Homeಮುಖಪುಟಈಗ ಗಾಂಧಿ ಪರಂಪರೆಯ ಕೊಲೆ

ಈಗ ಗಾಂಧಿ ಪರಂಪರೆಯ ಕೊಲೆ

- Advertisement -
- Advertisement -

ಗಾಂಧಿ ಬಿಜೆಪಿಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೂಳೆಯಾಗಿದ್ದಾರೆಂದರೆ ಗಾಂಧಿಯವರಲ್ಲಿ ಏನೋ ವಿಶೇಷವಾದದ್ದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ದೇಶದ ಒಳಗೆ ಬಿಜೆಪಿ ನಾಯಕರು ರಾಷ್ಟ್ರಪಿತನ ಕೊಲೆಗಾರನ ಹೊಗಳುವ ಕೆಲಸ ಮಾಡುತ್ತಿರಬಹುದು, ಆದರೆ ವಿದೇಶಕ್ಕೆ ಹೋಗಿ ನಾನು ಗೋಡ್ಸೆಯ ದೇಶದಿಂದ ಬಂದಿದ್ದೇನೆ ಎಂದು ಮೋದಿಯವರಿಗೆ ಎಂದೂ ಹೇಳಲಾಗುವುದಿಲ್ಲ. ನಾನು ಬುದ್ಧ ಮತ್ತು ಗಾಂಧಿಯ ದೇಶದಿಂದ ಬಂದಿದ್ದೇನೆ ಎಂತಲೇ ಪ್ರಧಾನಮಂತ್ರಿಯವರು ಹೇಳಬೇಕಾಗುತ್ತದೆ. ಜವಾಹರಲಾಲ್ ನೆಹರು ಅವರ ಮೇಲೆ ಹಿಂದೂ ವಿರೋಧಿ ಆಗಿದ್ದ ಸುಳ್ಳು ಆರೋಪ ಹಾಕಬಹುದು, ಆದರೆ ಈ ಸನಾತನಿ ಹಿಂದೂ ಮಹಾತ್ಮನನ್ನು ಬೈಯುವುದು ಹೇಗೆ?

