Homeಮುಖಪುಟಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ

ಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ

- Advertisement -
- Advertisement -

ತಮ್ಮ ಬುಲ್ಡೋಜ್ ಸಂಸ್ಕೃತಿಯನ್ನು ಪ್ರಚುರ ಪಡಿಸಲು ಬಿಜೆಪಿ ದೆಹಲಿಯ ಜಹಾಂಗೀರ್ ಪುರಿಯನ್ನು ಆಯ್ದುಕೊಂಡಿದ್ದು ಏಕೆ?

ಏಪ್ರಿಲ್ 16ರಂದು ದೆಹಲಿಯ ಹೊರವಲಯದಲ್ಲಿರುವ ಜಹಾಂಗೀರ್ ಪುರಿ ಎಂಬ ಪ್ರದೇಶದಲ್ಲಿ ಭಜರಂಗದಳದಿಂದ ಹನುಮಾನ್ ಜಯಂತಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮಸೀದಿ ಮುಂದೆ ಗಲಾಟೆ ನಡೆದು ಕಲ್ಲು ತೂರಾಟ-ಹಿಂಸಾಚಾರ ಉಲ್ಬಣಗೊಂಡ ನಂತರ ಪೊಲೀಸರು ಹಲವು ಜನರನ್ನು ಬಂಧಿಸಿದರು. ಗೃಹಸಚಿವ ಅಮಿತ್ ಶಾ ಘಟನೆ ಕುರಿತು ಪ್ರತಿಕ್ರಿಯಿಸಿ ಕ್ರಮ ಜರುಗಿಸುವುದಾಗಿ ಹೇಳಿದರು. ಅದಾದ ಕೆಲವೇ ದಿನಗಳಲ್ಲಿ ಬಿಜೆಪಿ ಆಡಳಿತವಿರುವ ದೆಹಲಿಯ ಮುನಿಸಿಪಲ್ ಕಾರ್ಪೊರೇಷನ್ ಪೊಲೀಸ್ ಬಲದೊಂದಿಗೆ ಜಹಾಂಗೀರ್‌ಪುರಿಗೆ ನುಗ್ಗಿ ಅಕ್ರಮ ಕಟ್ಟಡಗಳಿವೆ ಎಂಬ ನೆಪದಲ್ಲಿ ನೂರಾರು ಮನೆಗಳನ್ನು ಉರುಳಿಸಿತು. ಮಕ್ಕಳು, ಮಹಿಳೆಯರು ಅಂಗಲಾಚುತ್ತಿದ್ದರೂ ಲೆಕ್ಕಿಸದೇ ಕ್ರೌರ್ಯ ಮೆರೆಯಲಾಯಿತು. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಬುಲ್ಡೋಜರ್‌ಗಳು ನುಗ್ಗಿದವು. ಆ ನಂತರ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶ, ಕರ್ನಾಟಕದಲ್ಲಿ ಇದೇ ರೀತಿಯ ಬುಲ್ಡೋಜರ್ ಸಂಸ್ಕೃತಿಯನ್ನು ಮುಂದುವರೆಸುವ ಚರ್ಚೆ ಹುಟ್ಟುಹಾಕಲಾಯ್ತು.

ಇಲ್ಲೊಂದು ಕ್ರೊನಾಲಜಿ ನಿಮಗೆ ಕಾಣುತ್ತದೆ. ಇದನ್ನು ಸಂಘಪರಿವಾರ ಹಲವು ಕಡೆಗಳಲ್ಲಿ ಪ್ರಯೋಗಿಸಿದೆ. ಮಾಪಿಯಾ, ಕ್ರಿಮಿನಲ್‌ಗಳನ್ನು ಬಗ್ಗು ಬಡಿಯುತ್ತೇವೆ ಎಂದು ಬಿಂಬಿಸಿ ಅಮಾಯಕ ಮುಸ್ಲಿಮರ ಮೇಲೆ ಅಸಂವಿಧಾನಿಕವಾಗಿ ಬುಲ್ಡೋಜರ್ ಹರಿಸಲಾಗಿದೆ. ಹಾಗಾಗಿ ಬಿಜೆಪಿಗರಿಂದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಬಾಬಾ ಎಂದು ಕರೆಸಿಕೊಂಡರೆ, ಮಧ್ಯಪ್ರದೇಶದ ಸಿಎಂ ಶಿವರಾಜ್‌ಸಿಂಗ್ ಚೌಹಾಣ್ ಬುಲ್ಡೋಜರ್ ಮಾಮಾ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿಯ ಪ್ರಯೋಗಕ್ಕೆ ದೆಹಲಿಯ ಜಹಾಂಗೀರ್ ಪುರಿಯನ್ನು ಏಕೆ ಆಯ್ದುಕೊಂಡರು ಎಂಬುದನ್ನು ಅರ್ಥ ಮಾಡಿಕೊಂಡರೆ ಕೋಮುರಾಜಕಾರಣದ ಆಳ ಅಗಲ ತಿಳಿಯುತ್ತದೆ.

