2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸೇರಿದಂತೆ ದೇಶಾದ್ಯಂತ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಗುರುವಾರ ಹೇಳಿದ್ದಾರೆ.
ತಮ್ಮ 70 ನೇ ಹುಟ್ಟುಹಬ್ಬದಂದು ಲಕ್ನೋದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಯಾವತಿ, ಎಲ್ಲಾ ಸಣ್ಣ ಮತ್ತು ದೊಡ್ಡ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸುವುದು ಹೆಚ್ಚು ಸೂಕ್ತ. ಯಾವುದೇ ಪಕ್ಷದೊಂದಿಗೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು.
“ಈ ಬಗ್ಗೆ ಯಾವುದೇ ಗೊಂದಲ ಇರಬಾರದು. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಉತ್ತರ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಅವರು ಹೇಳಿದರು.
ಆದರೆ, ಭವಿಷ್ಯದಲ್ಲಿ, ಮೈತ್ರಿಕೂಟದ ಪಾಲುದಾರ ತನ್ನ ಮತಗಳನ್ನು; ವಿಶೇಷವಾಗಿ ಮೇಲ್ಜಾತಿಗಳ ಮತಗಳನ್ನು ಬಿಎಸ್‌ಪಿಗೆ ಪರಿಣಾಮಕಾರಿಯಾಗಿ ವರ್ಗಾಯಿಸಬಹುದು ಎಂದು ಪಕ್ಷಕ್ಕೆ ಸಂಪೂರ್ಣವಾಗಿ ಮನವರಿಕೆಯಾದರೆ, ಮೈತ್ರಿಕೂಟದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಬಹುದು. ಆದರೂ ಅಂತಹ ಪರಿಸ್ಥಿತಿ ಕಾರ್ಯರೂಪಕ್ಕೆ ಬರಲು ವರ್ಷಗಳು ಬೇಕಾಗುತ್ತದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಜನರು 2027 ರಲ್ಲಿ ಬಿಎಸ್‌ಪಿಯನ್ನು ಮತ್ತೆ ಅಧಿಕಾರಕ್ಕೆ ತರುವತ್ತ ಒಲವು ತೋರಿದ್ದಾರೆ. ಎಂದು ಮಾಯಾವತಿ ಹೇಳಿದ್ದಾರೆ. ಪಕ್ಷದ ಹಿಂದಿನ ನಾಲ್ಕು ಅವಧಿಗಳನ್ನು ನೆನಪಿಸಿಕೊಂಡ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಎಸ್‌ಪಿ ಸರ್ಕಾರ ರಚನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷದ ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಜಾತಿ ಆಧಾರಿತ ಪಕ್ಷಗಳ ಮೇಲೆ ವಾಗ್ದಾಳಿ ಮಾಡಿದ ಅವರು, ಬಿಎಸ್‌ಪಿ ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತದೆ, ಉತ್ತರ ಪ್ರದೇಶದಲ್ಲಿ ಪಕ್ಷದ ಐದನೇ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ (ಇವಿಎಂ) ಬಗ್ಗೆಯೂ ಬಿಎಸ್‌ಪಿ ಮುಖ್ಯಸ್ಥೆ ಕಳವಳ ವ್ಯಕ್ತಪಡಿಸಿದರು. ಹಿಂದಿನ ಚುನಾವಣೆಗಳಲ್ಲಿ ಮೋಸ ಮತ್ತು ಅಪ್ರಾಮಾಣಿಕತೆ ಸಂಭವಿಸಿದೆ ಎಂದು ಆರೋಪಿಸಿದರು. ಆದರೆ ತಮ್ಮ ಪಕ್ಷವು ದೇಶಾದ್ಯಂತ ಚುನಾವಣೆಗಳಲ್ಲಿ ಪೂರ್ಣ ಬಲದಿಂದ ಸ್ಪರ್ಧಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದರು. ಇವಿಎಂಗಳಿಗೆ ದೇಶಾದ್ಯಂತ ವಿರೋಧ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಬಿಎಸ್‌ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಮಾಯಾವತಿ ಆರೋಪಿಸಿದರು. ಅವರ ಮರಣದ ನಂತರ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿಲ್ಲ ಎಂದು ಆರೋಪಿಸಿದರು.
ಬಿಎಸ್‌ಪಿ ಆಳ್ವಿಕೆಯಲ್ಲಿ ಯಾವುದೇ ಕೋಮು ಗಲಭೆಗಳು ಸಂಭವಿಸಿಲ್ಲ. ಯಾದವರು ಸೇರಿದಂತೆ ಎಲ್ಲಾ ವರ್ಗಗಳನ್ನು ನೋಡಿಕೊಳ್ಳಲಾಗಿದೆ ಎಂದು ಪ್ರತಿಪಾದಿಸುತ್ತಾ ಅವರು, ಮುಸ್ಲಿಮರು ಮತ್ತು ಇತರ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮಾಯಾವತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಆದಿತ್ಯನಾಥ್, ಮಾಯಾವತಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದರು. ಅಖಿಲೇಶ್ ಯಾದವ್ ಅವರು, ದಮನಿತರು ಮತ್ತು ಅಂಚಿನಲ್ಲಿರುವವರ ಹಕ್ಕುಗಳು ಮತ್ತು ಘನತೆಗಾಗಿ ಮಾಯಾವತಿ ಅವರ ಜೀವಮಾನದ ಹೋರಾಟವನ್ನು ಶ್ಲಾಘಿಸಿದರು.
ಮಾಯಾವತಿ ಗುರುವಾರ 70 ನೇ ವರ್ಷಕ್ಕೆ ಕಾಲಿಟ್ಟರು, ಬಿಎಸ್‌ಪಿ ಉತ್ತರ ಪ್ರದೇಶದಾದ್ಯಂತ ‘ಜನ ಕಲ್ಯಾಣಕಾರಿ ದಿವಸ್’ ಎಂದು ಆಚರಿಸಿತು.