ಸಂಘಪರಿವಾರದ ಈ ಸಂಕಷ್ಟ ಬಹಳ ಹಿಂದಿನದ್ದು. ಗಾಂಧಿ ಅವರಿಗೆ ಬಿಸಿ ತುಪ್ಪ, ನುಂಗಲೂ ಆಗುವುದಿಲ್ಲ, ಉಗಳಲೂ ಆಗುವುದಿಲ್ಲ. ಗಾಂಧೀಜಿ ಜೀವಂತವಾಗಿದ್ದಾಗ ಸಂಘದ ವೈಚಾರಿಕ ಗುರು ಗೋಲವಾಲ್ಕರ್ ಮತ್ತು ಸಾವರ್ಕರ್‌ಗಳು ಮಹಾತ್ಮನ ವಿರುದ್ಧ ವಿಷ ಉಗುಳುತ್ತಿದ್ದರು. ಆದರೆ ಮಹಾತ್ಮ ಹುತಾತ್ಮನಾದ ನಂತರ ಹಾಗೂ ವಿಶೇಷವಾಗಿ ಮರಣದ ತರುವಾಯ ಸರದಾರ್ ಪಟೇಲರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಿದ ನಂತರ ಸಂಘಪರಿವಾರವು ಗಾಂಧೀಜಿಯ ಬಗ್ಗೆ ತಮ್ಮ ರಣನೀತಿಯನ್ನು ಬದಲಿಸಿತು. ಈಗ ಸಂಘ ಪರಿವಾರವು ಹೊರಗಿನಿಂದ ಗಾಂಧೀಜಿಯ ಪೂಜೆ ಅರ್ಚನೆ ಮಾಡುತ್ತ, ಒಳಗಿನಿಂದ ಅವರ ವಿರುದ್ಧ ವದಂತಿಗಳನ್ನು ತೇಲಿಬಿಡುವ ರಣನೀತಿಯನ್ನು ತನ್ನದಾಗಿಸಿದೆ. ನೇರವಾಗಿ ನಾಥೂರಾಂ ಗೋಡ್ಸೆಯ ಹೆಸರು ತೆಗೆದುಕೊಳ್ಳಲಂತೂ ಧೈರ್ಯವಿರುವುದಿಲ್ಲ ಆದರೆ ಪಿಸುಮಾತುಗಳ ಮೂಲಕ ಆ ವಿಚಾರಗಳನ್ನು ಪ್ರಸಾರ ಮಾಡುವ ಕೆಲಸ ಜಾರಿಯಲ್ಲಿಟ್ಟುಕೊಂಡಿತು. ಗಾಂಧೀಜಿಯ ಅಹಿಂಸೆಯನ್ನು ಹೇಡಿತನ ಎಂದು ಕರೆಯುವುದು, ಸರ್ವಧರ್ಮಸಿದ್ಧಾಂತವನ್ನು ಹಿಂದೂವಿರೋಧಿ ಎಂದು ಬಿಂಬಿಸುವುದು, ಭಗತ್ ಸಿಂಗ್‌ರನ್ನು ನೇಣಿಗೇರಿಸಲು ಗಾಂಧೀಜಿ ಕಾರಣ ಎಂದು ಹೇಳುವುದು ಹಾಗೂ ದೇಶದ ವಿಭಜನೆಗೆ ಗಾಂಧೀಜಿಯನ್ನು ಹೊಣೆಯಾಗಿಸುವಂತಹ ಸುಳ್ಳುಗಳ ದುಷ್ಟ ಪ್ರಚಾರ ಅವರ ಅಭಿಯಾನದ ಭಾಗವಾಗಿದ್ದವು. ಆ ದಿನಗಳಲ್ಲಿ ಸಂಘಪರಿವಾರವು ತಮ್ಮ ಜನರನ್ನು ಗಾಂಧೀವಾದಿ ಸಂಸ್ಥೆಗಳಲ್ಲಿ ನುಸುಳಿಸುವ ವಿಫಲ ಪ್ರಯತ್ನವನ್ನೂ ಮಾಡಿತ್ತು. ಗಾಂಧೀಜಿಯ ಹತ್ಯೆಯ ನಂತರ ಅವರ ವಿಚಾರಗಳ ಹತ್ಯೆಯ ಕುತ್ಸಿತ ಅಭಿಯಾನ ನಿರಂತರವಾಗಿ ಜಾರಿಯಲ್ಲಿತ್ತು.

ಸಾವರ್ಕರ್‌

2014ರಲ್ಲಿ ಬಿಜೆಪಿ ಮುಖಾಂತರ ರಾಜಕೀಯ ಪ್ರಭುತ್ವ ಸ್ಥಾಪಿಸಿದ ನಂತರ, ಸಂಘ ಪರಿವಾರ ಈ ಅಭಿಯಾನಕ್ಕೆ ಒಂದು ಹೊಸ ಗುರಿ ಅಳವಡಿಸಿಕೊಂಡಿದೆ. ಈಗ ಬಿಜೆಪಿಯ ನಾಯಕರು ನಿರ್ಲಜ್ಜೆಯಿಂದ ಗೋಡ್ಸೆಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ಸಂಘ ಪರಿವಾರದ ಕಾರ್ಯಕರ್ತರು ಬಹಿರಂಗವಾಗಿ ರಾಷ್ಟ್ರಪಿತನ ಕೊಲೆಗಾರನನ್ನು ವೈಭವೀಕರಿಸುತ್ತಾರೆ. ಬಿಜೆಪಿಯ ನೇತೃತ್ವವು ಅದರ ಮೇಲೆ ತೇಪೆ ಹಾಕಿ ಮುಂದಕ್ಕೆ ಹೋಗುತ್ತದೆ. 2019ರಲ್ಲಿ ಸ್ವಘೋಷಿತ ಸಾಧ್ವಿ ಪ್ರಜ್ಞಾ ಸಿಂಗ್ ಲೋಕಸಭೆಯಲ್ಲಿ ಗೋಡ್ಸೆಯನ್ನು ಪ್ರಶಂಸಿಸಿದ್ದರು. ಆಗ ಪ್ರಜ್ಞಾ ಠಾಕೂರ್‌ಅನ್ನು ಮನದಿಂದ ಕ್ಷಮಿಸಲು ಆಗುವುದಿಲ್ಲ ಎಂದು ಮೋದಿಯವರಿಗೆ ಹೇಳಬೇಕಾಯಿತು; ಆದರೆ ಈ ಮಾತು ಅವರ ಮನದಲ್ಲಿಯೇ ಉಳಿಯಿತು. ಇತ್ತೀಚಿಗೆ ಬಿಜೆಪಿಯ ನಾಯಕ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ರು ಗೋಡ್ಸೆಯನ್ನು ದೇಶಭಕ್ತ ಎಂದು ವರ್ಣಿಸಿದಾಗ ಪ್ರಧಾನಮಂತ್ರಿಗೆ ಒಂದು ಖಂಡನೆ ಮಾಡುವ ಅಗತ್ಯವೂ ಕಾಣಿಸಲಿಲ್ಲ.