ಜಹಾಂಗೀರ್ ಪುರಿಯೆಂಬ ಎಲ್ಲೂ ಸಲ್ಲದ ಶ್ರಮಿಕರ ನಾಡು

ಆಳುವ ಸರ್ಕಾರಗಳ ಅಸಡ್ಡೆ ಮತ್ತು ಉಳ್ಳವರ ಪರವಾಗಿನ ನೀತಿಗಳಿಂದ ಬಡವರು, ತಳಸಮುದಾಯದವರು ತುತ್ತು ಊಟಕ್ಕಾಗಿ ವಲಸೆ ಹೋಗಬೇಕಾಗುವುದು ನಮ್ಮ ದೇಶದಲ್ಲಿ ಅನಿವಾರ್ಯದ ಸಂಗತಿ. ಆ ರೀತಿಯಾಗಿ ದೇಶಾದ್ಯಂತ ವಲಸೆ ಹೋದ ಎಲ್ಲೂ ಸಲ್ಲದ ಜನರಿಗೆ ಆಶ್ರಯ ಕೊಟ್ಟ ಜಾಗಗಳಲ್ಲಿ ದೆಹಲಿಯ ಜಹಾಂಗೀರ್‌ಪುರಿ ಸಹ ಒಂದು. 80ರ ದಶಕದಲ್ಲಿ ಸೃಷ್ಟಿಯಾದ ಈ ಪ್ರದೇಶ ಯಮುನಾ ನದಿ ದಡದ ಮೇಲೆ, ಚಂಢೀಗಡ ಹೆದ್ದಾರಿಯಲ್ಲಿದೆ. ಅದು ದೆಹಲಿಯ ಹೊರಭಾಗವಾಗಿದ್ದು ಅಲ್ಲಿ ಹತ್ತಾರು ತ್ಯಾಜ್ಯ ವಿಲೇವಾರಿ ಘಟಕಗಳಿವೆ. ದೆಹಲಿಯ ಕಸವನ್ನೆಲ್ಲಾ ಅಲ್ಲಿ ಹೂಳಲಾಗುತ್ತದೆ. ಅದು ಈಗ ದೊಡ್ಡ ಬೆಟ್ಟವಾಗಿ ಬೆಳೆದು ನಿಂತಿದೆ. ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಅತೀ ಬಡವರು, ತಳಸಮುದಾಯಗಳ, ನಿರಾಶ್ರಿತರಾದ ಜನರೆ ಇಲ್ಲಿ ಹೆಚ್ಚು ನೆಲೆಸಿರುವುದು. ಬಹುತೇಕರ ಉದ್ಯೋಗ ತ್ಯಾಜ್ಯ ವಿಲೇವಾರಿ, ಕಸವಿಂಗಡಣೆಯಾಗಿದೆ.

