸ್ತುತ ಪರಾರಿಯಾಗಿದ್ದಾರೆ. ಅವರ ಮನೆಗೆ ಬೀಗ ಹಾಕಲಾಗಿದ್ದು, ಪರಿಶೀಲನೆಗಾಗಿ ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಬಿಟ್ಟು ತೆರಳಿದ್ದ ಹುಡುಗ-ಹುಡುಗಿಯನ್ನು ಹುಡುಗಿಯ ಮನೆಯವರು ಹುಡುಕಿ ಶನಿವಾರ ಸಂಜೆ ಕರೆ ತಂದಿದ್ದಾರೆ ಎಂದು ಭಾನುವಾರ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹುಡುಗ-ಹುಡುಗಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಜನವರಿ 11ರಂದು ಅವರನ್ನು ಆಗ್ರಾದಲ್ಲಿ ಪತ್ತೆ ಹಚ್ಚಿದ ಹುಡುಗಿಯ ಕುಟುಂಬಸ್ಥರು ವಾಪಸ್ ಗ್ರಾಮಕ್ಕೆ ಕರೆ ತಂದಿದ್ದಾರೆ. ನಂತರ ಹುಡುಗಿಯನ್ನು ಪ್ರತ್ಯೇಕವಾಗಿಟ್ಟು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ ಎಂದು ವರದಿ ಹೇಳಿದೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡಲು ಸ್ಥಳೀಯ ಸ್ಮಶಾನದಲ್ಲಿ ಮೃತದೇಹಕ್ಕೆ ಬೆಂಕಿ ಹಚ್ಚಿ, ರಾತ್ರೋರಾತ್ರಿ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬೆಂಕಿ ನಂದಿಸಿ, ಮೃತದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಸ್ತುತ ಹುಡುಗ ಪೊಲೀಸರ ವಶದಲ್ಲಿದ್ದಾನೆ. ಘಟನೆ ಸಂಬಂಧ ವಿಚಾರಣೆಗಾಗಿ ಗ್ರಾಮದ ಮುಖ್ಯಸ್ಥ ಸೇರಿದಂತೆ ಇಬ್ಬರನ್ನು ಠಾಣೆಗೆ ಕರೆಸಲಾಗಿದೆ. ಪರಾರಿಯಾಗಿರುವ ಹುಡುಗಿಯ ಕುಟುಂಬಸ್ಥರ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ ಎಂದು ವರದಿ ತಿಳಿಸಿದೆ.