ಈ ಹೊಸ ಯುಗದಲ್ಲಿ ಗಾಂಧಿವಾದದ ಕೊಲೆಗೆ ಬೇಕಾದ ಮುಖ್ಯ ಅಸ್ತ್ರ, ಗಾಂಧೀಜಿಯ ಸ್ಮೃತಿಯನ್ನು ಅಳಿಸಿಹಾಕುವುದು ಹಾಗೂ ಗಾಂಧೀವಾದ ಪರಂಪರೆಯ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು. ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ 1,200 ಕೋಟಿ ರೂಪಾಯಿ ವ್ಯಯಿಸಿ ಒಂದು ಪ್ರವಾಸಿ ಸ್ಥಳ ಮಾಡುವ ಯೋಜನೆಯನ್ನು ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ ಮತ್ತು ಎಲ್ಲಾ ಗಾಂಧೀವಾದಿಗಳು ಹಾಗೂ ಗಾಂಧಿವಾದಿ ಸಂಘಟನೆಗಳ ವಿರೋಧದ ನಡುವೆಯೂ ಜಾರಿಗೊಳಿಸಲಾಗುತ್ತಿದೆ. ಇದೇ ರೀತಿಯಲ್ಲಿ ವಾರ್ಧಾದ ಸೇವಾಗ್ರಾಮದ ’ಆಧುನೀಕರಣ’ ಮಾಡಲಾಗುತ್ತಿದೆ. ಗಾಂಧಿ ವಿದ್ಯಾಪೀಠದೊಂದಿಗೆ ಗಾಂಧಿವಾದಿ ಸಂಸ್ಥೆಗಳನ್ನು ಸಾಮ ದಾಮ ದಂಡ ಬಳಸಿ ಸ್ವಾಧೀನಗೊಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ: ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

