ಉಪಚುನಾವಣೆ ನಡೆಯಲಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಬುಧವಾರ (ಅ.23) ಘೋಷಣೆ ಮಾಡಿದೆ. ಮತ್ತೊಂದು ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರದಲ್ಲಿದೆ.
ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ನಿನ್ನೆಯಷ್ಟೆ ಪಕ್ಷ ಸೇರಿರುವ ಸಿ.ಪಿ ಯೋಗೇಶ್ವರ್‌ಗೆ ಮತ್ತು ಸಂಡೂರಿನಲ್ಲಿ ಸಂಸದ ಇ. ತುಕರಾಂ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಹಾಗಾಗಿ, ನಿನ್ನೆಯವರೆಗೆ ಚನ್ನಪಟ್ಟಣದ ಮೇಲಿದ್ದ ಕುತೂಹಲ, ಈಗ ಶಿಗ್ಗಾವಿಗೆ ಶಿಫ್ಟ್ ಆಗಿದೆ.
Congress President Shri @kharge has approved the proposals to nominate the following members as party candidates for the bye-elections in the State Legislative Assemblies listed below. pic.twitter.com/tBRqg05hSv
— Congress (@INCIndia) October 23, 2024
ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾಗಿರುವ ಕಾರಣ ತೆರವಾಗಿರುವ ಶಿಗ್ಗಾವಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಹಳ ತಲೆ ಕೆಡಿಸಿಕೊಂಡಂತಿದೆ.
ಶಿಗ್ಗಾವಿ ಟಿಕೆಟ್ ಲಿಂಗಾಯತರಿಗೆ ನೀಡಬೇಕೆ, ಅಲ್ಪಸಂಖ್ಯಾತರಿಗೆ (ಮುಸ್ಲಿಂ) ನೀಡಬೇಕೆ? ಎಂಬ ಗೊಂದಲ ಕಾಂಗ್ರೆಸ್‌ನಲ್ಲಿ ಮುಂದುವರೆದಿದೆ. ಈ ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋಲನುಭವಿಸಿರುವ ಹಿನ್ನೆಲೆ, ಈ ಬಾರಿ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕುವ ಹೊಸ ಲೆಕ್ಕಾಚಾರದಲ್ಲಿ ಕೈ ನಾಯಕರು ಇದ್ದಾರೆ ಎಂದು ಹೇಳಲಾಗ್ತಿದೆ.
ಆದರೆ, ಸಚಿವ ಝಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್‌ನ ಮುಸ್ಲಿಂ ನಾಯಕರು ಮತ್ತೊಮ್ಮೆ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ. ಇದರಿಂದ ಕೈ ನಾಯಕರು ಅಂತಿಮ ನಿರ್ಧಾರಕ್ಕೆ ಬರಲಾಗದೆ ಅಭ್ಯರ್ಥಿ ಘೋಷಣೆ ವಿಳಂಬವಾಗಿದೆ ಎಂದು ವರದಿಯಾಗಿದೆ.
ಶಿಗ್ಗಾವಿ ಟಿಕೆಟ್‌ಗಾಗಿ ಮುಸ್ಲಿಂ ಮುಖಂಡರಾದ ಯಾಸಿರ್ ಅಹ್ಮದ್ ಖಾನ್ ಪಠಾಣ ಮತ್ತು ಸೈಯ್ಯದ್ ಅಜ್ಜಂಪೀರ್ ಖಾದ್ರಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಯಾಗಿರುವ ಲಿಂಗಾಯತ ಸಮುದಾಯದ ಸಾದರ ಉಪ ಪಂಗಡಕ್ಕೆ ಸೇರಿದ ಭರತ್ ಬೊಮ್ಮಾಯಿ ಅವರನ್ನು ಎದುರಿಸಲು, ಅದೇ ಸಮುದಾಯದ ಪಂಚಮಸಾಲಿ ಉಪ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. ಇದಕ್ಕೆ ಪೂರಕವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಪತ್ನಿ ಶಿವಲೀಲಾ ಅಥವಾ ಮಗಳು ವೈಶಾಲಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಬಿಜೆಪಿ
ಕಾಂಗ್ರೆಸ್‌ನಂತೆಯೇ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ, ಇನ್ನೊಂದು ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಸಂಡೂರಿನಿಂದ ಬಂಗಾರು ಹನುಮಂತು ಮತ್ತು ಶಿಗ್ಗಾವಿಯಿಂದ ಭರತ್ ಬೊಮ್ಮಾಯಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರಿದ್ದಾರೆ.
ಇದನ್ನೂ ಓದಿ : ಮೂರು ಕ್ಷೇತ್ರಗಳ ಉಪ ಚುನಾವಣೆ: ‘ಕೈ-ಕಮಲ’ ಪಕ್ಷಗಳ ಕುಟುಂಬ ರಾಜಕಾರಣಕ್ಕೆ ಕಾರ್ಯಕರ್ತರ ವಿರೋಧ


