ರಾಜ್ಯದ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ.
ಇಂದು (ನ.23) ಪ್ರಟಕಗೊಂಡ ಫಲಿತಾಂಶದಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ 9,649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಂಗಾರು ಹನುಮಂತು 83,967 ಮತಗಳನ್ನು ಗಳಿಸಿದ್ದಾರೆ.
ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ವಿರುದ್ದ ಸೋಲಾಗಿದೆ. ಈ ಮೂಲಕ ಎರಡು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 87,308 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಅವರು 100,756 ಮತಗಳನ್ನು ಗಳಿಸಿದ್ದಾರೆ. ಇಬ್ಬರ ನಡುವಿನ ಗೆಲುವಿನ ಅಂತರ 13,448.
ಜಿದ್ದಾಜಿದ್ದಿನ ಕಣವಾಗಿದ್ದ ಚನ್ನಪಟ್ಟಣದ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಚುನಾವಣಾ ರಾಜಕೀಯದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.
ಸಿ.ಪಿ ಯೋಗೇಶ್ವರ್ 1,12,642 ಮತಗಳನ್ನು ಪಡೆದು ಜಯಗಳಿಸಿದರೆ, ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 25,413 ಇದೆ.
ಚನ್ನಪಟ್ಟಣ ಕ್ಷೇತ್ರ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಮೂಲಕ ಕುಮಾರಸ್ವಾಮಿಗೆ ತೀವ್ರ ಮುಖಭಂಗವಾಗಿದೆ.
ಇದನ್ನೂ ಓದಿ : ರಾಜಸ್ಥಾನ ಉಪಚುನಾವಣೆ: ಬಿಜೆಪಿ ಮೂರು ಸ್ಥಾನಗಳಲ್ಲಿ, ಕಾಂಗ್ರೆಸ್-ಬಿಎಪಿ ತಲಾ ಎರಡರಲ್ಲಿ ಮುನ್ನಡೆ


