Homeಕರ್ನಾಟಕಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

ಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ

- Advertisement -
- Advertisement -

ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕತ್ತುಹಿಸುಕಿ ಕೊಂದ ಹೃದಯಹೀನ ತಂದೆ, ಸುದ್ದಿ ತಿಳಿದು ರೈಲು ಹಳಿಗೆ ತಲೆಕೊಟ್ಟ ಪ್ರಿಯಕರ.

ಕೋಲಾರ ದಲಿತ ಮತ್ತು ಅಹಿಂದ ಚಳವಳಿಗಳ ನೆಲೆ. ದಲಿತ ಸಂಘರ್ಷ ಸಮಿತಿ ಹಲವು ವರ್ಷಗಳ ಕಾಲ ಸಕ್ರಿಯವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಪ್ರದೇಶವಿದು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಶೋಷಕರ ಜಾತಿ ಅಹಂಕಾರ ಕೊನೆಯಾಗಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ, ತನ್ನ ಮಗಳು ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನುಷ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ ರೈಲಿನ ಹಳಿಗೆ ತಲೆ ಕೊಟ್ಟು ಆತನೂ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆಗೆ ಕೋಲಾರ ಸಾಕ್ಷಿಯಾಗಿದೆ.

ಬೋಡಗುರ್ಕಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವಕ ಗಂಗಾಧರ (23) ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಸಮುದಾಯದ ಹುಡುಗನನ್ನು ಮಗಳು ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ಕುಪಿತಗೊಂಡ ಹೀನ ಜಾತಿವಾದಿ ಮನಸ್ಥಿತಿಯ ತಂದೆ ಕೃಷ್ಣಮೂರ್ತಿ ಜೂನ್ 26ರಂದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಯುವಕ ಜೂನ್ 27ರಂದು ಬಂಗಾರಪೇಟೆ ಬಳಿಯ ಪುರ ಎಂಬಲ್ಲಿ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಯಾದ ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ, ತಮಟೆ ಬಾರಿಸುವ ಕಲಾವಿದನಾಗಿದ್ದು ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ. ಅವರಿಬ್ಬರ ಮನೆಗಳು ಒಂದೇ ಬೀದಿಯಲ್ಲಿವೆ. ಬಾಳಿ ಬದುಕಬೇಕಾದ ಎರಡು ಅಮೂಲ್ಯ ಜೀವಗಳು ಕ್ರೂರ ಜಾತಿವ್ಯವಸ್ಥೆಗೆ ಬಲಿಯಾಗಿವೆ. ಎರಡು ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಹುಡುಗಿಯ ಮನೆಯಲ್ಲಿ ಕೊಲೆಗೆ ಸಮರ್ಥನೆಗಳನ್ನು ಹುಡುಕುತ್ತ ಮನಸ್ಸುಗಳು ಗಲಿಬಿಲಿಗೊಂಡಿವೆ. ತಮ್ಮದಲ್ಲದ ತಪ್ಪಿಗೆ ಮನೆಮಗನನ್ನು ಕಳೆದುಕೊಂಡ ಗಂಗಾಧರನ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಜಾತಿಪ್ರತಿಷ್ಠೆಯ ಹೀನ ಘಟನೆಯ ವಿವರ ಹೀಗಿದೆ..

