ಕರ್ನಾಟಕದ ಕೊಳ್ಳೆಗಾಲದ ಬಿ.ಎಸ್.ಪಿ ಶಾಸಕ ಎನ್ ಮಹೇಶ್ ರವರನ್ನು ಮೈತ್ರಿ ಪರ ಮತ ಹಾಕುವಂತೆ ಪಕ್ಷ ನೀಡಿದ ವಿಪ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಉಚ್ಚಾಟನೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕಿ ಮಾಯವತಿಯವರು ಟ್ವೀಟ್ ಮಾಡಿದ್ದಾರೆ.
कर्नाटक में कुमारस्वामी सरकार के समर्थन में वोट देने के पार्टी हाईकमान के निर्देश का उल्लंघन करके बीएसपी विधायक एन महेश आज विश्वास मत में अनुपस्थित रहे जो अनुशासनहीनता है जिसे पार्टी ने अति गंभीरता से लिया है और इसलिए श्री महेश को तत्काल प्रभाव से पार्टी से निष्कासित कर दिया गया।
— Mayawati (@Mayawati) July 23, 2019
ಅಷ್ಟೂ ದಿನ ಸದನದಲ್ಲಿ ಭಾಗವಹಿಸದೇ ಗೈರು ಹಾಜರಾಗಿದ್ದ ಅವರು ಪಕ್ಷದ ಸೂಚನೆಯನ್ನು ಮೀರಿದ್ದಾರೆ. ಹಾಗಾಗಿ ಕೂಡಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇನ್ನು ಈ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರರು ಎನ್.ಮಹೇಶ್ ರವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಎನ್ ಮಹೇಶ್ ಅವರು ವಿಶ್ವಾಸ ಮತ ಯಾಚಿಸುವ ಅಧಿವೇಶನಕ್ಕೆ ಗೈರು ಉಳಿದರೇಕೆ? ಈ ಸರಕಾರವನ್ನು ಅವರು ರಕ್ಷಿಸಬೇಕಿರಲಿಲ್ಲ.. ಬಾಬಾ ಸಾಹೇಬರ ಸಂವಿಧಾನದ ಮೂಲಕ ಮೂರ್ತ ರೂಪ ಪಡೆದ ಪ್ರಜಾಪ್ರಭುತ್ವವನ್ನೇ ಪಕ್ಷಾಂತರದ ಮೂಲಕ ನಾಶ ಮಾಡುವ
ವ್ಯವಸ್ಥಿತ ಪ್ರಯತ್ನಗಳು ನಡೆದ ಈ ಸಂದರ್ಭದಲ್ಲಿ ಬಾಬಾ ಸಾಹೇಬರ ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಯಪಡಿಸುವ ಮಾತುಗಳನ್ನು ಆಡಲು ಈ ಅಧಿವೇಶನವನ್ನು ಬಳಿಸಿಕೊಳ್ಳಬಹುದಿತ್ತು. ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಬಹುದಿತ್ತು. ಪ್ರಜಾಪ್ರಭುತ್ವವನ್ನೇ ಅಪೋಷನ್ ಮಾಡುತ್ತಿರುವ ಬಿಜೆಪಿಯ ಹುನ್ನಾರಗಳನ್ನು ಬಯಲು ಮಾಡಬಹುದಿತ್ತು. ಅಸೆಂಬ್ಲಿಯಲ್ಲಿ ಅಷ್ಟೆಲ್ಲ ಚರ್ಚೆ ನಡೆಯುತ್ತಿರುವಾಗ ಯಾವ ಮಹಾನ್ ಸಾಧನೆಗಾಗಿ ಇವರು ಗೈರಾದರೋ? ಗೈರಾಗುವ ಮೂಲಕ ಬಿಜೆಪಿಯನ್ನು ಇವರು ಈ ಪರಿ ಬೆಂಬಲಿಸಬಾರದಿತ್ತು. ಪರ್ಯಾಯ ನಾಯಕರಾಗಿ ಬೆಳೆಯಬಲ್ಲರೆಂಬ ನನ್ನ ಆಶಯಗಳಿಗೆ ಎಳ್ಳು ನೀರು ಬಿಟ್ಟು ಅವರ ಬಗೆಗಿನ ನನ್ನ ಕನಸುಗಳು ಕಮರಿವೆ. ಎಂದು ಬಸವರಾಜ ಸೂಳಿಬಾವಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಎನ್. ಮಹೇಶ್ ಬಂದು ಮೂರೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು, ಕಡೆಯವರೆಗೂ ಕಾದೆ.. ಕಡೆಗೂ ಅವರು ಗೈರು ಆದದ್ದು ಏಕೆಂದು ತಿಳಿಯಲೇಯಿಲ್ಲ..!? ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಮತ್ತು ಬಿ.ಎಸ್.ಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿ.ಎಸ್ ದ್ವಾರಕನಾಥ್ ರವರು ಬರೆದಿದ್ದಾರೆ.
ಬಿ.ಜೆ.ಪಿ. ಹಾಗೆ, ಕಾಂಗ್ರಸ್ ಹೀಗೆ, ಸರಿ. ಬಿ.ಎಸ್.ಪಿ.ಯಾಕೆ ಹೀಗೆ? ಶಾಸಕ ಮಹೇಶ್ ಅವರ ಗೈರು ಹಾಜರಿ ಸಂಸದೀಯ ಬೇಜವಾಬ್ದಾರಿ ಅಲ್ಲವೇ? ನಿರ್ಣಾಯಕ ಸಂದರ್ಭದಲ್ಲಿ ಇವರು ಸದನಕ್ಕೆ ಹೋಗುವುದಿಲ್ಲ ಎಂದರೇನರ್ಥ? ಏನೇ ಅಭಿಪ್ರಾಯವಿದ್ದರೂ ಸದನಕ್ಕೆ ಹಾಜರಾಗಿ ತಮ್ಮ ವಿಚಾರವನ್ನು ಸದನದ ಮೂಲಕ ಜನರೆದುರು ಮಂಡಿಸಬೇಕಿತ್ತು. ಜನರೂ ಇವರಿಗೆ ಬೇಡವಾದರೆ? ಹಾಗಾದರೆ ಇವರು ಜನರಿಗೇಕೇ ಬೇಕು? ಸದನ ಬೇಡವಾದರೆ ಶಾಸಕತ್ವ ಏಕೆ ಬೇಕು? ಅವರೇ ನಿರ್ಧರಿಸಲಿ. ಇಬ್ಬಂದಿತನ ಖಂಡಿತ ಗೌರವಾರ್ಹವಲ್ಲ.
ಎನ್.ಮಹೇಶ್ ರಂತಹ ಹಿರಿಯರು ಪಕ್ಷದಿಂದ ಅಮಾನತ್ತಾಗುವುದು ನಿಜಕ್ಕೂ ದುಃಖಕರ. ಆದರೆ ಅವರ ತಪ್ಪು ನಡೆಯೇ ಇದಕ್ಕೆ ಕಾರಣವಾಯ್ತು. ಈ ಹಿನ್ನೆಲೆಯಲ್ಲಿ ಮಾಯಾವತಿಯವರ ತಕ್ಷಣದ ಕ್ರಮ ಸ್ವಾಗತಾರ್ಹ ಎಂದು ಬಿ ಪೀರ್ ಭಾಷಾರವರು ಪ್ರತಿಕ್ರಿಯಿಸಿದ್ದಾರೆ.


