‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು, ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮುಂಬೈ ಪೊಲೀಸರ ಸೈಬರ್ ಸೆಲ್ ತಿಳಿಸಿದೆ. ಸೈಬರ್ ಸೆಲ್ ಈ ಮೂವರು ಆರೋಪಿಗಳ ಜಾಮೀನು ಅರ್ಜಿಗೆ ಸೋಮವಾರ ವಿರೋಧ ವ್ಯಕ್ತಪಡಿಸಿತ್ತು.
ಬುಲ್ಲಿ ಬಾಯ್ ಆ್ಯಪ್ ಪ್ರಕರಣದಲ್ಲಿ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿರುವ ಮುಂಬೈ ಅಪರಾಧ ವಿಭಾಗದ ಸೈಬರ್ ಸೆಲ್ ಮುಂಬೈನ ಸಿಟಿ ಕೋರ್ಟ್‌ಗೆ ಉತ್ತರ ನೀಡಿದೆ.
’ದೆಹಲಿ ಪೊಲೀಸರು ಬಂಧಿಸಿರುವ ಬುಲ್ಲಿ ಬಾಯ್ ಆ್ಯಪ್ ರಚನೆಕಾರ ನಿರಾಜ್ ಬಿಷ್ಣೋಯ್ ಅವರ ಸಹಾಯದಿಂದ ಈ ಆರೋಪಿಗಳು ಅಪರಾಧ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬುಲ್ಲಿ ಬಾಯ್ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?
ಮೂವರು ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲು ನ್ಯಾಯಾಲಯವನ್ನು ಕೋರಿದ ಪೊಲೀಸರು, “ಪ್ರಕರಣದಲ್ಲಿ ಈ ಆರೋಪಿಗಳು ಪಲಾಯನ ಮಾಡಬಹುದು ಅಥವಾ ಸಾಕ್ಷ್ಯವನ್ನು ಹಾಳುಮಾಡಬಹುದು” ಎಂದು ವಾದಿಸಿದ್ದಾರೆ.
ದೆಹಲಿ ಪೊಲೀಸರಿಂದ ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ನೀರಜ್ ಬಿಷ್ಣೋಯ್ ಮತ್ತು ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ಓಂಕಾರೇಶ್ವರ ಠಾಕೂರ್ ಎಂಬ ಇನ್ನಿಬ್ಬರನ್ನು ಕಸ್ಟಡಿಗೆ ಪಡೆಯಲು ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಸಮಾಜದಲ್ಲಿ ಶಾಂತಿ ಕದಡುವಂತಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಾಂದ್ರಾ ನ್ಯಾಯಾಲಯವು ಈ ಹಿಂದೆ ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಸಹ-ಆರೋಪಿಗಳಾದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರನ್ನು ಜನವರಿ 28 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಜನವರಿ 24ರ ವರೆಗೆ ವಿಶಾಲ್ ಕುಮಾರ್ ಝಾರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಓಂಕಾರೇಶ್ವರ ಠಾಕೂರ್ ಮತ್ತು ನೀರಜ್ ಬಿಷ್ಣೋಯ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ಈ ಹಿಂದೆ ತಿರಸ್ಕರಿಸಿತ್ತು.
ಇಂದು (ಜ.18) ಈ ಮೂವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ನಡೆಯಲಿದೆ.