ನಮ್ಮ ದೇಶದ ಎಲ್ಲಾ ರಾಜ್ಯಗಳಿಂದ ವಲಸೆ ಹೋದ ಬಡವರು ಇಲ್ಲಿ ಸಿಗುತ್ತಾರೆ. ಬಂಗಾಳಿಗರು, ತಮಿಳರು, ಮಲೆಯಾಳಿಗಳು, ಕರ್ನಾಟಕದವರು ಅಲ್ಲದೆ ಮ್ಯಾನ್ಮರ್‌ನಿಂದ ವಲಸೆ ಬಂದ ರೋಹಿಂಗ್ಯಾ ಮುಸ್ಲಿಮರು, ಟಿಬೆಟ್‌ನಿಂದ ಬಂದ ನಿರಾಶ್ರಿತರು, ಆಫ್ಘನ್‌ನಿಂದ ಬಂದ ನಿರಾಶ್ರಿತರು, ಮುಸ್ಲಿಮೇತರ ಹಿಂದೂ ನಿರಾಶ್ರಿತರು.. ಹೀಗೆ ಪಟ್ಟಿ ಮುಂದುವರೆಯುತ್ತದೆ. ಬೇರೆ ದೇಶಗಳಿಂದ ವಲಸೆ ಬಂದವರಿಗೆ ಕೂಡ ನಿರಾಶ್ರಿತರ ಕಾರ್ಡು ನೀಡಲಾಗಿದೆ. ಅದು ಅವರಿಗೆ ಮಾನ್ಯತೆ ಒದಗಿಸಿಕೊಟ್ಟಿದೆ. ಅಂದರೆ ಯಾವುದೇ ಒಂದು ಜಾತಿಯ, ಒಂದು ಧರ್ಮದ, ಒಂದು ಭಾಷೆಯ ಜನರು ಬಹುಸಂಖ್ಯಾತರಾಗಿದ್ದಾರೆ ಎಂದು ಹೇಳಲು ಬರುವುದಿಲ್ಲ. ಆದರೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅದು ಮುಸ್ಲಿಂ ಗೆಟ್ಟೋ ತರಹ ಕಂಡುಬರುತ್ತದೆ.

ಪಕ್ಕದ ಆಜಾದ್ ನಗರದಲ್ಲಿ ಚೌಧರಿ ಚರಣ್‌ಸಿಂಗ್ ತರಕಾರಿ ಮಾರುಕಟ್ಟೆ ಸ್ಥಾಪನೆಯಾಗಿ ಏಷ್ಯಾದ ದೊಡ್ಡ ತರಕಾರಿ ಮಂಡಿ ಎಂದು ಹೆಸರು ಪಡೆಯಿತು. ಸಣ್ಣ ಸಣ್ಣ ಕಾರ್ಖಾನೆಗಳು ಅಲ್ಲಿ ತಲೆ ಎತ್ತಿದವು. ಕಲ್ಲಿದ್ದಲು ಆಧಾರಿತ ವಿದ್ಯುತ್ ತಯಾರಿಕಾ ಘಟಕ ಆರಂಭವಾಯಿತು. ಹಾಗಾಗಿ ಅಲ್ಲಿ ಕೂಲಿಕಾರರ ಬೇಡಿಕೆ ಹೆಚ್ಚಾಯಿತು. ಇಲ್ಲಿಗೆ ಬಂದರೆ ಏನೋ ಒಂದು ಕೆಲಸ ಸಿಗುತ್ತದೆ ಎಂದು ಅಲ್ಲಿ ನೆಲೆಸುವ ಶ್ರಮಿಕರ ಸಂಖ್ಯೆಯೂ ಹೆಚ್ಚಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಹಾಂಗೀರ್ ಪುರಿ ದೆಹಲಿ ಮುನಿಸಿಪಾಲಿಟಿ ವ್ಯಾಪ್ತಿಗೆ ಬಂದ ನಂತರ ನೀರು, ವಿದ್ಯುತ್ ಸಂಪರ್ಕ ಸಿಕ್ಕಿತು. ಅಲ್ಲಿ 12 ಬ್ಲಾಕ್‌ಗಳು ಇದ್ದು 4 ಬ್ಲಾಕ್‌ಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳಿವೆ. ಅದೇ ರೀತಿ ಜಹಾಂಗೀರ್ ಪುರಿ ಸುತ್ತಮುತ್ತ ಆಧುನಿಕ ಲೇಔಟ್‌ಗಳು ಕೂಡ ತಲೆ ಎತ್ತಿವೆ. ಪಕ್ಕದ ಆದರ್ಶ್ ನಗರ್, ಆಜಾದ್ ಪುರಿಗಳಲ್ಲಿ ಮಧ್ಯಮ ವರ್ಗದ ಜನರು ವಾಸವಿದ್ದಾರೆ. ಇನ್ನು ಆಪ್ ಅಧಿಕಾರಕ್ಕೆ ಬಂದ ನಂತರ ಶಾಲೆಗಳು ಅಭಿವೃದ್ಧಿ ಕಂಡಿವೆ. ಬಾಬು ಜಗಜೀವನ್‌ರಾವ್ ಆಸ್ಪತ್ರೆ ಉನ್ನತೀಕರಿಸಿ ಅದರ ಗುಣಮಟ್ಟ ಹೆಚ್ಚಿಸಲಾಗಿದೆ. 2 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಕಸ ವಿಲೇವಾರಿ ಮಾಡುವವರು, ದಿನಗೂಲಿ ಮಾಡುವವರು, ಮೂಟೆ ಹೊರುವವರು, ಕಲ್ಲು ಹೊಡೆಯುವವರು, ಪ್ಲಾಸ್ಟಿಕ್ ಸಾಮಾನು ಮಾಡುವವರು, ದಿನ ಬಳಕೆಯ ವಸ್ತುಗಳ ಮಾರಾಟಗಾರರು ಇದ್ದಾರೆ. ಸೆಕ್ಸ್ ವರ್ಕರ್ಸ್, ಟ್ರಾನ್ಸ್‌ಜೆಂಡರ್ ಕಮ್ಯೂನಿಟಿ ಇಲ್ಲಿ ಹೆಚ್ಚಿದ್ದಾರೆ. ಹಲವು ಎನ್‌ಜಿಓಗಳು ಇಲ್ಲಿ ಕೆಲಸ ಮಾಡುತ್ತಿವೆ.

ಅಸಂಘಟಿತರು, ಅಶಿಕ್ಷಿತರು ಮತ್ತು ಅಸುರಕ್ಷಿತರು

ಜಹಾಂಗೀರ್ ಪುರಿಯಲ್ಲಿ ಅಂದು ದುಡಿದು ಅಂದು ಉಣ್ಣುವ ಜನರೆ ಹೆಚ್ಚು. ಇಲ್ಲಿರುವ ಎಲ್ಲರೂ ತಳಸಮುದಾಯದವರಾದ್ದರಿಂದ ಅವರಿಗೆ ಯಾವುದೇ ಸಾಮಾಜಿಕ, ರಾಜಕೀಯ ಅಥವಾ ದೊಡ್ಡ ಮಟ್ಟದ ಆರ್ಥಿಕ ಶಕ್ತಿ ಇಲ್ಲ. ದೇಶದ ಮೂಲೆಮೂಲೆಗಳಿಂದ ಬಂದು ನೆಲೆಸಿದ್ದರಿಂದ ಅವರು ಒಂದು ಸಮುದಾಯವಾಗಿ ಸಂಘಟಿತರಾಗಿಲ್ಲ. ದಿಕ್ಕುದೆಸೆ ಇಲ್ಲದವರಂತೆ ಇಲ್ಲಿ ನೆಲೆಸಿದ್ದಾರೆ. ಇಲ್ಲಿನ ಜನರನ್ನು ಹಲವು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಇಲ್ಲಿ ಕ್ರೈಂ ರೇಟ್ ಕೂಡ ಹೆಚ್ಚಿದೆ.

ಯೋಗಿ ಆದಿತ್ಯನಾಥ್

ಯಾವುದೇ ಮಹಾನಗರಗಳು ನಡೆಯುವುದು ಕೇವಲ ಐಟಿಬಿಟಿ ಹಣದಿಂದ ಮಾತ್ರವಲ್ಲ, ಇಂತಹ ಬಡಪಾಯಿಗಳ ಶ್ರಮದಿಂದ ಎಂಬುದು ಸತ್ಯ. ದೆಹಲಿಯ ಸ್ವಚ್ಛತೆಯಿಂದ ಹಿಡಿದು ಬಹುತೇಕ ಕೆಲಸಗಳಲ್ಲಿ ಇಲ್ಲಿನ ಜನರ ಪಾಲಿರುತ್ತದೆ. ದೇಶದ ಯಾವುದೇ ಕಸ ವಿಲೇವಾರಿ ಪ್ರದೇಶದ ಪಕ್ಕದಲ್ಲಿ ಈ ರೀತಿಯ ಬಂಗಾಳಿ ಮುಸ್ಲಿಮರು ವಾಸಿಸುತ್ತಿರುತ್ತಾರೆ. ಆದರೆ ಅಶಿಕ್ಷಿತರಾದ ಇಲ್ಲಿನ ಬಹುತೇಕರು ಅಸುರಕ್ಷಿತರೂ ಆಗಿದ್ದಾರೆ. ಯಾರೇ ದೌರ್ಜನ್ಯವೆಸಗಿದಗೂ ವಾಪಸ್ ಪ್ರಶ್ನಿಸುವ ಶಕ್ತಿ ಇಲ್ಲಿ ಯಾರಿಗೂ ಇಲ್ಲ. ಜಹಾಂಗೀರ್‌ಪುರಿಯಲ್ಲಿ ಮುಸ್ಲಿಮರು ಸಹ ಬೇರೆ ಕಡೆಗಳಂತೆ ಸಂಘಟಿತರಾಗಿಲ್ಲ. ಎರಡನೆಯದಾಗಿ ಈ ಪ್ರದೇಶದ ಹೆಸರು ಜಹಾಂಗೀರ್ ಪುರಿ ಎಂದಿದೆ. ಮುಸ್ಲಿಂ ದೊರೆಯ ಹೆಸರಿನಲ್ಲಿರುವುದರ ಜೊತೆಗೆ ಮುಸ್ಲಿಮರೂ ಸಹ ಇಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಹನುಮ ಜಯಂತಿ ಹೆಸರಿನಲ್ಲಿ ಗಲಭೆ ಮಾಡಲಾಯಿತು. ನಿರೀಕ್ಷಿತ ಫಲಿತಾಂಶ ದೊರಕದಿದ್ದಾಗ ಬುಲ್ಡೋಜರ್‌ಗಳನ್ನು ನುಗ್ಗಿಸಿ ಅವರನ್ನು ಒಕ್ಕಲೆಬ್ಬಿಸಲಾಯ್ತು. ಅಂದರೆ ಬಿಜೆಪಿ-ಸಂಘಪರಿವಾರದ ರಾಜಕೀಯ ದಾಳಕ್ಕೆ ಇಲ್ಲಿನ ಬಡಜನರ ಬೆವರಿನ ಶ್ರಮ ಕ್ಷಣಮಾತ್ರದಲ್ಲಿ ನಾಶವಾಯಿತು. ಆ ನಂತರ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಅಲ್ಲಿ ಬಾಂಗ್ಲಾ ನುಸುಳುಕೋರರಿದ್ದಾರೆ, ರೋಹಿಂಗ್ಯಾ ಮುಸ್ಲಿಮರಿದ್ದಾರೆ ಎಂಬ ಪುಕಾರು ಹರಡಲಾಯಿತು. ಇನ್ನು ಜಹಾಂಗೀರ್ ಪುರಿಯನ್ನು ಒಳಗೊಂಡಿರುವ ಆದರ್ಶ್ ನಗರ ವಿಧಾನಸಭಾ ಕ್ಷೇತ್ರ ಸೇರಿ, ಸ್ಥಳೀಯ ಚುನಾವಣೆಗಳಲ್ಲಿ ಇಲ್ಲಿ ಆಪ್ ಗೆದ್ದಿದೆ. ಆದರೆ ಅವರ್ಯಾರು ಇಲ್ಲಿನ ಸಂತ್ರಸ್ತರ ಪರವಾಗಿ ದನಿಯೆತ್ತಲೇ ಇಲ್ಲ. ಬದಲಿಗೆ ಅವರು ಇಲ್ಲಿ ಅಕ್ರಮ ನುಸುಳುಕೋರರು ನೆಲೆಸಲು ಬಿಜೆಪಿಯವರೆ ಕಾರಣ ಎಂದು ಹೇಳುವ ಮೂಲಕ ಸಂತ್ರಸ್ತರಿಗೆ ಮತ್ತಷ್ಟು ಅನ್ಯಾಯವೆಸಗಿದರು.