ದಲಿತ ಸಮುದಾಯಕ್ಕೆ ಸೇರಿದ ಗಂಗಾಧರನ ಕುಟುಂಬದವರು ಸ್ಥಿತಿವಂತರೇನಲ್ಲ; ಎಲ್ಲರೂ ಕೂಲಿಕೆಲಸ ಮಾಡುವವರಾಗಿದ್ದಾರೆ. ಆದರೆ ಯುವತಿ ಕೀರ್ತಿ ಗೊಲ್ಲ ಸಮುದಾಯಕ್ಕೆ ಸೇರಿದ್ದು ಸ್ವಲ್ಪ ಮಟ್ಟಿಗೆ ಸ್ಥಿತಿವಂತರಾಗಿದ್ದಾರೆ. ಇಬ್ಬರೂ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮನೆಯಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಘಟನೆ ನಡೆಯುವ ಎರಡು ದಿನಗಳ ಮುನ್ನ, ಯುವತಿಯ ಮನೆಯಲ್ಲಿ ಆಕೆಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಮೂರ್ತಿ ತನ್ನ ತಂಗಿಯ ಮಗನಿಗೆ ಕೀರ್ತಿಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದಾನೆ. ಆಗ ಕೀರ್ತಿ ತಾನು ಗಂಗಾಧರನನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದಾಳೆ. ಆಗ ಮನೆಯವರು ವಿರೋಧ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಆತ ಜಾತಿಯಿಂದ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ, ಹಾಗೇ ಅವರು ಸ್ಥಿತಿವಂತರೂ ಅಲ್ಲ. ನಿನ್ನನ್ನು ಹೇಗೆ ಸಾಕುತ್ತಾನೆ ಎಂದು ಮಗಳ ಮೇಲೆ ತಂದೆ ಕೃಷ್ಣಮೂರ್ತಿ ಗದರಿದ್ದಾನೆ.

ಜೂನ್ 26ರ ಸೋಮವಾರ ಬೆಳಿಗ್ಗೆ ಕೀರ್ತಿ ತನ್ನ ಪ್ರಿಯಕರ ಗಂಗಾಧರನ ಮನೆ ಬಳಿ ಹೋಗಿ ನಾವಿಬ್ಬರು ಮದುವೆ ಆಗೋಣ, ಮನೆ ಬಿಟ್ಟು ಹೋಗೋಣ ಎಂದು ಕಣ್ಣೀರು ಹಾಕಿದ್ದಾಳೆ. ಇಬ್ಬರ ಮನೆಗಳು ಹತ್ತಿರದಲ್ಲೇ ಇರುವುದರಿಂದ, ತಮ್ಮ ಮಗಳು ಆ ಯುವಕನನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವುದನ್ನು ಕಂಡ ಕೀರ್ತಿ ಮನೆಯವರು ಕೋಪಗೊಂಡು ಆಕೆಗೆ ಹೊಡೆದುಬಡಿದು ಮನೆಗೆ ಎಳೆದು ತಂದಿದ್ದಾರೆ. ಆಗಲೇ ಈ ಪ್ರೀತಿಯ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿದೆ. ಆದರೆ ಯುವಕನ ಮನೆಯವರು ಈ ಬಗ್ಗೆ ಏನೂ ಮಾತನಾಡದೇ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ

ಕೀರ್ತಿ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಗಂಗಾಧರನನ್ನು ಮರೆತುಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ ಆಕೆ ಗಂಗಾಧರನಿಂದ ದೂರವಾಗಲು ಒಪ್ಪಿರಲಿಲ್ಲ. ಸೋಮವಾರ ಸಂಜೆ ಕೀರ್ತಿ ಹಾಗೂ ಗಂಗಾಧರ ಮನೆ ಬಿಟ್ಟು ಓಡಿಹೋಗುವ ಯೋಜನೆ ಮಾಡಿದ್ದರು ಎನ್ನಲಾಗಿದೆ. ’ನಾಳೆ ನಾವಿಬ್ಬರೂ ಮನೆ ಬಿಟ್ಟು ಓಡಿಹೋಗೋಣ ನಮ್ಮನ್ನು ಒಂದಾಗಲು ಇವರು ಬಿಡುವುದಿಲ್ಲ’ ಎಂದು ಕೀರ್ತಿ ಹೇಳಿದ್ದಾಳೆ. ಈ ಬಗ್ಗೆ ತಿಳಿದ ಆಕೆಯ ತಂದೆ-ತಾಯಿ ಆಕೆಯನ್ನು ತಡೆಯಲೇಬೇಕು ಎಂದು ಹಠಕ್ಕೆ ಬಿದ್ದಿದ್ದರು.