ಈ ನಿಟ್ಟಿನಲ್ಲಿ ಇತ್ತೀಚಿನ ಎರಡು ಘಟನೆಗಳು ಬಹಳ ಮಹತ್ವಪೂರ್ಣವಾಗಿವೆ. ಬನಾರಸ್‌ನಲ್ಲಿ ಸರ್ವ್ ಸೇವಾ ಸಂಘದ ಪ್ರಧಾನ ಕಚೇರಿಯಿದೆ; ಅದು ದೇಶದ ಗಾಂಧಿವಾದ ಸಂಸ್ಥೆಗಳು ಹಾಗೂ ಚಟುವಟಿಕೆಗಳ ಕೇಂದ್ರವಾಗಿದೆ. ಸರ್ವ್ ಸೇವಾ ಸಂಘದ ಇದೇ ಆವರಣದಲ್ಲಿ ಜಯಪ್ರಕಾಶ ನಾರಾಯಣ ಅವರು ವಿದ್ಯಾ ಸಂಸ್ಥಾನದ ಸ್ಥಾಪನೆ ಮಾಡಿದ್ದರು. ಸುಮಾರು 30 ವರ್ಷಗಳ ಹಿಂದೆ ಸಂಘ ಪರಿವಾರದ ನುಸುಳುಕೋರರು ಗಾಂಧಿವಾದಿಗಳಲ್ಲಿ ಭ್ರಮೆ ಹುಟ್ಟಿಸಿ ಈ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸ ಶುರುಮಾಡಿದ್ದರು. ಈ ಪ್ರಯತ್ನ ಸಫಲವಾಗಲಿಲ್ಲ, ಆದರೆ ಕಾನೂನು ವಿವಾದದಲ್ಲಿ ಸಿಕ್ಕಿಹಾಕಿಕೊಂಡು ಈ ಸಂಸ್ಥೆ ಮುಚ್ಚಿಹೋಯಿತು ಹಾಗೂ ಅದನ್ನು ಸರಕಾರಿ ರಕ್ಷಣೆಯಲ್ಲಿ ಬೀಗ ಜಡಿಯಲಾಯಿತು.

ಈ ವರ್ಷದ ಜೂನ್ ತಿಂಗಳಲ್ಲಿ ಹಠಾತ್ತಾಗಿ ವಾರಣಾಸಿಯ ಕಮಿಷನರ್ ಪೊಲೀಸ್ ಪಡೆ ಕಳುಹಿಸಿದರು ಹಾಗೂ ಸರ್ವ್ ಸೇವಾ ಸಂಘದ ಅವರಣದಲ್ಲಿದ್ದ ಗಾಂಧಿ ವಿದ್ಯಾ ಸಂಸ್ಥಾನವನ್ನು ವಶಪಡಿಸಿಕೊಂಡು ಅದನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ ಒಪ್ಪಿಸಲಾಯಿತು; ಅದರ ಅಧ್ಯಕ್ಷ ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿದ ರಾಮ್ ಬಹಾದ್ದೂರ್ ರಾಯ್ ಆಗಿದ್ದಾರೆ. ಸರ್ವ್ ಸೇವಾ ಸಂಘವು ಅಲಹಾಬಾದ್ ಹೈಕೋರ್ಟಿನ ಮೆಟ್ಟಿಲು ಏರಿತು ಆದರೆ ಕೋರ್ಟಿನ ಆದೇಶದ ಹೊರತಾಗಿಯೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ತನ್ನ ಸ್ವಾಧೀನವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ಗಾಂಧಿವಾದಿಗಳ ಪ್ರತಿರೋಧದಿಂದ ಕಂಗೆಟ್ಟಿರುವ ಸರಕಾರವು ಈಗ ಸರ್ವ್ ಸೇವಾ ಸಂಘದ ಇಡೀ ಸಂಕೀರ್ಣವನ್ನೆ ವಶಪಡಿಸಿಕೊಳ್ಳುವ ಪ್ಲಾನ್ ಮಾಡಿದೆ. ಬುಲ್‌ಡೋಜರ್‌ನ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತ 30 ಜೂನ್‌ರಂದು ಸರ್ವ್ ಸೇವಾ ಸಂಘದ ಕಟ್ಟಡವನ್ನು ಕೆಡುವುವ ನೋಟಿಸ್‌ನ್ನು ಅಂಟಿಸಲಾಗಿದೆ. ಗಮನಿಸಬೇಕಾದ ಅಂಶವೇನೆಂದರೆ ಸರ್ವ್ ಸೇವಾ ಸಂಘದ ಸ್ಥಾಪನೆಯು ಡಾ. ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರು, ಆಚಾರ್ಯ ವಿನೋಬಾ ಭಾವೆ, ಜೆಬಿ ಕೃಪಲಾನಿ, ಮೌಲಾನಾ ಆಜಾದ್ ಹಾಗೂ ಜಯಪ್ರಕಾಶ ನಾರಾಯಣ ಅವರ ಪ್ರಯತ್ನಗಳಿಂದ ಆಗಿತ್ತು. ಹಾಗೂ ರೈಲ್ವೆ ಇಲಾಖೆಯು ಅದಕ್ಕೆ ಜಮೀನು ನೀಡಿತ್ತು. ಆದರೆ ಇಂದು ಸರಕಾರವು ಅದಕ್ಕೆ ವೈತಿಕರಿಕ್ತವಾಗಿ ಈ ಜಮೀನನ್ನು ವಂಚನೆಯಿಂದ ಕಬಳಿಸಲಾಗಿದೆ ಎಂದು ಸರ್ವ್ ಸೇವಾ ಸಂಘದ ಮೇಲೆ ಆರೋಪ ಮಾಡುತ್ತಿದೆ. ಸದ್ಯಕ್ಕೆ ಈ ಕಾರ್ಯಾಚರಣೆಯ ವಿರುದ್ಧ ಅಲಹಾಬಾದ್ ಹೈಕೋರ್ಟ್ ಸ್ಟೇ ನೀಡಿರುವುದರಿಂದ ಅದು ನಿಂತಿದೆ; ಆದರೆ ಈ ಪರಿಸ್ಥಿತಿ ಎಷ್ಟು ದಿನ ಇರುವುದೋ ಗೊತ್ತಿಲ್ಲ. ವಿಷಯ ಕೇವಲ ಭವನ ಮತ್ತು ಜಮೀನು ಕಬಳಿಸುವ ವಿಷಯವಾಗಿಲ್ಲ, ಇದು ಗಾಂಧೀಜಿಯ ಪರಂಪರೆ ನೆನಪಿನ ಕುರುಹುಗಳನ್ನು ಅಳಿಸುವ ಪ್ರಯತ್ನದ್ದಾಗಿದೆ.

ನಾಥೂರಾಂ ಗೋಡ್ಸೆ

ಗೋರಖಪುರದ ಗೀತಾ ಪ್ರೆಸ್‌ಗೆ ಈ ವರ್ಷದ ಗಾಂಧಿ ಶಾಂತಿ ಪುರಸ್ಕಾರ ನೀಡುವ ಹಿಂದೆಯೂ ಇದೇ ರೀತಿಯ ಹೊಲಸು ಪ್ರಯತ್ನ ಕಂಡುಬರುತ್ತಿದೆ. ಹಿಂದೂ ಗ್ರಂಥಗಳ ಪ್ರಚಾರ, ಪ್ರಸಾರಕ್ಕಾಗಿ ಗೀತಾ ಪ್ರೆಸ್, ಗೋರಖಪುರವು ಬಹಳಷ್ಟು ಕೆಲಸ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ವಾಸ್ತವವೇನೆಂದರೆ, ಗಾಂಧೀಜಿಗೆ ಮತ್ತು ಗೀತಾ ಪ್ರೆಸ್‌ನ ಸಂಸ್ಥಾಪಕ ಸಂಪಾದಕ ಹನುಮಾನ ಪ್ರಸಾದ ಪೋದ್ದಾರ್ ನಡುವೆ ಆಳವಾದ ವೈಚಾರಿಕ ಮತಭೇದವಿತ್ತು. ಗಾಂಧೀಜಿಯ ’ಅಸ್ಪೃಶ್ಯರಿಗೆ’ ಮಂದಿರ ಪ್ರವೇಶ ಮತ್ತು ಸಹಭೋಜನದಂತಹ ಅಭಿಯಾನಗಳ ಕಟ್ಟರ್ ವಿರೋಧಿಗಳಾಗಿದ್ದರು ಈ ಪೋದ್ದಾರ್. ಅಷ್ಟೇ ಅಲ್ಲ, ಗೀತಾ ಪ್ರೆಸ್‌ನ ಸಂಪಾದಕ ಮತ್ತು ಪ್ರಕಾಶಕರನ್ನು ಗಾಂಧೀಜಿಯ ಕೊಲೆಯ ಆರೋಪದಲ್ಲಿ ಬಂಧಿಸಲಾಗಿತ್ತು ಕೂಡ. ಹಾಗಾಗಿ ಈ ಸಂಸ್ಥೆಗೆ ಗಾಂಧಿ ಶಾಂತಿ ಪುರಸ್ಕಾರ ನೀಡುವುದು ಕೇವಲ ಒಂದು ಪ್ರಶ್ನಾರ್ಹ ಹಿನ್ನೆಲೆಯ ಮೇಲೆ ಪರದೆ ಹಾಕುವುದಷ್ಟೇ ಅಲ್ಲದೇ, ಗಾಂಧೀಜಿಯ ನೆನಪನ್ನು ಕಸಿದುಕೊಳ್ಳುವ ಅಬ್ಬರದ ಪ್ರಯತ್ನವಾಗಿದೆ.

ಆದರೆ, ಈ ಎಲ್ಲಾ ಬಹುತೇಕ ದುಃಖಕರ ಘಟನೆಗಳೊಂದಿಗೆ ಒಂದು ಸಂತಸದ ಪಕ್ಷವೂ ಇರುತ್ತದೆ. ಗಾಂಧಿವಾದ ಪರಂಪರೆಯ ಮೇಲೆ ಆದ ಈ ದಾಳಿಯ ಒಂದು ಒಳ್ಳೆಯ ಪರಿಣಾಮವೇನೆಂದರೆ, ದೇಶದ ಎಲ್ಲ ನಿಜವಾದ ಗಾಂಧಿವಾದಿಗಳೇ ಈಗ ಈ ಪರಂಪರೆಯನ್ನು ಸ್ವಾಧೀನಪಡಿಸಿಕೊಳ್ಳುವ ಅಭಿಯಾನದ ವಿರುದ್ಧ ಒಗ್ಗಟ್ಟಾಗಿದ್ದಾರೆ. 17ನೆಯ ಜೂನ್‌ರಂದು ದೇಶದ 70 ಸಂಘಟನೆಗಳು ಸೇರಿ ರಾಷ್ಟ್ರಪತಿಗೆ ಒಂದು ಪತ್ರ ಬರೆದವು ಹಾಗೂ ಈ ಎಲ್ಲ ಸಂಘಟನೆಗಳು ಸೇರಿ ದೆಹಲಿಯ ದೀನ್‌ದಯಾಳ್ ಮಾರ್ಗದಲ್ಲಿರುವ ರಾಜೇಂದ್ರ ಭವನದಲ್ಲಿ ಪ್ರತಿರೋಧ ಸಮ್ಮೇಳನ ಮಾಡಿದವು. ಈ ಪ್ರತಿರೋಧವನ್ನು 150ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಸಮರ್ಥನೆ ನೀಡಿದರು. ಸರ್ವ್ ಸೇವಾ ಸಂಘದ ಕಟ್ಟಡವನ್ನು ಕೆಡವುವ ಬೆದರಿಕೆಯ ವಿರುದ್ಧ ಪ್ರತಿರೋಧವಾಗಿ ಎಲ್ಲ ಗಾಂಧಿವಾದಿಗಳು ಆವರಣದಲ್ಲಿ ಸಾಲಾಗಿ ಎದ್ದುನಿಂತರು. ಮಹಾತ್ಮ ಗಾಂಧಿ ಈ ಸದರಿ ಪ್ರತಿರೋಧಕ್ಕೆ ಮಾತ್ರ ಅನಿವಾರ್ಯವಾಗದೆ, ಎಲ್ಲ ಅನ್ಯಾಯಗಳ ವಿರುದ್ಧದ ಸಂಘರ್ಷದ ಪ್ರತೀಕವಾಗಲು ಗಟ್ಟಿತನದ ಹೆಸರಾಗಬೇಕು; ಇದು ಗಾಂಧೀಜಿಯ ಪರಂಪರೆಗೆ ಒಂದು ಒಳ್ಳೆಯ ಸುದ್ದಿಯಾಗಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

 

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...