ಪಂಜಾಬ್‌ನ ಫಿರೋಜ್‌ಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಸುರೀಂದರ್ ಕಾಂಬೋಜ್ ಮತ ಚಲಾಯಿಸುವಾಗ ವೀಡಿಯೊ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್‌ನ ಫಿರೋಜ್‌ಪುರ ಲೋಕಸಭಾ ಕ್ಷೇತ್ರದ ಗುರುಹರ್ಸಹೈನ ಜೀವಾ ರಾಯ್ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಫಿರೋಜ್‌ಪುರ ಡೆಪ್ಯುಟಿ ಕಮಿಷನರ್ ರಾಜೇಶ್ ಧಿಮಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುರೀಂದರ್ ಕಾಂಬೋಜ್ ಮತದಾನದ ವೀಡಿಯೊವನ್ನು ವೈರಲ್ ಮಾಡಿದ್ದಾರೆ. ಈ ಕುರಿತು ಸುರೀಂದರ್ ಕಾಂಬೋಜ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಕಾಂಬೋಜ್ ಜಲಾಲಾಬಾದ್‌ನ ಎಎಪಿ ಶಾಸಕ ಜಗದೀಪ್ ಸಿಂಗ್ ಗೋಲ್ಡಿ ಕಾಂಬೋಜ್ ಅವರ ತಂದೆಯಾಗಿದ್ದಾರೆ. ಲೋಕಸಭೆ ಚುನಾವಣೆಯ ಕೊನೆಯ ಮತ್ತು 7ನೇ ಹಂತದ ಮತದಾನ ಇಂದು ಏಳು ರಾಜ್ಯಗಳು ಮತ್ತು ಒಂದು ಕೇಂದ್ರಡಾಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ನಡೆಯುತ್ತಿದೆ. ಉತ್ತರಪ್ರದೇಶ ಮತ್ತು ಪಂಜಾಬ್‌ನ 13 ಸ್ಥಾನಗಳು, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಢದ ಏಕೈಕ ಲೋಕಸಭಾ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ 904 ಮಂದಿ ಕಣದಲ್ಲಿದ್ದಾರೆ. ವಾರಣಾಸಿಯಿಂದ ಪ್ರಧಾನಿ ಮೋದಿ, ಹಿಮಾಚಲ ಪ್ರದೇಶದ ಹಮೀರ್‌ಪುರದಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಹಾರದ ಪಾಟ್ನಾ ಸಾಹಿಬ್‌ನಿಂದ ರವಿಶಂಕರ್ ಪ್ರಸಾದ್ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ನಟಿ ಕಂಗನಾ ರನೌತ್ ಸೇರಿದಂತೆ ಇತರ ಪ್ರಮುಖ ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕಾಂಗ್ರೆಸ್‌ನ ಮನೀಶ್ ತಿವಾರಿ ಚಂಡೀಗಢದಿಂದ ಸ್ಪರ್ಧಿಸಿದ್ದರೆ, ವಿಕ್ರಮಾದಿತ್ಯ ಸಿಂಗ್ ಹಿಮಾಚಲ ಪ್ರದೇಶದ ಮಂಡಿಯಿಂದ ಮತ್ತು ಅಜಯ್ ರಾಯ್ ವಾರಣಾಸಿಯಿಂದ ಕಣದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಕೊಲ್ಕತ್ತಾದ ಡೈಮಂಡ್ ಹಾರ್ಬರ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಇದನ್ನು ಓದಿ: ದಲಿತ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಥಳಿತ: ಬಿಜೆಪಿ ಶಾಸಕಿಯ ಪುತ್ರನ ವಿರುದ್ಧ ಎಫ್‌ಐಆರ್


