ಭುವನೇಶ್ವರ ಮಹಾನಗರ ಪಾಲಿಕೆಯ (ಬಿಎಂಸಿ) ಹಿರಿಯ ಅಧಿಕಾರಿಯ ಮೇಲೆ ಸೋಮವಾರ ನಡೆದ ಹಲ್ಲೆಯನ್ನು ಖಂಡಿಸಿ ಒಡಿಶಾದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಸಾಮೂಹಿಕ ರಜೆ ಹಾಕಿದ್ದಾರೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಆಡಳಿತಾತ್ಮಕ ಕೆಲಸಗಳು ವ್ಯತ್ಯಯಗೊಂಡಿವೆ ಎಂದು ವರದಿಯಾಗಿದೆ.
ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಒಡಿಶಾ ಆಡಳಿತ ಸೇವೆ (ಒಎಎಸ್) ಮತ್ತು ಒಡಿಶಾ ಕಂದಾಯ ಸೇವೆ (ಒಆರ್‌ಎಸ್) ಅಧಿಕಾರಿಗಳು ಬೆನ್ನೆಲುಬಾಗಿರುವುದರಿಂದ, ಅವರ ಸಾಮೂಹಿಕ ಪ್ರತಿಭಟನಾ ರಜೆ ಆಡಳಿತದ ಮೇಲೆ ಪರಿಣಾಮ ಬೀರಿದೆ.
ಸೋಮವಾರ, ಬಿಎಂಸಿಯ ಹೆಚ್ಚುವರಿ ಆಯುಕ್ತ, ಹಿರಿಯ ಒಎಎಸ್ ಅಧಿಕಾರಿ ರತ್ನಾಕರ್ ಸಾಹೂ ಅವರನ್ನು ಕಚೇರಿಯ ಕೊಠಡಿಯಿಂದ ಹೊರಗೆ ಎಳೆದೊಯ್ದು ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಅಲ್ಲದೆ, ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ಅವರಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು.
ಪ್ರಕರಣ ಸಂಬಂಧ ಬಿಎಂಸಿಯ ಬಿಜೆಪಿ ಕಾರ್ಪೊರೇಟರ್ ಜೀವನ್ ರೌಟ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿಯ ಒಡಿಶಾ ಘಟಕ ಐವರನ್ನೂ ಪಕ್ಷದಿಂದ ಉಚ್ಛಾಟಿಸಿದೆ.
ಸಾಮೂಹಿಕ ರಜೆ ಘೋಷಿಸಿದ ಒಡಿಶಾ ಆಡಳಿತ ಸೇವಾ ಸಂಘವು, ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ಅವರನ್ನು ತಕ್ಷಣ ಬಂಧಿಸುವುದು ಸೇರಿದಂತೆ ಮೂರು ಬೇಡಿಕೆಗಳನ್ನು ಮುಖ್ಯಮಂತ್ರಿ ಮುಂದೆ ಇಟ್ಟಿದೆ. ಸಂಘದ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಅಹುಜಾ ಅವರನ್ನು ಭೇಟಿ ಮಾಡಿ, ಜಗನ್ನಾಥ್ ಪ್ರಧಾನ್ ಅಧಿಕಾರಿ ಮೇಲಿನ ದಾಳಿಯ ಕಿಂಗ್‌ಪಿನ್ ಎಂದು ಆರೋಪಿಸಿ ಮನವಿ ಸಲ್ಲಿಸಿದೆ.
ಈ ನಡುವೆ, ಅಧಿಕಾರಿ ಸಾಹೂ ಅವರು ತಮ್ಮೊಂದಿಗೆ ಮತ್ತು ಬಿಎಂಸಿಯ ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಜಗನ್ನಾಥ್ ಪ್ರಧಾನ್, ಇದು ಹಲ್ಲೆಗೆ ಕಾರಣವಾಗಿದೆ ಎಂದಿದ್ದಾರೆ. ಅವರೂ ಹಲ್ಲೆಯನ್ನು ಖಂಡಿಸಿದ್ದಾರೆ.
ತಹಶೀಲ್ದಾರ್‌ಗಳು, ಸಬ್-ಕಲೆಕ್ಟರ್‌ಗಳು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲಾ ಕ್ಷೇತ್ರ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಎಎಎಸ್ ಸಂಘವು ಒತ್ತಾಯಿಸಿದೆ. ರಾಜ್ಯ ಸರ್ಕಾರವು ಈ ಘಟನೆಯನ್ನು ಸಾರ್ವಜನಿಕವಾಗಿ ಖಂಡಿಸಬೇಕೆಂದು ಎಂದು ಆಗ್ರಹಿಸಿದೆ.
ತಮ್ಮ ಬೇಡಿಕೆಗಳು ಈಡೇರುವವರೆಗೆ ಸಾಮೂಹಿಕ ರಜೆ ಹಾಕಲು ಎಲ್ಲಾ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಒಎಎಸ್ ಸಂರ್ಘ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದೆ.
ಅಧಿಕಾರಿ ಮೇಲಿನ ಹಲ್ಲೆಯಂತಹ ಹೇಯ ಕೃತ್ಯಗಳು ರಾಜ್ಯಾದ್ಯಂತ ಕೆಲಸ ಮಾಡುವ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಒಎಎಸ್ ಹೇಳಿದೆ.
ಪುರಿಯಲ್ಲಿ ಜಗನ್ನಾಥ ದೇವರ ರಥಯಾತ್ರೆ ನಡೆಯುತ್ತಿರುವುದರಿಂದ, ಉತ್ತರದ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಧಿಕಾರಿಗಳು ಸಾಮೂಹಿಕ ರಜೆ ಹಾಕದಂತೆ ಒಡಿಶಾದ ಕಂದಾಯ ಸಚಿವ ಸುರೇಶ್ ಪೂಜಾರಿ ಮನವಿ ಮಾಡಿದ್ದಾರೆ.


