ರಾಜ್ಯದ ನಿರ್ಜೀವ ಕೆರೆಗಳ ಜಾಗದಲ್ಲಿ 52,000 ಮನೆಗಳನ್ನು ನಿರ್ಮಿಸುವುದಾಗಿ ವಸತಿ ಸಚಿವ ವಿ ಸೋಮಣ್ಣ ಹೇಳಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಪರಿಸರವಾದಿ ಲಿಯೋ ಸಲ್ಡಾನಾ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಅವರು, ”ಕೆರೆ ನಿರ್ಮಾಣದ ಕಲ್ಪನೆಯೇ ಸಚಿವರಿಗೆ ತಿಳಿದಂತಿಲ್ಲ. ಕೆರೆಗಳು ಬೇಸಿಗೆಯಲ್ಲಿ ಬತ್ತಿಹೋಗುತ್ತವೆ. ಎಷ್ಟೋ ವರ್ಷಗಳ ಕಾಲ ಸರಿಯಾದ ಮಳೆಯಾಗದೆ ಕೆರೆಗಳಲ್ಲಿ ನೀರು ಇರುವುದಿಲ್ಲ. ಹಾಗಂತ ಅವುಗಳನ್ನು ಮುಚ್ಚುವುದಲ್ಲ. ಮಳೆಯ ನೀರು ಶೇಖರಿಸಲು ಈ ಕೆರೆ ನಿರ್ಮಾಣ ಪದ್ದತಿಯನ್ನು ಸಾವಿರಾರು ವರ್ಷಗಳ ಹಿಂದೆ ಜಾರಿಗೆ ತರಲಾಗಿದೆ. ಕೆರೆಯಲ್ಲಿ ನೀರು ಬತ್ತಿದೆ ಎಂದು ಹೇಳಿ ಅವುಗಳನ್ನು ಮುಚ್ಚಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳುವುದು ಸಚಿವರ ಅಜ್ಞಾನತನ ತೋರಿಸುತ್ತದೆ” ಎಂದರು.
ವಸತಿ ಸಚಿವ ವಿ. ಸೋಮಣ್ಣ ಅವರು ವಿಧಾನಸಭಾ ಅಧಿವೇಶನದಲ್ಲಿ ಬುಧವಾರ (ಫೆ.22)ದಂದು ಮಾತನಾಡುತ್ತಾ, “ರಾಜ್ಯಾದ್ಯಂತ 493 ನಿರ್ಜೀವ ಕೆರೆಗಳನ್ನು ವಶಕ್ಕೆ ಪಡೆದು 52 ಸಾವಿರ ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.
ಬಡಜನರಿಗೆ ಮನೆ ನಿರ್ಮಾಣ ಮಾಡಿಕೊಡುವ ವಿಚಾರವಾಗಿ ಕಾಂಗ್ರೆಸ್‌ನ ಕೆ. ಅಬ್ದುಲ್ ಜಬ್ಬಾರ್, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಸೋಮಣ್ಣ, ”ಸರ್ಕಾರದಿಂದ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಸ್ಥಳೀಯವಾಗಿ ಲಭ್ಯವಿರುವ ಹಾಗೂ ವಸತಿ ಯೋಗ್ಯವಾಗಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ಮನೆ ನಿರ್ಮಾಣ ಯೋಜನೆಗೆ ಮಂಜೂರು ಮಾಡಲಾಗುವುದು. ರಾಜ್ಯಾದ್ಯಂತ 493 ನಿರ್ಜೀವ ಕೆರೆಗಳನ್ನು ವಶಕ್ಕೆ ಪಡೆದುಕೊಂಡು ಮನೆ ನಿರ್ಮಾಣ ಮಾಡುತ್ತೇವೆ” ಎಂದಿದ್ದರು.
ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಸಾವಿರಾರು ಕೆರೆಗಳನ್ನು ಮುಚ್ಚಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಈ ಕೆರೆಗಳ ಒತ್ತುವರಿಯಿಂದ ಇನ್ನು ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲಾರದೆ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಈ ಬಗ್ಗೆ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಕೆರೆ ಕಾಲುವೆಗಳನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಹೇಳಿದೆ. ಇಂತಹ ಸಂದರ್ಭದಲ್ಲಿ ಸೋಮಣ್ಣನವರು ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಕೆರೆ ಪ್ರದೇಶದಲ್ಲಿ ನಿರ್ಮಾಣ ನ್ಯಾಯಾಂಗ ನಿಂದನೆಯಾಗಿದೆ – ಲಿಯೋ ಸಾಲ್ಡಾನ
ಕೆರೆಗಳು ಅಂದರೆ 12 ತಿಂಗಳು ನೀರು ಇರಬೇಕಂತ ಏನಿಲ್ಲ ಎಂದು ಹೈಕೋರ್ಟ್ ಹೇಳುತ್ತದೆ. ಕಳೆದ ವರ್ಷ ನಾವು ಪಾವಗಡಕ್ಕೆ ಹೋದಾಗ ಅಲ್ಲಿಯ ಕೆರೆಯು ಹತ್ತಾರು ವರ್ಷಗಳಿಂದ ನೀರಿಲ್ಲದೇ ಖಾಲಿ ಇತ್ತು. ಆದರೆ ಇದೀಗ ಆ ಕೆರೆಗಳಲ್ಲಿ ನೀರು ತುಂಬಿ ಕೋಡಿ ಹರಿದಿದೆ. ನೀರಿಲ್ಲದ ಕೆರೆಗಳನ್ನೆಲ್ಲಾ ಮುಚ್ಚಿ ಮನೆ ಮಾಡುವುದಾದರೆ ಈ ಸಂದರ್ಭದಲ್ಲಿ ನಿಮಗೆ ಸಾವಿರಾರು ಕೆರೆಗಳು ಸಿಗಬಹುದು. ಹಾಗಂತ ಅವುಗಳನ್ನ ಮುಚ್ಚಿ ಮನೆ ನಿರ್ಮಾಣ ಮಾಡುವ ನಿಮ್ಮ ನಿರ್ಧಾರ ಸರಿಯಾದುದಲ್ಲ” ಎಂದು ಲಿಯೋ ಸಾಲ್ಡಾನ ಹೇಳಿದರು.
”ಬಡವರಿಗೆ ಮನೆ ನಿರ್ಮಾಣ ಮಾಡುವ ಯೋಜನೆಗಳು ಒಳ್ಳೆಯದ್ದು. ನಾವು ಅದನ್ನು ಬೆಂಬಲಿಸುತ್ತೇವೆ. ಆದರೆ ಕೆರೆಗಳನ್ನು ಮುಚ್ಚುವುದನ್ನು ವಿರೋಧ ಮಾಡುತ್ತೇವೆ. ನಗರದ ಹಲವೆಡೆ ಶ್ರೀಮಂತರಿಗೆ ಲೇಔಟ್ ನಿರ್ಮಾಣ ಮಾಡಿಕೊಡುವ ಬದಲಿಗೆ ಆ ಸ್ಥಳಗಳಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡಿ” ಎಂದರು.
”ಕೆರೆ ಇರುವ ಜಾಗದಲ್ಲಿ ಮನೆ ನಿರ್ಮಾಣ ಮಾಡಬೇಡಿ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಚಿವರಿಗೆ ಅದು ಗೊತ್ತಿಲ್ವಾ? ಅಥವಾ ಇದು ಚುನಾವಣಾ ಪ್ರಚಾರದ ಗಿಮಿಕ್ ಆಗಿರಬಹುದೆ ಎಂದು ಅರ್ಥ ಆಗತಿಲ್ಲ. ಕೆರೆಗಳಲ್ಲಿ ಮನೆ ಕಟ್ಟುತ್ತೇನೆ ಎಂದು ಸಚಿವರು ಹೇಳುವುದಾದರೆ ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಈ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಗೊತ್ತಿಲ್ವಾ? ಅವರು ಸಚಿವ ಸೋಮಣ್ಣ ಅವರಿಗೆ ಹೇಳಬೇಕಿತ್ತು. ಬೇರೆಯವರಿಗೆ ಒಂದು ಕಾನೂನು ಬಿಜೆಪಿಗೆ ಒಂದು ಕಾನೂನಾ? ಎಂದು ಅವರು ಪ್ರಶ್ನಿಸಿದರು.
ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಘಟಕ ಕೂಡ ವಿರೋಧ ವ್ಯಕ್ತಪಡಿಸಿದೆ. “ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಾದ ಸರ್ಕಾರ, ಮಣ್ಣು ಮುಚ್ಚಿ ಮನೆ ಕಟ್ಟಲು ಹೊರಟಿರುವುದು ಅಕ್ಷಮ್ಯ. ನೀರಿನ ಮೂಲಸೆಲೆಗಳಾಗಿರುವ ಕೆರೆಗಳನ್ನು ಉಳಿಸಲು ಹೂಳು ಎತ್ತಲು ಕ್ರಮ ಕೈಗೊಳ್ಳಬೇಕೇ ಹೊರತು ಕೆರೆಗಳನ್ನು ಸರ್ವನಾಶ ಮಾಡುವುದಲ್ಲ. ರಾಜ್ಯ ಬಿಜೆಪಿ ಸರ್ಕಾರ ಕೆರೆ ಕಳ್ಳತನಕ್ಕೆ ಇಳಿದಿರುವುದೇಕೆ? ಸರ್ಕಾರ ಕೂಡಲೇ ಈ ಯೋಜನೆ ಹಿಂಪಡೆಯಬೇಕು” ಎಂದು ಟ್ವೀಟ್ ಮಾಡಿದೆ.
ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಾದ ಸರ್ಕಾರ ಮಣ್ಣು ಮುಚ್ಚಿ ಮನೆ ಕಟ್ಟಲು ಹೊರಟಿರುವುದು ಅಕ್ಷಮ್ಯ.
ನೀರಿನ ಮೂಲಸೆಲೆಗಳಾಗಿರುವ ಕೆರೆಗಳನ್ನು ಉಳಿಸಲು ಹೂಳು ಎತ್ತಲು ಕ್ರಮ ಕೈಗೊಳ್ಳಬೇಕೇ ಹೊರತು ಕೆರೆಗಳನ್ನು ಸರ್ವನಾಶ ಮಾಡುವುದಲ್ಲ.@BJP4Karnataka ಸರ್ಕಾರ ಕೆರೆ ಕಳ್ಳತನಕ್ಕೆ ಇಳಿದಿರುವುದೇಕೆ?
ಸರ್ಕಾರ ಕೂಡಲೇ ಈ ಯೋಜನೆ ಹಿಂಪಡೆಯಬೇಕು. pic.twitter.com/bkx5j2D5af— Karnataka Congress (@INCKarnataka) February 23, 2023
ಬೆಂಗಳೂರಿನಲ್ಲಿ ಇದುವರೆಗೆ 42 ಕೆರೆಗಳು ಕಣ್ಮರೆಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಕೆರೆ ಜಾಗಗಳನ್ನು ಕ್ಯಾಬಿನೆಟ್ ಅನುಮೋದನೆಯಿಲ್ಲದೆ ಮಂಜೂರು ಮಾಡಲಾಗಿದೆ. 1963 ರಿಂದ ಹಲವಾರು ಕಟ್ಟಡಗಳು ಮತ್ತು ಲೇಔಟ್‌ಗಳನ್ನು ಕೆರೆಗಳನ್ನು ಸಮತಟ್ಟು ಮಾಡಿ ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಹೀಗಾಗಿ ಅವು ಕಣ್ಮರೆಯಾಗುತ್ತಿವೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್‌ರವರು 2022ರ ಸೆಪ್ಟಂಬರ್‌ನಲ್ಲಿ ಹೇಳಿದ್ದರು. ಆದರೆ ಈಗ ಅದೇ ಪಕ್ಷದ ಸಚಿವರು ಕೆರೆಗಳ ಜಾಗದಲ್ಲಿ ಮನೆ ನಿರ್ಮಿಸುತ್ತೇವೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 42 ಕ್ಕೂ ಹೆಚ್ಚು ಕೆರೆಗಳು ಮಾಯವಾಗಿವೆ: ಸದನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ


