2023-24ರ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಒದಗಿಸಿರುವ ಹಣ ಶಿಕ್ಷಣ ಹಕ್ಕು ಕಾಯಿದೆಯ ಆಶಯಗಳನ್ನು ಸಾಕಾರಗೊಳಿಸಲು ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಪೂರಕವಾಗಿದೆ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರವರು ಅಭಿಪ್ರಾಯಪಟ್ಟಿದ್ದಾರೆ.
ಹಣಕಾಸು ಜವಾಬ್ದಾರಿ ಹೊತ್ತಿರುವ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಮಂಡಿಸಿದ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಒದಗಿಸಿರುವ ಹೊಸ ಕಾರ್ಯಕ್ರಮ, ಯೋಜನಾ ಅನುದಾನಗಳು ಹಾಗು ಆಯವ್ಯಯದಲ್ಲಿ ಮೀಸಲಿಟ್ಟಿರುವ ಒಟ್ಟು ಹಣ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಹಾಯಕಾರಿಯಾಗದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಶಿಕ್ಷಣ ಹಕ್ಕು ಕಾಯಿದೆಯ ಆಶಯಗಳನ್ನು ಸಾಕಾರಗೊಳಿಸಲು ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸರ್ಕಾರವು ಬದ್ಧವಾಗಿದೆ ಎಂಬ ಭರವಷೆಯನ್ನು ಆಯವ್ಯಯ ನೀಡಿದೆ. ಈ ಕಾರಣಕ್ಕಾಗಿ ನಾನು ಮಾನ್ಯ ಮುಖ್ಯ ಮಂತ್ರಿಗಳನ್ನು ಸರ್ಕಾರಿ ಶಾಲೆಗಳ ಸಮಸ್ತ ಮೂಲ ವಾರಸುದಾರರ ಪರವಾಗಿ ಅದರಲ್ಲೂ ವಿಶೇಷವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.
ಆಯವ್ಯಯದಲ್ಲಿ, ಹೊಸ ತರಗತಿ ಕೋಣೆಗಳ ನಿರ್ಮಾಣಕ್ಕೆ 540 ಕೋಟಿ; ಶೌಚಾಲಯಗಳನ್ನು ನಿರ್ಮಿಸಲು 200 ಕೋಟಿ; ಅತ್ಯಂತ ಶಿಥಿಲವಾದ ಹಾಗು ದುರಸ್ಥಿಗೆ ಬಂದಿರುವ ಕಟ್ಟಡಗಳ ದುರಸ್ತಿಗೆ 1೦೦ ಕೋಟಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ನಿರ್ವಹಣೆ ಮತ್ತು ಸುಸ್ಥಿತಿ ಕಾಪಾಡಲು ಈಗಿನ ಅನುದಾನವನ್ನು 20000 ನ್ನು 45000 ಕ್ಕೆ ಏರಿಸಲು 153 ಕೋಟಿ ; ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುವ ಮೂಲಕ ಮಕ್ಕಳ ಪೌಷ್ಠಿಕತೆಯನ್ನು ಸುಧಾರಿಸಲು 280 ಕೋಟಿ ;ಕಲಿಕಾ ನ್ಯೂನತೆಯನ್ನು ಸರಿಪಡಿಸಿ ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸಲು 80 ಕೋಟಿ; ಮಕ್ಕಳ ಸೃಜನಾತ್ಮಕ ಚಿಂತನೆ ಹಾಗು ಚಟುವಟಿಕೆಗಳ ಅನ್ವೇಷಣೆಗೆ 2 ಕೋಟಿ; ಸಾಟ್ಸ್ (Students Achievement Tracking System) ನ್ನು 2.0 ಗೆ ಮೇಲ್ದರ್ಜೆಗೇರಿಸಲು ಕ್ರಮ ; ಪರಿಸರ ರಕ್ಷಣೆಗೆ ಶಾಲೆಗಳ ಸುತ್ತಮುತ್ತ ಸುಮಾರು 50 ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಗು ಸಾರ್ವಜನಿಕ ಗ್ರಂಥಾಲಯಗಳಿಗೆ ಸದಭಿರುಚಿಯ ಪುಸ್ತಕಗಳನ್ನು ಒದಗಿಸಲು 10 ಕೋಟಿ ಹಣವನ್ನು ಒದಗಿಸಿರುವುದು ಮುಖ್ಯ ಮಂತ್ರಿಗಳಿಗೆ ಹಾಗು ಸರ್ಕಾರಕ್ಕೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಇರುವ ಸದಾಶಯವನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, 2023-24 ನೇ ಸಾಲಿಗೆ ಆಯವ್ಯಯದಲ್ಲಿ ಶಿಕ್ಷಣಕ್ಕೆ 37587 ಕೋಟಿಯನ್ನು (ಒಟ್ಟು ಆಯವ್ಯಯದಲ್ಲಿ ಶೇಕಡ.11) ಮೀಸಲಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಶಿಕ್ಷಣ ಇಲಾಖೆಗೆ , ಉಳಿದೆಲ್ಲ ಇಲಾಖೆಗಳಿಗಿಂತ ಅತಿ ಹೆಚ್ಚು ಹಣವನ್ನು ಒದಗಿಸಿರುವುದು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಸತತವಾಗಿ ನಾಲ್ಕು ದಶಕಗಳಿಂದ ಹೋರಾಡುತ್ತಿರುವ ನನ್ನಂಥವರಿಗೆ ಒಂದು ಹೊಸ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ.
ಇದನ್ನೂ ಓದಿ; ಸಿದ್ದರಾಮಯ್ಯನವರು ಮಂಡಿಸುತ್ತಿರುವ ಬಜೆಟ್‌ನ ಮುಖ್ಯಾಂಶಗಳು