ಸಂಜೆ ಕೀರ್ತಿಯ ತಾಯಿ ಹಸುವಿನ ಹಾಲು ಕರೆಯಲೆಂದು ಹೊರಗಡೆ ಹೋದ ಸಂದರ್ಭದಲ್ಲಿ ಕೀರ್ತಿ ಮನೆ ಬಿಟ್ಟು ಹೋಗಲು ತಯಾರಿ ನಡೆಸಿದ್ದಳು. ಇದನ್ನು ಕಂಡ ತಂದೆ ಕೃಷ್ಣಮೂರ್ತಿ ಮನೆ ಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸಿದ್ದಾನೆ; ಆದರೆ ಕೀರ್ತಿ ಮಾತ್ರ ಗಂಗಾಧರನ ಜೊತೆಗೆ ಹೋಗುವುದಾಗಿ ಹಟ ಹಿಡಿದಿದ್ದಾಳೆ. ಆಗ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆ ಬಳಿಕ ಕೃಷ್ಣಮೂರ್ತಿ ತನ್ನ ಅಕ್ಕನ ಗಂಡನಿಗೆ ಕರೆ ಮಾಡಿ, ಮಗಳು ಮೂರು ದಿನದಿಂದ ಊಟ ಮಾಡಿರಲಿಲ್ಲ, ಸುಸ್ತಾಗಿ ಮಲಗಿದ್ದಾಳೆ, ಎದ್ದೇಳುತ್ತಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಮನೆಗೆ ಬಾ ಎಂದು ಹೇಳಿದ್ದಾನೆ. ಊರಿನ ಯಾರಿಂದಲೋ ಮಾಹಿತಿ ಪಡೆದ ಪೊಲೀಸರು ಅಷ್ಟರಲ್ಲಾಗಲೇ ಅಲ್ಲಿಗೆ ಬಂದಿದ್ದಾರೆ. ಕೀರ್ತಿ ಸಾವಿಗೀಡಾಗಿರುವುದನ್ನು ತಿಳಿದು, ಮೃತದೇಹವನ್ನು ಪರೀಕ್ಷೆಗೆ ಕಳುಹಿಸಿ, ಕೃಷ್ಣಮೂತಿಯನ್ನು ಬಂಧಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಗಾಧರನಿಗೆ ತನ್ನ ಪ್ರೇಯಸಿಯ ಕೊಲೆಯಾಗಿರುವ ವಿಚಾರ ತಿಳಿಯುತ್ತದೆ. ಅದೇ ದಿನ ಸಮೀಪದ ಊರಲ್ಲಿದ್ದ ಆತನ ದೊಡ್ಡಮ್ಮನ ಸಾವಾಗಿರುತ್ತದೆ. ಮನೆಯವರೆಲ್ಲ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದರು. ಗಂಗಾಧರನ ತಂದೆ ತಾಯಿ ಅತ್ತಿಗೆ ಎಲ್ಲರೂ ಅಟೋದಲ್ಲಿ ಹೋಗುತ್ತಿದ್ದರು. ಗಂಗಾಧರ ಹಾಗೂ ಆತನ ಸಹೋದರ ಶ್ರೀನಿವಾಸ ಇಬ್ಬರು ಬೈಕ್ ಮೇಲೆ ಹೋಗಿದ್ದಾರೆ. ದಾರಿ ಮಧ್ಯೆ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಬೈಕ್‌ನಿಂದ ಇಳಿದ ಗಂಗಾಧರನು ಅಪ್ಪ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ಆಗ ಶ್ರೀನಿವಾಸನು ಮನೆಯವರನ್ನು ಕರೆದುಕೊಂಡು ಬರುವಷ್ಟರಲ್ಲಿ, ಪಕ್ಕದಲ್ಲಿನ ಕಾಡಿನೊಳಗೆ ಗಂಗಾಧರ ಕಾಣೆಯಾಗಿದ್ದಾನೆ. ಶ್ರೀನಿವಾಸ ಹಾಗೂ ಅವರ ತಂದೆ ಗಂಗಾಧರನಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಕಾಣಿಸಿಲ್ಲ.