ಯೋಜಿತ ಗಲಭೆ – ಪ್ರಾಯೋಜಿತ ಬುಲ್ಡೋಜರ್

ಈಗ ನಾವು ಏಪ್ರಿಲ್ 16ರ ಗಲಭೆಗೆ ಹಿಂತಿರುಗೋಣ. ಎಡಪಕ್ಷಗಳು ನಡೆಸಿದ ಸತ್ಯಶೋಧನೆ ಮತ್ತು ಟಿವಿಗಳಲ್ಲಿ ಪ್ರಸಾರವಾದ ವಿಡಿಯೋ ಕ್ಲಿಪ್‌ಗಳ ಪ್ರಕಾರ ಅಂದು ಹನುಮಾನ್ ಮೆರವಣಿಗೆ ನಡೆಸಿದ ಭಜರಂಗಿಗಳು ಕೈಯಲ್ಲಿ ಆಯುಧಗಳನ್ನು ಹಿಡಿದಿದ್ದಾರೆ. ಮೆರವಣಿಗೆಯಲ್ಲಿದ್ದ ಬಹುತೇಕರು ಅಲ್ಲಿನವರಲ್ಲ, ಹೊರಗಿನವರು ಎಂಬ ಆರೋಪವಿದೆ. ಅಲ್ಲದೆ ’ಸಿ’ ಬ್ಲಾಕ್‌ನ ಒಂದೇ ರಸ್ತೆಯಲ್ಲಿ ಮೂರು ಬಾರಿ ಮೆರವಣಿಗೆ ಬಂದಿದೆ. ನಂತರ ಮಸೀದಿಯ ಮುಂದೆ ತೆರಳಿ ಜೋರಾಗಿ ಘೋಷಣೆಗಳನ್ನು ಕೂಗಿ ಮುಸ್ಲಿಮರನ್ನು ಪ್ರಚೋದಿಸಲಾಗಿದೆ. ಕಲ್ಲು ತೂರಾಟವಾಯಿತು ಎಂದು ಎಲ್ಲರೂ ಹೇಳುತ್ತಿದ್ದರೂ ಮೊದಲ ಕಲ್ಲು ತೂರಿದವರು ಯಾರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸತ್ಯಶೋಧನ ತಂಡ ಸೇರಿ ಅಲ್ಲಿನ ಸ್ಥಳೀಯರು ಹೇಳುವುದು ಭಜರಂಗದಳದವರೆ ಮೊದಲು ಕಲ್ಲು ತೂರಿ ಗಲಭೆ ಪ್ರಾರಂಭಿಸಿದ್ದಾರೆ ಎಂದು!

ಇನ್ನು ಅನುಮತಿ ಪಡೆಯದೆ ನಡೆದ ಈ ಮೆರವಣಿಗೆಯ ಮುಂದೆ ಮತ್ತು ಹಿಂದೆ ಒಂದೊಂದು ಪೊಲೀಸ್ ಜೀಪ್ ಇತ್ತಾದರೂ ಈ ದಾರಿಯಲ್ಲಿ ಮೆರವಣಿಗೆ ಮಾಡಬೇಡಿ ಎಂದು ಪೊಲೀಸರು ತಡೆಯಲಿಲ್ಲ. ಶಸ್ತ್ರಾಸ್ತ್ರಗಳನ್ನು ಹಿಡಿದವರನ್ನು ಪ್ರಶ್ನಿಸಲಿಲ್ಲ! ಹಿಂಸಾಚಾರದ ನಂತರ ಭಜರಂಗದಳ, ವಿಎಚ್‌ಪಿ ಸಂಘಟನೆಗಳನ್ನು ಹೊಣೆಮಾಡಿ ಎಫ್‌ಐಆರ್ ದಾಖಲಿಸಿದ ಪೊಲೀಸರು ಕೆಲವೇ ಕ್ಷಣಗಳಲ್ಲಿ ಆ ಸಂಘಟನೆಗಳ ಮತ್ತು ವ್ಯಕ್ತಿಗಳ ಹೆಸರನ್ನು ಕೈಬಿಟ್ಟರು. ಸ್ಥಳೀಯ ಮುಸ್ಲಿಮರನ್ನು ಬಂಧಿಸಿದರು ಮತ್ತು ಬಿಜೆಪಿ ಮುಖಂಡರಿಗೆ ಪೊಲೀಸ್ ಠಾಣೆಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಮಾಡಿಕೊಟ್ಟರು. ಪೊಲೀಸರು ಈ ಪಕ್ಷಪಾತವನ್ನು ಎಡಪಕ್ಷಗಳು ಪ್ರಶ್ನಿಸಿದರೂ ಅದಕ್ಕೆ ಪೊಲೀಸರ ಕಡೆಯಿಂದ ಯಾವುದೇ ಉತ್ತರವಿಲ್ಲ.

ಶಿವರಾಜ್‌ಸಿಂಗ್ ಚೌಹಾಣ್

15 ವರ್ಷಗಳಿಂದ ಸತತವಾಗಿ ದೆಹಲಿ ಮುನಿಸಿಪಲ್ ಕಾರ್ಪೊರೇಷನ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಸೋಲುವ ಭಯ ಬಿಟ್ಟರೆ ಬೇರೆ ಕಾರಣಗಳು ಇದ್ದಂತಿಲ್ಲ. ಹಾಗಾಗಿ ಈ ರೀತಿಯ ಗಲಭೆ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಇನ್ನು ಇಂತಹ ದೌರ್ಜನ್ಯಗಳು, ಗಲಭೆಗಳು ನಡೆದಾಗ ಆಪ್ ನಾಯಕರು ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆ. ದೆಹಲಿ ಪೊಲೀಸ್ ’ನಮ್ಮ ಕೈಯಲಿಲ್ಲ ನಾವೇನು ಮಾಡೋಣ’ ಎಂದು ಹೇಳುವುದನ್ನು ಬಿಟ್ಟು ಬೇರೆ ಸಮರ್ಪಕ ಕ್ರಮಗಳಿಗೆ ಮುಂದಾಗುತ್ತಿಲ್ಲ. ಅದೂ ಅಲ್ಲದೆ ಬಿಜೆಪಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡವರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಜೆಪಿ ತಮಗೆ ಮತ ಹಾಕಿದ ಜನರಿಗೇ ದ್ರೋಹ ಬಗೆಯುತ್ತಿದೆ.

ದೇಶದ ಎಲ್ಲಾ ರಾಜ್ಯ, ನಗರ, ಪಟ್ಟಣಗಳಲ್ಲಿ ಅಕ್ರಮ ಕಟ್ಟಡ, ಮನೆಗಳಿವೆ. ಇಲ್ಲಿ ವಲಸೆ ಜನರು ಮತ್ತು ನಿರಾಶ್ರಿತರು ಹೆಚ್ಚಿರುವ ಕಾರಣಕ್ಕೆ ಅಕ್ರಮ ಕಟ್ಟಡಗಳು ಹೆಚ್ಚಿರಬಹುದು. ಐಡಿ ಕಾರ್ಡ್ ತೋರಿಸಿ ಎಂದರೆ ಇರೋಲ್ಲ. ಹತ್ತರಲ್ಲಿ 7-8 ಜನರ ಬಳಿ ಏನೂ ಇರುವುದಿಲ್ಲ. ಹಾಗೆಂದರೆ ಅವರು ಈ ದೇಶದ ಪ್ರಜೆಗಳಲ್ಲವೇ? ಅವರಿಗೆ ಪುನರ್ವಸತಿ ಕಲ್ಪಿಸದೇ ಅವರನ್ನು ಏಕಾಏಕಿ ಬೀದಿಗೆ ತಳ್ಳಿ ಅವರ ಮನೆಗಳನ್ನು ಧ್ವಂಸ ಮಾಡುವುದು ಸರಿಯೇ? ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ ಎಂದರೆ ಈ ದೇಶದ ಸಂವಿಧಾನಕ್ಕೆ ಏನು ಅರ್ಥ? ಇದು ಬಿಜೆಪಿಯ ವಿನಾಶದ ಸಂಸ್ಕೃತಿಯಾಗಿದೆ. ಇದನ್ನು ಪ್ರಶ್ನಿಸದೆ ಒಪ್ಪಿಕೊಂಡಲ್ಲಿ ಮುಂದೊಂದು ದಿನ ಇದು ದೇಶದ ವಿನಾಶಕ್ಕೂ ಕಾರಣವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬಹುಜನ ಭಾರತ; ಬಹುತ್ವದ ಮೇಲೆ ಬುಲ್ಡೋಜರ್ ಹರಿಸಿರುವ ಬಾಬಾ-ಮಾಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...