ಆನಂತರ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಬರುವ ಸಂದರ್ಭಕ್ಕೆ ಗಂಗಾಧರ ಕಾಡಿನಿಂದ ಹೊರಬಂದಿದ್ದಾನೆ. ಆಗ ಗಂಗಾಧರನನ್ನು ನೋಡಿದ ಶ್ರೀನಿವಾಸ ಮತ್ತು ಅವರ ತಂದೆ ಗಂಗಾಧರನನ್ನು ಕೂಗಿ ಕರೆದಿದ್ದಾರೆ. ಆದರೆ ಗಂಗಾಧರ ಓಡಿಹೋಗಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾಧರನ ಸಾವನ್ನು ಕಣ್ಣಮುಂದೆಯೇ ನೋಡಿದ ಮನೆಯವರು ಆಘಾತಕೊರಳಗಾಗಿದ್ದಾರೆ.

ಈ ಬಗ್ಗೆ ಇತ್ತಿಚೆಗೆ ಕೋಲಾರದಿಂದ ವರ್ಗಾವಣೆಗೊಂಡ ಎಸ್‌ಪಿ ಧರಣಿದೇವಿ ಮಾಲಗತ್ತಿ ಮಾಹಿತಿ ನೀಡಿದ್ದು, “ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಠ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.

ಜಾತಿ, ಅಂತಸ್ತು, ಪ್ರತಿಷ್ಠೆ, ಅಹಂಕಾರ ಮುಂತಾದ ಮನೋವಿಕಾರಗಳಿಂದ ಬಂಧಿಯಾಗಿರುವ ಜನರಿಗೆ ಈ ರಕ್ತ ಸಂಬಂಧ, ಒಡಹುಟ್ಟಿದವರು, ಕರುಳಕುಡಿಗಳು ಎಂಬ ಭಾವನಾತ್ಮಕ ಸಂಬಂಧಗಳು ಕೂಡ ಮರೆಗೆ ಸರಿಯುವುದು ಜಾತಿ ವ್ಯವಸ್ಥಯೆ ಕ್ರೂರ ವಾಸ್ತವ. ಇಂತಹ ಮರ್ಯಾದೆಗೇಡು ಪ್ರಕರಣಗಳಿಗೆ ಕೊನೆಯೇ ಇಲ್ಲವೆಂಬಂತೆ ಹೆಚ್ಚಾಗುತ್ತಿವೆ.

ಭಾರತದಂತಹ ಜಾತಿ ಸಮಾಜದಲ್ಲಿ ನೆಲೆಯೂರಿರುವ ಮರ್ಯಾದಾಹೀನ ಹತ್ಯೆಗಳ ಜಾಢ್ಯದಿಂದ ಹೊರಬರದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಅರಿವು-ಜಾಗೃತಿಯ ಜೊತೆಜೊತೆಗೆ ಕಾಯ್ದೆ ಕಾನೂನುಗಳನ್ನು ಬಲಗೊಳಿಸಬೇಕಿದೆ. ಈಗಾಗಲೇ ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಮರ್ಯಾದೆ ಹತ್ಯೆ, ಗುಂಪು ಹಲ್ಲೆ-ಕೊಲೆಗಳನ್ನು ತಡೆಯುವ ಉದ್ದೇಶದಿಂದ ಹೊಸ ಕಾನೂನನ್ನು ರೂಪಿಸಲಾಗಿದೆ. ಮರ್ಯಾದೆ ಹೆಸರಿನಲ್ಲಿ ನಡೆಯುವ ಘಟನೆಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡ ವಿಧಿಸುವ ಜೊತೆಗೆ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮರ್ಯಾದೆ ಹೆಸರಿನ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಇದರ ಉದ್ದೇಶ ಎಂದು ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದೇ ರೀತಿಯ ಕಾನೂನುಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸುವ ತುರ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ. ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ...